ಸಿನಿಮಾ ಮತ್ತು ಕಿರುತೆರೆ – ಕನ್ನಡತನದ ಮಿತಿಗಳು

(ವಿಜಯಕರ್ನಾಟಕದ ೨೦೧೧ರ ದೀಪಾವಳಿ ಸಂಚಿಕೆಗಾಗಿ ಬರೆದ ಲೇಖನ)
‘ಕನ್ನಡ ಎಂಬುದೊಂದು ಅಸ್ಮಿತೆ. ಕನ್ನಡ ಎಂಬುದೊಂದು ಸಂಸ್ಕೃತಿ. ಕನ್ನಡತನವೆಂಬುದು ಒಂದು ನಾಡಿನ ಬದುಕಿನ ಕ್ರಮ.’ – ಹೀಗೆಲ್ಲಾ ನಾವು ಮಾತಾಡುತ್ತಾ ಇದ್ದೇವೆ. ಆದರೆ ನಮ್ಮ ಪ್ರಧಾನ ಮಾಧ್ಯಮಗಳಾದ ಸಿನಿಮಾ ಮತ್ತು ಕಿರುತೆರೆಗಳಲ್ಲಿ ಈ ನಮ್ಮ ಕನ್ನಡತನವು ಯಾವ ಕ್ರಮದಲ್ಲಿದೆ ಎಂದು ಗಮನಿಸುವ, ಆ ಮೂಲಕ ನಾವಾಡುವ ಮಾತಿಗೂ ನಮ್ಮದೇ ಕೃತಿಗಳಿಗೂ ಇರುವ ಅಂತರವನ್ನು ವಿಶ್ಲೇಷಿಸುವುದು ಸಹ ಇಂದಿನ ಅಗತ್ಯವಾಗಿದೆ. ಇಂತಹ ಮೌಲ್ಯಮಾಪನಗಳು ಆಗಿಂದಾಗ್ಗೇ ಆಗಬೇಕು. ಹಾಗಾದಾಗ ಮಾತ್ರ ನಾವು ನಡೆಯುತ್ತಿರುವ ದಾರಿಯ ಒಳಗಿನ ಕೃತ್ರಿಮಗಳನ್ನು ತಿಳಿದುಕೊಳ್ಳುವುದು ಸಾಧ್ಯವಾಗಬಹುದು.
ಮಾಧ್ಯಮ ಎಂಬ ಆಧುನಿಕ ಭೂತ
ಸಿನಿಮಾ ಎಂಬುದು ಆರಂಭವಾದಾಗ ಇದ್ದ ಸ್ವರೂಪವನ್ನು ಬದಲಿಸಿಕೊಂಡು ಜಾಗತಿಕ ಮನರಂಜನಾ ಮಾಧ್ಯಮವಾಗಿದ್ದು ಕಳೆದ ನೂರು ವರ್ಷಗಳಲ್ಲಿ ನಡೆದ ಇತಿಹಾಸ. ಆದರೆ ಆ ಸಿನಿಮಾ ಎಂಬುದು ಕನ್ನಡದ ಜಗತ್ತಿನೊಳಗೆ ಪ್ರವೇಶಿಸಿ ಕನ್ನಡವನ್ನು ಈಗಿನ ಸ್ವರೂಪಕ್ಕೆ ತಂದುದು ಬಹುಮುಖಿ ಸಂಸ್ಕೃತಿಯನ್ನ ಏಕತ್ರಗೊಳಿಸಿದ್ದು ಬಂಡವಾಳಶಾಹಿ ಪ್ರಣೀತ ಸಂಸ್ಕೃತಿಯೇ ತಂದಿತ್ತ ದುರಂತ. ಕನ್ನಡದ ಜನಮಾನಸಕ್ಕೆ ಅನೇಕ ಅಸ್ಮಿತೆಗಳಿದ್ದವು. ಅವೆಲ್ಲವನ್ನೂ ಪ್ರಮಾಣಿಕೃತ ಒಂದೇ ಭಾಷೆಯ ನೆಲೆಗೆ ತಂದಿಟ್ಟು, ಇಂದು ನಾವು ನಮ್ಮಗಳ ನಡುವೆಯೇ ಸಂವಹನ ಮಾಡಲು ಒಂದು ಏಕರೂಪಿ ಭಾಷೆಯನ್ನು ಸೃಷ್ಟಿಸಿಕೊಂಡೆವಲ್ಲಾ, ಇದು ಭಾಷೆಯ ಮೇಲಾದ ವ್ಯವಸ್ಥಿತ ಆಕ್ರಮಣ. ಭಾಷೆಗಳ ಒಳಗಣ ಸೊಗಡುಗಳನ್ನು ನಾವು ಕಳಕೊಂಡಿದ್ದೇವೆ. ಪ್ರತೀ ಸೊಗಡಿಗೆ ಇದ್ದ ಸಾಂಸ್ಕೃತಿಕ ಶ್ರೀಮಂತಿಕೆ ಇಂದು ಪಳೆಯುಳಿಕೆಗಳ ಸ್ಥಿತಿಯನ್ನು ತಲುಪಿದೆ. ಇಷ್ಟೆಲ್ಲಾ ಭಾಷಾಕ್ರಮಣದ ಜೊತೆಗೆ ಸಿನಿಮಾ ಎಂಬ ತಂತ್ರಭಾಷೆಯನ್ನು ನಾವು ಶ್ರೀಮಂತಗೊಳಿಸಿದ್ದೆವೆಯೇ ಅಂದರೆ ಅಲ್ಲಿಯೂ ನಮಗೆ ಸಿಗುವುದು ಬರೀ ಹಳವಂಡಗಳೇ!
ಕಿರುತೆರೆ ಎಂಬ ವಿಶ್ವರೂಪಿ
ಸಿನಿಮಾ ಎಂಬುದು ಮಾಧ್ಯಮವಾಗಿ ಹೆಮ್ಮರವಾಗುತ್ತಿದ್ದ ಹಂತದಲ್ಲಿಯೇ ನಮ್ಮ ನಡುವೆ ಹುಟ್ಟಿಕೊಂಡ ಹೊಸ ಮಾಧ್ಯಮ ಕಿರುತೆರೆ. ಮೂಲತಃ ಸಾರ್ವಜನಿಕರಿಗೆ ಮಾಹಿತಿ ಮತ್ತು ಸಂಪರ್ಕ ಸಾಧನವಾಗಿ ಬಳಕೆಯಾಗಲು ಹುಟ್ಟಿದ ಈ ಮಾಧ್ಯಮವು ಇಂದು ಆ ಮೂಲ ಉದ್ದೇಶದಿಂದಲೇ ದೂರ ಸರಿದು ಕೇವಲ ಮನರಂಜನೆಯಷ್ಟೇ ಪ್ರಧಾನವಾಗಿಸಿಕೊಂಡಿರುವುದನ್ನು ಸಹ ನಾವು ಕಾಣುತ್ತಾ ಇದ್ದೇವೆ. ಒಂದೊಮ್ಮೆ ಒಂದೇ ಕನ್ನಡ ವಾಹಿನಿಯಿದ್ದ ಕಾಲದಿಂದ ಇಂದು ಹನ್ನೆರಡು ಪೂರ್ಣಾವಧಿ ಕನ್ನಡ ವಾಹಿನಿಗಳು ಇರುವ ಕಾಲಕ್ಕೆ ನಾವು ಬಂದಿದ್ದೇವೆ. ಈ ಮಾರ್ಪಾಡುಗಳಿಂದ ಅನೇಕರ ಉದರಂಭರಣ ಆಗುತ್ತಿದೆ ಎಂಬುದನ್ನು ಒಪ್ಪುತ್ತಲೇ ಇವೇ ಮಾರ್ಪಾಡುಗಳು ಸಾರ್ವಜನಿಕರ ಮೇಲೆ ಹೇರುತ್ತಾ ಇರುವ ಹೊಸ ಒತ್ತಡಗಳನ್ನು ಗಮನಿಸಬೇಕಿದೆ. ಈ ಒತ್ತಡಗಳಿಂದ ಭಾಷೆಗೆ ಆಗಿರುವ ಹೊಡೆತಗಳನ್ನು ಕೂಡ ನಾವು ಗುರುತಿಸಬೇಕಿದೆ.
ಈಚೆಗಿನ ಉದಾಹರಣೆಯನ್ನು ಗಮನಿಸಿ. ಚಿತ್ರನಟನೊಬ್ಬ ಪತಿಪೀಡಕನಾಗಿದ್ದನ್ನು ಮಾಧ್ಯಮಗಳು ದಿನದ ೨೪ಗಂಟೆಯೂ ಎಡಬಿಡದೆ ಚರ್ಚಿಸಿದವು. ಸಾರ್ವಜನಿಕರ ಮೇಲೆ ಸುದ್ದಿಯೊಂದನ್ನಷ್ಟೇ ಅಲ್ಲದೆ, ಅಭಿಪ್ರಾಯವನ್ನು ಸಹ ‘ಹ್ಯಾಮರ್’ ಮಾಡಲಾಯಿತು. ಆ ಮೂಲಕ ಒಂದು ಕುಟುಂಬದ ಒಳಗಿನ ವಿವರವನ್ನು ಸಾರ್ವತ್ರಿಕ ಚರ್ಚೆಗೆ ತರುವ ಪ್ರಯತ್ನವಾಯಿತು. ಕೆಲವೇ ದಿನಗಳ ಹಿಂದೆ ಅದೇ ನಟನನ್ನ ದೇವರು ಎಂಬಂತೆ ಚಿತ್ರಿಸಿದ್ದ ಮಾಧ್ಯಮವೇ ಈಗ ಆತನನ್ನು ಖಳನಾಯಕ ಮಾಡಿತ್ತು. ಈ ಪ್ರಕರಣದಲ್ಲಿ ಆ ನಟ ಮಾಡಿದ ತಪ್ಪನ್ನು ಈ ನಾಡು ಬೆಂಬಲಿಸಬೇಕಿಲ್ಲ. ಆದರೆ ಇಂತಹ ವಿಷಯದ ಚರ್ಚೆಯ ಭರಾಟೆಯಲ್ಲಿ ನಿರ್ಮಾಪಕರ ಸಂಘ ಎಂಬ ಪ್ರಜಾಸತ್ತಾತ್ಮಕ ವ್ಯವಸ್ಥೆಯು ಸರ್ವಾಧಿಕಾರಿಯಂತಹ ನಿಲುವು ತೆಗೆದುಕೊಳ್ಳುವುದಕ್ಕೂ ಇವೇ ಮಾಧ್ಯಮಗಳು ದಾರಿ ಮಾಡಿಕೊಟ್ಟಿದ್ದವು. ನಂತರ ಇವೇ ಮಾಧ್ಯಮಗಳು ಹೇರಿದ ಒತ್ತಡಕ್ಕೆ ಮಣಿದು ಅದೇ ಸಂಘವು ತನ್ನ ನಿರ್ಧಾರ ಬದಲಿಸಿದ್ದನ್ನು ಸಹ ನಾವು ಕಂಡಿದ್ದೇವೆ.
ಇವೆಲ್ಲವನ್ನೂ ಈಗ ಮತ್ತೆ ನೆನೆಸುವುದಕ್ಕೆ ಕಾರಣ ಮಾಧ್ಯಮಗಳು ಹೇಗೆ ಒಂದು ಸರ್ವಾತ್ರಿಕ ಒಪ್ಪಿಗೆಯನ್ನು ತಮ್ಮ ಮೂಗಿನ ನೇರಕ್ಕೆ ರೂಪಿಸಿಬಿಡುತ್ತವೆ ಎಂದು ನಿರೂಪಿಸುವುದೇ ಆಗಿದೆ. ಈ ಬಗ್ಗೆ ನೋಮ್ ಚಾಮ್‌ಸ್ಕಿ ತನ್ನ ‘ಮ್ಯಾನುಫ್ಯಾಕ್ಚರಿಂಗ್ ಕನ್‌ಸೆಂಟ್’ ಎಂಬ ಪುಸ್ತಕದಲ್ಲಿ ಸಾಕಷ್ಟು ವಿಸ್ತೃತವಾಗಿಯೇ ಚರ್ಚಿಸುತ್ತಾನೆ. ಅಮೇರಿಕಾದಂತಹ ಅಭಿವೃದ್ಧಿಗೊಂಡ ರಾಷ್ಟ್ರದಲ್ಲಿ ಜನಾಭಿಪ್ರಾಯ ರೂಪಿಸಲು ವಿಭಿನ್ನ ಕಂಪೆನಿಗಳು ಹೇಗೆ ಮಾಧ್ಯಮವನ್ನು ಬಳಸಿಕೊಳ್ಳುತ್ತವೆ ಎಂದು ಉದಾಹರಣೆಗಳ ಸಹಿತ ಆತ ನಿರೂಪಿಸುತ್ತಾನೆ. ಇದೇ ಮಾದರಿಯ ಪ್ರಯತ್ನಗಳು ಈ ನಾಡಿನಲ್ಲಿ ಆದುದಕ್ಕೆ ‘ಅಣ್ಣಾ ಹಜಾರೆ’ ಸತ್ಯಾಗ್ರಹಕ್ಕೆ ಸಿಕ್ಕ ಪ್ರಚಾರ, ರಾಮ್‌ದೇವ್ ತರಹದ ಕಾವಿಧಾರಿಗಳನ್ನು ಕುರಿತಂತೆ ಮೂಡಿದ ಅಭಿಪ್ರಾಯ, ನಿತ್ಯಾನಂದ ಪ್ರಕರಣದ ವೈಭವೀಕರಣ ಇತ್ಯಾದಿಗಳನ್ನು ಗಮನಿಸಬಹುದು. ಇದೆಲ್ಲವೂ ವಿಭಿನ್ನ ಪ್ರಕರಣಗಳಿಗೆ ಸಂಬಂಧಿಸಿದ ಹಾಗೂ ಸಾರ್ವಜನಿಕ ಜೀವನಕ್ಕೆ ಬೃಹತ್ ಪಲ್ಲಟ ಉಂಟು ಮಾಡದಂತಹವು. ಆದರೆ ರಾಷ್ಟ್ರದ ಒಟ್ಟು ಚಿಂತನೆಯನ್ನು ಬದಲಿಸಬಹುದಾದ ಅನೇಕ ವಿಷಯಗಳನ್ನು ಸಹ ಇವೇ ಮಾಧ್ಯಮಗಳು ತಮ್ಮ ಮೂಗಿನ ನೇರಕ್ಕೆ ನಿರೂಪಿಸಿರುವುದನ್ನು ನಾವು ನೋಡಿದ್ದೇವೆ. ಅದಕ್ಕೆ ಉದಾಹರಣೆಯಾಗಿ ಮುಂಬೈನ ಮೇಲೆ ಉಗ್ರರ ದಾಳಿಯಾದಾಗ ಈ ಮಾಧ್ಯಮಗಳು ಅದನ್ನು ಚರ್ಚಿಸಿದ ಕ್ರಮವನ್ನು ಹಾಗೂ ಐಪಿಎಲ್‌ನಂತಹ ವ್ಯಾಪಾರೀ ಕ್ರಿಕೆಟ್ಟನ್ನು ‘ಯುದ್ಧ’ ಎಂಬಂತೆ ಇವೇ ಮಾಧ್ಯಮಗಳು ಪ್ರಚಾರ ನೀಡಿದ್ದನ್ನು ನಾವು ನೆನೆಯಬಹುದು. ಒಂದೆಡೆಗೆ ಶಾಂತಿದೂತರು ಎಂಬ ನಿಲುವು ಪ್ರಕಟಿಸುತ್ತಲೇ ಮತ್ತೊಂದೆಡೆ ಇವೇ ಸುದ್ದಿ ಮಾಧ್ಯಮಗಳು ಯುದ್ಧ ಮನೋಭಾವವನ್ನು ರೂಢಿಸ ಹೊರಡುವುದೇ ಇಲ್ಲಿನ ವೈರುಧ್ಯ.
ಇಂತಹ ಸುದ್ದಿವಾಹಿನಿಗಳ ಪೈಪೋಟಿಯ ನಡುವೆ ಕನ್ನಡ ಎಂಬ ಭಾಷೆಯ ಮೇಲೆ ಆಗುತ್ತಿರುವ ಆಕ್ರಮಣ ವಿಭಿನ್ನ ಬಗೆಯದು. ಸುದ್ದಿವಾಚಕರು ದೂರದರ್ಶನದ ಕಾಲಘಟ್ಟದಿಂದ ಇಂದಿಗೆ ಬದಲಾಗಿರುವ ಕ್ರಮವನ್ನು ಗಮನಿಸಿದರೆ ಕಾಣುವುದು ಸ್ಪಷ್ಟ ವಾಕ್ಯ ರಚನೆಯ ಓದಿನ ಕ್ರಮದಿಂದ ಬಿಡುಬೀಸಾದ ಮಾತಿನ ಕ್ರಮ. ಅದರೊಂದಿಗೆ ಸುದ್ದಿಯೊಂದಕ್ಕೆ ಇದ್ದ ತೂಕವೂ ಕಡಿಮೆಯಾಗಿದೆ. ಸುದ್ದಿಯೊಂದರಿಂದ ದೊರೆಯಬೇಕಿದ್ದ ಮಾಹಿತಿಗಿಂತ ರಂಜನೆಯ ಅಂಶಗಳೇ ಪ್ರಧಾನವಾಗಿದೆ. ಹೀಗೆ ಮಾಹಿತಿ, ಸಂಪರ್ಕ, ರಂಜನೆ ಎಂಬ ಪ್ರಧಾನ ಮೂರು ಅಂಶಗಳಿಗಾಗಿ ಆರಂಭವಾದ ಮಾಧ್ಯಮವು ಕೇವಲ ರಂಜನೆಯೇ ಪ್ರಧಾನವಾಗುವಂತೆ ಉಳಿದಿದೆ. ಇದರ ಪರಿಣಾಮವನ್ನು ಒಟ್ಟು ಸಮಾಜವು ಸುದ್ದಿಯನ್ನು ಗ್ರಹಿಸುವ ಕ್ರಮವೇ ಬದಲಾಗಿದೆ. ಅದನ್ನು ಸುದ್ದಿಯೊಂದರ ಬಗ್ಗೆ ಸಾಮಾನ್ಯ ಜನ ನೋಡುವ, ಗ್ರಹಿಸುವ ಕ್ರಮದಲ್ಲಿಯೇ ಗುರುತಿಸಬಹುದು.
ಧಾರಾವಾಹಿ ದುನಿಯಾ
ಇನ್ನು ಕಿರುತೆರೆಯಲ್ಲಿಯೇ ಬರುವ ಕಥಾಚಿತ್ರಗಳು ಮತ್ತು ದೈನಿಕ ಧಾರಾವಾಹಿಗಳ ವಿಷಯಕ್ಕೆ ಬರೋಣ. ಇಲ್ಲಿಯೂ ಕತೆಗಿಂತ ಆ ದಿನ ನೋಡುಗನಲ್ಲಿ ಮೂಡಿಸುವ ರೋಚಕತೆ ಮಾತ್ರ ಪ್ರಧಾನವಾಗಿದೆ. ಒಂದು ಧಾರಾವಾಹಿಗೆ ಆತ್ಮವಾದ ಕತೆ ಗೌಣವಾಗಿ ಅದರ ಸುತ್ತಲ ತಿರುವು ಮತ್ತು ಬೆರಗಿನಲಂಕಾರವೇ ಪ್ರಧಾನವಾಗಿದೆ. ಹೀಗಾಗಿ ಇಂದು ಕಥನ ಕಾರ್ಯಕ್ರಮಗಳನ್ನು ಕಿರುತೆರೆಯಲ್ಲಿ ನೋಡುವವರು ಆ ಕತೆಯ ಹೂರಣಕ್ಕಿಂತ ಆವರಣವನ್ನು ಮಾತ್ರ ಗಮನಿಸುವ ಸ್ಥಿತಿಗೆ ಬಂದಿದ್ದಾರೆ. ಇದೂ ಕೂಡ ಮಾರುಕಟ್ಟೆ ಪ್ರಣೀತ ಸೂತ್ರದನ್ವಯ ಆಗಿರುವ ಬದಲಾವಣೆ. ಒಂದು ನಾಡಿನ ಸಂಸ್ಕೃತಿಯೇ ರೂಪಿಸಿದ ಶ್ರೇಷ್ಟ ಕಾದಂಬರಿಯೊಂದು ಕಿರುತೆರೆಯಲ್ಲಿ ಮೂಡುವುದಕ್ಕಿಂತ ಮಾರುಕಟ್ಟೆಯು ತಾನು ನಿರ್ಮಿಸಿರುವ ಸಾಮಗ್ರಿಗಳನ್ನು ಮಾರುವುದನ್ನೇ ಪ್ರಧಾನ ಅಂಶವನ್ನಾಗಿಸಿಕೊಂಡು ಕತೆಗಳನ್ನು ಕಟ್ಟುತ್ತಾ ಇದೆ. ಹೀಗಾಗಿ ಪಾತ್ರದ ರಚನೆ ಮತ್ತು ಮೈವಳಿಕೆಗಳು ಕೃತ್ರಿಮತೆಯ ಪರಾಕಾಷ್ಟೆಯನ್ನು ತಲುಪಿವೆ. ಎಲ್ಲಾ ವಯೋಮಾನದ ಹೆಣ್ಣು ಪಾತ್ರಗಳೂ ಸಹ ಈಗಷ್ಟೇ ಬ್ಯೂಟಿಪಾರ್ಲರ್‌ನಿಂದ ಬಂದಿವೆ ಎಂಬಂತೆ ಕಾಣುವುದು ಒಂದೆಡೆಯಾದರೆ, ಆ ಪಾತ್ರಧಾರಿಗಳಿಗೆ ತಮ್ಮ ಹೊರ ಅಲಂಕಾರ ಮತ್ತು ವಸ್ತ್ರದ ವಿವರಗಳು ಮುಖ್ಯವಾಗಿ ಮುಖಭಾವ ಮತ್ತು ನಟನೆಗೆ ಅಗತ್ಯವಾದ ರಸೋತ್ಪತ್ತಿ ಎನ್ನುವುದು ಬಹುತೇಕ ಇಲ್ಲವಾಗಿದೆ. ಇದರ ಪರಿಣಾಮವಾಗಿ ಇಂದು ಕಿರುತೆರೆಯಲ್ಲಿರುವ ಬಹುತೇಕರು ಕಲಾವಿದರು ಎನ್ನುವುದಕ್ಕಿಂತ ಬಣ್ಣಬಳಿದುಕೊಂಡ ಜೀವಗಳ ಹಾಗೆ ಕಾಣುತ್ತಾ ಇದ್ದಾರೆ. ಇಂತಹ ಜನ ಕಟ್ಟಿಕೊಡುವ ಭಾಷೆಯೂ ಸಹ ಆ ಸಂಸ್ಕೃತಿಯನ್ನು ಕಟ್ಟುವ ದಾರಿಗೆ ಹೋಗದೆ ಇಡಿಯಾಗಿ ಜನಮನವನ್ನು ಕೃತ್ರಿಮಗೊಳಿಸುತ್ತಿದೆ. ಒಂದು ವಾಕ್ಯದಲ್ಲಿ ಪೂರ್ಣವಿರಾಮ ಇರುವ ಹಂತದಲ್ಲಿ ಉಸಿರು ಸ್ವೀಕರಿಸಿ ಮುಂದಿನ ವಾಕ್ಯಕ್ಕೆ ಹೋಗಬೇಕು ಎಂಬ ನಟನೆಯ ಆರಂಭಿಕ ಪಾಠವನ್ನು ಸಹ ಬಿಟ್ಟುಕೊಟ್ಟವರಂತೆ, ವಾಕ್ಯವೊಂದರಲ್ಲಿಯೇ ಮೂರು ನಾಲ್ಕು ತುಂಡುಗಳನ್ನು ಮಾಡಿಕೊಂಡು ಮಾತಾಡುವ ಕಲಾವಿದರು ಹೆಚ್ಚಾಗಿದ್ದಾರೆ. ಈ ಲೇಖನ ಬರೆಯುವ ಹೊತ್ತಿಗೆ ಕನ್ನಡದಲ್ಲಿ ದೈನಿಕ ಧಾರಾವಾಹಿಗಳಾಗಿ ೬೫ ಕಾರ್ಯಕ್ರಮಗಳು ಬರುತ್ತಿವೆ. ಅವುಗಳಲ್ಲಿ ನಾಲ್ಕು ಅಥವಾ ಐದು ಮಾತ್ರ ಮೂಲ ಕನ್ನಡ ಕತೆಗಳನ್ನು ಹೊಂದಿವೆ. ಉಳಿದವು ಇನ್ಯಾವುದೋ ಭಾಷೆಯಿಂದ ಎರವಲು ತಂದ ಕಥಾಹಂದರಗಳು ಅಥವಾ ಪುನರವತರಣಿಕೆಗಳು. ಹೀಗಿದ್ದಾಗ ಭಾಷೆಯನ್ನು ಅಥವಾ ಸಂಸ್ಕೃತಿಯನ್ನು ಕಟ್ಟುವ ಕೆಲಸ ಇಂತಹ ಮಾಧ್ಯಮದಿಂದ ಆದೀತೇ ಎಂಬುದೇ ದೊಡ್ಡ ಪ್ರಶ್ನೆ.
ಈ ಪರಿಸ್ಥಿತಿಗೆ ಕಾರಣಗಳು ಅನೇಕ. ಮೊದಲ ಮತ್ತು ಬಹುಮುಖ್ಯ ಕಾರಣ ನಮ್ಮಲ್ಲಿನ ಬಹುತೇಕ ಟೆಲಿವಿಷನ್ ವಾಹಿನಿಗಳನ್ನು ನಡೆಸುತ್ತಾ ಇರುವವರು ಕನ್ನಡಿಗರಲ್ಲ. ಹೀಗಾಗಿ ಆಯಾ ವಾಹಿನಿಯಲ್ಲಿ ಕೆಲಸ ಮಾಡುತ್ತಾ ಇರುವ ಅನೇಕ ಕನ್ನಡಿಗರಿದ್ದರೂ ಆ ವಾಹಿನಿಗಳಲ್ಲಿ ಕನ್ನಡದ ಅಗತ್ಯ ಪೂರೈಸುವ ಚಟುವಟಿಕೆಗಿಂತ ಆಯಾ ವಾಹಿನಿಯ ಮಾಲೀಕನನ್ನು ಮೆಚ್ಚಿಸುವ ಕೆಲಸ ಆಗುತ್ತಿದೆ. ಇದರೊಂದಿಗೆ ಬಹುತೇಕ ವಾಹಿನಿಗಳಿಗೆ ಕಾರ್ಪೋರೇಟ್ ಅಧಿಕಾರಶಾಹಿ ವ್ಯವಸ್ಥೆಯಿದೆ. ಇಂತಲ್ಲಿ ಪ್ರಸಾರವಾಗುವ ಕಾರ್ಯಕ್ರಮ ವಾರಾಂತ್ಯದಲ್ಲಿ ನೀಡುವ ಜನಪ್ರಿಯತೆಯ ಸಂಖ್ಯೆ ಮಾತ್ರ ಮುಖ್ಯವಾಗುತ್ತದೆ. ಇನ್ನೆಲ್ಲ ವಿವರಗಳು ನಗಣ್ಯವಾಗಿ ಬಿಡುತ್ತವೆ. ಇದರಿಂದಾಗಿ ಬಹುತೇಕ ಕನ್ನಡ ಟೆಲಿವಿಷನ್ ವಾಹಿನಿಗಳಲ್ಲಿ ಕನ್ನಡವನ್ನು ಭಾಷೆಯಾಗಿ ಉಳಿಸುವ ಕೆಲಸ ಆಗುವುದಕ್ಕೆ ಬದಲಾಗಿ ಜಾಹೀರಾತು ಮಾರುಕಟ್ಟೆಯನ್ನು ಒಲಿಸಿಕೊಳ್ಳುವ ಕೆಲಸ ಮಾತ್ರ ಆಗುತ್ತಿದೆ.
ಸಿನಿಮಾ ಎಂಬ ನಾಯಕಮಣಿಗಳ ಜಗತ್ತು
ಇದೇ ಕಾಲಘಟ್ಟದ ಸಿನಿಮಾ ಅಥವಾ ಹಿರಿತೆರೆಯ ಜನಪ್ರಿಯಧಾರೆಯನ್ನು ಗಮನಿಸಿದರೆ ಪರಿಸ್ಥಿತಿ ಭಿನ್ನವಾಗಿಲ್ಲ. ಕನ್ನಡ ಸಿನಿಮಾ ಲೋಕದ ಪ್ರಖ್ಯಾತ ನಿರ್ದೇಶಕರೊಬ್ಬರು ಹೇಳುವ ಪ್ರಕಾರ, ‘ಇಂದು ಸಿನಿಮಾಗೆ ಕತೆಯೇ ಬೇಕಾಗಿಲ್ಲ. ಘಟನೆಯಿಂದ ಘಟನೆಗೆ ಎಂಬಂತೆ ಪಾತ್ರಗಳನ್ನು ನಡೆಸುತ್ತಾ, ಆ ಘಟನೆಯಲ್ಲಿನ ಹಾಸ್ಯವನ್ನು ಅಥವಾ ದುಃಖವನ್ನು ಕಟ್ಟಿಕೊಟ್ಟರೆ ಸಾಕು.’ ಈ ಮಾತಿನ ಹೂರಣವು ಅದಾಗಲೇ ಕಿರುತೆರೆಯ ಬಗ್ಗೆ ಆಡಿದ ವಿವರಗಳಂತೆಯೇ ಇದೆ. ಹೀಗಾಗಿ ಕೇವಲ ಎರಡು ದಶಕಗಳ ಹಿಂದೆ ಇದ್ದಂತಹ ಕತೆಯನ್ನು ಕಟ್ಟಿಕೊಡುತ್ತಿದ್ದ ಸಿನಿಮಾಗಳು ಇಂದು ನೋಡುಗನನ್ನು ಆ ನಿಮಿಷದ ಮನರಂಜನೆಯಲ್ಲಿ ಮುಳುಗಿಸಲು ನಿಟ್ಟುಸಿರು ಬಿಡುತ್ತಿವೆ. ಈ ಪರಿಸ್ಥಿತಿಯಲ್ಲಿ ಹೊಸದಾಗಿ ಕತೆ ಹೆಣೆಯುವ ಸರ್ಕಸ್ ಬೇಡವೆಂದು ಬಹುತೇಕ ನಿರ್ಮಾಪಕರು ಪುನರವತರಣಿಕೆಗಳನ್ನು ಮಾಡುತ್ತಾ ಇದ್ದಾರೆ. ಇದು ಸೃಜನಶೀಲ ಶಕ್ತಿಗಳನ್ನು ಮೂಲೆಗುಂಪು ಮಾಡಿದೆ. ಇಂದು ಕನ್ನಡ ಚಿತ್ರರಂಗದಲ್ಲಿ ಪ್ರತಿಭೆಗಳ ಮಹಾಪೂರವೇ ಇದ್ದರೂ ಅವರಿಗೆ ಸರಿಯಾದ ವೇದಿಕೆಯೇ ದೊರಕುತ್ತಿಲ್ಲ ಎಂಬುದು ನಿಚ್ಚಳ ಸತ್ಯ. ಆದರೆ ಕನ್ನಡ ಚಿತ್ರ ನಿರ್ಮಾಪಕರು ಮಾತ್ರ ‘ನಮ್ಮಲ್ಲಿ ಕತೆಗಾರರಿಲ್ಲ, ಕತೆ ಇಲ್ಲ’ ಎಂದು ಅಸಡ್ಡಾಳ ಮಾತುಗಳನ್ನಾಡುತ್ತಾ ಇರುವುದನ್ನು ಕಾಣುತ್ತಾ ಇದ್ದೇವೆ.
ಇದರೊಂದಿಗೆ ಈ ದೇಶದ ಬಹುತೇಕ ಚಿತ್ರೋದ್ಯಮಗಳಂತೆಯೇ ನಮ್ಮ ಕನ್ನಡ ಚಿತ್ರೋದ್ಯಮವೂ ಸಹ ಕಳೆದ ನಾಲ್ಕೈದು ದಶಕಗಳಿಂದ ನಾಯಕರನ್ನು ಪೋಷಿಸುತ್ತಾ ತನ್ನ ಅನ್ನ ಹುಟ್ಟಿಸಿಕೊಳ್ಳುತ್ತಿದೆ. ನಾಯಕನ ಜನಪ್ರಿಯತೆಯೇ ಸಿನಿಮಾದ ಮೂಲ ಬಂಡವಾಳ ಎಂಬಂತಹ ಪರಿಸ್ಥಿತಿಯನ್ನು ಚಿತ್ರೋದ್ಯಮ ತಾನೇ ನಿರ್ಮಿಸಿಕೊಂಡಿದೆ. ಹೀಗಾಗಿ ನಾಯಕನ ಆಯ್ಕೆಯೇ ನಿರ್ಮಾಪಕನ ಆಯ್ಕೆಯೂ ಆಗಿರುವಂತಹ ಪರಿಸ್ಥಿತಿ ಇದೆ. ಅನೇಕ ಬಾರಿ ಕತೆ ಮತ್ತು ನಿರ್ದೇಶಕ ಆಯ್ಕೆಯಾಗುವುದಕ್ಕೂ ಮುನ್ನ ನಾಯಕನ ಆಯ್ಕೆಯಾಗಿರುತ್ತದೆ. ಆಯಾ ನಾಯಕನಿಗಾಗಿ ಕತೆ ಹೆಣೆಯುವ, ಆತನ ವರ್ಚಸ್ಸಿಗೆ ತಕ್ಕಂತೆ ಕಥನ ರೂಪಿಸುವ ಕೆಲಸ ನಡೆಯುತ್ತಾ ಇರುತ್ತದೆ. ಈ ನಾಯಕ ಮಣಿಗಳಲ್ಲಿ ಬಹುತೇಕರಿಗೆ ಕನ್ನಡ ಸಂಸ್ಕೃತಿಯ ಬಗ್ಗೆ ತಿಳುವಳಿಕೆ ಇಲ್ಲ ಎಂಬುದು ಮತ್ತೊಂದು ಕಠೋರ ಸತ್ಯ. ಹೀಗಾಗಿ ಈ ನಾಯಕರು ಆಯ್ದುಕೊಳ್ಳುವ ಕತೆಗೆ ಅವರವರ ಅಭಿಮಾನಿಗಳನ್ನು ವೃದ್ಧಿಸುವ ಗುಣವಿರುತ್ತದೆಯಷ್ಟೆ. ಇಂತಹ ಕತೆಗಳಲ್ಲಿ ಭಾಷೆ ಎಂಬ ಸಂಸ್ಕೃತಿಯ ಮೂಲಬೇರನ್ನು ರೂಢಿಸುವ ಸಣ್ಣ ಪ್ರಯತ್ನವೂ ಇರುವುದಿಲ್ಲ. ಅಕಸ್ಮಾತ್ ಭಾಷೆಯ ಕುರಿತ ಚರ್ಚೆ ಕಂಡಲ್ಲಿ ಅದು ಆಯಾ ಸಿನಿಮಾದ ಮೊದಲರ್ಧದಲ್ಲಿ ಅದೇ ನಾಯಕನನ್ನು ಬಳಸಿ ಮಾಡಿದ ಒಂದು ಕನ್ನಡ ಕುರಿತ ಹಾಡಿಗೆ ಮಾತ್ರ ಸೀಮಿತವಾಗಿರುತ್ತದೆಯಷ್ಟೆ.
ಇವುಗಳಾಚೆಗೆ ಇಂತಹ ಸಿನಿಮ ಸಂಸ್ಕೃತಿಯಲ್ಲಿ ಅಭಿನಯದ ಸಾವು ಸಹ ನಿರಂತರವಾಗಿ ಆಗುತ್ತಿದೆ ಎಂಬುದನ್ನು ಗಮನಿಸಬೇಕು. ನಮ್ಮಲ್ಲಿನ ನಾಯಕರಿಗೆ ತಮ್ಮ ಪಾತ್ರವಷ್ಟೇ ಮುಖ್ಯವಾಗಿ, ಆ ಪಾತ್ರದ ಆಸುಪಾಸಿನಲ್ಲಿ ಇರುವ ಇನ್ನಿತರ ಪೋಷಕ ಪಾತ್ರಗಳನ್ನು ಸುಪುಷ್ಟವಾಗಿಸುವ ಆಸಕ್ತಿ ಇರುವುದಿಲ್ಲ. ಹೀಗಾಗಿ ಕನ್ನಡ ಚಿತ್ರೋದ್ಯಮದ ಬಹುತೇಕ ಪೋಷಕ ಕಲಾವಿದರು ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಇಲ್ಲವೆಂದು ಕೊರಗುವುದನ್ನು ಕಂಡಿದ್ದೇವೆ. ಈ ಮಾತಿಗೆ ಅಪವಾದಗಳಿವೆ. ಆದರೆ ಅಂತಹ ಸಿನಿಮಾಗಳ ಸಂಖ್ಯೆ ತೀರಾ ಗೌಣವೆನಿಸುವಷ್ಟಿದೆ. ಇದನ್ನು ಸಮಕಾಲೀನ ಚಲನಚಿತ್ರ ಚರಿತ್ರೆಯ ದುರಂತ ಎನ್ನಬಹುದು.
ಕಲಾತ್ಮಕ ಚಿತ್ರಗಳು ಇಂತಹ ಮೌಢ್ಯಗಳಿಂದ ದೂರ ಉಳಿದಿವೆ. ಆದರೆ ಅವುಗಳನ್ನು ಪ್ರದರ್ಶಿಸಲು ಇರುವ ಅವಕಾಶಗಳು ಕಡಿಮೆಯಾಗಿರುವುದರಿಂದ ಉತ್ತಮ ಪ್ರಯೋಗಗಳು ಕನ್ನಡ ಜನಮಾನಸದ ಕಣ್ಣಿಗೆ ತಾಗುತ್ತಿಲ್ಲ. ಇದರಿಂದಾಗಿ ಗಿರೀಶರ ‘ಕನಸೆಂಬೋ ಕುದುರೆಯನೇರಿ’ಯಂತಹ ಸಿನಿಮಾದಲ್ಲಿ ಬಿರಾದರ್ ಅಂತಹ ಕಲಾವಿದ ಅಪರೂಪ ಎನಿಸುವ ನಟನೆಯನ್ನು ಮಾಡಿದ್ದರು, ಅದನ್ನು ನೋಡಿ, ಆನಂದಿಸಿ, ಬೆನ್ನು ತಟ್ಟಿದ ಕನ್ನಡಿಗರ ಸಂಖ್ಯೆ ಕಡಿಮೆ. ಇದೇ ಮಾತನ್ನು ಕನ್ನಡದ ಇನ್ನೂ ಅನೇಕ ಚಿತ್ರಗಳನ್ನು ಕುರಿತು ಹೇಳಬಹುದು. ನಾಯಕ ಪ್ರಣೀತವಲ್ಲದ್ದು ಬಾಳುವುದಿಲ್ಲ ಎಂಬಂತಹ ವಾತಾವರಣವನ್ನು ನಾವೇ ಸೃಷ್ಟಿಸಿಕೊಂಡಿದ್ದೇವೆ. ಹೀಗಾಗಿ ಒಳ್ಳೆಯದು ಎಂದು ಗುರುತಿಸಬಹುದಾದ್ದು ಪ್ರೇಕ್ಷಕರ ಬಳಿಗೆ ತಲುಪುತ್ತಿಲ್ಲ. ತಲುಪುತ್ತಾ ಇರುವುದು ನಾಡಿಗೆ ಮತ್ತು ಭಾಷೆಗೆ ಒಳ್ಳೆಯದನ್ನು ಮಾಡುತ್ತಿಲ್ಲ ಎಂಬ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಇದ್ದೇವೆ.
ಇಂತಹ ಸಂದರ್ಭದಲ್ಲಿ ನಾಡಿನ ಒಂದು ಬಣ ಇತರೆ ಭಾಷೆಯ ಸಿನಿಮಾಗಳನ್ನು ಕನ್ನಡಕ್ಕೆ ಮಾತಿನ ಮರುಲೇಪನ ಮಾಡುವುದೇ ಉತ್ತಮ ಎಂಬ ಮಾತನ್ನೂ ಆಡುತ್ತಿದೆ. ಇದು ಆ ಮಾತಾಡುತ್ತಾ ಇರುವವರ ತಪ್ಪಲ್ಲ. ನಮ್ಮಲ್ಲಿ ತಯಾರಾಗುತ್ತಿರುವ ‘ಜನಪ್ರಿಯ ಸರಕು’ ಹುಳುಕು ಹಿಡಿದಿದೆ. ಹಾಗಾಗಿ ಕನ್ನಡ ನೋಡುಗ ಉತ್ತಮವಾದುದನ್ನು ಕನ್ನಡದಲ್ಲಿ ನೋಡಬೇಕೆಂಬ ಆಸೆಯಿಂದಲೇ ಇತರೆ ಭಾಷೆಯ ಸಿನಿಮಾಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಬಿಡುಗಡೆಗೊಳಿಸಿ ಅನ್ನುತ್ತಾ ಇದ್ದಾನೆ. ಆದರೆ ಇದು ಇನ್ನೂ ದೊಡ್ಡ ಅಪಾಯಕ್ಕೆ ಕನ್ನಡವನ್ನು ತಳ್ಳಿದಂತಾಗುತ್ತದೆ. ಮೊದಲಿಗೆ ಕಳೆದ ಐದು ದಶಕಗಳಿಂದ ದೂರ ಇಟ್ಟಿದ್ದ ಖಾಯಿಲೆಯೊಂದನ್ನು ನಾವೇ ಮನೆಗೆ ಆಹ್ವಾನಿಸದಂತಾಗುತ್ತದೆ. ನಂತರ; ಈ ಡಬ್ಬಿಂಗ್ ಪಿಡುಗಿನಿಂದಾಗಿ ನಾವು ತುಟಿಚಲನೆಗಾಗಿ ಜೋಡಿಸುವ ಮಾತಿನ ಸರಣಿಯ ಕೃತ್ರಿಮತೆಯು ಅದೇ ಸ್ವರೂಪದಲ್ಲಿ ನಮ್ಮ ಮುಂದಿನ ತಲೆಮಾರುಗಳಿಗೆ ತಲುಪಿ, ಭಾಷೆಯ ಅಂದವನ್ನೇ ನಾಶ ಮಾಡುತ್ತದೆ. ಮೂಲ ಭಾಷೆಯ ವಾಕ್ಯ ರಚನಾ ಕ್ರಮದಲ್ಲಿ ಮೂಡುವ ಪ ವರ್ಗದ ಮಾತುಗಳಿಗೆ ಹೊಂದುವ ಹಾಗೆ ಕನ್ನಡದ ಮಾತನ್ನು ಕಟ್ಟಿ, ತುಟಿ ಚಲನೆಗೆ ತಕ್ಕಂತೆ ಕನ್ನಡಿಗರಿಂದ ಆ ಮಾತಾಡಿಸುವುದರಿಂದಾಗಿ ನಮ್ಮ ಭಾಷೆಯ ಮಾತು ಕಟ್ಟುವ ಕ್ರಮ ದಿಕ್ಕಾಪಾಲಾಗುತ್ತದೆ. ಉದಾಹರಣೆಗೆ ಎಂದು ಗಮನಿಸಿ ‘ಮೇ ತುಝೇ ಪ್ಯಾರ್ ಕರ್‌ತಾ ಹೂಂ’ ಎಂಬ ಹಿಂದಿ ನುಡಿಗಟ್ಟನ್ನು, ‘ಐ ಸ್ಲೆಪ್ಟ್ ವಿತ್ ಮೈ ಬಾಯ್‌ಫ್ರೆಂಡ್ ಮಮ್ಮಿ!’ ಎಂಬ ಇಂಗ್ಲೀಷ್ ನುಡಿಕಟ್ಟನ್ನು ಕನ್ನಡಕ್ಕೆ ಪವರ್ಗದಲ್ಲಿ ಪವರ್ಗದ ಕನ್ನಡ ಶಬ್ದ ಹುಟ್ಟುವಂತೆ ತರ್ಜುಮೆ ಮಾಡಿ ನೋಡಿ. ಡಬ್ಬಿಂಗ್ ಪಿಡುಗು ಎಂತಹ ಅವಗಢ ಸೃಷ್ಟಿಸಬಲ್ಲದು ಎಂಬುದು ತಕ್ಷಣವೇ ತಿಳಿಯುತ್ತದೆ. ಇದನ್ನರಿಯದ ಜನ, ನಮ್ಮಲ್ಲಿ ತಯಾರಾಗುತ್ತಿರುವ ಜನಪ್ರಿಯ ಸರಕನ್ನು ಬೈಯ್ಯಲೆಂಬಂತೆ ಡಬ್ಬಿಂಗ್ ಬರಲಿ ಎನ್ನುತ್ತಾ ಇದ್ದಾರೆ. ಆದರೆ ಆ ಪಿಡುಗು ಕನ್ನಡಕ್ಕೆ ಮರಳಿ ಬರುವುದು ಎಂದರೆ ತಾಯಿಬೇರಿಗೆ ಕೊಡಲಿ ಹಾಕಿದಂತಾಗುತ್ತದೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಗಮನಿಸಿದಾಗ ಇಂದು ಮಾಧ್ಯಮ ಎಂಬುದು, ವಿಶೇಷವಾಗಿ ದೃಶ್ಯ ಮಾಧ್ಯಮ ಮತ್ತು ಶ್ರವ್ಯ ಮಾಧ್ಯಮಗಳು ನಮ್ಮ ಭಾಷೆಯನ್ನು ಕಟ್ಟುವ ಕೆಲಸ ಮಾಡುವುದಕ್ಕಿಂತ ಹೆಚ್ಚು ಭಾಷಾವಿನಾಶದ ಕೆಲಸ ಮಾಡುತ್ತಿವೆ. ನಾವು ನಮ್ಮ ಭಾಷೆಯನ್ನು, ಸಂಸ್ಕೃತಿಯನ್ನು ಈ ಮಾಧ್ಯಮಗಳ ಮೂಲಕವೇ ಮುಂದಿನ ತಲೆಮಾರಿಗೆ ದಾಟಿಸಬೇಕಿದೆ. ಈ ಹಿನ್ನೆಲೆಯಲ್ಲಿ ನಾವು ನಮ್ಮ ಮಾಧ್ಯಮಗಳನ್ನು ಪುನರ್‌ನಿರ್ಮಾಣಕ್ಕೆ ಒಡ್ಡಬೇಕಿದೆ. ಕನ್ನಡ ದೃಶ್ಯ ಮಾಧ್ಯಮಗಳಿಗಾಗಿ ಪ್ರತ್ಯೇಕ ಸಂಹಿತೆಯೊಂದನ್ನು ಸಿದ್ಧಪಡಿಸಿಕೊಳ್ಳಬೇಕಿದೆ. ಕನ್ನಡ ಪ್ರೀತಿಯ ಜೊತೆಗೆ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ. ಲಾಭ ಎನ್ನುವುದು ವಾರಂತ್ಯದಲ್ಲಿ ದೊರೆಯುವ ಸಂಖ್ಯೆಯಿಂದ ಬರುವ ತೈಲಿಯಲ್ಲ ಅದು ಭಾಷೆಯ ಮೇಲೆ ಆಗುವ ಪರಿಣಾಮ ಎಂಬುದರ ಅರಿವಿನೊಂದಿಗೆ ಕನ್ನಡದ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ. ಈ ನಿಟ್ಟಿನಲ್ಲಿ ಈ ಮಾಧ್ಯಮದಲ್ಲಿ ದುಡಿಯುತ್ತಿರುವ ಎಲ್ಲಾ ಕನ್ನಡ ಮನಸ್ಸುಗಳೂ ಆಲೋಚಿಸಬೇಕಿದೆ.
– ಬಿ.ಸುರೇಶ
೨೩ ಸೆಪ್ಟಂಬರ್ ೨೦೧೧
ಬೆಂಗಳೂರು