ನೆನಪಿನ ಬುತ್ತಿಯನ್ನು ಬಿಚ್ಚುತ್ತಾ ನೆರಳು ಕೊಟ್ಟವರನ್ನು ಮರೆತದ್ದು…

(ಮಾರ್‍ಚಿ ತಿಂಗಳ `ಟಿವಿಠೀವಿ’ ಪತ್ರಿಕೆಗಾಗಿ ಬರೆದ ಲೇಖನ)

ಈಚೆಗೆ ಸಿನಿಮಾಗೆ ಎಪ್ಪತ್ತೈದು ಎಂಬ ಸಂಭ್ರಮವನ್ನು ಆಚರಿಸಲಾಯಿತು. ಇದು ಸಂತಸದ ವಿಷಯ. ಉದ್ಯಮವೊಂದು ತನ್ನ ಎಪ್ಪತ್ತೈದನೇ ವಸಂತವನ್ನ ಜನಸಾಗರದ ಎದುರಿಗೆ ಪ್ರದರ್ಶಿಸುವುದರಿಂದ ಎರಡು ರೀತಿಯ ಲಾಭವಿದೆ. ಒಂದು – ಸಿನಿಮಾ ಮಂದಿರಕ್ಕೆ ಹೋಗುವುದನ್ನೇ ಕಡಿಮೆ ಮಾಡಿರುವ ಜನರು ಮರಳಿ ಸಿನಿಮಾದ ಕಡೆಗೆ ಗಮನ ಹರಿಸಬಹುದು. ಎರಡು – ಕಳೆದ ಎಪ್ಪತ್ತೈದು ವರ್ಷಗಳ ಇತಿಹಾಸವನ್ನು ನೆನೆಯುತ್ತಾ, ಆತ್ಮವಲೋಕನ ಮಾಡಿಕೊಳ್ಳುವುದು. ಆ ಮೂಲಕ ಉದ್ಯಮದ ಭವಿಷ್ಯವನ್ನು ಕುರಿತು ಚಿಂತಿಸುವುದು.

ಕನ್ನಡ ಚಲನಚಿತ್ರರಂಗದ ಎಲ್ಲಾ ವಲಯಗಳ ಮುಂಚೂಣಿಯಲ್ಲಿರುವ ಸಂಸ್ಥೆಯಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೇ ಆಯೋಜಿಸಿದ್ದ ಈ `ಅಮೃತೋತ್ಸವ’ದಲ್ಲಿ ಇಂತಹ ಕೆಲಸ ಆಗಲಿಲ್ಲ. ಮನರಂಜನಾ ಕಾರ್‍ಯಕ್ರಮವೇ ಪ್ರಧಾನ ಎಂದು ಪ್ರಚಾರ ಮಾಡಿ ಲಕ್ಷಾಂತರ ಜನ ಸೇರಿಸಲು ಸಾಧ್ಯವಾಯಿತಾದರೂ, ಅಲ್ಲಿ ಆದ ಮನರಂಜನೆಯೂ ಸಹ ನೋಡುವಂತಹುದಾಗಿರಲಿಲ್ಲ. ಇಡೀ ಕಾರ್‍ಯಕ್ರಮದಲ್ಲಿ ಕಾಣುತ್ತಾ ಇದ್ದದ್ದು ಅರಾಜಕತೆ. ಬಿಡಿ. ಅನೇಕ ನಾಯಕರು ಇರುವಲ್ಲಿ ಇಂತಹ ಸಮಸ್ಯೆಗಳಾಗುವುದು ಸಾಮಾನ್ಯ. ಆದರೆ ಮಾರನೆಯ ದಿನ ನಡೆದ ಸನ್ಮಾನದ ಕಾರ್‍ಯಕ್ರಮವಾಗಲಿ, ಮೂರನೆಯ ದಿನ ನಡೆದ ವಿಚಾರ ಸಂಕಿರಣವಾಗಲಿ ಪ್ರಬುದ್ಧವಾಗಿರಲಿಲ್ಲ ಎಂಬುದನ್ನು ಮಾಧ್ಯಮಗಳು ಸಹ ಗುರುತಿಸಿವೆ. ಇಂತಹದೊಂದು ಕಾರ್‍ಯಕ್ರಮವನ್ನು ವಿಮರ್ಶಿಸುವುದು ನನ್ನ ಉದ್ದಿಶ್ಯವಲ್ಲ. ಆದರೆ ಇಂತಹ ಕಾರ್‍ಯಕ್ರಮವೊಂದನ್ನು ಮಾಡುವ ಸಂಸ್ಥೆಯು ಚಲನಚಿತ್ರ ಉದ್ದಿಮೆಯನ್ನು ಪೋಷಿಸುತ್ತಿರುವ ಟೆಲಿವಿಷನ್ ಉದ್ಯಮವನ್ನ ಸಂಪೂರ್ಣವಾಗಿ ಮರೆತದ್ದನ್ನ ಕುರಿತು ನಾವು ಗಮನಿಸಬೇಕಾಗಿದೆ.

ಟೆಲಿವಿಷನ್ ಉದ್ಯಮಕ್ಕೆ ಇಪ್ಪತ್ತೈದು ವರ್ಷವಾಯಿತೆಂದು ನಾವು ಕಳೆದ ವರ್ಷದಿಂದ ಈ ವರ್ಷದ ವರೆಗೆ ಅನೇಕ ಕಾರ್‍ಯಕ್ರಮಗಳನ್ನು ನಮ್ಮ ಸಂಘಟನೆಯಿಂದಲೇ ಮಾಡುತ್ತಾ ಬಂದಿದ್ದೇವೆ. ಬಾಗಲಕೋಟೆ ಮತ್ತು ಬಳ್ಳಾರಿಯಲ್ಲಿ ಆದ ಕಾರ್‍ಯಕ್ರಮಗಳಂತೂ ಅಭೂತಪೂರ್‍ವ ಎಂಬಂತಿತ್ತು. ಇವೆಲ್ಲಾ ವಿವರಗಳೂ ಮಾಧ್ಯಮಗಳಲ್ಲಿ ಬಂದಿದೆ. ಅಲ್ಲದೆ ಈ ಟೆಲಿವಿಷನ್ ಉದ್ಯಮವು ತನ್ನ ಆರಂಭದ ದಿನಗಳಿಂದ ಇಂದಿನವರೆಗೆ ಚಲನಚಿತ್ರೋದ್ಯಮಕ್ಕೆ ಆಮ್ಲಜನಕ ಎಂಬಂತೆ ಕೆಲಸ ಮಾಡುತ್ತಾ ಬಂದಿದೆ. ತಯಾರಾದ ಚಲನಚಿತ್ರ ಕುರಿತು ಸುದ್ದಿ ನೀಡುವುದೇ ಇರಲಿ, ಸಿದ್ಧ ಚಲನಚಿತ್ರ ಕುರಿತ ಜಾಹೀರಾತು ಪ್ರದರ್ಶನವಿರಲಿ, ಅವುಗಳ ಹಾಡುಗಳನ್ನ ಪ್ರಸಾರ ಮಾಡುವ ಮೂಲಕ ಹೊಸ ಚಿತ್ರಗಳನ್ನು ಜನ ನೋಡಲು ಟೆಲಿವಿಷನ್ ಪ್ರೇರೇಪಿಸಿದೆ. ಅಲ್ಲದೆ, ಅನೇಕ ಹಳೆಯ ಚಿತ್ರಗಳನ್ನು ಪ್ರಸಾರ ಮಾಡುತ್ತಾ ನಮ್ಮಲ್ಲಿ ಆಗಿಹೋದ ಅನೇಕ ಕಲಾವಿದರು, ತಂತ್ರಜ್ಞರನ್ನು ಟೆಲಿವಿಷನ್ ಜನಮಾನಸದಲ್ಲಿ ಸದಾಕಾಲ ಇರುವಂತೆ ಮಾಡಿದೆ. ಅಲ್ಲದೆ ಚಲನಚಿತ್ರ ಉದ್ದಿಮೆಯವರು ನಡೆಸಿದ ಕಾರ್‍ಯಕ್ರಮಕ್ಕೆ ಪ್ರಧಾನ ಆರ್ಥಿಕ ಬೆಂಬಲವನ್ನ ಪ್ರಾಯೋಜಕರಾಗೊ ಒದಗಿಸಿದವರು ಸಹ ಟೆಲಿವಿಷನ್ನಿನವರೇ. ಆದರೂ ಮೂರು ದಿನ ನಡೆದ ಅಮೃತೋತ್ಸವದಲ್ಲಿ ಯಾರೊಬ್ಬರ ಬಾಯಲ್ಲೂ ಅಪ್ಪಿತಪ್ಪಿಯೂ ಟೆಲಿವಿಷನ್ ಉದ್ದಿಮೆಯಿಂದ ಚಲನಚಿತ್ರ ರಂಗಕ್ಕೆ ಆದ ಲಾಭ, ಅನುಕೂಲಗಳು ಪ್ರಸ್ತಾಪವಾಗಲಿಲ್ಲ.

Continue reading