“ತಬರನ ಕಥೆ’- ಕಥೆಯೊಂದು ಸಿನಿಮಾ ಆಗುವ ಬಗೆ….

ಬೆಳಕಿನೊಳಗಣ ಬೆಳಗು೧೫

ಕಳೆದ ಬಾರಿ ನಮ್ಮಲ್ಲಿ ತಯಾರಾಗುತ್ತಿರುವ ಸಿನಿಮಾಗಳಲ್ಲಿ “ಭ್ರಷ್ಟಾಚಾರ’ವನ್ನು ತೋರಿಸುತ್ತಿರುವ ಬಗೆಯನ್ನು ಕುರಿತು ಪ್ರಸ್ತಾಪಿಸಿದ್ದೆ. ಅದೇ ಮಾತುಗಳ ಮುಂದುವರಿಕೆಯಾಗಿ ಮತ್ತೊಂದು ಸಿನಿಮಾದ ವಿವರಗಳನ್ನಿಟ್ಟುಕೊಂಡು, ನಿಮ್ಮೊಡನೆ ನನ್ನ ಅಭಿಪ್ರಾಯ ಹಂಚಿಕೊಳ್ಳುತ್ತೇನೆ. ಪೂರ್ಣಚಂದ್ರ ತೇಜಸ್ವಿಯವರು ಕನ್ನಡ ಸಾಹಿತ್ಯಲೋಕ ಕಂಡ ಅಪರೂಪದ ಕಥೆಗಾರ. ಅವರ ಕಥೆಯ ಒಳವಿವರಗಳಿಗಿಂತ ಅವರು ಬಳಸುವ ಭಾಷೆ ಮತ್ತು ಕಥನ ಕಟ್ಟಡ ನಮ್ಮನ್ನು ಒಳಗೊಳ್ಳುತ್ತದೆ. ಜೊತೆಗೆ ಪೂಚಂತೇ ಅವರಿಗಿರುವ ಆಧುನಿಕ ಜೀವನ ಕುರಿತ ವ್ಯಂಗ್ಯ ದೃಷ್ಟಿಕೋನ ಓದುಗನನ್ನು ಆವರಿಸುತ್ತದೆ. ಇವರು ಬರೆದ ಕಥೆಗಳೆಲ್ಲವೂ ಶಕ್ತಿಯುತವಾಗುವುದೇ ಲೇಖಕರ ಅತ್ಯಂತ ಮೊನಚಾದ ಜೀವನದೃಷ್ಟಿಯಿಂದ. ಇಂತಹ ಕಥೆಗಳನ್ನು ಅಕ್ಷರದಿಂದ ದೃಶ್ಯ ಮಾಧ್ಯಮಕ್ಕೆ ತರುವುದು ಬಹು ಕಷ್ಟದ ಕೆಲಸ. ಏಕೆಂದರೆ, ಸಾಮನ್ಯವಾಗಿ ಪೂಚಂತೇ ಅವರು ತಮ್ಮ ಎಲ್ಲಾ ಕಥೆಗಳಲ್ಲೂ ತಾವೇ ನಿರೂಪಕರಾಗಿ ಇದ್ದುಬಿಟ್ಟಿರುತ್ತಾರೆ. ಹೀಗಾಗಿ ಪೂಚಂತೇ ಅವರ ಬಹುಮುಖ್ಯ ಅಭಿಪ್ರಾಯಗಳು ಕಣ್ಣೆದುರು ಬಾರದ ನಿರೂಪಕನದ್ದೇ ಆಗಿ ಕಥೆಗಳಲ್ಲಿ ಬಂದಿರುತ್ತದೆ. ಇಂತಹವನ್ನು ದೃಶ್ಯಕ್ಕೆ ತರುವುದು ನಿಜಕ್ಕೂ ಸಾಹಸವೇ ಆಗಿರುತ್ತದೆ. ಈ ನಿಟ್ಟಿನಲ್ಲಿ ನಮ್ಮಲ್ಲಿ ಸಾಹಿತ್ಯ ಪ್ರಕಾರವನ್ನು ಆಧರಿಸಿ ಸಿನಿಮಾ ಆಗಿರುವ ಎಲ್ಲಾ ಚಿತ್ರಗಳಲ್ಲಿಯೂ ಇದೊಂದು ಸಮಸ್ಯೆಯೇ. ಕಾದಂಬರಿ ಅಥವಾ ಕಥೆಯಲ್ಲಿ ವಾಕ್ಯವೊಂದರಲ್ಲಿ ಬಂದುಬಿಡಬಹುದಾದ ವಿವರವನ್ನ ತೆರೆಯ ಮೇಲೆ ದೃಶ್ಯವಾಗಿ ಹೇಳುವಾತ ಮೂಲರೂಪ ಕೊಟ್ಟವನಿಗಿಂತ ಒಂದು ಹೆಜ್ಜೆ ಮುಂದೆ ನಿಂತು ಯೋಚಿಸುವವನಾಗಬೇಕು. ಹಾಗಲ್ಲವಾದರೆ, ಮೂಲಕೃತಿಯೇ ಪ್ರತಿರೂಪದ ಮೇಲೆ ತನ್ನ ಛಾಯೆಯನ್ನ ಅಚ್ಚೊತ್ತಿಬಿಡುತ್ತದೆ. ಈ ದೃಷ್ಟಿಯಿಂದ ಕನ್ನಡ ಚಿತ್ರರಂಗದ ಸಂದರ್ಭದಲ್ಲಿ, ಸಾಹಿತ್ಯ ಪ್ರಕಾರವನ್ನು ಆಧರಿಸಿ ತಯಾರದ ಸಿನಿಮಾಗಳಲ್ಲಿ ಶ್ರೇಷ್ಟವಾದುದು ಎಂದು ಕರೆಸಿಕೊಳ್ಳುವ ಕೆಲವೇ ಸಿನಿಮಾಗಳಲ್ಲಿ, ಗಿರೀಶ್ ಕಾಸರವಳ್ಳಿಯವರ ನಿರ್ದೇಶನದ “ತಬರನಕಥೆ’ಯೂ ಒಂದು.

Continue reading

“ಅತಿಥಿ’ಯಾಗಿ ಬಂದ ಆತಂಕ

ಬೆಳಕಿನೊಳಗಣ ಬೆಳಗು – ೧೬

ಈಚೆಗೆ ನಮ್ಮಲ್ಲಿ ಬಿಡುಗಡೆಯಾದ “ಸಯನೈಡ್’ ಎಂಬ ಚಿತ್ರದ ಬಗ್ಗೆ ವಿಸ್ತೃತವಾದ ಪ್ರಚಾರ ಆಗುತ್ತಿದೆ. ಆ ಚಿತ್ರ ಹಿಂದಿಯಲ್ಲಿಯೂ ತಯಾರಾಗುತ್ತಿದೆ ಎಂಬುದು ಈಗ ಸುದ್ದಿಯಾಗಿದೆ. ಆದರೆ ಇದೇ ರೀತಿಯ ಚಿತ್ರಗಳು ಹಿಂದೆ ನಮ್ಮಲ್ಲಿ ತಯಾರಾಗಿಲ್ಲವೆ ಎಂಬ ಪ್ರಶ್ನೆ ಅನೇಕರಲ್ಲಿರಬಹುದು. ಖಂಡಿತಾ ಆಗಿದೆ. ಆಧುನಿಕ ಸಮಾಜದಲ್ಲಿ ಆತಂಕವಾದಿಗಳು ಆಗಮಿಸಿದ್ದರ ಜೊತೆಗೆ ಕನ್ನಡದಲ್ಲಿಯೂ ಈ ವಿವರವನ್ನು ಕುರಿತು ಚರ್ಚಿಸುವ ಅನೇಕ ಚಿತ್ರಗಳು ಬಂದಿವೆ. ಆ ದೃಷ್ಟಿಯಿಂದ ಪಿ.ಶೇಷಾದ್ರಿ ಅವರ ನಿರ್ದೇಶನದ “ಅತಿಥಿ’ ಮತ್ತು ಕೆ.ಎಸ್.ಎಲ್.ಸ್ವಾಮಿ ಅವರ ನಿರ್ದೇಶನದ “ಹರಕೆಯಕುರಿ’ ಪ್ರಮುಖ ಚಿತ್ರಗಳು ಎನ್ನಬಹುದು. ಇವುಗಳಲ್ಲಿ ಈ ಬಾರಿ ನಿಮ್ಮೊಂದಿಗೆ “ಅತಿಥಿ’ ಕುರಿತ ಕೆಲವು ಮಾತುಗಳನ್ನು ಹಂಚಿಕೊಳ್ಳುತ್ತೇನೆ.

Continue reading

“ಬೇರು’ಬಿಟ್ಟ ಭ್ರಷ್ಟರು….

ಬೆಳಕಿನೊಳಗಣ ಬೆಳಗು – ೧೪

ಈ ಬೃಹತ್ ದೇಶದ ಬೃಹತ್ ಸಮಸ್ಯೆ ಎಂದರೆ ಭ್ರಷ್ಟತೆ. ಇದಕ್ಕಾಗಿ ನಮ್ಮ ಮಾಧ್ಯಮಗಳು ಮಾಡುತ್ತಿರುವ ಕೆಲಸಗಳು ಅನೇಕ. ಮಾಧ್ಯಮಗಳ ಪ್ರಯತ್ನದಿಂದಲೇ ಕರ್ನಾಟಕದಲ್ಲಿ ಲೋಕಾಯುಕ್ತ ಎಂಬುದೊಂದು ವಿಭಾಗವೇ ಆಯಿತು. ಈಗ ಅಲ್ಲಿಗೆ ಹೊಸ ಆಯುಕ್ತರು ಸಹ ಬಂದಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮ ಸಿನಿಮಾ ಮಾಧ್ಯಮವು ಭ್ರಷ್ಟತೆಯನ್ನು ಕುರಿತು ಹೇಳುವ ಪ್ರಯತ್ನಗಳೇನ್ನೇನು ಮಾಡಿದೆ ಮತ್ತು ಅದು ಎಷ್ಟು ಸಾಧುವಾದದ್ದು ಎಂದು ನೋಡೋಣ.

Continue reading

“ಅನ್ವೇಷಣೆ’ಯ ಹಾದಿಯಲ್ಲಿ….

ಬೆಳಕಿನೊಳಗಣ ಬೆಳಗು – ೧೩

ನಮ್ಮ ಕನ್ನಡ ಚಿತ್ರರಂಗ ಎಂಬ ಮಹಾಸಾಗರದಲ್ಲಿ ಪ್ರತಿನಿತ್ಯವು ಒಂದು ಹೊಸ ಪ್ರಯೋಗ ಆಗುತ್ತಲೇ ಇದೆ. ಈ ಪ್ರಯೋಗಗಳು ಮೊದಲು ಹೊಸಅಲೆ ಅಥವಾ ಪ್ರಶಸ್ತಿ ಸಿನಿಮಾ ಎಂಬ ಹಣೆಪಟ್ಟಿಯ ಚಿತ್ರಗಳಲ್ಲಿಯೇ ಆಗುವುದು. ನಂತರ ಅದೇ ಪ್ರಯೋಗಗಳು ಪ್ರಧಾನವಾಹಿನಿಯ/ಜನಪ್ರಿಯ ಚಿತ್ರಗಳಲ್ಲಿ ಆಗುವುದನ್ನು ನಾವು ಕಾಣುತ್ತಲೇ ಬಂದಿದ್ದೇವೆ. ಒಂದೊಮ್ಮೆ ಕೃತಕ, ಅವಾಸ್ತವ, ಅಸಹಜ ವಿವರಗಳೊಡನೆ ಚಿತ್ರಿತವಾಗುತ್ತಿದ್ದ ಜನಪ್ರಿಯ ಸಿನಿಮಾಗಳಲ್ಲಿ ೮೦ರ ದಶಕದಿಂದಾಚೆಗೆ ವಾಸ್ತವ ಮತ್ತು ಸಹಜ ನಿರೂಪಣೆಯು ಬರಲು ಕಾರಣವಾದದ್ದೇ “ಹೊಸಅಲೆ’ಯ ಚಿತ್ರಗಳು ಪರಿಚಯಿಸಿದ ನಿರೂಪಣಾ ವಿಧಾನದಿಂದ. ಈ ನಿಟ್ಟಿನಲ್ಲಿ ಪ್ರಧಾನವಾಹಿನಿಯ ಜನರು “ಹೊಸಅಲೆ’ಯನ್ನು “ಜನರಿಂದ ದೂರಾಗುವ ಚಿತ್ರ ತಯಾರಿಸುತ್ತಾರೆ’ ಎಂದು ಹೀಗಳೆಯುವ ಬದಲು, “ಒಂದು ಉದ್ಯಮದ ಉಳಿವಿಗೆ ಮತ್ತೊಂದು ಪ್ರಯೋಗಶಾಲೆ’ ಎಂಬರ್ಥದಲ್ಲಿ ಸ್ವೀಕರಿಸಿ ಪೋಷಿಸಬೇಕು. ಅದು ಸಧ್ಯದ ಸ್ಥಿತಿಯಲ್ಲಿ ಆಗುತ್ತಿಲ್ಲ. ಆದರೂ ಪ್ರಯೋಗಪ್ರಿಯರು ತಮ್ಮ ಚಟುವಟಿಕೆಯನ್ನು ಬಿಟ್ಟುಕೊಟ್ಟಿಲ್ಲ. ಈ ನಿಟ್ಟಿನಲ್ಲಿ ಎಂಬತ್ತರ ದಶಕದ ಆರಂಭದ ದಿನಗಳಲ್ಲಿ ತಯಾರಾದ ನಾಗಾಭರಣ ನಿರ್ದೇಶನದ ‘ಅನ್ವೇಷಣೆ’ ಒಂದು ಅಪರೂಪದ ಪ್ರಯೋಗ. ಈ ಲೇಖನದಲ್ಲಿ ಆ ಚಿತ್ರದಲ್ಲಿ ಆದ ಪ್ರಯೋಗ ಕುರಿತಂತೆ ಒಂದಷ್ಟು ಅಭಿಪ್ರಾಯ ಹಂಚಿಕೊಳ್ಳೋಣ.

Continue reading

ಕನ್ನಡದ ಹೊಸಅಲೆಗೆ ‘ನಾಂದಿ’ ಹಾಡಿದವರು….

ಬೆಳಕಿನೊಳಗಣ ಬೆಳಗು – ೧೨

ಕನ್ನಡ ಚಲನಚಿತ್ರವನ್ನು ಕುರಿತು ಮಾತಾಡುವವರೆಲ್ಲರೂ ಸಾಮಾನ್ಯವಾಗಿ ಪಟ್ಟಾಭಿರಾಮರೆಡ್ಡಿಯವರ ‘ಸಂಸ್ಕಾರ’ ಚಿತ್ರದಿಂದ ಕನ್ನಡದಲ್ಲಿ ಹೊಸಅಲೆ ಹುಟ್ಟಿತು ಎಂದು ಹೇಳುವುದು ರೂಢಿಯಾಗಿ ಹೋಗಿದೆ. ಇದು ಸತ್ಯವಲ್ಲ. ‘ಸಂಸ್ಕಾರ’ ಚಿತ್ರ ಬರುವುದಕ್ಕೆ ಮುಂಚಿನಿಂದಲೇ ಕನ್ನಡದಲ್ಲಿ ಹೊಸಅಲೆಯೆಂದು ಗುರುತಿಸಲ್ಪಡುವಂತಹ ಅನೇಕ ಸಿನಿಮಾಗಳು ತಯಾರಾಗಿದ್ದವು. ಎನ್.ಲಕ್ಷ್ಮೀನಾರಾಯಣ್, ಎಂ.ಆರ್.ವಿಠಲ್, ಪುಟ್ಟಣ್ಣ ಕಣಗಾಲ್ ಮತ್ತು ಕೆ.ಎಸ್.ಎಲ್.ಸ್ವಾಮಿಯವರು ಇಂತಹ ಚಿತ್ರಗಳನ್ನು ತಯಾರಿಸಿದ್ದರು. ಇಲ್ಲಿ ‘ಇಂತಹ’ ಎಂದು ಹೇಳುವಾಗ ಅದು ಏನದು ಎಂಬ ಪ್ರಶ್ನೆ ಹುಟ್ಟಬಹುದು. ಅದಕ್ಕಾಗಿ ಕೆಲವು ವಿವರಗಳನ್ನು ನೀಡಿಬಿಡುತ್ತೇನೆ. ನಮ್ಮ ಚಿತ್ರರಂಗವು ಮಾರುಕಟ್ಟೆಯನ್ನು ಉದ್ದೇಶಿಸಿ ಸಿನಿಮಾ ಕಥೆಗಳನ್ನು ಹೆಣೆಯಲಾರಂಭಿಸಿದ್ದು ಬಹಳ ಹಿಂದೆ. ಆದರೆ ಹೀಗೆ ತಯಾರಾಗುತ್ತಿದ್ದ ಕನ್ನಡ ಚಿತ್ರಗಳು ಅಮೇರಿಕನ್ ಮೆಲೋಡ್ರಾಮ ಎಂದು ಕರೆಯಲ್ಪಡುವ ಒಂದು ಶೈಲಿಯ ಚಿತ್ರಗಳನ್ನು ಅನುಕರಿಸುತ್ತಿದ್ದವು. ಆ ಶೈಲಿಯ ಚಿತ್ರಗಳು ಆಯಾ ದೇಶಗಳಲ್ಲಿ ಜನಪ್ರಿಯವಾಗಿದ್ದವು ಎಂಬುದು ಇದಕ್ಕೆ ಒಂದು ಕಾರಣವಾದರೆ, ನಮ್ಮ ಕನ್ನಡ ಚಿತ್ರದ ಆರಂಭಿಕ ದಿನಗಳಲ್ಲಿ ಇಲ್ಲಿ ದುಡಿಯುತ್ತಿದ್ದ ಎಲ್ಲಾ ತಂತ್ರಜ್ಞರೂ ಪರಭಾಷಿಕರಾಗಿದ್ದರು ಎಂಬುದು ಮತ್ತೊಂದು ಕಾರಣವಾಗಿತ್ತು. ಹೀಗಾಗಿ ಕನ್ನಡ ಸಿನಿಮಾಗಳಲ್ಲಿ ವಿಚಿತ್ರವಾದ ಅಸಹಜತೆ ಮತ್ತು ಅವಾಸ್ತವಿಕತೆ ಕಾಣಿಸುತ್ತಿತ್ತು. ಸಾಮಾನ್ಯ ಚಿತ್ರ ನೋಡುಗನಿಗೆ ತೆರೆಯ ಮೇಲೆ ಚಲಿಸುವ ಮತ್ತು ಮಾತಾಡುವ ದೃಶ್ಯಗಳೇ ಪವಾಡವಾಗಿದ್ದ ಕಾಲ ಅದಾಗಿತ್ತು. ಹೀಗಾಗಿ ಅಸಹಜತೆ, ಅವಾಸ್ತವತೆ ಮತ್ತು ಕೃತ್ರಿಮ ಎನಿಸುವ ಆವರಣ ಪ್ರೇಕ್ಷಕನ ಗಮನಕ್ಕೆ ಬಂದೇ ಇರಲಿಲ್ಲ. ಇಂತಹ ಕಾಲಘಟ್ಟದಲ್ಲಿ ಯೂರೋಪ್ ದೇಶದಲ್ಲಿ ನವವಾಸ್ತವವಾದದ ಚಳವಳಿಯಿಂದ ಪ್ರೇರಿತವಾದ ಅನೇಕ ಚಿತ್ರಗಳು ತಯಾರಾದವು. ಇವು ಯಾವುದೇ ಕಥೆಯನ್ನ ಸಹಜ, ವಾಸ್ತವದ ಸ್ಥಿತಿಯಲ್ಲಿ ನೋಡುವ ಪ್ರಯತ್ನಗಳಾಗಿದ್ದವು. ವಿಟ್ಟೋರಿಯಾ ಡಿ’ಸಿಕಾ ತಯಾರಿಸಿದ ‘ಬೈಸಿಕಲ್ ಥೀವ್ಸ್’ನಂತಹ ಚಿತ್ರಗಳು ಆ ಹಿನ್ನೆಲೆಯಲ್ಲಿ ತಯಾರಾಗಿದ್ದವು. ಈ ಚಿತ್ರದ ಪ್ರಭಾವ ಜಗತ್ತಿನಾದ್ಯಂತ ಆದಂತೆ ಭಾರತದಲ್ಲಿಯೂ ಆಯಿತು. ಸತ್ಯಜಿತ್ ರಾಯ್ ಅವರ ಪ್ರಥಮ ಚಿತ್ರ ‘ಪಾಥೇರ್ ಪಾಂಚಾಲಿ’ ಆ ಪ್ರಭಾವದಲ್ಲಿಯೇ ತಯಾರಾಯಿತು. ಇದೇ ಹಾದಿಯಲ್ಲಿ ಕನ್ನಡದಲ್ಲಿಯೂ ಚಿತ್ರಗಳು ತಯಾರಾಗಲು ಪ್ರಯತ್ನಗಳಾದವು. ಎನ್.ಲಕ್ಷ್ಮೀನಾರಾಯಣ್ ಅವರು ‘ನಾಂದಿ’ ಚಿತ್ರದ ಮೂಲಕ ಕನ್ನಡದಲ್ಲಿ ನವವಾಸ್ತವವಾದದ ಪ್ರಥಮ ಚಿತ್ರ ತಯಾರಿಸಿದರು. ನಂತರ ವಿಠಲ್ ಅವರ ‘ಮಿಸ್ ಲೀಲಾವತಿ’, ಕೆ.ಎಸ್.ಎಲ್.ಸ್ವಾಮಿ ಅವರ ‘ತೂಗುದೀಪ’, ಪುಟ್ಟಣ್ಣ ಅವರ ‘ಬೆಳ್ಳಿಮೋಡ’ ಚಿತ್ರಗಳು ಬಂದವು. ಇವೆಲ್ಲವನ್ನೂ ಕನ್ನಡದ ಪ್ರೇಕ್ಷಕ ತುಂಬುಹೃದಯದಿಂದಲೇ ಸ್ವಾಗತಿಸಿದ ಹಾಗೂ ಬೆನ್ನುತಟ್ಟಿದ. ಈ ಪ್ರಯತ್ನಗಳೆಲ್ಲವೂ ಆದ ನಂತರ ಸುಮಾರು ೧೯೭೦ರ ಆಸುಪಾಸಿನಲ್ಲಿ ಬಂದದ್ದು ‘ಸಂಸ್ಕಾರ’. ಆದರೂ ಅದೇಕೋ ನಮ್ಮ ಚಲನಚಿತ್ರ ವಿಮರ್ಶಕರು ಹಾಗೂ ಇತಿಹಾಸಕಾರರು ‘ಸಂಸ್ಕಾರ’ಕ್ಕೆ ನೀಡಿದ ಮನ್ನಣೆಯನ್ನು ಅದಕ್ಕಿಂತ ಮೊದಲು ಬಂದ ಚಿತ್ರಗಳಿಗೆ ನೀಡಲಿಲ್ಲ. ಅದೇನೇ ಇರಲಿ, ನಾವು ಹಾಗೆ ಮಾಡದೆ ವಾಸ್ತವವನ್ನು ಗಮನಿಸಿ, ಒಳ್ಳೆಯ ಚಿತ್ರಗಳನ್ನು ಕುರಿತ ನಮ್ಮ ತಿಳುವಳಿಕೆ ಹೆಚ್ಚಿಸಿಕೊಳ್ಳೋಣ.

Continue reading

ಒಳ್ಳೆಯದರ ಹುಡಕಾಟದಲ್ಲಿ ಕಳಕೊಂಡದ್ದು…

ಬೆಳಕಿನೊಳಗಣ ಬೆಗು – ೧೧

ಕಳೆದ ಬಾರಿ ನಿಮ್ಮೊಂದಿಗೆ ರಾಜಕೀಯ ಚಿತ್ರಗಳನ್ನು ಕುರಿತು ಮಾತಾಡಿದ್ದೆ. ಈಗ ಅಂತಹ ರಾಜಕೀಯ ಚಿತ್ರವೊಂದರಲ್ಲಿ ಕಥೆಗಾರನಿಗೆ ಅಥವಾ ನಿರ್ದೇಶಕನಿಗೆ ಸ್ಪಷ್ಟ ನಿಲುವು ಇಲ್ಲದೆ ಹೋದಾಗ ಎಂದು ತಿಳಿಸುವ ಪ್ರಯತ್ನ ಮಾಡುತ್ತೇನೆ.
ಚಲನಚಿತ್ರ ಎಂಬುದು ಅತ್ಯಂತ ಪ್ರಬಲ ಮಾಧ್ಯಮ. ಅಲ್ಲಿ ಕಥೆಯಾಗಿ ಒಂದು ಕಲ್ಪನೆಯನ್ನು ಇಡುವಂತೆಯೇ ವಾಸ್ತವವನ್ನು ಸಹ ಕಥೆಯಾಗಿ ಹೇಳುವ ಅವಕಾಶವಿದೆ. ಈ ನಿಟ್ಟಿನಲ್ಲಿ ಅನೇಕ ಚಿತ್ರಗಳು ನಮ್ಮಲ್ಲಿ ಬಂದಿದೆ. ಸ್ವಾತಂತ್ರ್ಯ ಯೋಧರ ಚಿತ್ರಗಳು, ಐತಿಹಾಸಿಕ ವ್ಯಕ್ತಿಗಳನ್ನು ಕುರಿತ ಚಿತ್ರಗಳು ಎಂದು ಇವುಗಳನ್ನು ವಿಂಗಡಿಸಬಹುದು. ಅಂತೆಯೇ ನಮ್ಮ ಸಮಕಾಲೀನ ನಾಯಕರ ಮತ್ತು ವ್ಯಕ್ತಿಗಳನ್ನು ಕುರಿತ ಕಥೆಯನ್ನುಳ್ಳ ಚಿತ್ರಗಳು ಸಹ ನಮ್ಮಲ್ಲಿ ಬಂದಿವೆ. ಇವುಗಳಲ್ಲಿ ಕೆಲವು ಇನ್ಸ್‌ಪೆಕ್ಟರ್‌ಗಳನ್ನು (’ಸಾಂಗ್ಲಿಯಾನ’, ’ಕೆಂಪಯ್ಯ’ ಮುಂತಾದವು) ಕುರಿತ  ಚಿತ್ರಗಳು, ಮತ್ತೆ ಕೆಲವು ಸಮಾಜ ದ್ರೋಹಿಗಳನ್ನು ಕುರಿತ (’ವೀರಪ್ಪನ್’, ‘ಡೆಡ್ಲಿಸೋಮ’ ಮುಂತಾದವು) ಚಿತ್ರಗಳು. ಮೇಲೆ ಹೆಸರಿಸಿದ ಚಿತ್ರಗಳಲ್ಲಿ ಆಯಾ ವ್ಯಕ್ತಿಗಳ ಹೆಸರನ್ನು ಇಡಲಾಗಿತ್ತಾದರೂ ಅವುಗಳಲ್ಲಿ ವಾಸ್ತವವನ್ನು ಮೀರಿದ ಅನೇಕ ಪ್ರಕ್ತಿಪ್ತಗಳು ಇದ್ದವು. ಅವು ಜನಪ್ರಿಯತೆ ಗಳಿಸಲೆಂದೇ ತಯಾರಾದ ಚಿತ್ರಗಳಾಗಿದ್ದವು. ಆದರೆ ವಾಸ್ತವದಲ್ಲಿ ಆಗಿಹೋದ ವ್ಯಕ್ತಿಗಳನ್ನು ಕುರಿತು ವಾಸ್ತವವಾದಿ ನೆಲೆಯಲ್ಲಿ ಚಿತ್ರ ತಯಾರಿಸಿರುವವರು ಕಡಿಮೆ. ಆ ನಿಟ್ಟಿನಲ್ಲಿ ಕನ್ನಡದಲ್ಲಿ ಪ್ರಥಮ ಪ್ರಯತ್ನ ಎಂಬಂತೆ ‘ಸೈಯನೈಡ್’ ಎಂಬ ಚಿತ್ರ ತಯಾರಾಗಿದೆ. ಈ ಚಿತ್ರದಲ್ಲಿ ಭಾರತದ ಪ್ರಧಾನಿಯಾಗಿದ್ದ ರಾಜೀವ್‌ಗಾಂಧಿಯವರನ್ನ ಹತ್ಯಗೈದ ಶಿವರಾಸನ್ ಮತ್ತು ಶುಭ ಅವರ ಕಡೆಯ ದಿನಗಳನ್ನು ಸಾಕ್ಷ್ಯಚಿತ್ರದ ರೀತಿಯಲ್ಲಿ ಹಿಡಿದಿರಿಸಲಾಗಿದೆ. ಇಂತಹ ಚಿತ್ರಗಳನ್ನು ಕುರಿತ ಒಳನೋಟವೊಂದನ್ನು ನಿಮಗೆ ನೀಡಲೆಂದು ಆ ಚಿತ್ರ ಬಿಡುಗಡೆಯಾಗುವ ಸಂದರ್ಬದಲ್ಲಿಯೇ ಈ ಮಾತುಗಳನ್ನು ನಿಮ್ಮೊಂದಿಗೆ ಆಡುತ್ತಿದ್ದೇನೆ.
ಈ ಚಿತ್ರವನ್ನು ತಯಾರಿಸಿದವರು ಕನ್ನಡದವರೇ ಆದ ರಮೇಶ್ ಅವರು. ಈ ಹಿಂದೆ ಅವರು ’ಸಂತೋಷ’ ಎಂಬ ಚಿತ್ರವನ್ನು ತಯಾರಿಸಿದ್ದರು. ಸೈಯನೈಡ್ ರಮೇಶ್ ಅವರ ಎರಡನೆಯ ಚಿತ್ರ. ಈ ಚಿತ್ರದ ಛಾಯಾಗ್ರಾಹಕರು ರಾಷ್ಟ್ರಖ್ಯಾತಿಯವರಾದ ರತ್ನವೇಲು, ಸಂಕಲನಕಾರರು ಸಹ ರಾಷ್ಟ್ರಖ್ಯಾತಿಯನ್ನು ಹೊಂದಿದ ಆಂಟನಿ ಅವರು. ಆದ್ದರಿಂದಲೇ ಈ ಚಿತ್ರದಲ್ಲಿ ಬಳಸಲಾಗಿರುವ ಬಣ್ಣಗಳು, ಕ್ಯಾಮೆರಾ ಚಲನೆ ಎಲ್ಲಕ್ಕೂ ಒಂದು ಅಂತಾರಾಷ್ಟ್ರೀಯ ಗುಣಮಟ್ಟ ಬಂದಿದೆ. ‘ಸೈಯನೈಡ್’ ಚಿತ್ರ ತಾಂತ್ರಿಕ ಗುಣಮಟ್ಟದ ದೃಷ್ಟಿಯಿಂದ ಕನ್ನಡದ ಶ್ರೇಷ್ಟ ಚಿತ್ರಗಳಲ್ಲಿ ಒಂದು. ಆದರೆ ಚಿತ್ರವೊಂದಕ್ಕೆ ತಂತ್ರ ಪ್ರಧಾನವಲ್ಲ. ಅದು ಕಥೆಗೆ ಬೆಂಬಲವಾಗಿ ನಿಲ್ಲುವ ಸಾಧನ ಮಾತ್ರ. ತಂತ್ರ ಎಂಬುದನ್ನ ಚಿತ್ರದ ಕಥೆಯ ಕೈಕಾಲು ಎನ್ನಬಹುದು. ಅದೇ ಮಿದುಳಾಗುವುದಿಲ್ಲ, ಹೃದಯವಾಗುವುದಿಲ್ಲ.

Continue reading

ರಾಜಕೀಯ ಚಿತ್ರಗಳ ಹೆಸರಲ್ಲಿ…

ಬೆಳಕಿನೊಳಗಣ ಬೆಗು – ೧೦

ಕನ್ನಡ ಚಲನಚಿತ್ರದ ಸಂದರ್ಭದಲ್ಲಿ ರಾಜಕೀಯ ಚಿತ್ರಗಳು ಎಂಬ ಹೆಸರಲ್ಲಿ ಬಂದ ಚಿತ್ರಗಳು ಅನೇಕವಾದರೂ ನಿಜ ಅರ್ಥದಲ್ಲಿ ‘ರಾಜಕೀಯ’ವನ್ನು ವಸ್ತುವಾಗಿಸಿಕೊಂಡು ಬಂದ ಚಿತ್ರಗಳು ಬೆರಳೆಣಿಕೆಯಷ್ಟು ಮಾತ್ರ. ಅಂತಹ ಕೆಲವುಗಳಲ್ಲಿ ಒಂದು ಎಂ.ಎಸ್.ಸತ್ಯು ಅವರ ನಿರ್ದೇಶನದ ‘ಬರ’. ಈ ಚಿತ್ರದಲ್ಲಿ ‘ರಾಜಕೀಯ’ ಎಂಬುದು ನಮ್ಮ ಬದುಕನ್ನು ಹೇಗೆ ನಿಯಂತ್ರಿಸುತ್ತದೆ ಮತ್ತು ಅದರಿಂದ ಮಧ್ಯಮವರ್ಗದ ಬದುಕು ಹೇಗೆ ತಲ್ಲಣಿಸುತ್ತದೆ ಎಂಬ ವಿವರಗಳು ಪ್ರೇಕ್ಷಕನನ್ನು ತಲುಪುತ್ತವೆ. ಅದಕ್ಕಾಗಿ ‘ಬರ’ ಚಿತ್ರದಲ್ಲಿನ ವಿವರಗಳನ್ನು ಗಮನಿಸುವುದಕ್ಕಿಂತ ಮೊದಲು ನಾವು ನಮ್ಮಲ್ಲಿ ಬಂದ ಇನ್ನಿತರ ‘ರಾಜಕೀಯ’ ಚಿತ್ರ ಎಂಬ ಹಣೆಪಟ್ಟಿಯೊಡನೆ ಬಂದಂತಹ ಚಿತ್ರಗಳನ್ನು ಗಮನಿಸಬೇಕು.

Continue reading

ಯುದ್ಧ ಮತ್ತು ಶಾಂತಿ

ಬೆಳಕಿನೊಳಗಣ ಬೆಗು – ೯

ಮನುಷ್ಯ ಎಂಬ ಪ್ರಾಣಿಗೆ ತನ್ನ ಮನೆ, ತನ್ನ ನೆಲ, ತನ್ನ ಭಾಷೆ, ತನ್ನ ದೇಶ ಎಂಬ ಕಲ್ಪನೆಗಳು ಹುಟ್ಟಿಕೊಂಡಾಗಿನಿಂದ ಈ ಜಗತ್ತಿನಲ್ಲಿ ಯುದ್ಧಗಳು ಆರಂಭವಾದವು. ತೀರಾ ಸಣ್ಣ ಮಕ್ಕಳನ್ನೇ ನೋಡಿ. ಅವರು ತಮ್ಮದೊಂದು ಬೊಂಬೆಯನ್ನು ಪಕ್ಕದಲ್ಲಿರುವ ಮಗುವಿನೊಂದಿಗೆ ಹಂಚಿಕೊಳ್ಳಲಾರರು. ಮಕ್ಕಳಿಗೆ ತೀರಾ ಸಣ್ಣ ವಯಸ್ಸಿನಿಂದಲೇ ತನ್ನದು ಎಂಬುದರ ಪರಿಚಯವನ್ನು ಈ ಸಮಾಜ ಮಾಡುತ್ತದೆ. ಅದರಿಂದಾಗಿಯೇ ಮಗುವೊಂದು ವಯಸ್ಕನಾಗುವ ಹೊತ್ತಿಗೆ ತನ್ನದೆಂಬುದನ್ನೆಲ್ಲ ರಕ್ಷಿಸಿಕೊಳ್ಳಬೇಕೆಂಬ ಕೆಟ್ಟ ‘ಅಹಂ’ ಜೊತೆಯಲ್ಲಿಯೇ ಬೆಳೆಯುತ್ತದೆ. ಮಕ್ಕಳ ಕಣ್‌ನೋಟಕ್ಕೆ ಬೆಳೆಯುವ ಹಾದಿಯಲ್ಲಿ; ಮನೆ, ನೆಲ, ಭಾಷೆ, ದೇಶಗಳು ಸೇರಿಕೊಳ್ಳುತ್ತಾ ಹೋಗುತ್ತವೆ. ಇವೆಲ್ಲವುಗಳನ್ನು ಕುರಿತು ಭಾವನಾತ್ಮಕ ಸಂಬಂಧ ಬೆಳೆದುಬಿಡುತ್ತದೆ. ಹೀಗಾದಾಗ ರಕ್ಷಣೆಯ ಹೆಸರಿನಲ್ಲೇ ಹಿಂಸೆಯ ರೂಪಗಳು ಕಾಣಿಸಿಕೊಳ್ಳುತ್ತವೆ. ಆ ಕಾರಣದಿಂದಲೇ ‘ನಮ್ಮ ನೆಮ್ಮದಿಯ ಬದುಕಿನ ಬಹುದೊಡ್ಡ ದುಷ್ಮನ್‌ಗಳು ಭಾಷೆ – ದೇಶ – ಗಡಿಗೆರೆ’ ಎಂದು ಚೀನಾದ ಕವಿಯೊಬ್ಬ ಹೇಳುತ್ತಾನೆ. (ಆ ಮಾತನ್ನು ನಾವು ಜೋರಾಗಿ ಹೇಳುವಂತಿಲ್ಲ. ಭಾಷೆ-  ದೇಶದ ಪ್ರೀತಿಯಿಂದ ಹಿಂಸೆ ಹುಟ್ಟುತ್ತದೆ ಎನ್ನುವವರನ್ನು ಇಲ್ಲಿನ ಕಟ್ಟಾ ರಾಷ್ಟ್ರೀಯವಾದಿಗಳು ಮತ್ತು ಪ್ರಚಂಡ ಭಾಷಾಪ್ರೇಮಿಗಳು ಕೊಚ್ಚಿಹಾಕುವ ಸಾಧ್ಯತೆಯಿದೆ.)

Continue reading

ಮಕ್ಕಳ ಸಿನಿಮಾ ಹೇಗಿರಬೇಕು?

ಬೆಳಕಿನೊಳಗಣ ಬೆಗು – ೮

ಮಕ್ಕಳ ಸಿನಿಮಾ ತಯಾರಿಕೆ ಅತ್ಯಂತ ಕಷ್ಟದ ಕೆಲಸ. ಅದಕ್ಕೆ ಬೇಕಾದ ಹಣ ಹೊಂದಿಸುವುದರಿಂದ ಹಿಡಿದು, ಚಿತ್ರ ಬಿಡುಗಡೆಯವರೆಗೆ ಬಿಕ್ಕಟ್ಟುಗಳ ಸರಮಾಲೆಯನ್ನೇ ಅಂತಹ ಚಿತ್ರಗಳ ತಯಾರಿಕೆ ಎದುರಿಸಬೇಕಾಗುತ್ತದೆ. ಇದಕ್ಕೆ ಹಲವು ಕಾರಣಗಳಿದೆ. ಮೊದಲಿಗೆ ಮಕ್ಕಳ ಚಿತ್ರಗಳಲ್ಲಿಯೇ ಮೂರು ಬಗೆಯ ಚಿತ್ರಗಳಿವೆ. ೧. ಮಕ್ಕಳಿಂದ ಮಕ್ಕಳಿಗಾಗಿ ತಯಾರದ ಚಿತ್ರ, ೨. ದೊಡ್ಡವರು ಮಕ್ಕಳಿಗಾಗಿ ತಯಾರಿಸಿದ ಚಿತ್ರ, ೩. ಮಕ್ಕಳ ಮೂಲಕ ದೊಡ್ಡವರಿಗಾಗಿ ತಯಾರಾದ ಚಿತ್ರ. ಈ ಮೂರು ಬಗೆಯವುಗಳಲ್ಲದೆ ಅದಾಗಲೇ ಪ್ರಚಲಿತವಾದ ಸಾಮಾಜಿಕ, ಐತಿಹಾಸಿಕ, ವೈeನಿಕ, ಸಾಹಸಮಯ ಇತ್ಯಾದಿ ಪ್ರಭೇದಗಳು ಸಹ ಇವೆ. ಇವುಗಳಲ್ಲಿ ಯಾವ ರೀತಿಯ ಚಿತ್ರ ತಯಾರಿಸುತ್ತೇವೆ ಎಂಬುದನ್ನು ಚಿತ್ರ ತಯಾರಕ ಮೊದಲು ತೀರ್ಮಾನಿಸಬೇಕಾಗುತ್ತದೆ. ಭಾರತದಲ್ಲಿ ಮಕ್ಕಳಿಂದ ದೊಡ್ಡವರಿಗೆ ನೀತಿ ಪಾಠ ಹೇಳುವ ಚಿತ್ರಗಳೇ ಮಕ್ಕಳ ಚಿತ್ರಗಳೆಂಬ ಹೆಸರಲ್ಲಿ ತಯಾರಾಗುತ್ತಿದೆ. ಮಕ್ಕಳು ಮಕ್ಕಳಿಗಾಗಿ ತಯಾರಿಸುವು ಚಿತ್ರಗಳು ಈವರೆಗೆ ಭಾರತದಲ್ಲಿ ತಯಾರಾಗಿಯೇ ಇಲ್ಲ ಎನ್ನಬಹುದು. (ಈಚೆಗೆ ಬಾಲನಟ ಮಾ.ಕಿಶನ್ ಇಂತಹದೊಂದು ಪ್ರಯತ್ನ ಮಾಡುತ್ತಿದ್ದಾರೆ. ಅದು ಸಂತಸದ ಸಂಗತಿ) ಹೀಗಾಗುವುದಕ್ಕೆ ಭಾರತೀಯ ಚಲನಚಿತ್ರ ಮಾರುಕಟ್ಟೆಯೇ ಕಾರಣ. ಇಲ್ಲಿ ಮಕ್ಕಳ ಚಿತ್ರಗಳನ್ನು ಪೋಷಿಸುವ ಮಾರುಕಟ್ಟೆಯಿಲ್ಲ. ಹಾಗೇ ಚಿತ್ರ ತಯಾರಿಸುವ ಆಲೋಚನೆ ಮಾಡಿದವರಿಗೆ ಮರಳಿ ಹಣ ಬಾರದಿರುವುದು ಮತ್ತೊಂದು ದೊಡ್ಡ ಕಷ್ಟ. ಈ ಪರಿಸ್ಥಿತಿಯ ಸುಧಾರಣೆಗಾಗಿ ಕರ್ನಾಟಕ ಸರ್ಕಾರ ಕೆಲವು ಪ್ರಯತ್ನಗಳನ್ನು ಮಾಡುತ್ತಾ ಬಂದಿದೆ. ಅದರಲ್ಲಿ ಅತ್ಯುತ್ತಮ ಮಕ್ಕಳ ಚಿತ್ರಕ್ಕೆ ಪ್ರಶಸ್ತಿ ನೀಡುವುದಲ್ಲದೇ ಈಗ ವರ್ಷದಲ್ಲಿ ಎರಡು ಮಕ್ಕಳ ಚಿತ್ರಗಳಿಗೆ ೨೫ಲಕ್ಷ ರೂ.ಗಳ ಸಹಾಯಧನವೂ ಕೊಡುತ್ತಿದೆ. ಇದು ಮಕ್ಕಳ ಚಿತ್ರ ತಯಾರಕರಿಗೆ ಸಿಕ್ಕಿರುವ ಸಣ್ಣ ಸಂತೋಷ. ಆದರೆ ಇಲ್ಲಿರುವ ಸಮಸ್ಯೆ ಎಂದರೆ ಮಕ್ಕಳ ಚಿತ್ರ ಎಂಬ ಹಣೆಪಟ್ಟಿಯೊಡನೆ ೨೫ ಲಕ್ಷ ರೂ,ಗಳ ಸಹಾಯಧನ ಪಡೆಯಲು ಅವಸರದಲ್ಲಿ ರೀಲು ಸುತ್ತುವ ಅಭ್ಯಾಸವೊಂದು ನಿಧಾನವಾಗಿ ಶುರುವಾಗಿದೆ. ಆದ್ದರಿಂದಲೇ ಈ ವರ್ಷ ತಯಾರಾದ ಮಕ್ಕಳ ಚಿತ್ರಗಳ ಸಂಖ್ಯೆ ಐದೋ ಆರೋ ಆಗಿದೆ. ಅವುಗಳಲ್ಲಿ ನಿಜವಾಗಿಯೂ ಮಕ್ಕಳ ಚಿತ್ರ ಯಾವುದು ಎಂದು ತಿಳಿಯಬೇಕಷ್ಟೆ.

Continue reading

ಮೌನವೆಂಬ ಮಹಾಅಸ್ತ್ರ

ಬೆಳಕಿನೊಳಗಣ ಬೆಗು – ೭

ಒಳ್ಳೆಯದು ಎನ್ನುವುದು ಯಾವಾಗಲೂ ಅಲ್ಪಸಂಖ್ಯಾತ. ಅದು ಇತಿಹಾಸ ಪೂರ್ವಕಾಲದಿಂದಲೂ ಉಳಿದುಕೊಂಡು ಬಂದಿರುವ ಸತ್ಯ. ನೀವೇ ಗಮನಿಸಿ: ಈ ದೇಶದ ಮಹಾನ್ ನೇತಾರ ಗಾಂಧೀಜಿ. ಅವರ ಪ್ರಯೋಗಗಳು, ಸತ್ಯಾಗ್ರಹಗಳು ಎಲ್ಲವೂ ಸಮಾಜಮುಖಿ ಆಗಿದ್ದವು. ಆದರೆ ಅಂತಹ ವ್ಯಕ್ತಿತ್ವದ ಬಗ್ಗೆ ನಮ್ಮಲ್ಲಿ ತಯಾರಾದ ಚಿತ್ರಗಳೆಷ್ಟು ಎಂದರೆ ಬೆರಳೆಣಿಕೆಯ ಲೆಕ್ಕದಲ್ಲಿ ಮುಗಿದು ಹೋಗುತ್ತದೆ. ಅದೇ ಈ ನಾಡಿನ ಕುಖ್ಯಾತರುಗಳ ಹೆಸರು, ಹೋಲಿಕೆಗಳನ್ನುಳ್ಳ ವ್ಯಕ್ತಿತ್ವ ಇರುವ ಚಿತ್ರಗಳ ಸಂಖ್ಯೆ ಅಪಾರ. ಕೇವಲ ದಾವೂದ್ ಇಬ್ರಾಹಿಂ ಎಂಬ ಒಂದು ವ್ಯಕ್ತಿತ್ವ ರಾಷ್ಟ್ರಭಾಷೆಯಾದ ಹಿಂದಿಯಲ್ಲಿ ತಯಾರಾದ ಅನೇಕ ಚಿತ್ರಗಳಿಗೆ ಸ್ಫೂರ್ತಿ ಆಗಿದೆ. ಹೀಗೇಕೆ ಎಂದು ಚಿಂತಿಸಿದಾಗ ನಾನು ಲೇಖನದ ಆರಂಭದಲ್ಲಿ ಹೇಳಿದ ಮಾತಿನ ಹಿಂದಿರುವ ಸತ್ಯ ವೇದ್ಯವಾಗುತ್ತದೆ.

Continue reading