ವಿಶೇಷಗಳನ್ನು ಅರಸುತ್ತಾ…!

ವಿಜಯ ಕರ್ನಾಟಕದ ವಿಶೇಷಾಂಕ ಕುರಿತ ಸಂಚಿಕೆಗೆ ಬರೆದ ಲೇಖನ

ನಾನು ಕನ್ನಡದ ಜಾಯಮಾನಕ್ಕೆ ಒಗ್ಗಿಕೊಂಡ ಕಾಲದಿಂದ ದೀಪಾವಳಿಗೆ ಮತ್ತು ಯುಗಾದಿಗೆ ಕಾಯುತ್ತಾ ಬೆಳೆದವನು. ಆ ದಿನಗಳಲ್ಲಿ ಮನೆಯಲ್ಲಿ ಹಬ್ಬ ಇರುತ್ತದೆ ಎಂಬುದಕ್ಕಿಂತ ಅದೇ ಕಾಲಕ್ಕೆ ‘ಪ್ರಜಾವಾಣಿ’, ‘ಉದಯವಾಣಿ’ಗಳ ವಿಶೇಷಾಂಕಗಳು ಬರುತ್ತಿದ್ದವು ಎಂಬುದು ನನ್ನ ಕಾಯುವಿಕೆಗೆ ಕಾರಣವಾಗಿರುತ್ತಿತ್ತು. ಈ ವಿಶೇಷಾಂಕಗಳಿಗೆ ಎಂದೇ ನಾಡಿನ ಖ್ಯಾತ ಸಾಹಿತಿಗಳು ಬರೆದ ಕತೆಗಳು, ಕವನಗಳು ಅಲ್ಲಿ ಸಿಗುತ್ತಿದ್ದವು. ಈ ನಾಡಿನ ಎಲ್ಲಾ ಸಾಹಿತಿಗಳ ಲೋಕಕ್ಕೂ ನನ್ನ ಪ್ರವೇಶ ಆಗಿದ್ದೇ ವಿಶೇಷಾಂಕಗಳಿಂದ. ಮಾಸ್ತಿ, ಚದುರಂಗ, ಆನಂದ, ಅನಂತಮೂರ್ತಿ ತರಹದ ಹಿರಿಯ ಕತೆಗಾರರಿಂದ ನನ್ನ ಕಾಲದವರಾದ ಜಯಂತ್ ಕಾಯ್ಕಿಣಿ, ಅಮರೇಶ ನುಗಡೋಣಿ ಮುಂತಾದವರ ಕಥಾಲೋಕ ನನಗೆ ಪರಿಚಿತವಾದದ್ದೇ ಈ ವಿಶೇಷಾಂಕಗಳಿಂದ.

ಒಂದು ಪತ್ರಿಕೆಯು ವಿಶೇಷಾಂಕಗಳನ್ನು ತಯಾರಿಸಲು ಅನೇಕ ಕಾರಣಗಳಿರುತ್ತವೆ. ಅದರಲ್ಲಿ ಪ್ರಧಾನ ಕಾರಣ ಜಾಹೀರಾತು ಸಂಗ್ರಹ ಎಂಬುದು ಎಲ್ಲರಿಗೂ ತಿಳಿದಿರುವಂಥಾದ್ದೇ. ಆದರೆ ಕೆಲವೊಮ್ಮೆ ಇನ್ನೂ ವಿಶೇಷ ಕಾರಣಗಳಿಗಾಗಿ ವಿಶೇಷಾಂಕ ಆಗುತ್ತದೆ. ನನ್ನ ತಾಯಿಯ ಸಂಪಾದಕತ್ವದಲ್ಲಿ ಬರುತ್ತಿದ್ದ ‘ಉದಯವಾಣಿ’ಯಲ್ಲಿ ಪ್ರತೀ ವರ್ಷದ ವಿಶೇಷಾಂಕಕ್ಕೇ ಒಂದು ವಸ್ತುವನ್ನು ಇರಿಸಿಕೊಂಡು ಆಯಾ ವರ್ಷದ ಸಂಚಿಕೆಯ ಎಲ್ಲಾ ಕತೆ, ಕವನಗಳು ಇರುತ್ತಿದ್ದವು. ‘ತವಕ’ ಎಂಬ ಒಂದೇ ವಿಷಯ ಅನೇಕ ಲೇಖಕರ ಲೇಖನಿಯಿಂದ ಅನೇಕ ಕಥೆ, ಕವನಗಳನ್ನು ಹೊರಡಿಸುತ್ತಿತ್ತು. ಅವುಗಳನ್ನು ಓದುತ್ತಾ ನಮ್ಮ ಅನುಭವ ಲೋಕ ವಿಸ್ತಾರವಾಗುತ್ತಿತ್ತು. ಆ ಕಾಲದಲ್ಲಿ ನಾನು ಓದಿದ ಅನೇಕ ಕತೆಗಳು ಇಂದಿಗೂ ನನ್ನ ಕಣ್ಣೆದುರು ಕುಣಿಯುತ್ತಿವೆ.

Continue reading

ಒಂದು ವಿಶ್ಲೇಷಣೆ ಮತ್ತು ಆತ್ಮವಿಮರ್ಶೆಗೆ ಆಹ್ವಾನ

ಟಾಂ ಟ್ವೈಕರ್ ನಿರ್ದೇಶನದ ‘ರನ್‌ ಲೋಲಾ ರನ್’ ಕುರಿತು ಲೇಖನ
(‘ಸಾಂಗತ್ಯ’ ಪತ್ರಿಕೆಗಾಗಿ ಬರೆದ ಲೇಖನ)

ಆ ಸಿನಿಮಾದ ಅವಧಿ ೮೧ ನಿಮಿಷ (ಆರಂಭಿಕ ಮತ್ತು ಕಡೆಯ ಶೀರ್ಷಿಕೆಗಳನ್ನು ಬಿಟ್ಟು) ಅದರಲ್ಲಿ ೧೫೮೧ ಛೇದಗಳು (ಷಾಟ್‌ಗಳು), ಕಟ್ಸ್, ಡಿಸಾಲ್ವ್, ಫೇಡ್, ವೈಪ್ ಎಲ್ಲವೂ ಸೇರಿ. ಪ್ರತೀ ಷಾಟ್‌ನ ಅವಧಿ ಸರಿಸುಮಾರು ೨ ಸೆಕೆಂಡುಗಳು. ಅಂದರೆ ನೋಡುಗನ ಎದುರಿಗೆ ನಿರಂತರ ದೃಶ್ಯ ಬದಲಾವಣೆಯ ಚಮತ್ಕಾರ. ಇಂತಹದೊಂದು ಅನೇಕ ಷಾಟ್‌ಗಳ ಸಿನಿಮಾ ಸಮಕಾಲೀನ ದಿನಗಳಲ್ಲಿ ಅಪರೂಪವಲ್ಲ. ಆದರೆ ೧೯೯೯ರಲ್ಲಿ ಇದು ಹೊಸ ಪ್ರಯೋಗ. ಆಗ ಜಾಹೀರಾತು ಚಿತ್ರಗಳಲ್ಲಿಯೂ ೩೦ ಸೆಕೆಂಡಿಗೆ ೧೫ ಷಾಟ್ ಬಳಸುತ್ತಾ ಇರಲಿಲ್ಲ. ಪ್ರತೀ ಷಾಟ್‌ನ ಅವಧಿ ದೊಡ್ಡದಿರಬೇಕು ಎಂಬ ಅಲಿಖಿತ ನಿಯಮವೊಂದು ಆಗಿನ ಸಿನಿಮಾ ನಿರ್ಮಿತಿಯಲ್ಲಿ ಇತ್ತು. ಈಗ ಅದು ೩೦ ಸೆಕೆಂಡಿನ ಜಾಹೀರಾತಿಗೆ ೫೦ ಚಿತ್ರಿಕೆಯಾದರೂ ಸಾಲದು ಎನ್ನುವವರೆಗೆ ಬೆಳೆದಿದೆ. ಅಮೇರಿಕನ್ ಜನಪ್ರಿಯ ಸಿನಿಮಾಗಳಲ್ಲಿ ಮತ್ತು ಟೆಲಿವಿಷನ್ ಜಾಹೀರಾತಿನಲ್ಲಿ ಹೀಗೆ ಅನೇಕ ಷಾಟ್‌ಗಳನ್ನ ಬಳಸಿ ಸಿನಿಮಾದ ‘ಗತಿ’ಯನ್ನು ಹೆಚ್ಚಿಸುವ ಅಭ್ಯಾಸ ಚಾಲ್ತಿಗೆ ಬಂದಿತ್ತು. ವಿಶೇಷವಾಗಿ ಮ್ಯೂಸಿಕ್ ವಿಡಿಯೋ ಪ್ರಾಕರದಲ್ಲಿ ಈ ಪ್ರಯೋಗಗಳು ಮೊದಲು ಆದವು. ಆದರೆ ಯೂರೋಪಿಯನ್ ಮತ್ತು ಇತರ ದೇಶಗಳ ಸಿನಿಮಾಗಳಲ್ಲಿ ಇಂತಹ ’ವೇಗ’ವರ್ಧಕ ಬಳಸುವ ಅಭ್ಯಾಸ ಇರಲಿಲ್ಲ. ಇಂತಹ ಪ್ರಯೋಗವನ್ನು ಮೊದಲಬಾರಿಗೆ ಜರ್ಮನ್ ಸಿನಿಮಾದಲ್ಲಿ ಮಾಡಿದವನು ಟಾಂ ಟ್ವೈಕರ್. ‘ರನ್ ಲೋಲಾ ರನ್’ ಸಿನಿಮಾದಿಂದಾಗಿ ಈತ ಜರ್ಮನಿಯ ಪ್ರಖ್ಯಾತ ಸಿನಿಮಾ ನಿರ್ದೇಶಕರ ಪಟ್ಟಿಗೆ ಸೇರಿದ. “ಈತನ ಇನ್ನಿತರ ಚಿತ್ರಗಳು ಹೇಗಿದ್ದವು? ಅವುಗಳ ‘ಗತಿ’ ಏನು?” ಎಂದು ಆ ವ್ಯಕ್ತಿಯ ಚಾರಿತ್ರಿಕ ಮತ್ತು ಸೃಜನಾತ್ಮಕ ಮೌಲ್ಯಮಾಪನ ಮಾಡಲು ಈ ಲೇಖನ ನಾನು ಬರೆಯುತ್ತಿಲ್ಲ. ಹಾಗಾಗಿ ‘ರನ್ ಲೋಲಾ ರನ್’ ಸಿನಿಮಾಗೆ ಮಾತ್ರ ಸೀಮಿತವಾಗಿ ನಿಮ್ಮೆದುರು ಒಂದು ಚರ್ಚೆಯನ್ನು ಇಡುತ್ತಾ ಇದ್ದೇನೆ. ಆ ಮೂಲಕ ದೃಶ್ಯ ಭಾಷೆಯನ್ನು ಕಟ್ಟುವವರ ಎದುರಿಗೆ ಇರುವ ಸವಾಲುಗಳು ಮತ್ತು ಅದನ್ನು ಗ್ರಹಿಸುವವರ ಎದುರಿಗೆ ಇರುವ ಆಯ್ಕೆಗಳನ್ನು ಕುರಿತು ಮಾತಾಡುವ ಪ್ರಯತ್ನ ಮಾಡುತ್ತೇನೆ. ಜೊತೆಗೆ, ಈ ಚಿತ್ರದ ಹಿನ್ನೆಲೆಯಲ್ಲಿ ನಮ್ಮ ಕನ್ನಡ ಚಿತ್ರರಂಗದ ಎದುರಿಗೆ ಇರುವ ಸಮಕಾಲೀನ ಆಯ್ಕೆಗಳನ್ನು ಕುರಿತು ಚರ್ಚಿಸುತ್ತೇನೆ.

Continue reading