ಗಾಳಿ ಬೀಸುತಿದೆ, ಹೊತ್ತು ಜಾರುತಿದೆ! (ನವೆಂಬರ್ ತಿಂಗಳ ಟಿವಿಠೀವಿ ಪತ್ರಿಕೆಗಾಗಿ ಬರೆದ ಲೇಖನ)

ಸಂಘಸುಖ
ಗಾಳಿ ಬೀಸುತಿದೆ, ಹೊತ್ತು ಜಾರುತಿದೆ!
(ನವೆಂಬರ್ ತಿಂಗಳ ಟಿವಿಠೀವಿ ಪತ್ರಿಕೆಗಾಗಿ ಬರೆದ ಲೇಖನ)
– ಬಿ.ಸುರೇಶ
ಪ್ರಿಯ ಬಂಧು,
ದೆವ್ವಗಳ ಹೊತ್ತಲ್ಲಿ ಎಂದು ಕರೆಸಿಕೊಳ್ಳುವ ಸಮಯದಲ್ಲಿ ನಿಮ್ಮೊಡನೆ ಮಾತಿಗೆ ಇಳಿದಿದ್ದೇನೆ. ನಾನಿರುವ ಈ ಹೋಟೆಲಿನಲ್ಲಿ ಟಿವಿ ಇದೆ. ಆದರೆ ಕರೆಂಟು ಇಲ್ಲ. ಸುತ್ತ ಗಾಳಿ ಇದೆ. ಆದರೆ ಸೊಳ್ಳೆಗಳು ನುಗ್ಗಿ ಬಂದು ಕಡಿಯಲು ಸಿದ್ಧವಾಗಿವೆ. ಈ ಸೊಳ್ಳೆಗಳ ಗುಂಯ್‌ಗಾಟದಲ್ಲಿ ಹುಟ್ಟುತ್ತಿರುವ ನನ್ನ ಮಾತುಗಳು ನಿಮ್ಮನ್ನು ಮತ್ತಷ್ಟು ಜಾಗೃತರಾಗಿಸಲಿ ಎಂದು ಹಾರೈಸುತ್ತಾ ಮಾತನ್ನಾರಂಭಿಸುತ್ತೇನೆ.
ಈಚೆಗೆ ಅನೇಕ ದೈನಂದಿನ ಪತ್ರಿಕೆಗಳಲ್ಲಿ ಬರುತ್ತಿರುವ ಡಬ್ಬಿಂಗ್ ಪರವಾದ ಲೇಖನವನ್ನು ನೀವು ಓದಿರುತ್ತೀರಿ. ಆ ಲೇಖನಗಳಲ್ಲಿ ಚರ್ಚಿತವಾಗಿರುವ ವಿಷಯವನ್ನು ಕುರಿತು ನಮ್ಮ ಸಂಘಟನೆ ಹಾಗೂ ಟೆಲಿವಿಷನ್ ಉದ್ಯಮ ತಗೆದುಕೊಳ್ಳಬೇಕಾದ ನಿಲುವುಗಳ ಬಗ್ಗೆ ನಾಲ್ಕುಮಾತು ಬರೆಯುತ್ತಾ ಇದ್ದೇನೆ.

Continue reading

ಪ್ರೇಮಾ ಕಾರಂತರ ‘ಸೋಲಿಸಬೇಡ ಗೆಲಿಸಯ್ಯಾ’ ಒಂದು ವಿಮರ್ಶೆಯ ಯತ್ನ

ಪ್ರೇಮಾ ಕಾರಂತರ ‘ಸೋಲಿಸಬೇಡ ಗೆಲಿಸಯ್ಯಾ’
ಒಂದು ವಿಮರ್ಶೆಯ ಯತ್ನ
– ಬಿ.ಸುರೇಶ
ಆತ್ಮಚರಿತ್ರೆಯೆನ್ನುವುದು ಅತಿ ಕಷ್ಟದ ಪ್ರಾಕಾರ. ಇಲ್ಲಿ ತಮ್ಮ ಜೀವನವನ್ನು ತಾವೇ ನೋಡಿಕೊಳ್ಳುವ ಕಷ್ಟ ಒಂದೆಡೆಗಾದರೆ, ನಮ್ಮ ಜೀವನದ ಯಾವ ವಿವರವನ್ನು ಎಷ್ಟು ಹೇಳಬೇಕೆಂಬ ಆಯ್ಕೆಯ ಪ್ರಶ್ನೆ ಮತ್ತೊಂದೆಡೆ ಇರುತ್ತದೆ. ಇವೆರಡನ್ನು ಸರಿದೂಗಿಸಿಕೊಳ್ಳುವಾಗ ಕಟ್ಟುವ ವಾಕ್ಯಗಳು ಮನಸ್ಸಿನ ಭಾವನೆಗಳನ್ನು ಓದುಗನಿಗೆ ಮುಟ್ಟಿಸುತ್ತವೆಯೇ ಎಂಬ ಅನುಮಾನವೂ ಕಾಡುತ್ತದೆ. ಈ ಕಾರಣಕ್ಕಾಗಿಯೇ ನಮ್ಮಲ್ಲಿ ಅನೇಕರು ಈ ಆತ್ಮಚರಿತ್ರೆ ಬರೆಯುವುದಕ್ಕೆ ಪ್ರಯತ್ನಿಸುವುದೇ ಇಲ್ಲ. ಭಾರತದ ಮಟ್ಟಿಗೆ ಗಾಂಧೀಜಿಯವರ ‘ಸತ್ಯಪರೀಕ್ಷೆ ಅಥವ ನನ್ನ ಜೀವನ ಯಾನ’ವೇ ಅತಿಹೆಚ್ಚು ಓದುಗರನ್ನು ಪಡೆದ ಆತ್ಮಚರಿತ್ರೆ ಇರಬೇಕು. ಕನ್ನಡದಲ್ಲಿ ಕುವೆಂಪು, ಎ.ಎನ್.ಮೂರ್ತಿರಾಯರಂತಹವರು ಈ ಪ್ರಾಕಾರದಲ್ಲಿ ಕೃತಿಗಳನ್ನು ತಂದಿದ್ದಾರೆ. ಅವರನ್ನು ಕೈಮರವಾಗಿ ಬಳಸಿದಂತೆ ನಂತರದ ದಿನಗಳಲ್ಲಿ ಲಂಕೇಶರ ವರೆಗೆ ಅನೇಕ ಸಾಹಿತಿಗಳು ಆತ್ಮಚರಿತ್ರೆಯನ್ನು ನೀಡಿದ್ದಾರೆ. ಹೀಗೆ ಆತ್ಮಚರಿತ್ರೆಯನ್ನು ಬರೆದವರಲ್ಲಿ ರಂಗಭೂಮಿ ಮತ್ತು ಸಿನಿಮಾ ನಂಟಿನ ಜನಗಳು ಕಡಿಮೆ. ಗುಬ್ಬಿ ವೀರಣ್ಣ ಅವರ ನಂತರ ಕನ್ನಡದಲ್ಲಿ ಆತ್ಮಚರಿತ್ರೆ ಬರೆದವರೆಂದು ಸಿಗುವ ರಂಗಭೂಮಿಯ ಜನರೆಂದರೆ ಬಿ.ವಿ.ಕಾರಂತರು ಮತ್ತು ಸಿ.ಜಿ.ಕೃಷ್ಣಸ್ವಾಮಿ ಮಾತ್ರ. ಇವರೆಲ್ಲರೂ ತಾವು ಹೇಳಬೇಕಾಗಿದ್ದುದನ್ನು ಮತ್ತೊಬ್ಬರಿಗೆ ಹೇಳಿ ಬರೆಯಿಸಿದವರು. ಈ ಎಲ್ಲಾ ‘ವ್ಯಾಸ’ರಿಗೆ ‘ಗಣೇಶ’ರುಗಳು ಇದ್ದರು. ಹೀಗಾಗಿ ಇವರಿಗೆ ಆತ್ಮಚರಿತ್ರೆ ಬರೆಯುವಾಗಿನ ಮೂರನೆಯ ಪ್ರಶ್ನೆಯಾದ ವಾಕ್ಯರಚನೆಯು ಓದುಗರಿಗೆ ತಲುಪುತ್ತದೆಯೇ ಎಂಬ ಅನುಮಾನ ಬಹುತೇಕ ಇರಲಿಲ್ಲ. ಆದರೆ ಇವರೆಲ್ಲರಿಗಿಂತ ಭಿನ್ನವಾಗಿ ಪ್ರೇಮ ಕಾರಂತರು ತಮ್ಮ ಜೀವನ ಯಾನವನ್ನು ತಾವೇ ಅಕ್ಷರ ರೂಪಕ್ಕೆ ತಂದಿದ್ದಾರೆ. ಪ್ರಾಯಶಃ ತಮ್ಮ ಆತ್ಮಚರಿತ್ರೆಯನ್ನು ತಾವೇ ಅಕ್ಷರಕ್ಕೆ ಇಳಿಸಿದ ಮೊದಲ ರಂಗಕರ್ಮಿ ಇವರೇ ಇರಬಹುದು. ಅದಕ್ಕಾಗಿ ಪ್ರೇಮಾ ಅವರಿಗೆ ನಮನ ಸಲ್ಲಿಸೋಣ. ನಮ್ಮ ನಡುವೆ ಸುಳಿದಾಡಿದ ಹೆಣ್ಣು ಮಗಳೊಬ್ಬಳು ತನ್ನ ಜೀವನವನ್ನು ತನ್ನ ಕಣ್ಣು, ತನ್ನ ಭಾಷೆಯ ಮೂಲಕವೇ ಬಿಚ್ಚಿಡುವ ಈ ಪ್ರಯತ್ನವೇ ಮೊದಲಿಗೆ ಮೆಚ್ಚುವಂತಹುದು. ಅದಕ್ಕಾಗಿ ಇಂದು ನಮ್ಮೊಡನೆ ಇಲ್ಲದ ಪ್ರೇಮ ಅವರನ್ನು ಅಭಿನಂದಿಸಲೇಬೇಕು.
ಪ್ರೇಮ ಅವರು ತಮ್ಮ ಕೃತಿಗೆ ಹೆಸರನ್ನಿಡುವಾಗಲೇ ಅತ್ಯಂತ ಜಾಗರೂಕರಾಗಿ ‘ಸೋಲಿಸಬೇಡ ಗೆಲಿಸಯ್ಯಾ’ ಎನ್ನುತ್ತಾರೆ. ಇಲ್ಲಿ ಕಾಣದ ಓದುಗ ದೇವರನ್ನು, ಆ ಮೂಲಕ ಪ್ರೇಮ ಅವರ ಅಭಿಮಾನಿ ಬಳಗದ ಎದುರು ಆರ್ತತೆಯ ವಿನಯವೊಂದನ್ನು ಸಾಧಿಸುತ್ತಾರೆ. ಇದು ಪ್ರೇಮ ಅವರಂತಹ ಹೋರಾಟದ ಬದುಕನ್ನು ಕಂಡ ಹೆಣ್ಣು ಮಗಳಿಗೆ ಅಗತ್ಯವಾದ ಒಂದು ಕ್ರಿಯೆ. ಆರ್ತತೆಯ ಮೊರೆಯನ್ನಿಟ್ಟು ತಮ್ಮ ಜೀವನದ ತೆರೆಯನ್ನು ಸರಿಸುವ ದಾರಿಯನ್ನು ಪ್ರೇಮ ಆತ್ಮಚರಿತ್ರೆಯ ಕಥನಕ್ಕೆ ಆಯ್ದುಕೊಳ್ಳುತ್ತಾರೆ. ಈ ಆರ್ತತೆಯೇ ಅವರ ಪುಸ್ತಕಕ್ಕೆ ಮುನ್ನುಡಿಯೂ ಹೌದು, ಆ ಜೀವನ ಚರಿತ್ರೆಯ ಸ್ಥಾಯೀಭಾವವೂ ಹೌದು. ಹೀಗಾಗಿ ಈ ಜೀವನ ಚರಿತ್ರೆಯ ಅಂತಿಮ ಅಧ್ಯಾಯಕ್ಕೆ ತಲುಪುವಾಗ ಓದುಗನು ಸ್ವತಃ ಕಣ್ಣು ತುಂಬಿಕೊಳ್ಳುವುದು ಖಂಡಿತಾ.

Continue reading

ಬಣ್ಣಗಳ ಓಕುಳಿಯಿಂದೆದ್ದ ರಂಜಕ ವಾಸ್ತವ – ಗುಲಾಲ್ (ಅನುರಾಗ್ ಕಶ್ಯಪ್ ನಿರ್ದೇಶನದ ‘ಗುಲಾಲ್’ ಚಿತ್ರ ಕುರಿತು ಕೆಲವು ಮಾತು)

ಬಣ್ಣಗಳ ಓಕುಳಿಯಿಂದೆದ್ದ ರಂಜಕ ವಾಸ್ತವ – ಗುಲಾಲ್
(ಅನುರಾಗ್ ಕಶ್ಯಪ್ ನಿರ್ದೇಶನದ ‘ಗುಲಾಲ್’ ಚಿತ್ರ ಕುರಿತು ಕೆಲವು ಮಾತು)
– ಬಿ.ಸುರೇಶ
ಭಾರತೀಯ ಜನಪ್ರಿಯ ಚಿತ್ರಗಳಲ್ಲಿ ಸಮಕಾಲೀನ ರಾಜಕೀಯವನ್ನು ಅದರ ಯಥಾಸ್ಥಿತಿಯಲ್ಲಿ ಹಿಡಿಯುವ ಪ್ರಯತ್ನ ಮಾಡಿದ ಚಿತ್ರಗಳ ಸಂಖ್ಯೆ ತೀರಾ ಕಡಿಮೆ. ರಾಜಕೀಯ ಸಿನಿಮಾಗಳು ಎಂಬ ಹಣೆಪಟ್ಟಿ ಹೊತ್ತು ಬಂದಂತಹ ಚಿತ್ರಗಳು ಬಹುಪಾಲು ಕನ್ನಡದ ‘ಅಂತ’ದ ಮಾದರಿಯದು. ಅಲ್ಲಿ ರಾಜಕಾರಣಿ ಖಳನಾಗಿರುತ್ತಾನೆ. ನಾಯಕ ಆತನನ್ನು ಗುಂಡಿಟ್ಟು ಕೊಲ್ಲುತ್ತಾನೆ. ಅಷ್ಟೆ. ಹಳೆಯ ನಾಯಕ ಪ್ರಧಾನ ಕತೆಗೆ ರಾಜಕಾರಣದ ಪೋಷಾಕು ತೊಡಿಸಿದ ಕತೆಗಳವು. ಅವುಗಳನ್ನು ರಾಜಕೀಯ ಚಿತ್ರಗಳೆಂದು ಕರೆಯಲಾಗದು. ಆದರೆ ಹೊಸಅಲೆಯ ಪ್ರಭಾವದಿಂದಲೇ ಹುಟ್ಟಿದ ‘ಅಂಕುರ್’, ‘ಅರ್ಧಸತ್ಯ’ ಮುಂತಾದ ಚಿತ್ರಗಳು ಇಂತಹವಲ್ಲ. ಅವು ಸಮಕಾಲೀನ ಪರಿಸ್ಥಿತಿಯನ್ನು ವಿವರಿಸಿ, ಇವುಗಳಲ್ಲಿ ಸಿಕ್ಕಿ ನರಳುವ ಶ್ರೀಸಾಮಾನ್ಯನ ಕತೆಯನ್ನು ಹೇಳುತ್ತವೆ. ಹೀಗಾಗಿಯೇ ಇಂತಹ ಕೆಲವು ಚಿತ್ರಗಳು ಬಹುಕಾಲ ಜನಮಾನಸದೊಳಗೆ ಶಾಶ್ವತ ಸ್ಥಾನ ಪಡೆಯುತ್ತವೆ. ಇಂತಹ ನೆನಪಲ್ಲುಳಿಯುವ ಚಿತ್ರಗಳ ಸಾಲಿಗೆ ಸೇರಬಹುದಾದ ಮತ್ತೊಂದು ಸಿನಿಮಾ ಅನುರಾಗ್ ಕಶ್ಯಪ್ ಅವರ ನಿರ್ದೇಶನದ ‘ಗುಲಾಲ್’.

Continue reading

ಸಮಕಾಲೀನ ಸಾಮಾಜಿಕ ಸಮಸ್ಯೆಗಳು ಮತ್ತು ಸಮೂಹ ಮಾಧ್ಯಮಗಳು

ಸಮಕಾಲೀನ ಸಾಮಾಜಿಕ ಸಮಸ್ಯೆಗಳು ಮತ್ತು ಸಮೂಹ ಮಾಧ್ಯಮಗಳು
– ಬಿ.ಸುರೇಶ
(ನಾಗತಿಹಳ್ಳಿ ಚಂದ್ರಶೇಖರ್ ಅವರ ಸಂಪಾದಕತ್ವದಲ್ಲಿ ಬರುತ್ತಿರುವ ‘ತರಳಬಾಳು ಹುಣ್ಣಿಮೆ’ ಗ್ರಂಥಕ್ಕಾಗಿ ಸಿದ್ಧಪಡಿಸಿದ ಲೇಖನ)

‘ಟೆಲಿವಿಷನ್ ಮಾಧ್ಯಮವು ನಮ್ಮ ಸಮಾಜವನ್ನು ಬದಲಿಸುತ್ತಿದೆ’, ‘ಆಧುನಿಕ ತಂತ್ರಜ್ಞಾನ ನಮ್ಮ ಮಕ್ಕಳ ಮನಸ್ಸನ್ನು ಹಾಳು ಮಾಡುತ್ತಿದೆ’, ‘ಈ ಮಾಧ್ಯಮಗಳಿಂದಾಗಿ ನಮ್ಮ ಸಮಾಜದಲ್ಲಿ ಆತ್ಮಹತ್ಯೆಗಳು ಮತ್ತು ಅಪರಾಧಗಳು ಹೆಚ್ಚಾಗುತ್ತಿವೆ’ ‘ನಮ್ಮ ಸಮಾಜವು ಈ ಮಾಧ್ಯಮಗಳ ಪರಿಣಾಮವಾಗಿ ಆಧುನಿಕವಾಗುತ್ತಿದೆ’ ಮುಂತಾದ ಮಾತುಗಳನ್ನು ನಾವು ಮತ್ತೆ ಮತ್ತೆ ಕೇಳುತ್ತಲೇ ಇರುತ್ತೇವೆ. ನಾವು ಇಂತಹ ಮಾತುಗಳಿಗೆ ಅದೆಷ್ಟು ಹೊಂದಿಕೊಂಡು ಬಿಟ್ಟಿದ್ದೇವೆ ಎಂದರೆ ಮಾಧ್ಯಮಗಳಿಂದಲೇ ಇವೆಲ್ಲವೂ ಆಗುತ್ತಿದೆ ಎಂಬ ನಂಬಿಕೆಯೂ ಸಹ ನಮ್ಮ ಸಮಾಜದಲ್ಲಿ ಐತಿಹ್ಯದ ಹಾಗೆ ಬೇರು ಬಿಟ್ಟಿದೆ. ಇದರಿಂದಾಗಿ ಈ ಮಾಧ್ಯಮಗಳನ್ನು ನೋಡುವವರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಬದಲಿಗೆ ಇಂತಹ ಮಾತಾಡುತ್ತಿರುವ ಸಾಮಾನ್ಯರನ್ನೂ ನೋಡುತ್ತಾ ಇದ್ದೇವೆ. ಹೀಗಾಗಿಯೇ ಇಂತಹ ಪ್ರಶ್ನೆಗಳು ಅಥವಾ ಅಭಿಪ್ರಾಯಗಳನ್ನು ಕುರಿತು ಪ್ರತಿಕ್ರಿಯೆ ನೀಡುವ ಗೋಜಿಗೂ ಹೋಗದೆ ಉಳಿದಿದ್ದೇವೆ. ಆಕಸ್ಮಿಕವಾಗಿ ಕೆಲವು ಮಾಧ್ಯಮ ಮಿತ್ರರೇ ಉತ್ತರಗಳನ್ನು ನೀಡಲು ಹೊರಟರೂ ಅಂತಹ ಉತ್ತರಗಳು ಈ ಪ್ರಶ್ನೆ/ ಅಭಿಪ್ರಾಯಗಳ ಹಿಂದಿರುವ ತಾತ್ವಿಕ ಜಿಜ್ಞಾಸೆಗೆ ತೊಡಗದೆ ತಮ್ಮ ಮಾಧ್ಯಮವನ್ನು ಒಪ್ಪಿಟ್ಟುಕೊಳ್ಳುವ ಗುಣದಿಂದಲೇ ಹುಟ್ಟಿದ ಮಾತು ಮಾತ್ರ ಆಗಿರುತ್ತದೆ. ಈ ಹಿನ್ನೆಲೆಯಲ್ಲಿ ಸಮೂಹ ಮಾಧ್ಯಮ ಎಂಬುದನ್ನು ಕುರಿತಂತೆ ಮತ್ತು ನಮ್ಮ ಸಮಕಾಲೀನ ಸಮಾಜವನ್ನು ಕುರಿತಂತೆ ವಿಸ್ತೃತವಾಗಿ ನೋಡಲು, ಆ ಮೂಲಕ ಮೇಲೆ ಕಾಣಿಸಿದಂತಹ ಪ್ರಶ್ನೆಗಳ ಹಿಂದಿನ ತಾತ್ವಿಕ ಮತ್ತು ಸೈದ್ಧಾಂತಿಕ ವಿವರಗಳನ್ನು ಕುರಿತು ಚರ್ಚಿಸಲು ಈ ಲೇಖನದಲ್ಲಿ ಪ್ರಯತ್ನಿಸಲಾಗಿದೆ.
“ಅತ್ಯಂತ ಸ್ಪಷ್ಟವಾದ ಮತ್ತು ನಿಖರ ಎಂದು ಕರೆಸಿಕೊಳ್ಳುವ ಮಾಧ್ಯಮಗಳನ್ನು ಕುರಿತ ಅಭಿಪ್ರಾಯಗಳು/ಲೇಖನಗಳು ಸಹ ತಂತ್ರಜ್ಞಾನ ಮತ್ತು ಸಮಾಜ, ತಂತ್ರಜ್ಞಾನ ಮತ್ತು ಸಂಸ್ಕೃತಿ ಹಾಗೂ ತಂತ್ರಜ್ಞಾನ ಹಾಗೂ ಮನಶಾಸ್ತ್ರೀಯ ನೆಲೆಗಳನ್ನು ಕುರಿತಂತೆ ತೀರಾ ಮೇಲ್‌ಸ್ತರದಲ್ಲಿ ವಿಷಯವನ್ನು ಚರ್ಚಿಸುತ್ತವಾದ್ದರಿಂದ ಕಾರಣ-ಪರಿಣಾಮಗಳ ಸ್ವರೂಪವೇ ದಕ್ಕುವುದಿಲ್ಲ” ಎಂಬ ರೇಮಂಡ್ ವಿಲಿಯಮ್ಸ್‌ನ (ಟೆಲಿವಿಷನ್ & ಕಲ್ಚರಲ್ ಫಾರ್ಮ್/ಯೂನಿವರ್ಸಿಟಿ ಪ್ರೆಸ್ ಆಫ್ ಇಂಗ್ಲೆಂಡ್/ ವೆಸ್ಲಿಯನ್ ಯೂನಿವರ್ಸಿಟಿ/ ೧೯೯೨) ಮಾತು ಮೇಲೆ ಹೇಳಿದ ಹಲವು ಮಾತುಗಳಿಗೆ ಪುಷ್ಟಿ ನೀಡುತ್ತದೆ. ಈ ಹಿನ್ನೆಲೆಯಲ್ಲಿ ಮೇಲಿನ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೊರಟಾಗ ಸುಲಭ ಮತ್ತು ಸರಳ ಉತ್ತರಗಳು ದೊರೆಯುವುದಿಲ್ಲ ಎಂಬುದೂ ಸತ್ಯ. ಹೀಗಾಗಿ ಸಮಾಜ ಎಂದರೆ ಏನು ಎಂದು ಬಲ್ಲವರ ಎದುರಿಗೆ ಸಮೂಹ ಮಾಧ್ಯಮ ಎಂದರೇನು ಎಂದು ಅರ್ಥೈಸಿಕೊಳ್ಳುವ ಪ್ರಯತ್ನ ಮಾಡೋಣ.

Continue reading

ಸಿನಿಮಾದೊಳಗೊಂದು ಸಿನಿಮಾ ಕೊಟ್ಟ ಅಪರೂಪದ ಅನುಭವ

(ಅತನು ಘೋಷ್ ನಿರ್ದೇಶನದ ಬೆಂಗಾಲಿ ಸಿನಿಮಾ ‘ಅಂಗ್ಷುಮನರ್ ಚೋಬಿ’ ಕುರಿತ ಬರಹ -ಪ್ರಜಾವಾಣಿ ಪತ್ರಿಕೆಯ ಸಾಪ್ತಾಹಿಕಕ್ಕೆ ಎಂದು ಬರೆದದ್ದು)

[youtube=http://www.youtube.com/watch?v=lxPECbrgbvs&feature=player_embedded#at=22]ಕನ್ನಡ ಚಿತ್ರರಂಗದೊಳಗೆ ಆಗುತ್ತಿರುವ ಪ್ರಯೋಗಗಳಿಗಿಂತ ಭಿನ್ನ ಪ್ರಯೋಗಗಳು ಮಲೆಯಾಳ ಮತ್ತು ಬಂಗಾಳಿ ಸಿನಿಮಾಗಳಲ್ಲಿ ಆಗುತ್ತಿರುವುದಕ್ಕೆ ಹೊಸ ತಲೆಮಾರಿನವರ ಆಗಮನ ಮತ್ತು ಅವರ ಹಿನ್ನೆಲೆ ಕಾರಣ. ಈಗ ನಿಮ್ಮೆದುರಿಗೆ ನಾನು ಚರ್ಚಿಸಲು ಹೊರಟಿರುವ ‘ಅಂಗ್‌ಷುಮನರ್ ಚೋಬಿ’ ಸಹ ಅಂತಹುದೇ ಕಾರಣಕ್ಕಾಗಿ ವಿಶಿಷ್ಟ ಸಿನಿಮಾ ಆಗಿದೆ. ಈ ಸಿನಿಮಾದ ನಿರ್ದೇಶಕ ‘ಅತನು ಘೋಷ್’. ಇದು ಆತನ ಮೊದಲ ಪೂರ್ಣಪ್ರಮಾಣದ ಕಥಾಚಿತ್ರ. ಇದಕ್ಕೆ ಮುನ್ನ ಆತ ಜಾಹೀರಾತು ಚಿತ್ರಗಳಿಗೆ ಮತ್ತು ಸಾಕ್ಷ್ಯ ಚಿತ್ರಗಳಿಗೆ ಕೆಲಸ ಮಾಡುತ್ತಿದ್ದ. ಇಂತಹ ಹಿನ್ನೆಲೆಯಿಂದಾಗಿಯೇ ಸಿನಿಮಾ ಕಟ್ಟುವ ಭಾಷೆ ಮತ್ತು ಸಿನಿಮಾದ ಬಣ್ಣಗಳ ಬಳಕೆಯಲ್ಲಿ ದೊಡ್ಡ ಬದಲಾವಣೆಗಳಾಗುತ್ತವೆ. ಆ ಬದಲಾವಣೆಯ ಪರಿಣಾಮವನ್ನು ಈ ಸಿನಿಮಾದಲ್ಲಿ ನೀವೂ ನೋಡಬಹುದು.

Continue reading

ಸಮಾಜ ಮತ್ತು ಸಮೂಹ ಮಾಧ್ಯಮಗಳು

(ಬಹುರೂಪಿ ನಾಟಕೋತ್ಸವದ ಸಂದರ್ಭದಲ್ಲಿನ ವಿಚಾರಸಂಕಿರಣಕ್ಕಾಗಿ ಸಿದ್ಧಪಡಿಸಿದ ಉಪನ್ಯಾಸ)

ಸಮಾಜ ಮತ್ತು ಸಮೂಹ ಎನ್ನುವಲ್ಲಿ ಎರಡು ಬಹುವಚನಗಳಿವೆ ಇಲ್ಲಿ. ‘ಸಮಾಜ’ ಎಂಬುದು ಸಮಾನ ಮನಸ್ಕರಾಗಿ ಬದುಕುವ ಜನಗಳ ಜಗತ್ತು, ‘ಸಮೂಹ’ ಎಂದರೆ ಒಂದು ಊಹಿತ ಸಮುದಾಯ. ಇಲ್ಲಿ ‘ಊಹಿತ’ ಎನ್ನುವುದು ‘ಮಾಧ್ಯಮ’ ಎಂಬ ‘ಉದ್ಯಮ’ವು ಕಲ್ಪಿಸಿಕೊಂಡಿರುವ ಒಂದು ಸಮುದಾಯದ ಗುಂಪಿನ ಮೊತ್ತ. ಈ ಸಮೂಹಕ್ಕೆ ಆಕಾರವಿಲ್ಲ. ಇಂತದೇ ಸ್ಥಳದಲ್ಲಿ ಇದು ಇದೆ ಎಂಬುದನ್ನು ಹೇಳಲಾಗುವುದಿಲ್ಲ. ಆದರೆ ಅಂಕಿ ಸಂಖ್ಯೆಯಿದೆ. ಆ ಅಂಕಿ-ಸಂಖ್ಯೆಯಿಂದಲೇ ಈ ಮಾಧ್ಯಮ ಎಂದು ಕರೆಸಿಕೊಳ್ಳುವ ಉದ್ಯಮಕ್ಕೆ ಆದಾಯ. ಈ ವಿವರಗಳಿಗೆ ಹೋಗುವುದಕ್ಕೂ ಮುಂಚಿತವಾಗಿ ಈ ಮಾಧ್ಯಮ ಎಂಬ ‘ಸಮೂಹಕ್ಕೆ ಸನ್ನಿ’ಯನ್ನು ನೀಡುವ ಉದ್ಯಮವನ್ನು ತಿಳಿದುಕೊಳ್ಳೋಣ.

Continue reading

ವಿಶೇಷಗಳನ್ನು ಅರಸುತ್ತಾ…!

ವಿಜಯ ಕರ್ನಾಟಕದ ವಿಶೇಷಾಂಕ ಕುರಿತ ಸಂಚಿಕೆಗೆ ಬರೆದ ಲೇಖನ

ನಾನು ಕನ್ನಡದ ಜಾಯಮಾನಕ್ಕೆ ಒಗ್ಗಿಕೊಂಡ ಕಾಲದಿಂದ ದೀಪಾವಳಿಗೆ ಮತ್ತು ಯುಗಾದಿಗೆ ಕಾಯುತ್ತಾ ಬೆಳೆದವನು. ಆ ದಿನಗಳಲ್ಲಿ ಮನೆಯಲ್ಲಿ ಹಬ್ಬ ಇರುತ್ತದೆ ಎಂಬುದಕ್ಕಿಂತ ಅದೇ ಕಾಲಕ್ಕೆ ‘ಪ್ರಜಾವಾಣಿ’, ‘ಉದಯವಾಣಿ’ಗಳ ವಿಶೇಷಾಂಕಗಳು ಬರುತ್ತಿದ್ದವು ಎಂಬುದು ನನ್ನ ಕಾಯುವಿಕೆಗೆ ಕಾರಣವಾಗಿರುತ್ತಿತ್ತು. ಈ ವಿಶೇಷಾಂಕಗಳಿಗೆ ಎಂದೇ ನಾಡಿನ ಖ್ಯಾತ ಸಾಹಿತಿಗಳು ಬರೆದ ಕತೆಗಳು, ಕವನಗಳು ಅಲ್ಲಿ ಸಿಗುತ್ತಿದ್ದವು. ಈ ನಾಡಿನ ಎಲ್ಲಾ ಸಾಹಿತಿಗಳ ಲೋಕಕ್ಕೂ ನನ್ನ ಪ್ರವೇಶ ಆಗಿದ್ದೇ ವಿಶೇಷಾಂಕಗಳಿಂದ. ಮಾಸ್ತಿ, ಚದುರಂಗ, ಆನಂದ, ಅನಂತಮೂರ್ತಿ ತರಹದ ಹಿರಿಯ ಕತೆಗಾರರಿಂದ ನನ್ನ ಕಾಲದವರಾದ ಜಯಂತ್ ಕಾಯ್ಕಿಣಿ, ಅಮರೇಶ ನುಗಡೋಣಿ ಮುಂತಾದವರ ಕಥಾಲೋಕ ನನಗೆ ಪರಿಚಿತವಾದದ್ದೇ ಈ ವಿಶೇಷಾಂಕಗಳಿಂದ.

ಒಂದು ಪತ್ರಿಕೆಯು ವಿಶೇಷಾಂಕಗಳನ್ನು ತಯಾರಿಸಲು ಅನೇಕ ಕಾರಣಗಳಿರುತ್ತವೆ. ಅದರಲ್ಲಿ ಪ್ರಧಾನ ಕಾರಣ ಜಾಹೀರಾತು ಸಂಗ್ರಹ ಎಂಬುದು ಎಲ್ಲರಿಗೂ ತಿಳಿದಿರುವಂಥಾದ್ದೇ. ಆದರೆ ಕೆಲವೊಮ್ಮೆ ಇನ್ನೂ ವಿಶೇಷ ಕಾರಣಗಳಿಗಾಗಿ ವಿಶೇಷಾಂಕ ಆಗುತ್ತದೆ. ನನ್ನ ತಾಯಿಯ ಸಂಪಾದಕತ್ವದಲ್ಲಿ ಬರುತ್ತಿದ್ದ ‘ಉದಯವಾಣಿ’ಯಲ್ಲಿ ಪ್ರತೀ ವರ್ಷದ ವಿಶೇಷಾಂಕಕ್ಕೇ ಒಂದು ವಸ್ತುವನ್ನು ಇರಿಸಿಕೊಂಡು ಆಯಾ ವರ್ಷದ ಸಂಚಿಕೆಯ ಎಲ್ಲಾ ಕತೆ, ಕವನಗಳು ಇರುತ್ತಿದ್ದವು. ‘ತವಕ’ ಎಂಬ ಒಂದೇ ವಿಷಯ ಅನೇಕ ಲೇಖಕರ ಲೇಖನಿಯಿಂದ ಅನೇಕ ಕಥೆ, ಕವನಗಳನ್ನು ಹೊರಡಿಸುತ್ತಿತ್ತು. ಅವುಗಳನ್ನು ಓದುತ್ತಾ ನಮ್ಮ ಅನುಭವ ಲೋಕ ವಿಸ್ತಾರವಾಗುತ್ತಿತ್ತು. ಆ ಕಾಲದಲ್ಲಿ ನಾನು ಓದಿದ ಅನೇಕ ಕತೆಗಳು ಇಂದಿಗೂ ನನ್ನ ಕಣ್ಣೆದುರು ಕುಣಿಯುತ್ತಿವೆ.

Continue reading

ಒಂದು ವಿಶ್ಲೇಷಣೆ ಮತ್ತು ಆತ್ಮವಿಮರ್ಶೆಗೆ ಆಹ್ವಾನ

ಟಾಂ ಟ್ವೈಕರ್ ನಿರ್ದೇಶನದ ‘ರನ್‌ ಲೋಲಾ ರನ್’ ಕುರಿತು ಲೇಖನ
(‘ಸಾಂಗತ್ಯ’ ಪತ್ರಿಕೆಗಾಗಿ ಬರೆದ ಲೇಖನ)

ಆ ಸಿನಿಮಾದ ಅವಧಿ ೮೧ ನಿಮಿಷ (ಆರಂಭಿಕ ಮತ್ತು ಕಡೆಯ ಶೀರ್ಷಿಕೆಗಳನ್ನು ಬಿಟ್ಟು) ಅದರಲ್ಲಿ ೧೫೮೧ ಛೇದಗಳು (ಷಾಟ್‌ಗಳು), ಕಟ್ಸ್, ಡಿಸಾಲ್ವ್, ಫೇಡ್, ವೈಪ್ ಎಲ್ಲವೂ ಸೇರಿ. ಪ್ರತೀ ಷಾಟ್‌ನ ಅವಧಿ ಸರಿಸುಮಾರು ೨ ಸೆಕೆಂಡುಗಳು. ಅಂದರೆ ನೋಡುಗನ ಎದುರಿಗೆ ನಿರಂತರ ದೃಶ್ಯ ಬದಲಾವಣೆಯ ಚಮತ್ಕಾರ. ಇಂತಹದೊಂದು ಅನೇಕ ಷಾಟ್‌ಗಳ ಸಿನಿಮಾ ಸಮಕಾಲೀನ ದಿನಗಳಲ್ಲಿ ಅಪರೂಪವಲ್ಲ. ಆದರೆ ೧೯೯೯ರಲ್ಲಿ ಇದು ಹೊಸ ಪ್ರಯೋಗ. ಆಗ ಜಾಹೀರಾತು ಚಿತ್ರಗಳಲ್ಲಿಯೂ ೩೦ ಸೆಕೆಂಡಿಗೆ ೧೫ ಷಾಟ್ ಬಳಸುತ್ತಾ ಇರಲಿಲ್ಲ. ಪ್ರತೀ ಷಾಟ್‌ನ ಅವಧಿ ದೊಡ್ಡದಿರಬೇಕು ಎಂಬ ಅಲಿಖಿತ ನಿಯಮವೊಂದು ಆಗಿನ ಸಿನಿಮಾ ನಿರ್ಮಿತಿಯಲ್ಲಿ ಇತ್ತು. ಈಗ ಅದು ೩೦ ಸೆಕೆಂಡಿನ ಜಾಹೀರಾತಿಗೆ ೫೦ ಚಿತ್ರಿಕೆಯಾದರೂ ಸಾಲದು ಎನ್ನುವವರೆಗೆ ಬೆಳೆದಿದೆ. ಅಮೇರಿಕನ್ ಜನಪ್ರಿಯ ಸಿನಿಮಾಗಳಲ್ಲಿ ಮತ್ತು ಟೆಲಿವಿಷನ್ ಜಾಹೀರಾತಿನಲ್ಲಿ ಹೀಗೆ ಅನೇಕ ಷಾಟ್‌ಗಳನ್ನ ಬಳಸಿ ಸಿನಿಮಾದ ‘ಗತಿ’ಯನ್ನು ಹೆಚ್ಚಿಸುವ ಅಭ್ಯಾಸ ಚಾಲ್ತಿಗೆ ಬಂದಿತ್ತು. ವಿಶೇಷವಾಗಿ ಮ್ಯೂಸಿಕ್ ವಿಡಿಯೋ ಪ್ರಾಕರದಲ್ಲಿ ಈ ಪ್ರಯೋಗಗಳು ಮೊದಲು ಆದವು. ಆದರೆ ಯೂರೋಪಿಯನ್ ಮತ್ತು ಇತರ ದೇಶಗಳ ಸಿನಿಮಾಗಳಲ್ಲಿ ಇಂತಹ ’ವೇಗ’ವರ್ಧಕ ಬಳಸುವ ಅಭ್ಯಾಸ ಇರಲಿಲ್ಲ. ಇಂತಹ ಪ್ರಯೋಗವನ್ನು ಮೊದಲಬಾರಿಗೆ ಜರ್ಮನ್ ಸಿನಿಮಾದಲ್ಲಿ ಮಾಡಿದವನು ಟಾಂ ಟ್ವೈಕರ್. ‘ರನ್ ಲೋಲಾ ರನ್’ ಸಿನಿಮಾದಿಂದಾಗಿ ಈತ ಜರ್ಮನಿಯ ಪ್ರಖ್ಯಾತ ಸಿನಿಮಾ ನಿರ್ದೇಶಕರ ಪಟ್ಟಿಗೆ ಸೇರಿದ. “ಈತನ ಇನ್ನಿತರ ಚಿತ್ರಗಳು ಹೇಗಿದ್ದವು? ಅವುಗಳ ‘ಗತಿ’ ಏನು?” ಎಂದು ಆ ವ್ಯಕ್ತಿಯ ಚಾರಿತ್ರಿಕ ಮತ್ತು ಸೃಜನಾತ್ಮಕ ಮೌಲ್ಯಮಾಪನ ಮಾಡಲು ಈ ಲೇಖನ ನಾನು ಬರೆಯುತ್ತಿಲ್ಲ. ಹಾಗಾಗಿ ‘ರನ್ ಲೋಲಾ ರನ್’ ಸಿನಿಮಾಗೆ ಮಾತ್ರ ಸೀಮಿತವಾಗಿ ನಿಮ್ಮೆದುರು ಒಂದು ಚರ್ಚೆಯನ್ನು ಇಡುತ್ತಾ ಇದ್ದೇನೆ. ಆ ಮೂಲಕ ದೃಶ್ಯ ಭಾಷೆಯನ್ನು ಕಟ್ಟುವವರ ಎದುರಿಗೆ ಇರುವ ಸವಾಲುಗಳು ಮತ್ತು ಅದನ್ನು ಗ್ರಹಿಸುವವರ ಎದುರಿಗೆ ಇರುವ ಆಯ್ಕೆಗಳನ್ನು ಕುರಿತು ಮಾತಾಡುವ ಪ್ರಯತ್ನ ಮಾಡುತ್ತೇನೆ. ಜೊತೆಗೆ, ಈ ಚಿತ್ರದ ಹಿನ್ನೆಲೆಯಲ್ಲಿ ನಮ್ಮ ಕನ್ನಡ ಚಿತ್ರರಂಗದ ಎದುರಿಗೆ ಇರುವ ಸಮಕಾಲೀನ ಆಯ್ಕೆಗಳನ್ನು ಕುರಿತು ಚರ್ಚಿಸುತ್ತೇನೆ.

Continue reading

ಹೊಸ ಅವಘಡಗಳ ನಡುವೆ ಹೊಸ ವರುಷಾರಂಭ…!

ಸಂಘಸುಖ (‘ಟಿವಿಠೀವಿ’ ಪತ್ರಿಕೆಗಾಗಿ ಬರೆದ ಲೇಖನ, ಜನವರಿ – ೨೦೧೦)

ಪ್ರಿಯ ಬಂಧು,
ಬಹಳ ದಿನವಾಗಿತ್ತು ನಿಮ್ಮ ಜೊತೆಗೆ ಮಾತಿಗಿಳಿದು. ಹೇಳಲೇಬೇಕಾದ ಕೆಲವು ವಿವರಗಳನ್ನು ನಿಮ್ಮೊಡನೆ ಹಂಚಿಕೊಳ್ಳಲೆಂದು ಮತ್ತೆ ಅಕ್ಷರ ಸಂವಹನಕ್ಕೆ ಇಳಿದಿದ್ದೇನೆ. ಸ್ವೀಕರಿಸಿ. ಮೊದಲಿಗೆ ಹೊಸ ವರುಷ ನಿಮಗೆಲ್ಲರಿಗೂ ಶುಭತರಲಿ, ಹಿತವಾಗಲಿ, ಒಳಿತಾಗಲಿ! ವರ್ಷ ಮುಗಿಯುವುದಕ್ಕೆ ದಿನಗಣನೆ ನಡೆದಿದ್ದಾಗಲೇ ನಮ್ಮ ಇಬ್ಬರು ದಿಗ್ಗಜರು ನಮ್ಮನ್ನಗಲಿದರು.
Continue reading

ತರವಲ್ಲ ತಗಿ ನಿನ್ನ ತಂಬೂರಿ ಸ್ವರ…

ಸಿ.ಅಶ್ವತ್ಥ್ ಒಂದು ನೆನಪು (ಛಾರ್ಜ್‌ಷೀಟ್ ಪತ್ರಿಕೆಗಾಗಿ ಬರೆದ ಲೇಖನ)

ಆಗ ನಾವೆಲ್ಲಾ ಸಣ್ಣ ಹುಡುಗರು. ನಾಟಕ-ಸಿಮಾ ನೋಡಿ ಅರ್ಥ ಮಾಡಿಕೊಳ್ಳುವಷ್ಟು ತಿಳುವಳಿಕೆ ಇರಲಿಲ್ಲ. ಆದರೆ ಹಾಡು ಕೇಳುವ ಮತ್ತು ಜೊತೆಗೂಡಿ ಹಾಡುವ ಹುಚ್ಚು ಇತ್ತು ನಮಗೆ. ಹಾಡುತ್ತಾ ಕುಳಿತರೆ ಲೋಕ ಮರೆಯುವ ಅಭ್ಯಾಸ ಆಗಿತ್ತು. ಅದು ಎಪ್ಪತ್ತರ ದಶಕದ ಮೊದಲರ್ಧ. ರವೀಂದ್ರ ಕಲಾಕ್ಷೇತ್ರದಲ್ಲಿ ‘ಕಾಕನಕೋಟೆ’ ನಾಟಕ. ನಾವು ಹುಡುಗರೆಲ್ಲರೂ ಈ ನಾಟಕದ ಹಾಡುಗಳನ್ನ ಅದಾಗಲೇ ಕೇಳಿದ್ದೆವು. ನಾಟಕವನ್ನೇ ನೋಡುವ ಅವಕಾಶ ಸಿಕ್ಕಾಗ ಎಲ್ಲರೂ ಒಟ್ಟಾಗಿ ರವೀಂದ್ರ ಕಲಾಕ್ಷೇತ್ರಕ್ಕೆ ಹೋದೆವು. ನಾಟಕದ ಕಥೆ, ಮೈಸೂರಿನ ಇತಿಹಾಸ ಇತ್ಯಾದಿಗಳು ನಮಗೆ ತಿಳಿಯಲಿಲ್ಲ. ಆದರೆ ನಾಟಕದಲ್ಲಿ ಇದ್ದ ಅಷ್ಟೂ ಹಾಡುಗಳೂ ನಮ್ಮ ಕಿವಿಯೊಳಗೆ ತುಂಬಿದ್ದವು. ‘ನೇಸರಾ.. ನೋಡು…’, ‘ಕರಿಹೈದನೆಂಬೋನು…’ ಮುಂತಾದ ಹಾಡುಗಳು ನಾಟಕ ಮುಗಿವ ಹೊತ್ತಿಗೆ ನಮ್ಮ ಗಂಟಲಿನಲ್ಲೂ ಇಳಿದಿದ್ದವು. ಸುಮಾರು ದಿನಗಳವರೆಗೆ ಮನೆಯಲ್ಲಿ ನಾನು ಆ ಹಾಡುಗಳನ್ನ ಗಂಟಲು ಬಿಚ್ಚಿ ಹಾಡುತ್ತಿದ್ದೆ. ಅಕ್ಕಪಕ್ಕದ ಮನೆಯವರೂ ಸಹ ನನ್ನ ಗದ್ದಲ ಕೇಳಿ ‘ಯಾವುದೋ ಈ ಅಪಸ್ವರಾ?’ ಎಂದು ಬೈಯ್ಯುತ್ತಾ ಇದ್ದರು. ಆದರೆ ನನಗೆ ಆ ಹಾಡುಗಳು ಮತ್ತು ಹಾಡುಗಾರ ಭಾರಿ ಇಷ್ಟವಾಗಿದ್ದರು. ಅಂದು ನಾಟಕದಲ್ಲಿ ಮೇಳದಲ್ಲಿ ಕೂತು ಹಾಡುಗಳನ್ನ ಹೇಳಿದ್ದವರು ಸಿ.ಅಶ್ವತ್ಥ್ ಎಂದು ನಂತರ ತಿಳಿಯಿತು. ಆ ಹಾಡುಗಳು ಕನ್ನಡ ರಂಗಸಂಗೀತದ ಇತಿಹಾಸದಲ್ಲಿ ಅಜರಾಮರ ಸ್ಥಾನವನ್ನೂ ಪಡೆದವು. ಆದರೆ ಇಂದಿಗೂ ನನ್ನ ಬಾಲ್ಯದ ನೆನಪಾಗಿ, ನಾನು ಕುಣಿಯುತ್ತಾ ಹಾಡುತ್ತಿದ್ದ ‘ಕರಿಹೈದನೆಂಬೋನು ಮಾದೇಸ್ವರಾ! ಮಾದೇಸ್ವರಗೆ ಸರಣು ಮಾದೇಸ್ವರಾ!’ ಕಣ್ಣ ಮುಂದಿದೆ.

Continue reading