ಬಿ.ಸುರೇಶ ಅವರ `ಪ್ರೀತಿಯೆಂಬ ಅಚ್ಚರಿ!’

ಕಥಾ ಸಾರಾಂಶ

ಅನು ಮತ್ತು ಸರ್ವೋತ್ತಮ ಪ್ರೀತಿಸಿ ಮದುವೆಯಾದವರು. ಅವರದು ಅನ್ಯೋನ್ಯ ದಾಂಪತ್ಯ. ಇವರು ಮದುವೆಯಾಗುವ ಕಾಲದಲ್ಲಿ ಇವರನ್ನು ವಿರೋಧಿಸಿದ್ದ ಅವರಿಬ್ಬರ ಮನೆಯವರುಗಳ ಬೆಂಬಲವಿಲ್ಲದೆಯೇ ಈ ದಂಪತಿಗಳು ನಗುನಗುತ್ತಾ ತಮ್ಮ ಸಣ್ಣ ಆದಾಯದಲ್ಲಿಯೇ ನೆಮ್ಮದಿಯಾಗಿ ಬದುಕುತ್ತಿರುವವರು. ಕೆಲಸ ಮುಗಿಸಿ ಬರುವ ಗಂಡನಿಗಾಗಿ ರುಚಿರುಚಿಯಾದ ಅಡಿಗೆ ಮಾಡಿಟ್ಟು, ಅವನು ಬಂದೊಡನೆ ಅವನೊಂದಿಗೆ ಸರಸದ ಮಾತಾಡುತ್ತಲೇ ತಮ್ಮ ಪ್ರೇಮ ಪ್ರಕರಣದ ಘಟನೆಗಳನ್ನು ನೆನೆಸಿಕೊಳ್ಳುತ್ತಾ ಅನು-ಸರ್ವೋತ್ತಮ ಇಬ್ಬರೂ ಅಪರೂಪದ ಜೋಡಿಗಳಾಗಿ ಬದುಕುತ್ತಾ ಇದ್ದವರು. ಸರ್ವೋತ್ತಮನಿಗೆ ತಾನು ದುಡಿಯುತ್ತಿರುವ ಟ್ರಾನ್ಸ್‌ಪೋರ್ಟ್ ಆಫೀಸಿನಲ್ಲಿ ಸಣ್ಣ ಸಂಬಳದ ಕೆಲಸ. ಆತ ತನ್ನ ಮಡದಿಗೆ ಆ ಕೆಲಸದ ವಿವರಗಳನ್ನು ಹೇಳುತ್ತಲೇ ತಾನೊಬ್ಬ ದೊಡ್ಡ ಹೀರೋ ಎಂದು ಭಾವಿಸಿಕೊಂಡು ಬದುಕುತ್ತಾ ಇದ್ದಾನೆ. ಇಂತಹ ದಂಪತಿಗಳು ಒಂದು ರಾತ್ರಿ ವಿಚಿತ್ರ ಆಘಾತಕ್ಕೆ ಸಿಕ್ಕಿಬೀಳುತ್ತಾರೆ. ಕೆಮ್ಮುವ ಅನುವಿಗೆ ಜೊತೆಯಲ್ಲಿ ರಕ್ತವೂ ಬಾಯಿಂದ ಸುರಿದಾಗ ಡಾಕ್ಟರಲ್ಲಿಗೆ ಹೋಗುತ್ತಾರೆ. ಡಾಕ್ಟರ್ ಅನುವಿಗೆ ಬ್ಲಡ್ ಕ್ಯಾನ್ಸರ್ ಆಗಿದೆ ಎಂದು ತಿಳಿಸುತ್ತಾರೆ. ಅವರ ಪ್ರೀತಿಯ ನೆಲೆಯಲ್ಲಿ ಇದು ದೊಡ್ಡ ವಿಷಯ ಅಲ್ಲ ಎಂದು ಭಾವಿಸಿ ಔಷಧೋಪಚಾರಕ್ಕೆ ಸರ್ವೋತ್ತಮ ಮತ್ತು ಅನು ಸಿದ್ಧವಾಗುತ್ತಾರೆ.

Continue reading

ಇಂದಿನ ಮಾಧ್ಯಮಗಳಲ್ಲಿ ಕನ್ನಡದ ಸ್ಥಿತಿ ಗತಿ – ನಮ್ಮ ಮುಂದಿರುವ ಸವಾಲುಗಳು

ಇಂದಿನ ಮಾಧ್ಯಮಗಳಲ್ಲಿ ಕನ್ನಡದ ಸ್ಥಿತಿ ಗತಿ – ನಮ್ಮ ಮುಂದಿರುವ ಸವಾಲುಗಳು
(- ಬಿ.ಸುರೇಶ ಸಿದ್ಧಪಡಿಸಿದ ಟಿಪ್ಪಣಿ)
ಪ್ರವೇಶ
ಇಂದು ಮಾಧ್ಯಮ ಎಂಬುದು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಸಮಕಾಲೀನ ಬದುಕಿನಲ್ಲಿ ಪ್ರತೀಕ್ಷಣವೂ ಯಾವುದೋ ಮಾಧ್ಯಮವು ನಮಗೆ ಮಾಹಿತಿಗಳ ಮಹಾಪೂರವನ್ನೇ ತಂದು ಇರಿಸುತ್ತಲೇ ಇರುತ್ತದೆ. ಹೀಗಾಗಿಯೇ ಈ ಯುಗವನ್ನು ಮಾಹಿತಿ ಯುಗ ಎಂದು ಗುರುತಿಸಲಾಗಿದೆ. ಹೀಗೆ ನಮಗೆ ದೊರೆಯುವ ಮಾಹಿತಿಗಳೆಲ್ಲವೂ ನಮಗೆ ಉಪಯುಕ್ತವೇ ಎಂದೇನಲ್ಲಾ. ಆದರೂ ಆ ಮಾಹಿತಿಗಳು ಆಯಾ ವ್ಯಕ್ತಿಗೆ ಲಭ್ಯವಾಗುತ್ತಲೇ ಇರುತ್ತದೆ.
ಮಾಧ್ಯಮಗಳು
ಮಾಧ್ಯಮಗಳಲ್ಲಿ ಅನೇಕ ಬಗೆ. ಅವುಗಳು ಕೊಡುವ ಮಾಹಿತಿಗಳೂ ಬಗೆ ಬಗೆ. ಅವುಗಳನ್ನು ಮೂಲಭೂತವಾಗಿ ಹೀಗೆ ವಿಂಗಡಿಸಬಹುದು.
೧. ಮುದ್ರಣ ಮಾಧ್ಯಮ : ಇದರಡಿಯಲ್ಲಿ – ದಿನಪತ್ರಿಕೆ, ವಾರಪತ್ರಿಕೆ, ನಿಯತಕಾಲಿಕೆಗಳು, ಸಾಹಿತ್ಯ ಪತ್ರಿಕೆಗಳು, ಆಯಾ ಗುಂಪುಗಳಿಗಾಗಿ ಹೊರಡಿಸಲಾಗುವ ಪತ್ರಿಕೆಗಳು.
೨. ದೃಶ್ಯ ಮಾಧ್ಯಮ : ಇದರಡಿಯಲ್ಲಿ – ವಿದ್ಯುನ್ಮಾನ ಮಾಧ್ಯಮಗಳು (ಟೆಲಿವಿಷನ್ ವಾಹಿನಿಗಳು ಮತ್ತು ಅಂತರ್ಜಾಲ), ರಸ್ತೆಗಳಲ್ಲಿನ ಫಲಕಗಳು, ಬಸ್ ನಿಲ್ದಾಣ-ರೈಲು ನಿಲ್ದಾಣಗಳಲ್ಲಿನ ಟೆಲಿಷನ್ ಜಾಲಗಳು, ರೈಲು, ಬಸ್ಸು ಮತ್ತು ವಿಮಾನಗಳಲ್ಲಿನ ಟೆಲಿವಿಷನ್ ವ್ಯವಸ್ಥೆಗಳು, ಸಂಚಾರಿ ದೂರವಾಣಿಯಲ್ಲಿನ ಮಾಹಿತಿ ಹಂಚುವ ವಿವರಗಳು.
೩. ಶ್ರವ್ಯ ಮಾಧ್ಯಮ : ಆಕಾಶವಾಣಿ, ಎಫ್‌ಎಂ ರೇಡಿಯೋ ಮತ್ತು ಸಮುದಾಯ ರೇಡಿಯೋವಾಹಿನಿಗಳು.
ಈ ಎಲ್ಲಾ ಮಾಧ್ಯಮಗಳಲ್ಲಿ ಭಾಷೆಯ ಬಳಕೆ ಅನಿವಾರ್ಯ. ಆಯಾ ಸಮಾಜಕ್ಕೆ ಆಯಾ ಮಾಧ್ಯಮಗಳು ಮಾಹಿತಿ ಪ್ರಸಾರವನ್ನು ಮಾಡುತ್ತಲೇ ಇವೆ. ಆದರೆ ಮೇಲೆ ಸೂಚಿಸಿದ ಹಲವು ಮಾಧ್ಯಮಗಳಲ್ಲಿ ಕನ್ನಡದ ಬಳಕೆಯೇ ಸರಿಯಾಗಿ ಆಗುತ್ತಿಲ್ಲ. ಅವುಗಳು: ಸಂಚಾರಿ ದೂರವಾಣಿಗಳು ಹಾಗೂ ರೈಲು, ಬಸ್ಸು, ವಿಮಾನಗಳಲ್ಲಿನ ಟೆಲಿವಿಷನ್ ವ್ಯವಸ್ಥೆ. ಇಲ್ಲಿ ನಮ್ಮ ಭಾಷೆಯನ್ನು ಸ್ಥಾಪಿಸಲು ನಾವೆಲ್ಲರೂ ಕೆಲಸ ಮಾಡಬೇಕಾಗಿದೆ. ಇನ್ನುಳಿದ ಮಾಧ್ಯಮಗಳಲ್ಲಿನ ಕನ್ನಡದ ಬಳಕೆಯನ್ನು ಕುರಿತು ನೋಡೋಣ.

Continue reading

ದಶಮಾನ? – ಸಂಘಸುಖಗಳನ್ನರಸುತ್ತಾ!

ಸಂಘಸುಖ-ಡಿಸೆಂಬರ್ ೨೦೧೦
ದಶಮಾನ? – ಸಂಘಸುಖಗಳನ್ನರಸುತ್ತಾ!
– ಬಿ.ಸುರೇಶ
ಖಾಲಿಪಾತ್ರೆಯ ಎದುರು…
ಬರುವ ಆದಾಯಕ್ಕೂ ಬದುಕಿನ ಅಗತ್ಯಗಳಿಗೂ ಸಂಬಂಧವೇ ಇಲ್ಲ ಎಂಬಂತಹ ಕಾಲಘಟ್ಟದಲ್ಲಿ ಬಡ ಹೆಂಗಸೊಬ್ಬಳು ತನ್ನೆದುರಿಗೆ ಉರಿಯುತ್ತಿರುವ ಒಲೆಯ ಮೇಲೆ ಖಾಲಿ ಪಾತ್ರೆಯನ್ನಿಟ್ಟು ಕಾಯುವಂತಹ ಮನಸ್ಥಿತಿಯೇ ಬಹುತೇಕ ನಮ್ಮೆಲ್ಲರದೂ ಆಗಿದೆ. ಯಾಕೆಂದರೆ ನಮ್ಮ ಸಂಘಟನೆಗೆ ಇದು ದಶವರ್ಷ. ಕಳೆದ ಡಿಸೆಂಬರ್ ಎರಡನೆಯ ಭಾನುವಾರಕ್ಕೆ ಈ ಸಂಘಟನೆ ಹುಟ್ಟಿ ಹತ್ತು ವರ್ಷ ಆಯಿತು. ಆದರೆ ಅದನ್ನು ಯಾರೂ ಗಮನಿಸಿದಂತೆಯೇ ಕಾಣುತ್ತಿಲ್ಲ. ಆ ಬಗ್ಗೆ ಎಲ್ಲಿಯೂ ಸದ್ದಿಲ್ಲ. ನಾವು ಮಾಡಿದ ಎಲ್ಲಾ ವಿವರಗಳೂ ಮಾಧ್ಯಮದಲ್ಲಿ ಬರಲಿ ಎಂದೆನ್ನುತ್ತಲೇ ಬದುಕು ಕಂಡುಕೊಂಡಿರುವ ನಾವ್ಯಾರೂ ಈ ನಮ್ಮ ಸಂಘಟನೆಯ ಹುಟ್ಟುಹಬ್ಬ ಕುರಿತು ಮಾಧ್ಯಮಗಳ ಮೂಲಕವಾದರೂ ಮಾತಾಡಲಿಲ್ಲ. ಹೀಗ್ಯಾಕೆ ಆಯಿತೋ ಅರಿಯೇ. ಅದಕ್ಕಾಗಿ ಆತ್ಮವಿಮರ್ಶೆಯ ಮಾತನ್ನಾಡಬೇಕಾಗಿದೆ. ಹೊಸ ನಿರೀಕ್ಷೆಗಳನ್ನು ಹುಡುಕಬೇಕಿದೆ. ಯಾಕೆ ಹೀಗೆ ಎಂದು ಆಲೋಚಿಸಬೇಕಿದೆ.

ಕಳೆದ ಎರಡನೆಯ ಭಾನುವಾರ ಟಿವಿ ಸಂತೆಯನ್ನು ಆಯೋಜಿಸಲಾಗಿತ್ತು. ಉತ್ಸಾಹ ಹುಟ್ಟಿಸುವ ಅನೇಕ ಆಟಗಳು ಅಲ್ಲಿದ್ದವು. ಅನೇಕ ಧಾರಾವಾಹಿಗಳ ತಂಡಗಳು ಈ ಸಂತೆಯಲ್ಲಿ ಎಲ್ಲರೂ ಪಾಲ್ಗೊಳ್ಳಲಿ ಎಂದೇ ಚಿತ್ರೀಕರಣವನ್ನು ನಿಲ್ಲಿಸಿದ್ದವು. ಆದರೂ ಆ ಸಂತೆಯಲ್ಲಿ ಪಾಲ್ಗೊಂಡವರ ಸಂಖ್ಯೆ ಕಡಿಮೆ. ಅಂದರೆ ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಕ್ಕೆ ಎರಡನೆಯ ಭಾನುವಾರವೂ ಚಿತ್ರೀಕರಣ ಇದೆ ಎಂಬುದಷ್ಟೇ ಕಾರಣವಲ್ಲ. ಚಿತ್ರೀಕರಣ ಇಲ್ಲದ ದಿನವೂ ಈ ಜನಕ್ಕೆ ಸಂಘಟನೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಉತ್ಸಾಹ ಇಲ್ಲ. (ಇದು ಎಲ್ಲರಿಗೂ ಸೇರಿಸಿ ಆಡಿದ ಮಾತಲ್ಲ. ಕೆಲವರಿಗೆ ನಿಜವಾಗಿಯೂ ಅನಿವಾರ್ಯ ಎಂಬ ಒತ್ತಡ ಬಂದಿರಬಹುದು. ಅಂತಹವರನ್ನು ಹೊರತುಪಡಿಸಿ ಈ ಮಾತುಗಳನ್ನು ಹೇಳಲಾಗಿದೆ.) ಹೀಗಾದಾಗ ಕಷ್ಟಪಟ್ಟು ಇಂತಹ ಕಾರ್ಯಕ್ರಮವನ್ನು ಯೋಜಿಸಿದವರ ಮನಸ್ಥಿತಿ ಹೇಗಿರಬಹುದು ಎಂದು ಆಲೋಚಿಸಿ.

Continue reading

ಗಾಳಿ ಬೀಸುತಿದೆ, ಹೊತ್ತು ಜಾರುತಿದೆ! (ನವೆಂಬರ್ ತಿಂಗಳ ಟಿವಿಠೀವಿ ಪತ್ರಿಕೆಗಾಗಿ ಬರೆದ ಲೇಖನ)

ಸಂಘಸುಖ
ಗಾಳಿ ಬೀಸುತಿದೆ, ಹೊತ್ತು ಜಾರುತಿದೆ!
(ನವೆಂಬರ್ ತಿಂಗಳ ಟಿವಿಠೀವಿ ಪತ್ರಿಕೆಗಾಗಿ ಬರೆದ ಲೇಖನ)
– ಬಿ.ಸುರೇಶ
ಪ್ರಿಯ ಬಂಧು,
ದೆವ್ವಗಳ ಹೊತ್ತಲ್ಲಿ ಎಂದು ಕರೆಸಿಕೊಳ್ಳುವ ಸಮಯದಲ್ಲಿ ನಿಮ್ಮೊಡನೆ ಮಾತಿಗೆ ಇಳಿದಿದ್ದೇನೆ. ನಾನಿರುವ ಈ ಹೋಟೆಲಿನಲ್ಲಿ ಟಿವಿ ಇದೆ. ಆದರೆ ಕರೆಂಟು ಇಲ್ಲ. ಸುತ್ತ ಗಾಳಿ ಇದೆ. ಆದರೆ ಸೊಳ್ಳೆಗಳು ನುಗ್ಗಿ ಬಂದು ಕಡಿಯಲು ಸಿದ್ಧವಾಗಿವೆ. ಈ ಸೊಳ್ಳೆಗಳ ಗುಂಯ್‌ಗಾಟದಲ್ಲಿ ಹುಟ್ಟುತ್ತಿರುವ ನನ್ನ ಮಾತುಗಳು ನಿಮ್ಮನ್ನು ಮತ್ತಷ್ಟು ಜಾಗೃತರಾಗಿಸಲಿ ಎಂದು ಹಾರೈಸುತ್ತಾ ಮಾತನ್ನಾರಂಭಿಸುತ್ತೇನೆ.
ಈಚೆಗೆ ಅನೇಕ ದೈನಂದಿನ ಪತ್ರಿಕೆಗಳಲ್ಲಿ ಬರುತ್ತಿರುವ ಡಬ್ಬಿಂಗ್ ಪರವಾದ ಲೇಖನವನ್ನು ನೀವು ಓದಿರುತ್ತೀರಿ. ಆ ಲೇಖನಗಳಲ್ಲಿ ಚರ್ಚಿತವಾಗಿರುವ ವಿಷಯವನ್ನು ಕುರಿತು ನಮ್ಮ ಸಂಘಟನೆ ಹಾಗೂ ಟೆಲಿವಿಷನ್ ಉದ್ಯಮ ತಗೆದುಕೊಳ್ಳಬೇಕಾದ ನಿಲುವುಗಳ ಬಗ್ಗೆ ನಾಲ್ಕುಮಾತು ಬರೆಯುತ್ತಾ ಇದ್ದೇನೆ.

Continue reading

ಪ್ರೇಮಾ ಕಾರಂತರ ‘ಸೋಲಿಸಬೇಡ ಗೆಲಿಸಯ್ಯಾ’ ಒಂದು ವಿಮರ್ಶೆಯ ಯತ್ನ

ಪ್ರೇಮಾ ಕಾರಂತರ ‘ಸೋಲಿಸಬೇಡ ಗೆಲಿಸಯ್ಯಾ’
ಒಂದು ವಿಮರ್ಶೆಯ ಯತ್ನ
– ಬಿ.ಸುರೇಶ
ಆತ್ಮಚರಿತ್ರೆಯೆನ್ನುವುದು ಅತಿ ಕಷ್ಟದ ಪ್ರಾಕಾರ. ಇಲ್ಲಿ ತಮ್ಮ ಜೀವನವನ್ನು ತಾವೇ ನೋಡಿಕೊಳ್ಳುವ ಕಷ್ಟ ಒಂದೆಡೆಗಾದರೆ, ನಮ್ಮ ಜೀವನದ ಯಾವ ವಿವರವನ್ನು ಎಷ್ಟು ಹೇಳಬೇಕೆಂಬ ಆಯ್ಕೆಯ ಪ್ರಶ್ನೆ ಮತ್ತೊಂದೆಡೆ ಇರುತ್ತದೆ. ಇವೆರಡನ್ನು ಸರಿದೂಗಿಸಿಕೊಳ್ಳುವಾಗ ಕಟ್ಟುವ ವಾಕ್ಯಗಳು ಮನಸ್ಸಿನ ಭಾವನೆಗಳನ್ನು ಓದುಗನಿಗೆ ಮುಟ್ಟಿಸುತ್ತವೆಯೇ ಎಂಬ ಅನುಮಾನವೂ ಕಾಡುತ್ತದೆ. ಈ ಕಾರಣಕ್ಕಾಗಿಯೇ ನಮ್ಮಲ್ಲಿ ಅನೇಕರು ಈ ಆತ್ಮಚರಿತ್ರೆ ಬರೆಯುವುದಕ್ಕೆ ಪ್ರಯತ್ನಿಸುವುದೇ ಇಲ್ಲ. ಭಾರತದ ಮಟ್ಟಿಗೆ ಗಾಂಧೀಜಿಯವರ ‘ಸತ್ಯಪರೀಕ್ಷೆ ಅಥವ ನನ್ನ ಜೀವನ ಯಾನ’ವೇ ಅತಿಹೆಚ್ಚು ಓದುಗರನ್ನು ಪಡೆದ ಆತ್ಮಚರಿತ್ರೆ ಇರಬೇಕು. ಕನ್ನಡದಲ್ಲಿ ಕುವೆಂಪು, ಎ.ಎನ್.ಮೂರ್ತಿರಾಯರಂತಹವರು ಈ ಪ್ರಾಕಾರದಲ್ಲಿ ಕೃತಿಗಳನ್ನು ತಂದಿದ್ದಾರೆ. ಅವರನ್ನು ಕೈಮರವಾಗಿ ಬಳಸಿದಂತೆ ನಂತರದ ದಿನಗಳಲ್ಲಿ ಲಂಕೇಶರ ವರೆಗೆ ಅನೇಕ ಸಾಹಿತಿಗಳು ಆತ್ಮಚರಿತ್ರೆಯನ್ನು ನೀಡಿದ್ದಾರೆ. ಹೀಗೆ ಆತ್ಮಚರಿತ್ರೆಯನ್ನು ಬರೆದವರಲ್ಲಿ ರಂಗಭೂಮಿ ಮತ್ತು ಸಿನಿಮಾ ನಂಟಿನ ಜನಗಳು ಕಡಿಮೆ. ಗುಬ್ಬಿ ವೀರಣ್ಣ ಅವರ ನಂತರ ಕನ್ನಡದಲ್ಲಿ ಆತ್ಮಚರಿತ್ರೆ ಬರೆದವರೆಂದು ಸಿಗುವ ರಂಗಭೂಮಿಯ ಜನರೆಂದರೆ ಬಿ.ವಿ.ಕಾರಂತರು ಮತ್ತು ಸಿ.ಜಿ.ಕೃಷ್ಣಸ್ವಾಮಿ ಮಾತ್ರ. ಇವರೆಲ್ಲರೂ ತಾವು ಹೇಳಬೇಕಾಗಿದ್ದುದನ್ನು ಮತ್ತೊಬ್ಬರಿಗೆ ಹೇಳಿ ಬರೆಯಿಸಿದವರು. ಈ ಎಲ್ಲಾ ‘ವ್ಯಾಸ’ರಿಗೆ ‘ಗಣೇಶ’ರುಗಳು ಇದ್ದರು. ಹೀಗಾಗಿ ಇವರಿಗೆ ಆತ್ಮಚರಿತ್ರೆ ಬರೆಯುವಾಗಿನ ಮೂರನೆಯ ಪ್ರಶ್ನೆಯಾದ ವಾಕ್ಯರಚನೆಯು ಓದುಗರಿಗೆ ತಲುಪುತ್ತದೆಯೇ ಎಂಬ ಅನುಮಾನ ಬಹುತೇಕ ಇರಲಿಲ್ಲ. ಆದರೆ ಇವರೆಲ್ಲರಿಗಿಂತ ಭಿನ್ನವಾಗಿ ಪ್ರೇಮ ಕಾರಂತರು ತಮ್ಮ ಜೀವನ ಯಾನವನ್ನು ತಾವೇ ಅಕ್ಷರ ರೂಪಕ್ಕೆ ತಂದಿದ್ದಾರೆ. ಪ್ರಾಯಶಃ ತಮ್ಮ ಆತ್ಮಚರಿತ್ರೆಯನ್ನು ತಾವೇ ಅಕ್ಷರಕ್ಕೆ ಇಳಿಸಿದ ಮೊದಲ ರಂಗಕರ್ಮಿ ಇವರೇ ಇರಬಹುದು. ಅದಕ್ಕಾಗಿ ಪ್ರೇಮಾ ಅವರಿಗೆ ನಮನ ಸಲ್ಲಿಸೋಣ. ನಮ್ಮ ನಡುವೆ ಸುಳಿದಾಡಿದ ಹೆಣ್ಣು ಮಗಳೊಬ್ಬಳು ತನ್ನ ಜೀವನವನ್ನು ತನ್ನ ಕಣ್ಣು, ತನ್ನ ಭಾಷೆಯ ಮೂಲಕವೇ ಬಿಚ್ಚಿಡುವ ಈ ಪ್ರಯತ್ನವೇ ಮೊದಲಿಗೆ ಮೆಚ್ಚುವಂತಹುದು. ಅದಕ್ಕಾಗಿ ಇಂದು ನಮ್ಮೊಡನೆ ಇಲ್ಲದ ಪ್ರೇಮ ಅವರನ್ನು ಅಭಿನಂದಿಸಲೇಬೇಕು.
ಪ್ರೇಮ ಅವರು ತಮ್ಮ ಕೃತಿಗೆ ಹೆಸರನ್ನಿಡುವಾಗಲೇ ಅತ್ಯಂತ ಜಾಗರೂಕರಾಗಿ ‘ಸೋಲಿಸಬೇಡ ಗೆಲಿಸಯ್ಯಾ’ ಎನ್ನುತ್ತಾರೆ. ಇಲ್ಲಿ ಕಾಣದ ಓದುಗ ದೇವರನ್ನು, ಆ ಮೂಲಕ ಪ್ರೇಮ ಅವರ ಅಭಿಮಾನಿ ಬಳಗದ ಎದುರು ಆರ್ತತೆಯ ವಿನಯವೊಂದನ್ನು ಸಾಧಿಸುತ್ತಾರೆ. ಇದು ಪ್ರೇಮ ಅವರಂತಹ ಹೋರಾಟದ ಬದುಕನ್ನು ಕಂಡ ಹೆಣ್ಣು ಮಗಳಿಗೆ ಅಗತ್ಯವಾದ ಒಂದು ಕ್ರಿಯೆ. ಆರ್ತತೆಯ ಮೊರೆಯನ್ನಿಟ್ಟು ತಮ್ಮ ಜೀವನದ ತೆರೆಯನ್ನು ಸರಿಸುವ ದಾರಿಯನ್ನು ಪ್ರೇಮ ಆತ್ಮಚರಿತ್ರೆಯ ಕಥನಕ್ಕೆ ಆಯ್ದುಕೊಳ್ಳುತ್ತಾರೆ. ಈ ಆರ್ತತೆಯೇ ಅವರ ಪುಸ್ತಕಕ್ಕೆ ಮುನ್ನುಡಿಯೂ ಹೌದು, ಆ ಜೀವನ ಚರಿತ್ರೆಯ ಸ್ಥಾಯೀಭಾವವೂ ಹೌದು. ಹೀಗಾಗಿ ಈ ಜೀವನ ಚರಿತ್ರೆಯ ಅಂತಿಮ ಅಧ್ಯಾಯಕ್ಕೆ ತಲುಪುವಾಗ ಓದುಗನು ಸ್ವತಃ ಕಣ್ಣು ತುಂಬಿಕೊಳ್ಳುವುದು ಖಂಡಿತಾ.

Continue reading

ಬಣ್ಣಗಳ ಓಕುಳಿಯಿಂದೆದ್ದ ರಂಜಕ ವಾಸ್ತವ – ಗುಲಾಲ್ (ಅನುರಾಗ್ ಕಶ್ಯಪ್ ನಿರ್ದೇಶನದ ‘ಗುಲಾಲ್’ ಚಿತ್ರ ಕುರಿತು ಕೆಲವು ಮಾತು)

ಬಣ್ಣಗಳ ಓಕುಳಿಯಿಂದೆದ್ದ ರಂಜಕ ವಾಸ್ತವ – ಗುಲಾಲ್
(ಅನುರಾಗ್ ಕಶ್ಯಪ್ ನಿರ್ದೇಶನದ ‘ಗುಲಾಲ್’ ಚಿತ್ರ ಕುರಿತು ಕೆಲವು ಮಾತು)
– ಬಿ.ಸುರೇಶ
ಭಾರತೀಯ ಜನಪ್ರಿಯ ಚಿತ್ರಗಳಲ್ಲಿ ಸಮಕಾಲೀನ ರಾಜಕೀಯವನ್ನು ಅದರ ಯಥಾಸ್ಥಿತಿಯಲ್ಲಿ ಹಿಡಿಯುವ ಪ್ರಯತ್ನ ಮಾಡಿದ ಚಿತ್ರಗಳ ಸಂಖ್ಯೆ ತೀರಾ ಕಡಿಮೆ. ರಾಜಕೀಯ ಸಿನಿಮಾಗಳು ಎಂಬ ಹಣೆಪಟ್ಟಿ ಹೊತ್ತು ಬಂದಂತಹ ಚಿತ್ರಗಳು ಬಹುಪಾಲು ಕನ್ನಡದ ‘ಅಂತ’ದ ಮಾದರಿಯದು. ಅಲ್ಲಿ ರಾಜಕಾರಣಿ ಖಳನಾಗಿರುತ್ತಾನೆ. ನಾಯಕ ಆತನನ್ನು ಗುಂಡಿಟ್ಟು ಕೊಲ್ಲುತ್ತಾನೆ. ಅಷ್ಟೆ. ಹಳೆಯ ನಾಯಕ ಪ್ರಧಾನ ಕತೆಗೆ ರಾಜಕಾರಣದ ಪೋಷಾಕು ತೊಡಿಸಿದ ಕತೆಗಳವು. ಅವುಗಳನ್ನು ರಾಜಕೀಯ ಚಿತ್ರಗಳೆಂದು ಕರೆಯಲಾಗದು. ಆದರೆ ಹೊಸಅಲೆಯ ಪ್ರಭಾವದಿಂದಲೇ ಹುಟ್ಟಿದ ‘ಅಂಕುರ್’, ‘ಅರ್ಧಸತ್ಯ’ ಮುಂತಾದ ಚಿತ್ರಗಳು ಇಂತಹವಲ್ಲ. ಅವು ಸಮಕಾಲೀನ ಪರಿಸ್ಥಿತಿಯನ್ನು ವಿವರಿಸಿ, ಇವುಗಳಲ್ಲಿ ಸಿಕ್ಕಿ ನರಳುವ ಶ್ರೀಸಾಮಾನ್ಯನ ಕತೆಯನ್ನು ಹೇಳುತ್ತವೆ. ಹೀಗಾಗಿಯೇ ಇಂತಹ ಕೆಲವು ಚಿತ್ರಗಳು ಬಹುಕಾಲ ಜನಮಾನಸದೊಳಗೆ ಶಾಶ್ವತ ಸ್ಥಾನ ಪಡೆಯುತ್ತವೆ. ಇಂತಹ ನೆನಪಲ್ಲುಳಿಯುವ ಚಿತ್ರಗಳ ಸಾಲಿಗೆ ಸೇರಬಹುದಾದ ಮತ್ತೊಂದು ಸಿನಿಮಾ ಅನುರಾಗ್ ಕಶ್ಯಪ್ ಅವರ ನಿರ್ದೇಶನದ ‘ಗುಲಾಲ್’.

Continue reading

ಸಮಕಾಲೀನ ಸಾಮಾಜಿಕ ಸಮಸ್ಯೆಗಳು ಮತ್ತು ಸಮೂಹ ಮಾಧ್ಯಮಗಳು

ಸಮಕಾಲೀನ ಸಾಮಾಜಿಕ ಸಮಸ್ಯೆಗಳು ಮತ್ತು ಸಮೂಹ ಮಾಧ್ಯಮಗಳು
– ಬಿ.ಸುರೇಶ
(ನಾಗತಿಹಳ್ಳಿ ಚಂದ್ರಶೇಖರ್ ಅವರ ಸಂಪಾದಕತ್ವದಲ್ಲಿ ಬರುತ್ತಿರುವ ‘ತರಳಬಾಳು ಹುಣ್ಣಿಮೆ’ ಗ್ರಂಥಕ್ಕಾಗಿ ಸಿದ್ಧಪಡಿಸಿದ ಲೇಖನ)

‘ಟೆಲಿವಿಷನ್ ಮಾಧ್ಯಮವು ನಮ್ಮ ಸಮಾಜವನ್ನು ಬದಲಿಸುತ್ತಿದೆ’, ‘ಆಧುನಿಕ ತಂತ್ರಜ್ಞಾನ ನಮ್ಮ ಮಕ್ಕಳ ಮನಸ್ಸನ್ನು ಹಾಳು ಮಾಡುತ್ತಿದೆ’, ‘ಈ ಮಾಧ್ಯಮಗಳಿಂದಾಗಿ ನಮ್ಮ ಸಮಾಜದಲ್ಲಿ ಆತ್ಮಹತ್ಯೆಗಳು ಮತ್ತು ಅಪರಾಧಗಳು ಹೆಚ್ಚಾಗುತ್ತಿವೆ’ ‘ನಮ್ಮ ಸಮಾಜವು ಈ ಮಾಧ್ಯಮಗಳ ಪರಿಣಾಮವಾಗಿ ಆಧುನಿಕವಾಗುತ್ತಿದೆ’ ಮುಂತಾದ ಮಾತುಗಳನ್ನು ನಾವು ಮತ್ತೆ ಮತ್ತೆ ಕೇಳುತ್ತಲೇ ಇರುತ್ತೇವೆ. ನಾವು ಇಂತಹ ಮಾತುಗಳಿಗೆ ಅದೆಷ್ಟು ಹೊಂದಿಕೊಂಡು ಬಿಟ್ಟಿದ್ದೇವೆ ಎಂದರೆ ಮಾಧ್ಯಮಗಳಿಂದಲೇ ಇವೆಲ್ಲವೂ ಆಗುತ್ತಿದೆ ಎಂಬ ನಂಬಿಕೆಯೂ ಸಹ ನಮ್ಮ ಸಮಾಜದಲ್ಲಿ ಐತಿಹ್ಯದ ಹಾಗೆ ಬೇರು ಬಿಟ್ಟಿದೆ. ಇದರಿಂದಾಗಿ ಈ ಮಾಧ್ಯಮಗಳನ್ನು ನೋಡುವವರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಬದಲಿಗೆ ಇಂತಹ ಮಾತಾಡುತ್ತಿರುವ ಸಾಮಾನ್ಯರನ್ನೂ ನೋಡುತ್ತಾ ಇದ್ದೇವೆ. ಹೀಗಾಗಿಯೇ ಇಂತಹ ಪ್ರಶ್ನೆಗಳು ಅಥವಾ ಅಭಿಪ್ರಾಯಗಳನ್ನು ಕುರಿತು ಪ್ರತಿಕ್ರಿಯೆ ನೀಡುವ ಗೋಜಿಗೂ ಹೋಗದೆ ಉಳಿದಿದ್ದೇವೆ. ಆಕಸ್ಮಿಕವಾಗಿ ಕೆಲವು ಮಾಧ್ಯಮ ಮಿತ್ರರೇ ಉತ್ತರಗಳನ್ನು ನೀಡಲು ಹೊರಟರೂ ಅಂತಹ ಉತ್ತರಗಳು ಈ ಪ್ರಶ್ನೆ/ ಅಭಿಪ್ರಾಯಗಳ ಹಿಂದಿರುವ ತಾತ್ವಿಕ ಜಿಜ್ಞಾಸೆಗೆ ತೊಡಗದೆ ತಮ್ಮ ಮಾಧ್ಯಮವನ್ನು ಒಪ್ಪಿಟ್ಟುಕೊಳ್ಳುವ ಗುಣದಿಂದಲೇ ಹುಟ್ಟಿದ ಮಾತು ಮಾತ್ರ ಆಗಿರುತ್ತದೆ. ಈ ಹಿನ್ನೆಲೆಯಲ್ಲಿ ಸಮೂಹ ಮಾಧ್ಯಮ ಎಂಬುದನ್ನು ಕುರಿತಂತೆ ಮತ್ತು ನಮ್ಮ ಸಮಕಾಲೀನ ಸಮಾಜವನ್ನು ಕುರಿತಂತೆ ವಿಸ್ತೃತವಾಗಿ ನೋಡಲು, ಆ ಮೂಲಕ ಮೇಲೆ ಕಾಣಿಸಿದಂತಹ ಪ್ರಶ್ನೆಗಳ ಹಿಂದಿನ ತಾತ್ವಿಕ ಮತ್ತು ಸೈದ್ಧಾಂತಿಕ ವಿವರಗಳನ್ನು ಕುರಿತು ಚರ್ಚಿಸಲು ಈ ಲೇಖನದಲ್ಲಿ ಪ್ರಯತ್ನಿಸಲಾಗಿದೆ.
“ಅತ್ಯಂತ ಸ್ಪಷ್ಟವಾದ ಮತ್ತು ನಿಖರ ಎಂದು ಕರೆಸಿಕೊಳ್ಳುವ ಮಾಧ್ಯಮಗಳನ್ನು ಕುರಿತ ಅಭಿಪ್ರಾಯಗಳು/ಲೇಖನಗಳು ಸಹ ತಂತ್ರಜ್ಞಾನ ಮತ್ತು ಸಮಾಜ, ತಂತ್ರಜ್ಞಾನ ಮತ್ತು ಸಂಸ್ಕೃತಿ ಹಾಗೂ ತಂತ್ರಜ್ಞಾನ ಹಾಗೂ ಮನಶಾಸ್ತ್ರೀಯ ನೆಲೆಗಳನ್ನು ಕುರಿತಂತೆ ತೀರಾ ಮೇಲ್‌ಸ್ತರದಲ್ಲಿ ವಿಷಯವನ್ನು ಚರ್ಚಿಸುತ್ತವಾದ್ದರಿಂದ ಕಾರಣ-ಪರಿಣಾಮಗಳ ಸ್ವರೂಪವೇ ದಕ್ಕುವುದಿಲ್ಲ” ಎಂಬ ರೇಮಂಡ್ ವಿಲಿಯಮ್ಸ್‌ನ (ಟೆಲಿವಿಷನ್ & ಕಲ್ಚರಲ್ ಫಾರ್ಮ್/ಯೂನಿವರ್ಸಿಟಿ ಪ್ರೆಸ್ ಆಫ್ ಇಂಗ್ಲೆಂಡ್/ ವೆಸ್ಲಿಯನ್ ಯೂನಿವರ್ಸಿಟಿ/ ೧೯೯೨) ಮಾತು ಮೇಲೆ ಹೇಳಿದ ಹಲವು ಮಾತುಗಳಿಗೆ ಪುಷ್ಟಿ ನೀಡುತ್ತದೆ. ಈ ಹಿನ್ನೆಲೆಯಲ್ಲಿ ಮೇಲಿನ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೊರಟಾಗ ಸುಲಭ ಮತ್ತು ಸರಳ ಉತ್ತರಗಳು ದೊರೆಯುವುದಿಲ್ಲ ಎಂಬುದೂ ಸತ್ಯ. ಹೀಗಾಗಿ ಸಮಾಜ ಎಂದರೆ ಏನು ಎಂದು ಬಲ್ಲವರ ಎದುರಿಗೆ ಸಮೂಹ ಮಾಧ್ಯಮ ಎಂದರೇನು ಎಂದು ಅರ್ಥೈಸಿಕೊಳ್ಳುವ ಪ್ರಯತ್ನ ಮಾಡೋಣ.

Continue reading