ನಾವು ನಿಜವಾಗಿ ಸ್ವತಂತ್ರರೇ? – ಬಿ.ಸುರೇಶ (ವಿಜಯ ನೆಕ್ಸ್ಟ್‌ ಪತ್ರಿಕೆಗಾಗಿ ಬರೆದ ಲೇಖನ)

ಸ್ವಾತಂತ್ರ್ಯ ಎಂಬುದೊಂದು ವಿಶಿಷ್ಟ ಕಲ್ಪನೆ. ಆ ಸ್ವಾತಂತ್ರ್ಯದಲ್ಲೂ ಅನೇಕ ಬಗೆಗಳಿವೆ. ರಾಜಕೀಯ ಸ್ವಾತಂತ್ರ್ಯ, ಆರ್ಥಿಕ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಸ್ವೀಕಾರ ಸ್ವಾತಂತ್ರ್ಯ, ವಿಸರ್ಜನಾ ಸ್ವಾತಂತ್ರ್ಯ, ಅಡಿಗೆ ಸ್ವಾತಂತ್ರ್ಯ, ಬದುಕುವ ಸ್ವಾತಂತ್ರ್ಯ, ಮದುವೆಯ ಸ್ವಾತಂತ್ರ್ಯ… ಹೀಗೆ ಹತ್ತು ಹಲವು ಸ್ವಾತಂತ್ರ್ಯಗಳನ್ನು ಕುರಿತು ನಿರಂತರವಾಗಿ ಚರ್ಚೆಗಳಾಗುತ್ತಲೇ ಇರುತ್ತದೆ. ಇವುಗಳ ನಡುವೆ ಪ್ರತೀವರ್ಷ ಆಗಸ್ಟ್ ೧೫ರಂದು ಸ್ವಾತಂತ್ರ್ಯವನ್ನು ಸಂಭ್ರಮಿಸುವ ಅಭ್ಯಾಸವೂ ನಮ್ಮ ದೇಶದಲ್ಲಿ ಬಂದಿದೆ. ಈ ಅಭ್ಯಾಸಕ್ಕೀಗ ೬೪ ವಸಂತ. ಪ್ರಾಯಶಃ ಅರಳು-ಮರಳಿನ ಆರಂಭಕಾಲ ಎನ್ನಬಹುದು. ಈ ಕಾಲಘಟ್ಟದಲ್ಲಿ ಸ್ವಾತಂತ್ರ್ಯ ಎಂದರೆ ಏನು ಎಂದು ನಿರ್ವಚಿಸಿಕೊಳ್ಳಬೇಕಾದ ಅಗತ್ಯವೂ ಇದೆ.

ಸ್ವಾತಂತ್ರ್ಯ ಎಂಬ ಕಲ್ಪನೆಯೇ ನಾವು ಮತ್ತಾರದೋ ಅಧೀನದಲ್ಲಿ ಇದ್ದೇವೆ, ಅದರಿಂದ ಬಿಡುಗಡೆ ದೊರೆಯಬೇಕಿದೆ ಎಂಬುದರಿಂದ ಬಂದಿರುವಂತಹದು. ಹೀಗೆ ಬಿಡುಗಡೆ ಪಡೆಯುವ ಕ್ರಮದಲ್ಲಿಯೇ ಹೊಸ ಸಂಕೋಲೆಗಳು ನಮ್ಮನ್ನು ಸುತ್ತುವರೆಯುತ್ತಲೇ ಇರುತ್ತವೆ ಎಂಬುದನ್ನರಿತೂ ನಾವು ಸ್ವಾತಂತ್ರ್ಯವನ್ನು ಬಯಸುತ್ತೇವೆ. ‘ಬಿಡುಗಡೆಯ ಬಯಸಿ’ ಎಂಬ ಪದಗುಚ್ಛವಂತೂ ನಮ್ಮ ಬಹುತೇಕ ಮಾತುಗಳಲ್ಲಿ/ ಕವನಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಯಾವುದರಿಂದ ಬಿಡುಗಡೆ? ಯಾವುದರಿಂದ ಸ್ವತಂತ್ರರಾಗಬೇಕಿದೆ? ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ?

ಈ ಸ್ವಾತಂತ್ರ್ಯದ ವಾದಗಳನ್ನು ‘ಭಾರತದ ಸ್ವಾತಂತ್ರ್ಯ ಹಬ್ಬದ ದಿನ’ವೇ ನೆನೆಯುವುದಕ್ಕೆ ಕಾರಣವಿದೆ. ನಮ್ಮ ಬದುಕುಗಳು ಕಳೆದ ಎರಡು ದಶಕಗಳಲ್ಲಿ ಮಾರ್ಕೆಟ್ ಎಕಾನಮಿ ಎಂಬ ದೊಡ್ಡ ಪುಗ್ಗಾವನ್ನು ಊದಿಕೊಂಡಿದೆ. ಈ ಪುಗ್ಗದ ಒಳಗಿನ ಭ್ರಮೆಯು ನಮ್ಮೆಲ್ಲರನ್ನು ಕೊಳ್ಳುಬಾಕರನ್ನಾಗಿಸಿ, ‘ಕೊಳ್ಳುವ ಸ್ವಾತಂತ್ರ್ಯ’ ಎಂಬ ಹೊಸದೊಂದು ಸ್ವಾತಂತ್ರ್ಯವನ್ನು ನಮ್ಮೆಲ್ಲರಿಗೆ ಒದಗಿಸಿದೆ. ಈ ಹೊಸ ಸ್ವಾತಂತ್ರ್ಯದ ಪರಿಣಾಮವಾಗಿ ನಮ್ಮ ಬದುಕಿನಲ್ಲಿ ಆಗುತ್ತಿರುವ ತಲ್ಲಣಗಳು ಅನೇಕ. ಉದಾಹರಣೆಗೆಂದು ಹೇಳುವುದಾದರೆ, ಮನೆಗಳ ಒಳಗೆ ಕೊಳ್ಳುವ ಹುಕಿಗೆ ಸಿಕ್ಕವರು ಕೊಳ್ಳಬಲ್ಲವರ ತೆಕ್ಕೆ ಜೋತು ಬೀಳುತ್ತಾರೆ. ಹೀಗಾಗಿ ಕೊಳ್ಳುವ ಆಸೆಯುಳ್ಳವರು ಬಯಸುವ ಸ್ವಾತಂತ್ರ್ಯ ಒಂದು ಬಗೆಯದಾದರೆ, ಕೊಡಿಸುವ ಶಕ್ತಿ ಉಳ್ಳವರು ಈ ಜೋತು ಬೀಳುವವರಿಂದ ಬಿಡುಗಡೆ ಹೇಗೆ ಎಂಬ ಸ್ವಾತಂತ್ರ್ಯದ ಚಿಂತೆಗೆ ಸಿಕ್ಕಿಕೊಳ್ಳುತ್ತಾರೆ. ಇದೆ ಚಿಂತನೆಯ ಮುಂದುವರಿಕೆಯಾಗಿ ನೊಡುಗರಿಗೆ ಕೊಳ್ಳುವ ಆಸೆಯನ್ನು ಮುಡಿಸುವುದೇ ಪ್ರಧಾನ ಕಾರಣ ಎಂಬಂತೆ ಕತೆ ಹೆಣೆಯುವ ಟೆಲಿವಿಷನ್ ಉದ್ಯಮವೂ ಇದೆ. ಟಿವಿ ಮಾಧ್ಯಮ ಬಳಸಿ ಕತೆ ಹೇಳುವ ಪ್ರತಿಯೊಬ್ಬನೂ, ತನ್ನ ಕಾರ್ಯಕ್ರಮದ ನೋಡುಗನಿಗೆ ಜಾಹೀರಾತುಗಳ ಮೂಲಕ ಕೊಳ್ಳುವ ಬಯಕೆಯನ್ನು ಮೂಡಿಸಬೇಕಾಗುತ್ತದೆ. ಹೀಗಾಗಿ ಆತನ ಕಥನದ ಆವರಣ ಒಂದು ಸ್ಪಷ್ಟ ಬಂಧನದ ಒಳಗಡೆಯೇ ಕಟ್ಟಿಕೊಳ್ಳುತ್ತದೆ. ಇಲ್ಲಿ ಸೃಜನಶೀಲ ಸ್ವಾತಂತ್ರ್ಯದ ಮಾತಾಡುವುದು ಕೂಡ ಕಷ್ಟ. ಹಾಗಾದರೆ ಈ ಜನ ಸ್ವತಂತ್ರರೇ… ‘ಹೌದು ಎನ್ನುವುದು ಅನಿವಾರ್ಯ! ಅಲ್ಲ ಎನ್ನುವುದು ಸತ್ಯ!’ ಇಂತಹ ಅಡಕತ್ತಿನಲ್ಲಿ ಟೆಲಿವಿಷನ್ ಉದ್ಯಮದ ಸೃಜನಶೀಲ ಸ್ವಾತಂತ್ರ್ಯ ಉಸಿರಾಡುತ್ತದೆ.

ಇದೇ ರೀತಿ ನಮ್ಮ ಸಿನಿಮಾ ಉದ್ಯಮದೊಳಗೂ ಸಹ ನೋಡುಗನನ್ನು ಭ್ರಮಾಧೀನಗೊಳಿಸಲೆಂದೇ ಕತೆ ಹೆಣೆಯುವ ಅನಿವಾರ್ಯ ಸೂತ್ರವೊಂದನ್ನು ರೂಢಿಸಿಕೊಳ್ಳಲಾಗಿದೆ. ಇಲ್ಲಿಯೂ ಸೃಜನಶೀಲತೆ ಎನ್ನುವುದು ವಿತ್ತೀಯ ಪ್ರತಿಭೆಗಳ ಬಂಧನಕ್ಕೆ ಒಳಗಾಗಿರುತ್ತದೆ. ಹೀಗಾಗಿಯೇ ಕತೆ ಹೆಣೆಯುವುದು ಬಿಡುಗಡೆಯ ಭಾವ ಹುಟ್ಟಿಸುವುದಕ್ಕಿಂತ ‘ಖಜಾನೆ ಭಯ’ದ ಸ್ವರೂಪವನ್ನು ಪಡೆದುಕೊಳ್ಳುವುದನ್ನು ಕಾಣುತ್ತೇವೆ. ಇಲ್ಲಿ ಹಣ ಹೂಡಿದವನಿಗೆ ಮರಳಿ ಪಡೆವ ಹುಕಿಯಾದರೆ, ಕತೆ ಹೆಣೆಯುವವನಿಗೆ ಹೂಡಿಕೆದಾರನ ಇಚ್ಛೆ ಪೂರೈಸುವ ಬಂಧನವಿರುತ್ತದೆ. ಹೀಗಾಗಿ ಇಲ್ಲಿಯೂ ಸ್ವಾತಂತ್ರ್ಯ ಎಂದರೆ ‘ಬೆಟ್ಟದ ಜೀವ’ದಲ್ಲಿನ ವೃದ್ಧನ ಮಾತಿನಂತೆ ‘ಇದೆ ಎಂದರೆ ಇದೆ, ಇಲ್ಲ ಎಂದರೆ ಇಲ್ಲ’

ಈ ಹಿನ್ನೆಲೆಯಲ್ಲಿ ‘ಅರಿದೆನೆಂಬುದು ತಾ ಬಯಲು/ ಅರಿಯೆನೆಂಬುದು ತಾ ಬಯಲು/ ಅರುಹಿನ ಕುರುಹಿನ ಮರಹಿನೊಳಗೆ/ ಗುಹೇಶ್ವರನೆಂಬುದು ತಾ ಬಯಲು’ ಎಂಬ ಅಲ್ಲಮನ ವಚನದಂತೆ ಸ್ವಾತಂತ್ರ್ಯವನ್ನು ಬಯಸುತ್ತಾ, ಬಂಧನದೊಳಗೆ ಇದ್ದೂ, ಸ್ವತಂತ್ರರು ಎಂದುಕೊಳ್ಳುವುದೇ ಬಿಡುಗಡೆಯ ಭಾವ ಎನ್ನಬಹುದು. ಈ ಸಾಲು ಓದಿ ನಿಮ್ಮ ಮುಖದ ಮೇಲೆ ತಿಳಿ ನಗು ಮುಡಿತೋ, ಗೊಂದಲವಾಯಿತೋ ಅರಿಯೇ. ಆದರೆ, ಹೀಗೊಂದು ಅಸಂಗತ ಸಾಲು ಕಟ್ಟುವ ಪರಿಸ್ಥಿತಿಯಲ್ಲಿರುವಾಗ ‘ಸ್ವಾತಂತ್ರ್ಯ ಎಂದರೆ’ ಎಂಬ ಪ್ರಶ್ನೆಯನ್ನು ಹಾಕಿಕೊಳ್ಳುವುದೇ ಅಸಂಗತವಾಗಿ ಕಾಣಬಹುದಲ್ಲವೇ?

* * *

 

ಮಕ್ಕಳ ಚಿತ್ರಗಳು: ಒಂದು ಅಧ್ಯಯನ

ನಿರ್ಮಾಪಕ/ ನಿರ್ದೇಶಕ/ ನಾಟಕಕಾರ ಬಿ.ಸುರೇಶ ಅವರೊಂದಿಗೆ ಸಂದರ್ಶನ

ಯಾವುದನ್ನು ಮಕ್ಕಳ ಚಿತ್ರಗಳೆಂದು ಗುರುತಿಸಬಹುದು? ಹಾಗೂ ಮಕ್ಕಳ ಚಿತ್ರಗಳ ವ್ಯಾಪ್ತಿಯೇನು?
-೯ ವರ್ಷದ ಮಗುವಿನಿಂದ ಹಿಡಿದು ೯೦ ವರ್ಷದ ಮುದುಕರವರೆಗಿನ ವ್ಯಕ್ತಿಗಳ ಒಳಗಿರುವ ಮಗುವಿಗೆ ಆನಂದವನ್ನುಂಟು ಮಾಡುವ ಚಿತ್ರಗಳೇ ಮಕ್ಕಳ ಚಿತ್ರಗಳು. ಮಕ್ಕಳ ಅಭಿರುಚಿಗೆ ತಕ್ಕಂತ ಚಿತ್ರವೇ ಮಕ್ಕಳ ಚಿತ್ರಗಳು.
ಕನ್ನಡದಲ್ಲಿ ಬಂದಂತಹ ಮಕ್ಕಳ ಚಿತ್ರಗಳಲ್ಲಿ ಮಕ್ಕಳ ಚಿತ್ರಗಳು ಎಂದು ಕರೆಯಿಸಿಕೊಳ್ಳುವ ಚಿತ್ರಗಳು ಯಾವುವು ಇಲ್ಲ ಎಂದೇ ಹೆಳಬಹುದು. ಯಾಕೆಂದರೆ ನಮ್ಮಲ್ಲಿ ಮಕ್ಕಳ ಚಿತ್ರದ ಹೆಸರಲ್ಲಿ ತಯಾರಾದ ಚಿತ್ರಗಳೆಲ್ಲವೂ ಮುಗ್ಧತೆಯಿಂದ ಪ್ರೌಢತೆಯ ಕಡೆಗೆ ಸಾಗುತ್ತವೆ. ಯಾವಾಗ ಚಿತ್ರಗಳು ಮುಗ್ಧತೆಯನ್ನು ಬಿಟ್ಟು ಪ್ರೌಢತೆಯ ಕಡೆಗೆ ಸಾಗುತ್ತವೆಯೋ ಆಗ ಅವುಗಳನ್ನು ಮಕ್ಕಳ ಚಿತ್ರಗಳು ಎಂದು ಗುರುತಿಸಲು ಸಾಧ್ಯವಿಲ್ಲ.

ಈ ನಿಟ್ಟಿನಲ್ಲಿ ಗಮನಿಸುವುದಾದರೆ ಚಾರ್ಲಿ ಚಾಪ್ಲಿನ್‌ನ ಚಿತ್ರಗಳು ಇಂದಿಗೂ ಎಲ್ಲಾ ವಯಸ್ಸಿನ ಮಕ್ಕಳನ್ನೂ ಹಿಡಿದಿಟ್ಟುಕೊಂಡು ಚಿತ್ರ ನೋಡುವಂತೆ ಮಾಡುತ್ತವೆ ಎಂಬುದನ್ನು ಗಮನಿಸಬಹುದು. ಅವುಗಳು ನಿಜವಾದ ಮಕ್ಕಳ ಚಿತ್ರಗಳು. ಅಲ್ಲಿ ಮಕ್ಕಳ ಅಭಿನಯ ಇಲ್ಲದಿದ್ದರೂ ಆ ಚಿತ್ರಗಳನ್ನು ಇಂದಿನ ಮಕ್ಕಳೂ ಇಷ್ಟಪಡುತ್ತಾರೆ. ಕುಳಿತು ನೋಡುತ್ತಾರೆ. ಈ ದೃಷ್ಟಿಯಿಂದ ವಾಲ್ಟ್ ಡಿಸ್ನಿಯ ಟಾಮ್ & ಜೆರ್ರಿ, ಮಿಕ್ಕಿ ಮೌಸ್ ಚಿತ್ರಗಳನ್ನು ಕೂಡಾ ಮಕ್ಕಳ ಚಿತ್ರಗಳೆಂದು ಪರಿಗಣಿಸಬಹುದು.

೧೯೨೦ರಲ್ಲಿ ಚಿತ್ರಗಳಿಗೆ ಮಾತು ಸಿಕ್ಕಿತು. ಭಾಷೆ (ಧ್ವನಿ) ಮಾಧ್ಯಮವಾಗಿ ಚಿತ್ರಗಳಲ್ಲಿ ಬಳಕೆಯಾಗುತ್ತಿದ್ದಂತೆ ಅದಕ್ಕೆ ಪ್ರಾದೇಶಿಕತೆ ಲಭಿಸಿತು. ಆದರೆ ಮಕ್ಕಳ ಚಿತ್ರಗಳು ಯಾವುದೇ ಹಂಗಿಗೂ ಒಳಗಾಗದೇ ಎಲ್ಲರಿಗೂ ಸಮಾನ ಮನರಂಜನೆ ನೀಡುತ್ತದೆ. ಮಕ್ಕಳ ಚಿತ್ರಗಳಿಗೆ ಯಾವುದೇ ಚೌಕಟ್ಟು ಇಲ್ಲ. ಆದರೆ ಅದರೊಳಗೆ ಭಾಷೆ ಬಂದ ಕೂಡಲೇ ಚೌಕಟ್ಟು ಬರುತ್ತದೆ. ಅಂದರೆ ಅಲ್ಲಿ ಪ್ರಾದೇಶಿಕತೆ ನೆಲೆಯೂರುತ್ತದೆ.

ಮಕ್ಕಳ ಚಿತ್ರಗಳಿಗೆ ಇರಬೇಕಾದ ಬದ್ಧತೆಯೇನು?
ಮಕ್ಕಳಿಗಾಗಿಯೇ ಮಕ್ಕಳ ಚಿತ್ರ ತೆಗೆಯಬೇಕೆಂಬ ಬದ್ಧತೆ ಮಕ್ಕಳ ಚಿತ್ರ ತಯಾರಕರಿಗಿರಬೇಕು. ಆಗ ಮಾತ್ರ ಮಕ್ಕಳ ಚಿತ್ರಗಳನ್ನು ತಯಾರಿಸಲು ಸಾಧ್ಯ. ಒಬ್ಬ ಮಕ್ಕಳ ಚಿತ್ರ ತಯಾರಿಸುತ್ತೇನೆಂದರೆ ಅವನ ಮನಸ್ಸು ಮಕ್ಕಳ ಮನಸ್ಸಿನಂತೆ ನಿಷ್ಕಲ್ಮಷವಾಗಿರಬೇಕು. ಅವನಲ್ಲಿ ಮಗುವಿನಂತಹ ಮುಗ್ಧತೆಯಿರಬೇಕು.
ಚಿತ್ರ ನೋಡುವ ಮಕ್ಕಳು ಹೆಚ್ಚು ಹೊತ್ತು ಏಕಾಗ್ರತೆಯಿಂದ ಒಂದೆಡೆ ಇರುವುದಿಲ್ಲ. ಈ ಮಾತನ್ನು ಮಕ್ಕಳ ಮನಸ್ಸನ್ನು ಕುರಿತು ಸಂಶೋಧನೆ ಮಾಡಿರುವ ಮಕ್ಕಳ ಮನಶ್ಶಾಸ್ತ್ರ ತಜ್ಞರು (ಪೆಡಗಾಗಿ) ಹೇಳಿದ್ದಾರೆ. ಆ ಹಿನ್ನೆಲೆಯಲ್ಲಿ ಮಕ್ಕಳ ಚಿತ್ರ ೧೨ರಿಂದ ೧೫ ನಿಮಿಷಗಳು ಇದ್ದರೆ ಒಳ್ಳೆಯದು. ಅಕಸ್ಮಾತ್ ಪೂರ್ಣಾವಧಿ ಕಥಾ ಚಿತ್ರವನ್ನೇ ಮಾಡಿದರೂ ಅಲ್ಲಿ ಪ್ರತೀ ೧೨-೧೫ ನಿಮಿಷಕ್ಕೆ ಮಗುವಿನ ಮನಸ್ಸನ್ನು ಮರಳಿ ತೊಡಗಿಸುವ ತಿರುವು ಮತ್ತು ನಿರಾಳ ಅವಧಿ ಇರುವಂತೆ ಚಿತ್ರವನ್ನು ಕಟ್ಟಬೇಕಾಗುತ್ತದೆ. ಇಂತಹ ಬದ್ಧತೆಯನ್ನು ಮತ್ತು ಎಚ್ಚರವನ್ನು ಇಟ್ಟುಕೊಂಡು ಮಾಡಿದ ಮಕ್ಕಳ ಚಿತ್ರಗಳು ಬಹುಕಾಲ ಬಾಳುತ್ತವೆ.

ಮಕ್ಕಳ ಚಿತ್ರಗಳಲ್ಲಿ ಬೇರೆ ಬೇರೆ ವಿಧಗಳು ಅಥವಾ ಪ್ರಕಾರಗಳು ಇದೆಯಾ?
ಹೌದು. ಮಕ್ಕಳ ಚಿತ್ರಗಳಲ್ಲಿ ನಾನು ಗುರುತಿಸುವ ಮೂರು ಬಗೆಯ ಚಿತ್ರಗಳಿವೆ.
೧. ಮಕ್ಕಳಿಂದ ಮಕ್ಕಳಿಗಾಗಿ ತಯಾರದ ಚಿತ್ರ.
೨. ದೊಡ್ಡವರು ಮಕ್ಕಳಿಗಾಗಿ ತಯಾರಿಸಿದ ಚಿತ್ರ.
೩. ಮಕ್ಕಳ ಮೂಲಕ ದೊಡ್ಡವರಿಗಾಗಿ ತಯಾರಾದ ಚಿತ್ರ.
ಈ ಮೂರು ಬಗೆಯವುಗಳಲ್ಲದೆ ಅದಾಗಲೇ ಪ್ರಚಲಿತವಾದ ಸಾಮಾಜಿಕ, ಐತಿಹಾಸಿಕ, ವೈಜ್ಞಾನಿಕ, ಸಾಹಸಮಯ ಇತ್ಯಾದಿ ಪ್ರಬೇಧಗಳು ಸಹ ಇವೆ. ಇವುಗಳಲ್ಲಿ ಯಾವ ರೀತಿಯ ಚಿತ್ರ ತಯಾರಿಸುತ್ತೇವೆ ಎಂಬುದನ್ನು ಚಿತ್ರ ತಯಾರಕ ಮೊದಲು ತೀರ್ಮಾನಿಸಬೇಕಾಗುತ್ತದೆ.
ಭಾರತದಲ್ಲಿ ಮಕ್ಕಳಿಂದ ದೊಡ್ಡವರಿಗೆ ನೀತಿ ಪಾಠ ಹೇಳುವ ಚಿತ್ರಗಳೇ ಮಕ್ಕಳ ಚಿತ್ರಗಳೆಂಬ ಹೆಸರಲ್ಲಿ ಬಹುಸಂಖ್ಯೆಯಲ್ಲಿ ತಯಾರಾಗುತ್ತಿದೆ. ಮಕ್ಕಳು ಮಕ್ಕಳಿಗಾಗಿ ತಯಾರಿಸುವ ಚಿತ್ರಗಳು ಈವರೆಗೆ ಭಾರತದಲ್ಲಿ ತಯಾರಾಗಿಯೇ ಇಲ್ಲ ಎನ್ನಬಹುದು. ಈಚೆಗೆ ಬಾಲನಟ ಮಾ. ಕಿಶನ್ ಒಂದು ಪ್ರಯತ್ನ ಮಾಡುತ್ತಿದ್ದಾರೆ. ಅದು ಸಹ ಮಕ್ಕಳಿಂದ ದೊಡ್ಡವರಿಗೆ ಎಂಬಂತೆಯೇ ಇತ್ತು ಎನ್ನುವುದು ವಿಷಾದದ ಸಂಗತಿ. ಪ್ರಾಯಶಃ ಆ ಬಾಲಕನಲ್ಲಿ ಇದ್ದಿರಬಹುದಾದ ಮುಗ್ಧತೆಗಿಂತ ಅವನ ಸುತ್ತ ಇದ್ದವರ ಹಿರಿತನವೇ ಚಿತ್ರ ತಯಾರಿಕೆಯಲ್ಲಿ ಹೆಚ್ಚು ಕೆಲಸ ಮಾಡಿದಂತೆ ಕಾಣುತ್ತದೆ.
ಮುಂಬರುವ ದಿನಗಳಲ್ಲಿ ನಮ್ಮ ಪ್ರಾಥಮಿಕ ಶಾಲೆಯಲ್ಲಿಯೇ ಸಿನಿಮಾ ಕಲಿಕೆಯನ್ನು ಕುರಿತ ಪಾಠಗಳನ್ನು ಅಳವಡಿಸಬೇಕೆಂಬ ಪ್ರಯತ್ನಗಳಾಗುತ್ತಿವೆ. ಹಾಗಾದಾಗ ಮಕ್ಕಳಿಂದ ಮಕ್ಕಳಿಗಾಗಿ ತಯಾರಾದ ಚಿತ್ರಗಳು ನಮ್ಮ ದೇಶದಲ್ಲಿಯೂ ತಯಾರಾಗಬಹುದು.

ಮಕ್ಕಳ ಚಲನಚಿತ್ರ ಇತರ ಚಲನಚಿತ್ರಗಳಿಗಿಂತ ಭಿನ್ನವೇ ಹೇಗೆ?
ಕಲೆ ಮಾಧ್ಯಮಗಳನ್ನು ಹುಡುಕುವಂತಿರಬೇಕು. ಮುಗ್ಧತೆಯಿಂದ – ಮುಗ್ಧತೆಯನ್ನು ಕಳೆದುಕೊಂಡು, ಬಳಿಕ ಮತ್ತೆ ಮುಗ್ಧತೆಯನ್ನು ಹುಡುಕುವುದು ಎಲ್ಲಾ ಕಲೆಗಳ ಅಭ್ಯಾಸ. ಇದನ್ನು ನಾವು ಪಿಕಾಸೋ, ಡಾಲಿ ಮುಂತಾದ ಕಲಾವಿದರ ಮಾತುಗಳಲ್ಲಿ ಗಮನಿಸಬಹುದು. ‘ಮರಳಿ ಮುಗ್ಧರಾಗುವ ಪ್ರಕ್ರಿಯೆ’ ಎಲ್ಲಾ ಕಲಾವಿದರಿಗೂ ದಕ್ಕುವುದಿಲ್ಲ. ಆದರೆ ಆ ಪ್ರಯತ್ನ ನಿರಂತರ ಜಾರಿಯಲ್ಲಿ ಇರುತ್ತದೆ.
ಭಾರತದಲ್ಲಿ ಈ ವರೆಗೂ ‘ನಿಜವಾದ’ ಮಕ್ಕಳ ಚಿತ್ರಗಳು ಬರಲಿಲ್ಲ ಎಂಬುದೇ ದೊಡ್ಡ ಬೇಸರ. ಸೆನ್ಸಾರ್ ಮಂಡಳಿಯೂ ಕೂಡ ಅಯ್ಯೋ ಪಾಪ ಎಂಬಂತೆ ಅನೇಕ ಚಿತ್ರಗಳಿಗೆ ಮಕ್ಕಳ ಚಿತ್ರಗಳಿಗೆ ನೀಡಬೇಕಾದ ‘ಸಿ ಸರ್ಟಿಫಿಕೇಟ್ ’ ನೀಡುತ್ತಿದೆ. ಇದಕ್ಕೆ ಈ ದೇಶದಲ್ಲಿ ಮಕ್ಕಳ ಬಗ್ಗೆ ಆಲೋಚಿಸಿ ಸಿನಿಮಾ ಮಾಡುವವರ ಸಂಖ್ಯೆ ಕಡಿಮೆ ಎಂಬುದು ಮತ್ತು ಅಂತಹ ಸಿನಿಮಾ ತಯಾರಕನಿಗೆ ಸರ್ಕಾರ ನೀಡುವ ಸೌಲಭ್ಯಗಳಾದರೂ ಸಿಕ್ಕು ಆತ ಉಳಿದುಕೊಳ್ಳಲಿ ಎಂಬ ಅನುಕಂಪ ಪ್ರಧಾನ ಕಾರಣವಾಗಿರುತ್ತದೆ. ಅದಲ್ಲದೆ ಮುಂದೆಯಾದರೂ ಆ ತಯಾರಕ ಹೊಸ ಸ್ಪೂರ್ತಿ ಪಡೆದು ‘ನಿಜವಾದ’ ಮಕ್ಕಳ ಚಿತ್ರಗಳನ್ನು ತಯಾರಿಸಬಹುದು ಎಂಬ ದೂರಲೋಚನೆಯಿಂದಲೂ ಸರ್ಟಿಫಿಕೇಟ್ ನೀಡಿರಹುದು.

ಮಕ್ಕಳು ಚಲನಚಿತ್ರದಲ್ಲಿ ತೊಡಗಿಸಿಕೊಳ್ಳಲು ಅವರಿಗೆ ಇರಬೇಕಾದ ಅರ್ಹತೆಯೇನು?
ಮಕ್ಕಳು ಚಲನಚಿತ್ರದಲ್ಲಿ ತೊಡಗಿಸಿಕೊಳ್ಳುವ ಯಾರಿಗೆ ಆದರೂ ಇಂತಹದ್ದೇ ಆದ ಅರ್ಹತೆಗಳು ಇರಬೇಕೆಂದೆನಿಲ್ಲ. ಪಾತ್ರಗಳ ಆಧಾರದ ಮೇಲೆ ಮಕ್ಕಳನ್ನು ಆಯ್ಕೆ ಮಾಡುತ್ತಾರೆ. ಅವರವರ ತಂತ್ರಜ್ಞಾನದ ಅರಿವನ್ನು ಆಧರಿಸಿ ತಂತ್ರಜ್ಞರ ಆಯ್ಕೆ ಆಗುತ್ತದೆ. ಚಿತ್ರತಯಾರಕರಿಗೆ ತಾವು ಮಾಡುತ್ತಿರುವ ಚಿತ್ರ ಕುರಿತು ವಿಶೇಷ ಪ್ಯಾಷನ್ ಇರಬೇಕು ಎಂಬುದಷ್ಟೇ ಬಹುಮುಖ್ಯ.

ರಾಜ್ಯ ಸರಕಾರ ಮಕ್ಕಳ ಚಿತ್ರಗಳ ಬಗ್ಗೆ ತಳೆದ ಧೋರಣೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು?
ನಮ್ಮ ರಾಜ್ಯ ಸರಕಾರ ಮಕ್ಕಳ ಚಿತ್ರಗಳಿಗೆ ೨೫ ಲಕ್ಷ ರೂ.ಗಳ ಸಬ್ಸಿಡಿ ನೀಡುತ್ತಿದೆ. ಆದರೆ ಮಕ್ಕಳ ಚಿತ್ರ ತಯಾರಿಸುವ ವ್ಯಕ್ತಿಗೆ ಈ ಸಬ್ಸಿಡಿಯಿದೆ ಎಂಬ ಕಾರಣಕ್ಕೆ ಮಕ್ಕಳ ಚಿತ್ರ ತಯಾರಿಸುತ್ತೇನೆ ಎಂಬ ಆಲೋಚನೆ ಬರಲೇಬಾರದು. ಒಂದು ವೇಳೆ ಆ ಆಲೋಚನೆ ಬಂದರೆ ಆತ ಮಕ್ಕಳ ಚಿತ್ರ ತಯಾರಿಸಲು ಅಸಾಧ್ಯ. ಆಗ ಆ ಹಣಕ್ಕಾಗಿಯೇ ಚಿತ್ರ ತಯಾರಿಸಲು ನಿರ್ಮಾಪಕರು ರೆಡಿಯಾಗುತ್ತಾರೆ. ಅಲ್ಲಿ ೫ ಲಕ್ಷ ಲಾಭ ಇಟ್ಟುಕೊಂಡು ಉಳಿದ ಹಣದಲ್ಲಿ ಚಿತ್ರ ತಯಾರಿಸಲು ತೊಡಗುತ್ತಾರೆ. ಹಾಗಾದಾಗ ಅಂತಹ ಚಿತ್ರಗಳು ಅನೇಕ ರಾಜೀ ಸೂತ್ರಗಳಿಗೆ ಒಳಗಾಗಿ ಅಸಡ್ಡಾಳ ಚಿತ್ರವಾಗಿ ಬಿಡುವ ಸಾಧ್ಯತೆ ಇದೆ. ಆದ್ದರಿಂದ ಮಕ್ಕಳ ಚಿತ್ರ ತಯಾರಕ ಸಬ್ಸಿಡಿಯಾಗಲಿ ಅಥವಾ ಇನ್ಯಾವುದೇ ಆಮಿಷಗಳಿಗೆ ಬಲಿಯಾಗಬಾರದು. ಹಾಗೇ ಆದ ಕೂಡಲೇ ಚಿತ್ರ ತಯಾರಿಕೆಯ ಉದ್ದೇಶವೇ ಭ್ರಷ್ಟಗೊಳ್ಳುತ್ತವೆ. ಗಡಿಗಳ ಒಳಗೇ ಸೀಮಿತಗೊಳ್ಳುತ್ತದೆ. ಆದರೆ ಮಕ್ಕಳ ಜಗತ್ತು ಗಡಿಗಳಿಲ್ಲದ ಸ್ಥಿತಿ. ಅಲ್ಲಿ ಹೀರೊ, ವಿಲನ್ ಯಾರೂ ಇಲ್ಲ. ಅಲ್ಲಿ ಎಲ್ಲರೂ ಸಮಾನರು. ಇಂತಹ ಆಮಿಷಗಳು ಮಾರುಕಟ್ಟೆ ತುಂಬಾ ಇರುವುದರಿಂದಲೇ ಇಂದು ಮಕ್ಕಳ ಚಿತ್ರಗಳು ಬರುತ್ತಿಲ್ಲ.

ಮಕ್ಕಳ ಚಿತ್ರ ನಿರ್ಮಾಣದ ವಿವಿಧ ಘಟ್ಟಗಳನ್ನು ವಿವರಿಸುವಿರಾ?
ಮಕ್ಕಳ ಚಿತ್ರಗಳಿಗೆ ವಿಶೇಷವಾಗಿ ಬೇರೆ ಬೇರೆ ಘಟ್ಟಗಳು ಎಂದೇನಿಲ್ಲ. ಎಲ್ಲಾ ಚಿತ್ರಗಳಂತೆ ಇಲ್ಲಿಯೂ ಚಿತ್ರ ತಯಾರಿಸುತ್ತಾರೆ. ಕತೆ, ಚಿತ್ರಕತೆ, ಸಂಭಾಷಣೆ, ಚಿತ್ರೀಕರಣ ಪೂರ್ವ ಸಿದ್ಧತೆ, ಚಿತ್ರೀಕರಣ, ಚಿತ್ರೀಕರಣಾ ನಂತರದ ಡಬ್ಬಿಂಗ್, ರಿರೆಕಾರ್ಡಿಂಗ್, ಸಂಕಲನ, ಮೊದಲ ಪ್ರತಿ ತೆಗೆಯುವುದು ವರೆಗಿನ ಎಲ್ಲಾ ಕೆಲಸಗಳು ಯಾವ ಸಿನಿಮಾ ಮಾಡಿದರೂ ಅದೇ ಆಗಿರುತ್ತದೆ.

ಕನ್ನಡ ಚಲನಚಿತ್ರ ಇಂಡಸ್ಟ್ರಿಯಲ್ಲಿ ಮಕ್ಕಳ ಚಿತ್ರಗಳ ಸೋಲಿಗೆ ಅಥವಾ ಕಡಿಮೆ ಸಂಖ್ಯೆಗೆ ಕಾರಣವೇನು?
ಮಕ್ಕಳ ಚಿತ್ರಗಳ ಸಂಖ್ಯೆ ತೀರಾ ಕಡಿಮೆ. ಅದಕ್ಕೆ ಇಂತಹದ್ದೇ ಕಾರಣ ಅಂತ ನೀಡಲು ಸಾಧ್ಯವಿಲ್ಲ. ಆದರೆ ನಮ್ಮ ಮಕ್ಕಳ ಚಿತ್ರಗಳಿಗಿರುವ ದೊಡ್ಡ ಸಮಸ್ಯೆ ಎಂದರೆ ಮುಗ್ದತೆಯನ್ನು ಕಳೆದುಕೊಂಡದ್ದು ಹಾಗೂ ನಾವು ಭ್ರಷ್ಟರಾದದ್ದು. ಪ್ರಾಯಶಃ ಅದೇ ಕಾರಣದಿಂದ ನಮ್ಮಲ್ಲಿ ‘ನಿಜವಾದ’ ಮಕ್ಕಳ ಚಿತ್ರಗಳು ಬರುತ್ತಿಲ್ಲ. ಆದರೆ ಮಕ್ಕಳ ಚಿತ್ರ ಎಂಬ ಹಣೆಪಟ್ಟಿ ಹೊತ್ತ ಕನಿಷ್ಟ ಐದಾರು ಚಿತ್ರಗಳು ಪ್ರತೀವರ್ಷ ನಮ್ಮಲ್ಲಿ ತಯಾರಾಗುತ್ತಿವೆ. ಅವುಗಳೆಲ್ಲವೂ ಸರ್ಕಾರದ ಸಬ್ಸಿಡಿ ಪಡೆಯಲು ತಯಾರದ ಚಿತ್ರಗಳು ಎಂಬುದು ಸಹ ಸತ್ಯ.
ಈವರೆಗೆ ನಮ್ಮಲ್ಲಿ ‘ನಿಜವಾದ’ ಮಕ್ಕಳ ಚಿತ್ರಗಳು ಬರಲೇ ಇಲ್ಲ. ಅಂದರೆ ಪೂರ್ಣ ಪ್ರಮಾಣದ ಮಕ್ಕಳ ಚಿತ್ರಗಳು ಎಂದು ಯಾವುದನ್ನು ಗುರುತಿಸಿಕೊಳ್ಳಲು ಸಾಧ್ಯವಿಲ್ಲ. ‘ಚಿನ್ನಾರಿಮುತ್ತಾ’ದಲ್ಲಿ ಮಕ್ಕಳ ಬಗ್ಗೆ ಹೇಳುತ್ತಾ ಬಳಿಕ ಶಿಕ್ಷಣ, ಮೌಲ್ಯ ಎಂದು ಹೇಳುತ್ತಾ ಮಕ್ಕಳು ಹೇಗಿರಬೇಕು ಎಂದು ದೊಡ್ಡವರಿಗೆ ಉಪದೇಶ ನೀಡುವ ಕತೆ ಇದೆ. ಆದ್ದರಿಂದ ಅದು ಮಕ್ಕಳಿಂದ ದೊಡ್ಡವರಿಗಾಗಿ ತಯಾರಿಸಿದ ಚಿತ್ರ.
ಇಂತಹುದೇ ಮಾತನ್ನು ನಮ್ಮಲ್ಲಿ ತಯಾರಾಗುತ್ತಿರುವ ಬಹುತೇಕ ಸೋಕಾಲ್ಡ್ ಮಕ್ಕಳ ಚಿತ್ರಗಳಿಗೆ ಅಪ್ಲೈ ಮಾಡಿ ಹೇಳಬಹುದು. ಈ ಚಿತುಗಳಿಗೆ ‘ಚಿನ್ನಾರಿಮುತ್ತಾ’ದಲ್ಲಿನ ಹಾಡುಗಳಿಗೆ ಇರುವಷ್ಟೂ ಮಕ್ಕಳನ್ನು ತಲುಪುವ ಶಕ್ತಿ ಇಲ್ಲ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಮಕ್ಕಳ ಚಿತ್ರಗಳಿಗೆ ಸಾಮಾಜಿಕ ನೆಲೆಯಲ್ಲಿ ಎಷ್ಟರಮಟ್ಟಿಗೆ ಸ್ಥಾನಮಾನ ದೊರಕಿದೆ?
ಮಕ್ಕಳ ಚಿತ್ರಗಳಿಗೆ ಯಾವತ್ತೂ ಒಳ್ಳೆಯ ಬೇಡಿಕೆಯಿದೆ. ಒಂದು ಒಳ್ಳೆಯ ಉದಾಹರಣೆ ಎಂದರೆ ಚಾರ್ಲಿ ಚಾಪ್ಲಿನ್‌ನ ಚಿತ್ರಗಳು ಹಾಗೂ ಮಿಕ್ಕಿ ಮೌಸ್, ಡೋನಾಲ್ಡ್ ಡಕ್ ಅಂತಹ ಚಿತ್ರಗಳು. ಈ ಚಿತ್ರಗಳಿಗೆ ಇಂದೂ ಪ್ರೇಕ್ಷಕರಿದ್ದಾರೆ. ಅವು ಪ್ರದರ್ಶನ ಕಾಣುತ್ತಲೇ ಇರುತ್ತವೆ. ಇನ್ನು ಭಾರತದ ಸಂದರ್ಭದಲ್ಲಿ ‘ಮೀನಾಳ ಕಾಗದ’ದಂತಹ ಚಿತ್ರಗಳು ತಯಾರಾಗಿವೆ. ಸಂತೋಷ್ ಶಿವನ್ ತಯಾರಿಸಿದ ‘ಹಾಲೋ’ ‘ಮಲ್ಲಿ’ ತರಹದ ಚಿತ್ರಗಳಿವೆ. ಇವೆಲ್ಲವೂ ಪೂರ್ಣ ಪ್ರಮಾಣದಲ್ಲಿ ಎಲ್ಲಾ ವಯಸ್ಸಿನವರ ಒಳಗಿರುವ ಮಕ್ಕಳಿಗೆ ತಾಗುವ ಚಿತ್ರಗಳು. ಇವುಗಳಿಗೆಲ್ಲಾ ಎಲ್ಲಾ ಕಾಲಕ್ಕೂ ಒಳ್ಳೆಯ ಬೇಡಿಕೆ ಇರುತ್ತದೆ. ಚಿತ್ರ ಬಿಡುಗಡೆಯಾದ ಬಳಿಕ ನಿರ್ಮಾಪಕರಿಗೆ ಒಳ್ಳೆಯ ಹಣವನ್ನು ಗಳಿಸಿ ಕೊಟ್ಟಿದೆ.
ನನ್ನ ಅಭಿಪ್ರಾಯವನ್ನು ಮತ್ತೆ ಸ್ಪಷ್ಟ ಪಡಿಸುವಾದದರೆ ಮಕ್ಕಳ ಚಿತ್ರ ತಯಾರಿಸುವ ಮೊದಲು ಚಿತ್ರ ತಂಡಕ್ಕೆ ಹಣ ಮತ್ತು ಲಾಭದ ವಿಷಯ ಮನಸ್ಸಿನಲ್ಲಿ ಸುಳಿಯಲೇಬಾರದು. ಹಾಗಾದಾಗ ಮಾತ್ರ ‘ನಿಜವಾದ’ ಮಕ್ಕಳ ಚಿತ್ರ ನಿರ್ಮಾನ ಆಗುತ್ತದೆ.

ಮಾರುಕಟ್ಟೆ ದೃಷ್ಠಿಯಿಂದ ಅಥವಾ ಇತರ ಉದ್ದೇಶಗಳಿಂದ ಮಕ್ಕಳ ಚಿತ್ರಗಳಲ್ಲಿ ಏನಾದರೂ ಬದಲಾವಣೆ ಮಾಡಲಾಗಿದೆಯೇ?
ಮಕ್ಕಳ ಚಿತ್ರಗಳನ್ನು ತಯಾರಿಸುವಾಗ ಮಾರುಕಟ್ಟೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಚಿತ್ರ ತಯಾರಿಸಬಾರದು. ಸ್ವಚ್ಛ ಮನಸ್ಸುಗಳು ಮಕ್ಕಳಿಗಾಗಿ ಕತೆಯನ್ನು, ಸ್ವಚ್ಛವಾಗಿ ಕಟ್ಟಬೇಕು.
ನೀವು ಕೇಳುವ ವಿವರಗಳಿಗೆ ಸಂಬಂಧಿಸಿದಂತೆ ಅನೇಕ ಬದಲಾವಣೆ ಆಗಿದೆ. ಅದರಲ್ಲಿ ಕೇಂದ್ರ ಸರ್ಕಾರ ಮಕ್ಕಳಿಗಾಗಿ ಚಿತ್ರ ತಯಾರಿಸಲು ಒಂದು ಸಂಸ್ಥೆಯನ್ನು ಬಹುಕಾಲದಿಂದ ಸ್ಥಾಪಿಸಿರುವುದು, ನಮ್ಮ ರಾಜ್ಯ ಸರ್ಕಾರ ಮಕ್ಕಳ ಚಿತ್ರಗಳಿಗೆ ಹೆಚ್ಚಿನ ಸಬ್ಸಿಡಿ ಕೊಡುತ್ತಾ ಇರುವುದು, ಮುಂತಾದ ಸೌಲಭ್ಯಗಳು ಸಿಕ್ಕಿವೆ. ಆದರೆ ಈ ಸೌಲಭ್ಯಗಳ ಲಾಭ ಪಡೆದವರಿಂದ ‘ನಿಜವಾದ’ ಮಕ್ಕಳ ಚಿತ್ರ ತಯಾರಾಗುವ ಕೆಲಸ ಆಗಬೇಕಿದೆ. ಆಗ ಪ್ರೇಕ್ಷಕರನ್ನು ಅಂತಹ ಚಿತ್ರಗಳು ತಾವೇ ಹುಡುಕಿಕೊಳ್ಳುತ್ತವೆ.

ಮಕ್ಕಳ ಚಿತ್ರಗಳಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯವೇ?
ಯಾವುದೇ ಚಿತ್ರಗಳ ಉದ್ದೇಶ ಸಮಾಜದಲ್ಲಿ ಬದಲಾವಣೆ ತರುವುದಲ್ಲ. ಅವು ಮನರಂಜನೆ ನೀಡುತ್ತವೆ ಅಷ್ಟೆ. ಆದರೆ ಹಾಗೆ ಕತೆ ಹೇಳುವಾಗಲೇ ಅವು ಮನಸ್ಸುಗಳ ಮೇಲೆ ಪರಿಣಾಮ ಬೀರುತ್ತವೆ. ಈ ಪರಿಣಾಮಗಳು ನಿಧಾನವಾಗಿ ಬದಲಾವಣೆಯನ್ನು ತರಬಹುದು. ಆದರೆ ಚಿತ್ರ ತಯಾರಿಸುವವ ತಾನು ಸಮಾಜವನ್ನು ತಿದ್ದುತ್ತೇನೆ ಎಂದು ಕತೆ ಹೇಳಲು ಹೊರಟ ಕೂಡಲೇ ಆತ ‘ಭ್ರಷ್ಟ’ ಆಗುತ್ತಾನೆ. ಆಗ ಆತ ಕಟ್ಟುವ ಚಿತ್ರಗಳು ‘ಏಕಲವ್ಯ’ ಮಾದರಿಯ ಚಿತ್ರ ಆಗುತ್ತದೆ.
ಮಕ್ಕಳ ಚಿತ್ರಗಳು ಆದರ್ಶ ಪ್ರಾಯವಾಗಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಈ ನಿಟ್ಟಿನಲ್ಲಿ ಮಕ್ಕಳು ಗಾಂಧಿ, ನೆಹರೂ ಅವರ ಹಾಗೆ ಆದರ್ಶ ಪ್ರಾಯರಾಗಿರಬೇಕು ಎಂದು ಹೆತ್ತವರೂ ಬಯಸುತ್ತಾರೆ. ಆದರೆ ಮಕ್ಕಳಿಗೆ ಇದಾವುದರ ಅವಶ್ಯಕತೆ ಇಲ್ಲ. ಅವರಿಗೆ ಹೀಗೆ ಇರಬೇಕು ಎಂದು ಯಾಕೆ ಹೇಳಬೇಕು? ಅವರಿಗೆ ಹೇಗೆ ಬೇಕೋ ಹಾಗೆ ಇರಲು ಬಿಡಬೇಕು. ಆಗ ಮಾತ್ರ ಅವರ ಪ್ರತಿಭೆ ಹೊರಬರಲು ಸಾಧ್ಯ. ಅವರ ಜಗತ್ತಿನಲ್ಲಿ ಇದು ಒಳ್ಳೆಯದು ಅದು ಕೆಟ್ಟದ್ದು ಎಂದು ಇಲ್ಲ. ಅವರಿಗೆ ಎಲ್ಲವೂ ಒಂದೇ. ಹಾಗೆಯೇ ಸಿನಿಮಾದಲ್ಲಿಯೂ ಆದರ್ಶಗಳು ಬಂದ ಕೂಡಲೇ ಅದು ಮುಗ್ಧತೆಯನ್ನು ಕಳೆದುಕೊಂಡು, ಪ್ರಬುದ್ಧತೆಯ ಕಡೆಗೆ ಸಾಗುತ್ತದೆ. ಪ್ರಬುದ್ಧತೆಯ ಕಡೆಗೆ ಸಾಗುವ ಚಿತ್ರಗಳು ಮಕ್ಕಳ ಚಿತ್ರವಾಗಿ ಉಳಿಯುವಲ್ಲಿ ವಿಫಲವಾಗುತ್ತವೆ. ಆಗ ಅವುಗಳನ್ನು ಮಕ್ಕಳ ಚಿತ್ರಗಳು ಎಂದು ಕರೆಯಲು ಆಗುವುದಿಲ್ಲ. ಈ ಮಾತನ್ನು ನನ್ನ ಸಂಸ್ಥೆಯೇ ತಯಾರಿಸಿದ ‘ಗುಬ್ಬಚ್ಚಿಗಳು’ ಚಿತ್ರಕ್ಕೂ ಹೇಳಬಹುದು.
ಅಂತಹ ಚಿತ್ರಗಳನ್ನು ಸರ್ಕಾರಗಳಿಂದ ಒತ್ತಾಯ ತಂದು ಅನೇಕ ಮಕ್ಕಳಿಗೆ ತೋರಿಸಬಹುದಾದರೂ, ಆ ಚಿತ್ರ ನೋಡಿದ ಮಕ್ಕಳಿಗೆ ಮತ್ತೆ ಮಕ್ಕಳಾಗಿ ಉಳಿಯಲು ಆ ಚಿತ್ರಗಳು ಪ್ರೇರೇಪಿಸುವುದಿಲ್ಲ ಎಂಬುದನ್ನು ಮರೆಯುವಂತಿಲ್ಲ.

ಬಾಲಕಾರ್ಮಿಕ ಪದ್ಧತಿ ಎಂಬ ನೆಲೆಯಲ್ಲಿ ಮಕ್ಕಳ ಚಿತ್ರಗಳಿಗೆ ಕಾನೂನಿನಿಂದ ಏನಾದರೂ ಸಮಸ್ಯೆ ಎದುರಾಗಿದೆಯೇ?
ನನಗೆ ತಿಳಿದಿರುವ ಮಟ್ಟಿಗೆ ಇಷ್ಟರವರೆಗೆ ಅಂತಹ ಸಮಸ್ಯೆ ಎದುರಾಗಿಲ್ಲ. ಅಲ್ಲದೇ ಮಕ್ಕಳು ಒಂದು ನಿಯಮಿತ ಸಮಯದಲ್ಲಿ ಮಾತ್ರ ಇಲ್ಲಿ ಅಭಿನಯಿಸಲು ಬರುವುದರಿಂದ ಅವರಿಗೆ ಯಾವುದೇ ರೀತಿಯ ಸಮಸ್ಯೆಗಳು ಬರುವುದಿಲ್ಲ. ಆದ್ದರಿಂದ ಕಾನೂನಿನಿಂದಲೂ ಸಮಸ್ಯೆಗಳು ಉಂಟಾಗುವುದಿಲ್ಲ.

ಮಕ್ಕಳಿಗೆ ನೀಡುವ ಸಂಭಾವನೆ, ಅವರ ಬೇಡಿಕೆಗಳು, ಅಗತ್ಯತೆಗಳ ಬಗ್ಗೆ ಸ್ವಲ್ಪ ತಿಳಿಸುವಿರಾ?
ಮಕ್ಕಳಿಗೆ ಅಂತಹ ದೊಡ್ಡ ಬೇಡಿಕೆಗಳೇನು ಇರುವುದಿಲ್ಲ.

ಮಕ್ಕಳು ಚಲನಚಿತ್ರಗಳಲ್ಲಿ ಅಭಿನಯಿಸುವುದರಿಂದ ಅವರ ಭವಿಷ್ಯಕ್ಕೆ ಅಥವಾ ಅವರ ಶಾಲಾ ಚಟುವಟಿಕೆಗಳಿಗೆ ತೊಂದರೆ ಬಂದಾಗ ನಿಭಾವಣೆ ಹೇಗೆ?
ಮಕ್ಕಳು ಚಲನಚಿತ್ರಗಳಲ್ಲಿ ಅಭಿನಯಿಸುವುದು ರಜೆಯ ಸಂದರ್ಭಗಳಲ್ಲಿ. ಅಥವಾ ಒಂದು ವಾರ ತರಗತಿಗಳಿಗೆ ಗೈರು ಹಾಜರಾದರೆ ಅಷ್ಟೇನೂ ದೊಡ್ಡ ಸಮಸ್ಯೆ ಉಂಟಾಗುವುದಿಲ್ಲ. ಆದರೆ ಯಾವುದೇ ಒಬ್ಬ ಬಾಲ ನಟ ನಿರಂತರವಾಗಿ ಸಿನಿಮಾ ಅಭಿನಯವನ್ನೇ ವೃತ್ತಿಯಾಗಿಸಿಕೊಂಡಾಗ ಅಂತಹ ಹುಡುಗ ಬಹುಬೇಗ ಇನ್ನಿತರ ಮಕ್ಕಳ ಜೊತೆಗೆ ಬರೆಯಲಾಗದ ಮನಸ್ಥಿತಿಗೆ ತಲುಪುತ್ತಾನೆ. ಇದು ಅಂತಹ ಮಗುವಿನ ಭವಿಷ್ಯಕ್ಕೆ ಮಾರಕವಾಗಬಹುದು.

ಮಕ್ಕಳ ದೃಷ್ಟಿಯಿಂದ ಹಲವೆಡೆ ಬಾಲಭವನಗಳು ಕಾರ್ಯನಿರ್ವಹಿಸುತ್ತಿವೆ. ಇದರಿಂದ ಮಕ್ಕಳ ಚಿತ್ರಗಳಿಗೆ ಯಾವ ರೀತಿಯ ಸಹಕಾರ ಸಿಗುತ್ತಿದೆ?
ಬಾಲಭವನಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಮಕ್ಕಳ ಚಿತ್ರಗಳಿಗೆ ಹೇಳಿಕೊಳ್ಳುವಂತಹ ದೊಡ್ಡ ಪ್ರಯೋಜನಗಳು ಆಗಲಿಲ್ಲ. ಇಲ್ಲಿ ಮಕ್ಕಳ ಚಿತ್ರಗಳನ್ನು ತೋರಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದಷ್ಟೇ. ಎಲ್ಲಾ ಸರ್ಕಾರೀ ವ್ಯವಸ್ಥೆಗಳೂ ಬಹಳ ಒಳ್ಳೆಯ ಉದ್ದೇಶಕ್ಕೆ ಆರಂಭವಾಗುತ್ತವೆ. ಕಾಲಾಂತರದಲ್ಲಿ ಅವು ಕೇವಲ ಸರ್ಕಾರೀ ವ್ಯವಸ್ಥೆಗಳಾಗಿ ಉಳಿದು, ಸಮಾಜದಿಂದ ಸ್ವತಃ ‘ನಿಷಿದ್ಧ’ವಾದ ಸ್ಥಿತಿಯನ್ನು ತಲುಪಿಬಿಡುತ್ತವೆ. ಆಯಾ ಬಾಲಭವನಗಳಲ್ಲಿ ನಿಷ್ಠ ಅಧಿಕಾರಿಗಳು ಬಂದಾಗ ಮಾತ್ರ ಒಂದಷ್ಟು ಒಳ್ಳೆಯ ಚಟುವಟಿಕೆ ಕಾಣಲು ಸಾಧ್ಯ. ಅದು ಬಹಳ ಅಪರೂಪ.

ಪ್ರೇಕ್ಷಕರನ್ನು ಮಕ್ಕಳ ಚಿತ್ರಗಳ ಕಡೆಗೆ ಆಕರ್ಷಿತರಾಗುವಂತೆ ಮಾಡಲು ಏನಾದರೂ ಹೊಸ ಆಲೋಚನೆಗಳಿವೆಯೇ?
ಒಳ್ಳೆಯ ಅಂದರೆ ‘ನಿಜವಾದ’ ಮಕ್ಕಳ ಚಿತ್ರಗಳಿಗೆ ಪ್ರೇಕ್ಷಕರನ್ನು ಆಕರ್ಷಿಸುವ ಗುಣ ಇರುತ್ತವೆ. ಅವುಗಳಿಗೆ ಬೇರೆ ಯಾವ ಹೊಸ ತಂತ್ರಗಳು ಬೇಕಾಗಿಲ್ಲ.

ಮಕ್ಕಳ ನಿಭಾವಣೆಯಲ್ಲಿ ನಿರ್ದೇಶಕರಿಗಿರುವ ಸವಾಲುಗಳೇನು?
ನಿರ್ದೇಶಕ ಹಡಗಿಗೆ ಕ್ಯಾಪ್ಟನ್ ಇದ್ದ ಹಾಗೆ. ಅವನೇ ಅಲ್ಲಿ ಫೈನಲ್. ನಿರ್ಮಾಪಕ ಹಣ ಹೂಡುತ್ತಾನಾದರೂ ನಿರ್ದೇಶಕನ ಪಾತ್ರ ಚಿತ್ರ ತಂಡದಲ್ಲಿ ಮುಖ್ಯ. ಮಕ್ಕಳನ್ನು ನಿಭಾಯಿಸುವುದೇ ಒಮದು ದೊಡ್ಡ ಸವಾಲು. ಚಿತ್ರತಂಡವೊಂದು ತಾನು ಆರಿಸಿದ ಕತೆಗೆ ತಕ್ಕ ಪಾತ್ರಧಾರಿಗಳನ್ನು ಹುಡುಕಿ, ಅಂತಹವರ ಜೊತೆಗೆ ಹಲವು ಕಾಲ ಕಳೆದು, ನಂತರ ಚಿತ್ರೀಕರಣ ಆರಂಭಿಸಿದರೆ ಅಂತಹ ತಂಡಕ್ಕೆ ಏನೂ ದೊಡ್ಡ ಸಮಸ್ಯೆ ಉಂಟಾಗಲಿಕ್ಕಿಲ್ಲ.

ಭಾರತದಲ್ಲಿ ಮತ್ತು ಕರ್ನಾಟಕದಲ್ಲಿ ಮಕ್ಕಳ ಚಿತ್ರಗಳಿಗೆ ಪ್ರೋತ್ಸಾಹ ಹೇಗಿದೆ?
ಕರ್ನಾಟಕದಲ್ಲಿಯಂತೂ ಮಕ್ಕಳ ಚಿತ್ರಗಳಿಗೆ ಭಾರೀ ಎನ್ನಬಹುದಾದ ಸಬ್ಸಿಡಿ ಸಿಗುತ್ತಿದೆ. ಭಾರತ ಸರ್ಕಾರವೂ ಸಹ ಅತ್ಯುತ್ತಮ ಮಕ್ಕಳ ಚಿತ್ರಕ್ಕೆ ವಿಶೇಷ ಬಹುಮಾನ ಕೊಟ್ಟು ಪ್ರಶಸ್ತಿಯ ಹೆಸರಲ್ಲಿ ಹಣಸಹಾಯ ಮಾಡುತ್ತಾ ಇದೆ. ಈ ಸಹಾಯಗಳು ಈಗ ಏನಿವೆ, ಅವೇ ಅಜೀರ್ಣ ಎಂಬಷ್ಟಾಗಿದೆ. ನಮ್ಮ ತಯಾರಕರು ‘ನಿಜವಾದ’ ಮಕ್ಕಳ ಚಿತ್ರ ತಯಾರಿಸುವ ಕಡೆ ಒಲವು ತೋರಿಸಬೇಕಾಗಿದೆ ಅಷ್ಟೆ.

ಮಾರುಕಟ್ಟೆಯಲ್ಲಿ ಮಕ್ಕಳ ಚಿತ್ರಗಳಿಗೆ ಪ್ರೋತ್ಸಾಹ ಹೇಗಿದೆ?
ಯಾವುದೇ ಮಾರುಕಟ್ಟೆ ಲಾಭದಾಯಕ ಸಾಮಗ್ರಿಯನ್ನು ಪ್ರೋತ್ಸಾಹಿಸುತ್ತದೆ. ಸಧ್ಯಕ್ಕೆ ನಮ್ಮಲ್ಲಿ ತಯಾರಾಗುತ್ತಿರುವ ಸೋಕಾಲ್ಡ್ ಮಕ್ಕಳ ಚಿತ್ರಗಳು ಮಕ್ಕಳನ್ನು ಸೆಳೆಯುತ್ತಿಲ್ಲ. ಹೀಗಾಗಿ ಇಂತಹ ಸಿನಿಮಾಗಳಿಗೆ ಪ್ರೇಕ್ಷಕರ ಕೊರತೆ ಇದೆ. ಪ್ರೇಕ್ಷಕರಿಲ್ಲದ ಸಿನಿಮಾ ಲಾಭ ಗಳಿಸುವುದೂ ಅಸಾಧ್ಯ. ಹೀಗಾಗಿ ಮಾರುಕಟ್ಟೆ ಇಂತಹ ನಷ್ಟವನ್ನು ಸಧ್ಯದ ಸ್ಥಿತಿಯಲ್ಲಿ ಪ್ರೋತ್ಸಾಹಿಸಲು ಸಾಧ್ಯವಿಲ್ಲ. ನಮ್ಮ ಮಕ್ಕಳ ಚಿತ್ರ ತಯಾರಕರು ‘ನಿಜವಾದ’ ಮಕ್ಕಳ ಚಿತ್ರವನ್ನು ತಯಾರಿಸಿದಾಗ ಚೀನಾದಲ್ಲಿ, ಜಪಾನಿನಲ್ಲಿ, ಅಮೇರಿಕಾದಲ್ಲಿ, ಇರಾನಿನಲ್ಲಿ ಇರುವಂತೆ ಇಲ್ಲಿಯೂ ಮಕ್ಕಳ ಚಿತ್ರಗಳಿಗೆ ಮಾರುಕಟ್ಟೆ ಸೃಷ್ಟಿಯಾಗುತ್ತದೆ. ಆಗ ಅದಕ್ಕಾಗಿ ಬದಲೀ ವ್ಯವಸ್ಥೆಗಳೂ ಬರಬಹುದು.
ಮಕ್ಕಳ ಚಲನಚಿತ್ರೋತ್ಸವ ನಡೆಸಲು ಏನೆಲ್ಲಾ ಕ್ರಮ ಕೈಗೊಳ್ಳಬೇಕು?
ಯಾವುದೇ ಉತ್ಸವ ನಡೆಸುವಾಗ ಯಾವ ಯಾವ ಎಚ್ಚರಿಕೆಗಳನ್ನು, ಕ್ರಮಗಳನ್ನು ಸಿದ್ಧತೆಗಳನ್ನು ಮಾಡುತ್ತೇವೋ ಮಕ್ಕಳ ಚಿತ್ರಗಳ ಉತ್ಸವಕ್ಕೂ ಅದೇ ರೀತಿಯ ಎಚ್ಚರ, ಕ್ರಮ ಸಿದ್ಧತೆ ಮಾಡಬೇಕು. ಅಂತಿಮವಾಗಿ ಒಂದು ಸಮಾಜದ ಮಕ್ಕಳು ಆ ಉತ್ಸವದಲ್ಲಿ ‘ಮಕ್ಕಳದ್ದೇ’ ಚಿತ್ರಗಳನ್ನು ನೋಡುವಂತಹ ಅವಕಾಶ ಒದಗಬೇಕು. ಆಗ ಮತ್ತಷ್ಟು ‘ನಿಜವಾದ’ ಮಕ್ಕಳ ಚಿತ್ರ ತಯಾರಿಕೆ ಆಗುತ್ತದೆ.

ಕಮರ್ಷಿಯಲ್ ಚಿತ್ರ ಮತ್ತು ಆರ್ಟ್ ಫಿಲ್ಮ್ ಇದಕ್ಕಿರುವ ವ್ಯತ್ಯಾಸಗಳೇನು? ಮಕ್ಕಳ ಚಿತ್ರಗಳನ್ನು ಯಾವ ಚಿತ್ರಗಳು ಎಂದು ಭಾವಿಸಬಹುದು?
ಈ ಜಗತ್ತಲ್ಲಿ ತಯಾರಾಗುವ ಎಲ್ಲಾ ಚಿತ್ರಗಳೂ ಕಮರ್ಷಿಯಲ್ ಆದಂತಹವೇ. ಸಿನಿಮಾ ತಯಾರಿಕೆಗೆ ಹಣ ಹೂಡಲಾಗಿದೆ ಎಂದಾದಮೇಲೆ ಅದರ ಲಾಭ-ನಷ್ಟದ ಲೆಕ್ಕ ಎಂದಾದರೂ ಹಾಕಲೇ ಬೇಕಲ್ಲವೇ? ಇನ್ನೂ ತಯಾರಾಗುವ ಎಲ್ಲಾ ಚಿತ್ರಗಳೂ ತಮ್ಮ ಮಟ್ಟಿಗೆ ಕಲಾತ್ಮಕವೇ! ನೀವು ಹೇಳುತ್ತಿರುವ ವ್ಯತ್ಯಾಸ ಮಾಧ್ಯಮಗಳು ಮಾಡಿದ ವರ್ಗೀಕರಣ. ಅದು ಸರಿಯಲ್ಲ. ಸಿನಿಮಾದಲ್ಲಿ ಇರುವುದು ಎರಡೇ ಬಗೆ. ಒಂದು ಜನ ನೋಡುವ ಸಿನಿಮಾ ಮತ್ತೊಂದು ಜನ ನೋಡದೆ ಇರುವ ಸಿನಿಮಾ. ಮಕ್ಕಳ ಚಿತ್ರಗಳನ್ನೂ ಸಹ ಹೀಗೆಯೇ ಗುರುತಿಸಬಹುದು. ಹಾಗೆಂದು ಅತಿ ಹೆಚ್ಚು ಜನ ನೋಡಿದ ಸಿನಿಮಾಗಳೇ ಒಳ್ಳೆಯ ಸಿನಿಮಾ ಎಂದೇನಲ್ಲಾ. ಯಾವುದೋ ಒಂದು ಬಗೆಯ ಸಿನಿಮಾಗೆ ಅತಿ ಕಡಿಮೆ ಪ್ರೇಕ್ಷಕ ಗಣ ಇರಬಹುದು. ಆದರೆ ಆ ಪ್ರೇಕ್ಷಕ ಗಣ ಗುಣಗ್ರಾಹಿ ಆಗಿದ್ದಾಗ ಮಾತ್ರ ಆ ವರ್ಗದ ಸಿನಿಮಾ ಆ ಪ್ರೇಕ್ಷಕರಿಗೆ ತಲುಪುತ್ತದೆ. ಗಿರೀಶ್ ಕಾಸರವಳ್ಳಿಯವರಿಗೆ ಅವರದ್ದೇ ಪ್ರೇಕ್ಷಕ ವರ್ಗ ಇರುವಂತೆ ಮತ್ತೊಬ್ಬ ಅತೀ ಜನಪ್ರಿಯ ತಾರೆಗೆ ಅವರದ್ದೇ ಪ್ರೇಕ್ಷಕ ವರ್ಗ ಇರುತ್ತದೆ. ಈ ವರ್ಗ, ಆ ವರ್ಗದ ಒಳಗೆ ಸುಳಿಯಲೂ ಬಹುದು. ಆದರೆ ಅಂತಿಮವಾಗಿ ಯಾವ ಸಿನಿಮಾಗೆ ಬಹುಕಾಲ ನೆನಪಿನ ಕೋಶದಲ್ಲಿ ನಿಲ್ಲುವ ಶಕ್ತಿ ಇದೆಯೋ ಅದು ಒಳ್ಳೆಯ ಸಿನಿಮಾ ಆಗುತ್ತದೆ. ಯಾವುದೇ ಸಿನಿಮಾ ವಾಣಿಜ್ಯದ ದೃಷ್ಟಿಯಿಂದ ಎಷ್ಟು ಬೃಹತ್ ಮೊತ್ತ ಸಂಗ್ರಹಿಸಿತು ಎನ್ನುವುದಕ್ಕಿಂತ ಅದು ಎಷ್ಟು ಕಾಲ ಜನ ಮಾನಸದಲ್ಲಿ ಉಳಿಯಿತು ಎಂಬುದು ಮುಖ್ಯ. ಈ ಮಾತನ್ನು ನೇರವಾಗಿ ಮಕ್ಕಳ ಚಿತ್ರಕೂ ಆರೋಪಿಸಿ ನೋಡಬಹುದು. ಆ ದೃಷ್ಟಿಯಿಂದಲೇ ಚಾರ್ಲಿ ಚಾಪ್ಲಿನ್ನನ ಪ್ರಯೋಗ, ವಾಲ್ಟ್ ಡಿಸ್ನಿಯ ಪ್ರಯೋಗ, ಸತ್ಯಜಿತ್ ರಾಯ್ ಅವರು ಮಾಡಿದ ಒಂದೆರಡು ಮಕ್ಕಳ ಚಿತ್ರಗಳು, ಶಂಕರ್‌ನಾಗ್ ಮಾಡಿದ ‘ಸ್ವಾಮಿ’ ತರಹದ ಚಿತ್ರಗಳು ಬಹುಕಾಲ ನಮ್ಮ ನೆನಪಿನ ಕೋಶದಲ್ಲಿ ಉಳಿದಿವೆ. ಈಗಲೂ ಹೊಸ ಪ್ರೇಕ್ಷಕರನ್ನು ಸಂಪಾದಿಸುತ್ತಿವೆ ಎನ್ನಬಹುದು.

ಒಂದು ವಿಶ್ಲೇಷಣೆ ಮತ್ತು ಆತ್ಮವಿಮರ್ಶೆಗೆ ಆಹ್ವಾನ

ಟಾಂ ಟ್ವೈಕರ್ ನಿರ್ದೇಶನದ ‘ರನ್‌ ಲೋಲಾ ರನ್’ ಕುರಿತು ಲೇಖನ
(‘ಸಾಂಗತ್ಯ’ ಪತ್ರಿಕೆಗಾಗಿ ಬರೆದ ಲೇಖನ)

ಆ ಸಿನಿಮಾದ ಅವಧಿ ೮೧ ನಿಮಿಷ (ಆರಂಭಿಕ ಮತ್ತು ಕಡೆಯ ಶೀರ್ಷಿಕೆಗಳನ್ನು ಬಿಟ್ಟು) ಅದರಲ್ಲಿ ೧೫೮೧ ಛೇದಗಳು (ಷಾಟ್‌ಗಳು), ಕಟ್ಸ್, ಡಿಸಾಲ್ವ್, ಫೇಡ್, ವೈಪ್ ಎಲ್ಲವೂ ಸೇರಿ. ಪ್ರತೀ ಷಾಟ್‌ನ ಅವಧಿ ಸರಿಸುಮಾರು ೨ ಸೆಕೆಂಡುಗಳು. ಅಂದರೆ ನೋಡುಗನ ಎದುರಿಗೆ ನಿರಂತರ ದೃಶ್ಯ ಬದಲಾವಣೆಯ ಚಮತ್ಕಾರ. ಇಂತಹದೊಂದು ಅನೇಕ ಷಾಟ್‌ಗಳ ಸಿನಿಮಾ ಸಮಕಾಲೀನ ದಿನಗಳಲ್ಲಿ ಅಪರೂಪವಲ್ಲ. ಆದರೆ ೧೯೯೯ರಲ್ಲಿ ಇದು ಹೊಸ ಪ್ರಯೋಗ. ಆಗ ಜಾಹೀರಾತು ಚಿತ್ರಗಳಲ್ಲಿಯೂ ೩೦ ಸೆಕೆಂಡಿಗೆ ೧೫ ಷಾಟ್ ಬಳಸುತ್ತಾ ಇರಲಿಲ್ಲ. ಪ್ರತೀ ಷಾಟ್‌ನ ಅವಧಿ ದೊಡ್ಡದಿರಬೇಕು ಎಂಬ ಅಲಿಖಿತ ನಿಯಮವೊಂದು ಆಗಿನ ಸಿನಿಮಾ ನಿರ್ಮಿತಿಯಲ್ಲಿ ಇತ್ತು. ಈಗ ಅದು ೩೦ ಸೆಕೆಂಡಿನ ಜಾಹೀರಾತಿಗೆ ೫೦ ಚಿತ್ರಿಕೆಯಾದರೂ ಸಾಲದು ಎನ್ನುವವರೆಗೆ ಬೆಳೆದಿದೆ. ಅಮೇರಿಕನ್ ಜನಪ್ರಿಯ ಸಿನಿಮಾಗಳಲ್ಲಿ ಮತ್ತು ಟೆಲಿವಿಷನ್ ಜಾಹೀರಾತಿನಲ್ಲಿ ಹೀಗೆ ಅನೇಕ ಷಾಟ್‌ಗಳನ್ನ ಬಳಸಿ ಸಿನಿಮಾದ ‘ಗತಿ’ಯನ್ನು ಹೆಚ್ಚಿಸುವ ಅಭ್ಯಾಸ ಚಾಲ್ತಿಗೆ ಬಂದಿತ್ತು. ವಿಶೇಷವಾಗಿ ಮ್ಯೂಸಿಕ್ ವಿಡಿಯೋ ಪ್ರಾಕರದಲ್ಲಿ ಈ ಪ್ರಯೋಗಗಳು ಮೊದಲು ಆದವು. ಆದರೆ ಯೂರೋಪಿಯನ್ ಮತ್ತು ಇತರ ದೇಶಗಳ ಸಿನಿಮಾಗಳಲ್ಲಿ ಇಂತಹ ’ವೇಗ’ವರ್ಧಕ ಬಳಸುವ ಅಭ್ಯಾಸ ಇರಲಿಲ್ಲ. ಇಂತಹ ಪ್ರಯೋಗವನ್ನು ಮೊದಲಬಾರಿಗೆ ಜರ್ಮನ್ ಸಿನಿಮಾದಲ್ಲಿ ಮಾಡಿದವನು ಟಾಂ ಟ್ವೈಕರ್. ‘ರನ್ ಲೋಲಾ ರನ್’ ಸಿನಿಮಾದಿಂದಾಗಿ ಈತ ಜರ್ಮನಿಯ ಪ್ರಖ್ಯಾತ ಸಿನಿಮಾ ನಿರ್ದೇಶಕರ ಪಟ್ಟಿಗೆ ಸೇರಿದ. “ಈತನ ಇನ್ನಿತರ ಚಿತ್ರಗಳು ಹೇಗಿದ್ದವು? ಅವುಗಳ ‘ಗತಿ’ ಏನು?” ಎಂದು ಆ ವ್ಯಕ್ತಿಯ ಚಾರಿತ್ರಿಕ ಮತ್ತು ಸೃಜನಾತ್ಮಕ ಮೌಲ್ಯಮಾಪನ ಮಾಡಲು ಈ ಲೇಖನ ನಾನು ಬರೆಯುತ್ತಿಲ್ಲ. ಹಾಗಾಗಿ ‘ರನ್ ಲೋಲಾ ರನ್’ ಸಿನಿಮಾಗೆ ಮಾತ್ರ ಸೀಮಿತವಾಗಿ ನಿಮ್ಮೆದುರು ಒಂದು ಚರ್ಚೆಯನ್ನು ಇಡುತ್ತಾ ಇದ್ದೇನೆ. ಆ ಮೂಲಕ ದೃಶ್ಯ ಭಾಷೆಯನ್ನು ಕಟ್ಟುವವರ ಎದುರಿಗೆ ಇರುವ ಸವಾಲುಗಳು ಮತ್ತು ಅದನ್ನು ಗ್ರಹಿಸುವವರ ಎದುರಿಗೆ ಇರುವ ಆಯ್ಕೆಗಳನ್ನು ಕುರಿತು ಮಾತಾಡುವ ಪ್ರಯತ್ನ ಮಾಡುತ್ತೇನೆ. ಜೊತೆಗೆ, ಈ ಚಿತ್ರದ ಹಿನ್ನೆಲೆಯಲ್ಲಿ ನಮ್ಮ ಕನ್ನಡ ಚಿತ್ರರಂಗದ ಎದುರಿಗೆ ಇರುವ ಸಮಕಾಲೀನ ಆಯ್ಕೆಗಳನ್ನು ಕುರಿತು ಚರ್ಚಿಸುತ್ತೇನೆ.

Continue reading