ಟೆಲಿವಿಷನ್ ಎಂಬ ದೈತ್ಯನು ಮತ್ತು ರಂಗಭೂಮಿ ಎಂಬ ಚಿರಂಜೀವನು

(ಶಶಿಕಲಾವಿದರು ಸಂಸ್ಥೆಯ ಸುವರ್ಣ ಸಂಭ್ರಮದಲ್ಲಿ ಹೊರತಂದ ಸ್ಮರಣ ಸಂಚಿಕೆಗೆ ಬರೆದ ಲೇಖನ)

ಹೀಗೊಂದು ಮಾತಿದೆ ಮತ್ತು ನಾವದನ್ನು ಆಗಾಗ ಕೇಳುತ್ತಲೇ ಇದ್ದೇವೆ. `ಟೆಲಿವಿಷನ್ನಿನಿಂದ ಹವ್ಯಾಸೀ ರಂಗಭೂಮಿ ಸಾಯುತ್ತಿದೆ’ ಎಂಬುದು ಆ ಮಾತು. ಅದು ನಮ್ಮ ಹಿರಿಯ ರಂಗಕರ್ಮಿಗಳ/ ರಂಗವಿಮರ್ಶಕರ ಬಾಯಲ್ಲಿ ಕ್ಲೀಷೆ ಎಂದೆನಿಸುವಷ್ಟು ಬಾರಿ ಸುಳಿಯುತ್ತಿರುತ್ತದೆ. ಆದರೆ ಈ ಮಾತು ಹಸೀಸುಳ್ಳು. ಯಾವುದೋ ಒಂದು ಮಾಧ್ಯಮದಿಂದ ಮತ್ತೊಂದು ಮಾಧ್ಯಮ ಸಾಯುವುದು ಅಸಾಧ್ಯ. ಅದರಲ್ಲಿಯೂ ರಂಗಭೂಮಿಯಂತಹ ಮಾಧ್ಯಮವು ಎಂದಿಗೂ ಸಾಯಲಾರದು. ಅದು ಚಿರಂಜೀವ.

ಹಾಗಾದರೆ ಇಷ್ಟೊಂದು ಜನ ಅದೇಮಾತನ್ನ ಪದೇಪದೆ ಹೇಳುವುದರ ಹಿಂದಿರುವ ತಥ್ಯವಾದರೂ ಏನು ಎಂದು ಪರಿಶೀಲಿಸುವ ಪ್ರಯತ್ನ ಈ ಲೇಖನದ್ದು. ಮೊದಲಿಗೆ ನಮ್ಮ ಹವ್ಯಾಸೀ ರಂಗಭೂಮಿಯ, ವಿಶೇಷವಾಗಿ ಬೆಂಗಳೂರಿನ ಹವ್ಯಾಸೀ ರಂಗಚಳುವಳಿಯ ರೂಪವನ್ನು ಗಮನಿಸೋಣ. “ನಮ್ಮ ಹವ್ಯಾಸಿ ಕಲಾವಿದರು ಯಾವುದೋ ವೃತ್ತಿ ಮಾಡುತ್ತಾ ಬಿಡುವಿನ ವೇಳೆಯಲ್ಲಿ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುತ್ತಾ ಇದ್ದವರು. ಅವರಿಗೆ ರಂಗಭೂಮಿಯನ್ನು ಕುರಿತು ಪ್ರೀತಿ ಇದೆಯಾದರೂ ಅದು `ಬಿಡುವಿನ ವೇಳೆಯಲ್ಲಿ ರಂಗಭೂಮಿ’ ಎಂಬ ದೃಷ್ಟಿಕೋನ. ಹೀಗಾಗಿ ನಮ್ಮ ರಂಗಪ್ರಯೋಗಗಳಲ್ಲಿ ವೃತ್ತಿಪರತೆ ಎಂಬುದು ಬಹುಮಟ್ಟಿಗೆ ಇಲ್ಲ. ಆ ಕೊರತೆಯಿಂದಾಗಿ ನಮ್ಮಲ್ಲಿ ಅತ್ಯುತ್ತಮ ಪ್ರಯೋಗಗಳಾದರೂ ಅವು `ಪ್ರದರ್ಶನ’ದ ಲಾಭ ಅಥವಾ ಸಾತತ್ಯವನ್ನು ಪಡೆಯುವುದಿಲ್ಲ” ಎಂಬುದು ರಾಷ್ಟ್ರೀಯನಾಟಕಶಾಲೆಯ ಪದವಿ ಪಡೆದ ರಂಗನಿರ್ದೇಶಕರೊಬ್ಬರ ಅಭಿಪ್ರಾಯ. ಅದು ಬಹುಮಟ್ಟಿಗೆ ಸತ್ಯವೂ ಹೌದು. ಇದರಿಂದಾಗಿ ನಾಟಕಶಾಲೆಗಳ ಪದವಿ ಪಡೆದು ರಂಗಭೂಮಿಗೆ ಬಂದ ಹಲವು ವೃತ್ತಿಪರ ಧೋರಣೆಯ ನಿರ್ದೇಶಕರಿಗೆ ತಾವು ಸಿದ್ಧಪಡಿಸಿದ ಪ್ರಯೋಗ ಕುರಿತಂತೆ `ಪೂರ್ಣ ತೃಪ್ತಿ’ ಸಿಗುತ್ತಿರಲಿಲ್ಲ. ಈಗಲೂ ಅದು ಸಿಗುತ್ತಿಲ್ಲ ಎಂದು ಅನೇಕ ನಿರ್ದೇಶಕ ಮಿತ್ರರು ಹೇಳುತ್ತಾರೆ. ಇಲ್ಲಿ `ಪೂರ್ಣತೃಪ್ತಿ’ ಎಂದರೆ ಏನೆಂಬ ಪ್ರಶ್ನೆ ಉದ್ಭವಿಸುತ್ತದೆ. ಅದು ದಿ.ಬಿ.ವಿ.ಕಾರಂತರು ಹೇಳುತ್ತಿದ್ದ `ಆನಂದ’ದ ಸ್ಥಿತಿ. ಅಂದರೆ ಒಂದು ಪೂರ್ಣಾನುಭವವನ್ನು ಪ್ರೇಕ್ಷಕನಿಗೂ ಅನುಭವ ವೇದ್ಯವಾಗಿಸುವ ಸ್ಥಿತಿ. ಇದು ನಮ್ಮ ಧ್ಯಾನದಲ್ಲಿ ಹೇಳುವ ಸಹಸ್ರಾರ ತಲುಪಿದ ಸ್ಥಿತಿ ಎಂದರೆ ತಪ್ಪಾಗಲಾರದು. ಅಂತಹದೊಂದು ಸ್ಥಿತಿ ತಲುಪುವುದಕ್ಕೆ ಬೇಕಾದ್ದು ಕೇವಲ ವೃತ್ತಿಪರತೆಯಲ್ಲ, ತಾದಾತ್ಮ್ಯ! ಅದು ನಮ್ಮ ಆಧುನಿಕ ನಗರ ಜೀವನದಲ್ಲಿ ಕಷ್ಟಸಾಧ್ಯವಾದ್ದು. ಹೀಗಿರುವಾಗ ನಮ್ಮ ರಂಗಪ್ರದರ್ಶನಗಳಿಂದ ಅಂತಹದೊಂದು `ಆನಂದ’ವನ್ನ ನಿರ್ದೇಶಕರು ಹುಡುಕುವುದೇ ತಪ್ಪು ಎಂದು ನನ್ನ ಭಾವನೆ. ಅದು ಪ್ರತ್ಯೇಕ ವಿಸ್ತೃತಚರ್ಚೆಯನ್ನು ಬೇಡುವ ವಿಷಯ. ಈ ಲೇಖನದಲ್ಲಿ ಆ ಚರ್ಚೆ ಬೇಡ. ಆದರೆ ಇದರಿಂದ ನಮ್ಮ ಹವ್ಯಾಸೀ ರಂಗಭೂಮಿಗೆ ಆದುದೇನು ಮತ್ತು ಅದರಿಂದಾಗಿ ನಮ್ಮ ಹವ್ಯಾಸೀ ರಂಗಭೂಮಿ ಸಾಯುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಆಗಿರುವ ವಿವರಗಳನ್ನು ಗಮನಿಸಿದರೆ ಕಾಣಿಸುವುದಿಷ್ಟು.

Continue reading

ಜನಪ್ರಿಯತೆಯ ಬೆನ್ನನೇರಿ `ಸಾವಿ’ರದ ಕನಸುಗಳ ದಾರಿ

(`ಪಾ.ಪ.ಪಾಂಡು’ ಧಾರಾವಾಹಿಯು ಸಾವಿರ ಪ್ರಕರಣದ ಸಂದರ್ಭದಲ್ಲಿ ಹೊರತಂದ ಸ್ಮರಣಿಕೆಗೆ ಬರೆದ ಲೇಖನ)

ನಮ್ಮ ಉದ್ಯಮವೇ ಹಾಗೆ. ಇಲ್ಲಿ ತರ್ಕಕ್ಕೆ ಸಿಗದೆ ಇರುವುದು ಒಂದೇ. ಅದು ಜನಪ್ರಿಯತೆ. ಅದು ಯಾವ ಸಿನಿಮಾನೋ, ಧಾರಾವಾಹಿಯೋ? ಅದು ಯಾಕೆ ಜನಪ್ರಿಯವಾಯಿತು ಎನ್ನುವುದು ತಿಳಿಯುವುದಿಲ್ಲ. ಯಶಸ್ಸಿನ ಮೆಟ್ಟಿಲಿಗೆ ಹತ್ತು ಸೂತ್ರಗಳು ಎಂದು ಡೇಲ್ ಕಾರ್ನಗಿಯ ಹಾಗೆ ಪುಸ್ತಕ ಬರೆಯುವಂತೆ, ನಮ್ಮ ತಯಾರಿಕೆಗಳೆಲ್ಲಾ ಯಶಸ್ವಿಯಾಗುವುದಕ್ಕೆ ಕಾರ್ಯಕಾರಣ ಸಂಬಂಧ ದೊರೆಯುವುದಿಲ್ಲ. ಅದಕ್ಕೆಂದೇ ಹಲವಾರು ಈ ಉದ್ಯಮದೊಳಗಿನ ಬದುಕನ್ನು ದೊಡ್ಡ ಜೂಜು ಎನ್ನುತ್ತಾರೆ, ಮತ್ತೆ ಕೆಲವರು ದೊಡ್ಡ ಹಳವಂಡ ಅನ್ನುತ್ತಾರೆ. ಒಟ್ಟಾರೆ ಇದೊಂದು ಓಟ! ಓಡಿದವನಿಗೆ ಅನುಭವವೇ ಲಾಭ! 

ಸಿನಿಮಾದ ಮಾತು ಬಿಡಿ. ಅದು ಕನಸು ಮಾರುವವರ ಸಂತೆ. ಆದರೆ ಕಿರುತೆರೆ ಇದೆಯಲ್ಲಾ, ಇದು ನಿಜಕ್ಕೂ ಸೋಲು-ಗೆಲುವುಗಳ ಉಭಯವನರಿಯದ ಸ್ಥಿತಿ. ಯಾಕೆಂದರೆ, ಇಲ್ಲಿರುವ ಜನಪ್ರಿಯತೆಯ ಮಾನದಂಡ ಟಿ.ಆರ್.ಪಿ. ಅಥವಾ ಟಿವಿ ರೇಟಿಂಗ್ಸ್ ಎಂದು ಕರೆಸಿಕೊಳ್ಳುವ ಒಂದು ಸಂಪೂರ್ಣ ಅವೈಜ್ಞಾನಿಕ ಪದ್ಧತಿ. ಈ ಪದ್ಧತಿಯನ್ನ ಸ್ಟಾಟಿಸ್ಟಿಕ್ಸ್ ಪಂಡಿತರು ಸ್ಯಾಂಪಲ್ ರೇಟಿಂಗ್ ಎಂದು ಗುರುತಿಸುತ್ತಾರೆ. ಆದರೆ ಆ ಸ್ಯಾಂಪಲ್ ತೆಗೆದುಕೊಳ್ಳುವುದಕ್ಕೆ ಶೇಕಡ ಇಂತಿಷ್ಟು ಎಂಬ ನಿಗದಿಯಿಲ್ಲ. ಅದೊಂದು ಬಗೆಯ ಚುನಾವಣಾ ಫಲಿತಾಂಶಕ್ಕೆ ಮುನ್ನ ಪತ್ರಿಕೆಗಳವರು ನಡೆಸುವ ಸರ್ವೇ ಹಾಗೆ. ನೂರು ಜನರ ಅಭಿಪ್ರಾಯ ಆಧರಿಸಿ ಕೋಟ್ಯಾಂತರ ಜನರ ಮನಸ್ಥಿತಿಯನ್ನು ಕುರಿತು ಮಾತಾಡುವಂತಹದು. ಇಂತಹ ಎಕ್ಸಿಟ್ ಪೋಲ್‌ನ ಫಲಿತಾಂಶಗಳು ನಿಯತಕಾಲಿಕೆಗಳ ಮುಖಪುಟದಲ್ಲಿ ರಾರಾಜಿಸುತ್ತವೆ. ಅದರ ಪರಿಣಾಮವಾಗಿ ರಾಜಕೀಯ ವಲಯದಲ್ಲಿ ಕುದುರೆ ವ್ಯಾಪಾರದ ಸಿದ್ಧತೆಗಳೂ ಆಗಿಬಿಡುತ್ತವೆ. ಆದರೆ ಫಲಿತಾಂಶ ಸಂಪೂರ್ಣ ಉಲ್ಟಾ ಆಗಿರಬಹುದು. ಅಲ್ಲಿ ಎಕ್ಸಿಟ್ ಪೋಲ್‌ನ ಪರಿಣಾಮ ವಾಸ್ತವದ ಮೇಲೆ ಆಗದು. ಆದರೆ ನಮ್ಮ ಟೆಲಿವಿಷನ್ ಉದ್ಯಮದಲ್ಲಿ ಹಾಗಲ್ಲ. ಎಕ್ಸಿಟ್ ಪೋಲ್ ರೀತಿಯ ಸ್ಯಾಂಪಲ್ ರೇಟಿಂಗೇ ಅಂತಿಮ. ಆ ರೇಟಿಂಗ್‌ನಲ್ಲಿ ನಾವು ನೇಯ್ದ ಕನಸು ಕಾಣಿಸಿಕೊಳ್ಳದಿದ್ದರೆ ನೇಯ್ಗೆಗೆ ಪೂರ್ಣವಿರಾಮ.

Continue reading

ಸದಭಿರುಚಿಯ ಚಲನಚಿತ್ರ ಮಾರುಕಟ್ಟೆ – ಗುಲ್ಬರ್ಗಾ ಫಿಲ್ಮ್ ಕ್ಲಬ್ನ ಪ್ರಯತ್ನ

ಚಲನಚಿತ್ರಕ್ಕೆ ನೂರಾಹತ್ತುವರ್ಷಗಳ ಇತಿಹಾಸವಿದೆ. ಆದರೆ ಸದಭಿರುಚಿಯ ಚಿಂತನೆಗೆ ಇರುವುದು ಸಾವಿರಾರು ವರುಷಗಳ ಇತಿಹಾಸ. ಮನುಷ್ಯನಿಗೆ ನಾಗರೀಕತೆ ಎಂಬುದನ್ನು ಒದಗಿಸಿಕೊಟ್ಟದ್ದೆ ಸಾಮಾಜಿಕ ಎಚ್ಚರವುಳ್ಳ ಸದಭಿರುಚಿಯ ಚಿಂತಕರು. ಹೀಗಾಗಿ ಸದಭಿರುಚಿ ಎಂಬುದು ಮಾನವ ಇತಿಹಾಸದ ಜೊತೆಗೇ ತಳುಕು ಹಾಕಿಕೊಂಡಂತಹ ಸುದೀರ್ಘ ಸತ್ಯ. ಕಾಲದಿಂದ ಕಾಲಕ್ಕೆ ಈ ಸದಭಿರುಚಿಯ ಚಿಂತನೆಯಲ್ಲಿ ಪಲ್ಲಟಗಳಾಗಿವೆ. ಅದು ಅತ್ಯಂತ ಸಹಜ. ಏಕೆಂದರೆ, ಯಾವುದನ್ನು ಬುದ್ಧಿವಂತರು ಒಂದು ಸೂತ್ರವಾಗಿ ಸೂಚಿಸುತ್ತಾರೋ ಅದು ಕಾಲಾನುಕ್ರಮದಲ್ಲಿ ವ್ಯಾಪಾರಿಗಳ ಕೈಗೆ ಸಿಕ್ಕು ಜನಪ್ರಿಯತೆಯ ಹಣೆಪಟ್ಟಿಯನ್ನು ಪಡೆದುಕೊಂಡು ಬಿಡುತ್ತದೆ. ಇದನ್ನು ನಾವು ನೋಡುತ್ತಲೇ ಬಂದಿದ್ದೇವೆ. ಒಂದೊಮ್ಮೆ ಹೊಸಅಲೆಯ ಚಿತ್ರ ತಯಾರಕರು ಮಾಡಿದ ವಾಸ್ತವವಾದಿ ಪ್ರಯೋಗಗಳು (ನಿಹಲಾನಿ ಅವರ `ಅರ್ಧಸತ್ಯ’, `ಆಕ್ರೋಶ್’ ಶ್ಯಾಮ್ ಬೆನಗಲ್ ಅವರ `ಅಂಕುರ್’, `ಮಂಥನ್’) ನಂತರದ ದಿನಗಳಲ್ಲಿ ಪ್ರಧಾನವಾಹಿನಿಯ ಚಿತ್ರರಂಗದ ಪ್ರಧಾನ ಅಸ್ತ್ರವಾದುದನ್ನು (ರಾಮಗೋಪಲ್ ವರ್ಮ ಅವರ ಎಲ್ಲಾ ಚಿತ್ರಗಳು) ನಾವೆಲ್ಲರೂ ನೋಡಿದ್ದೇವೆ. (ಇದು ಕನ್ನಡದ ಸಂದರ್ಭದಲ್ಲಿಯೂ ಆಗಿದೆ. ಸದಭಿರುಚಿಯ ಸಿನೆಮಾಗಳ ಪ್ರಭಾವದಿಂದಲೇ ಸುನೀಲ್ಕುಮಾರ್ ದೇಸಾಯ್ ಮತ್ತು ಕಾಶೀನಾಥ್ರಂತಹ ಚಿತ್ರನಿರ್ದೇಶಕರು ಪ್ರಧಾನ ವಾಹಿನಿಯಲ್ಲಿ ಗುರುತಿಸಿಕೊಂಡದ್ದನ್ನ ಗಮನಿಸಬಹುದು.) ಹಾಗೇ ನೋಡಿದರೆ ನಮ್ಮ ಪ್ರಧಾನವಾಹಿನಿ ಚಿತ್ರರಂಗದಲ್ಲಿ ಇದ್ದಂತಹ ಅತಿರೇಕಿತ ವಾಸ್ತವವಾದಿ ನಿರೂಪಣೆಯನ್ನ (ಇದನ್ನು ಡ್ರಾಮ್ಯಾಟಿಕ್ ಎನ್ನಬಹುದು. ಏಕೆಂದರೆ ಆರಂಭಕಾಲದ ಟಾಕಿ ಚಿತ್ರಗಳು ಬಳಸಿಕೊಂಡದ್ದು ಆಗ ಪ್ರಚಲಿತವು, ಪ್ರಖ್ಯಾತವು ಆಗಿದ್ದ ಕಂಪೆನಿ ಥಿಯೇಟರ್ಗಳ ನಿರೂಪಣಾ ಕ್ರಮವನ್ನ. ವಿವರಗಳಿಗೆ ಇದೇ ಲೇಖಕರ `ಬೆಳ್ಳಿಅಂಕ’ ದ ಸಂಕಲನ ಕಲೆ ಲೇಖನವನ್ನು ಗಮನಿಸಬಹುದು.) ಇದನ್ನು ಸಹಜ ವಾಸ್ತವದ ಕಡೆಗೆ ತಿರುಗುವಂತೆ ಮಾಡಿದ್ದು ಸದಭಿರುಚಿಯ ಚಿತ್ರ ಚಿಂತಕರು. (ಎನ್.ಲಕ್ಷ್ಮೀನಾರಾಯಣ್ ಅವರ `ಉಯ್ಯಾಲೆ’, `ನಾಂದಿ’ ಮತ್ತು ಎಂ.ಆರ್.ವಿಠಲ್ ಅವರ `ಮಿಸ್.ಲೀಲಾವತಿ’ಯಂತಹ ಚಿತ್ರಗಳ ಪ್ರಭಾವ ನೇರವಾಗಿ ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳ ಮೇಲೆ ಆಗಿರುವುದನ್ನ ಚಿತ್ರದ ನಿರೂಪಣಾ ಶೈಲಿಯ ದೃಷ್ಟಿಯಿಂದ `ಬೆಳ್ಳಿಮೋಡ’, `ಗೆಜ್ಜೆಪೂಜೆ’ಯಲ್ಲಿ ಗಮನಿಸಬಹುದು.) ಈ ದೃಷ್ಟಿಕೋನದಿಂದ ಗಮನಿಸುವುದಾದರೆ ಸದಭಿರುಚಿ ಎಂಬುದು ಕಾಲದಿಂದ ಕಾಲಕ್ಕೆ ತನ್ನ ಆಕಾರ-ಸ್ವರೂಪ-ವಿನ್ಯಾಸವನ್ನ ಬದಲಿಸಿಕೊಳ್ಳುತ್ತ ಮತ್ತು ತನ್ನದನ್ನ ಇತರರಿಗೆ ಹಂಚುತ್ತಾ ಸಾಗಿ ಬಂದಿದೆ. ಇದನ್ನ ನಾನು `ಅಂಗಿ ಬದಲಿಸುವ ಪ್ರಕ್ರಿಯೆ’ ಎನ್ನುತ್ತೇನೆ. ಇದು ಜನಪ್ರಿಯ ಮೌಲ್ಯಗಳ ವಿರುದ್ಧ ಸದಾ ಈಸುವಂತಹ-ಜೀವಿಸುವಂತಹ ಎಚ್ಚರದ ಗಂಟೆ! ಇದರಿಂದಾಗಿಯೇ ಸದಭಿರುಚಿ ಎಂಬುದು ಎಲ್ಲಾ ಕಾಲದಲ್ಲೂ ಪ್ರಧಾನವಾಹಿನಿಯಿಂದ `ಹೊರಗೆ’ ನಿಂತು ಹೊಸದನ್ನು ಹುಡುಕುವ ಯತ್ನ ಮಾಡುತ್ತಿರುತ್ತದೆ. (ಈ ನನ್ನ ಲೇಖನದ ಉದ್ದಕ್ಕೂ ನಾನು ಈ `ಅಂಗಿ ಬದಲಿಸುವ’ ಮತ್ತು `ಹೊರಗೆ’ ಉಳಿಯುವ ವಿವರಗಳನ್ನು ಆಗಾಗ ಹೇಳುತ್ತೇನೆ.)

Continue reading

ಜಾಗತೀಕರಣ ಮತ್ತು ಸಮಕಾಲೀನ ದೃಶ್ಯ ಮಾಧ್ಯಮಗಳು

ಆತ ಮೆಗಾ ಧಾರಾವಾಹಿಗಳ ಬರಹಗಾರ. ಆತ ಪ್ರತಿದಿನ ಬೆಳಿಗ್ಗೆ ಐದು ಗಂಟೆಗೆ ಏಳುತ್ತಾನೆ. ಬರೆಯಲು ಕೂಡುತ್ತಾನೆ. ರಾತ್ರಿಯ ಹತ್ತರ ಒಳU, ಅದು ಹೇಗಾದರೂ ಸರಿ, ಇಪ್ಪತ್ತೈದು ನಿಮಿಷಗಳ ಅವಧಿಗೆ ಬರುವಷ್ಟು ಚಿತ್ರಕತೆ-ಸಂಭಾಷಣೆ ಬರೆಯುತ್ತಾನೆ. (ಬರೆಯುತ್ತಾನೆ ಎಂಬುದು ತೀರಾ ಸರಳ ಪದ. ನಿಜ ಹೇಳಬೇಕೆಂದರೆ ಆತ ಕಾರಿಕೊಳ್ಳುತ್ತಾನೆ. ಅದೇ ಉದ್ಯಮದವನಾಗಿ ನಾನು ವಿಶ್ವಾಸದಿಂದ ಈ ಮಾತನ್ನು ಹೇಳಬಹುದು.) ಅವನು ಬರೆದದ್ದು ತೆರೆಯ ಮೇಲೆ ಚಿತ್ರಿತವಾಗಿ ಮೂಡಿಬಂದ ಬಗೆಯೇನು ಎಂಬುದು ಅವನಿಗೆ ತಿಳಿಯದು. ಏಕೆಂದರೆ ಆತನಿಗೆ ತಾನೇ ಬರೆದುದು ಪ್ರಸಾರವಾಗುವ ಅವಧಿಯಲ್ಲಿ ಮತ್ತೊಂದು ಡೆಡ್‌ಲೈನ್ ಒಳಗೆ ಕೆಲಸ ಮುಗಿಸುವ ತರಾತುರಿ ಇರುತ್ತದೆ. ತಾನು ಬರೆದುದರ ಬಣ್ಣ ತೆರೆಯ ಮೇಲೆ ಹೇಗೆ ಬಂತು ಎಂದು ನೋಡುವುದಕ್ಕೆ ಅವನಿಗೆ ಪುರಸೊತ್ತಿಲ್ಲ. ಆತ `ಅಂತೂ ಒಂದು ದಿನದ ಕೆಲಸ ಮುಗಿಯಿತು!’ ಎಂದೆನ್ನುವಷ್ಟರಲ್ಲಿ ಮಾರನೆಯ ದಿನದ ಕೆಲಸದ ಒತ್ತಡ ಅವನೆದುರಿಗೆ ಇರುತ್ತದೆ. ಹೀಗೇ ತಿಂಗಳಲ್ಲಿ ಇಪ್ಪತ್ತು ದಿನ ದುಡಿದು, ಉಳಿದ ಹತ್ತು ದಿನಗಳಲ್ಲಿ ಅದೇ ಧಾರಾವಾಹಿಯ ಮುಂಬರುವ ಕಥೆಯನ್ನು ಕುರಿತು ಚರ್ಚಿಸಿ ಬರೆಯುವುದರಲ್ಲಿ ತೊಡಗಿಕೊಳ್ಳುವ ಆತನಿಗೆ ಅವನದು ಎಂಬ ಸಮಯವೇ ಇಲ್ಲ. ಅವನ ಮನೆ-ಮಂದಿಗೆ ಅವನು ತಿಂಗಳಿಗೊಮ್ಮೆ ತಂದು ಸುರಿಯುವ ಹಣದ ಮೊತ್ತವಷ್ಟೇ ಮುಖ್ಯ. ಅವನಿಂದ ಆದ ಕೆಲಸದ ಮೌಲ್ಯಮಾಪನ ಆಗುವುದೇ ಇಲ್ಲ. ಅವನಿಗೂ ಅದು ಬೇಕಿಲ್ಲ. `ತಾನು ಬರೆಯಬಲ್ಲೆ’ ಎಂಬ ಏಕೈಕ ಶಕ್ತಿಯ ಜೊತೆಗೆ ಆತ ಪೆನ್ನು ಹಿಡಿದು ಕೂರುತ್ತಾನೆ. ಜಗತ್ತಿನಲ್ಲಿ ಆಗುತ್ತಿರುವುದು ಅದೇನೇ ಆಗಿರಲಿ, ಅವನ ಪೆನ್ನಿನಲ್ಲಿ ಮೂಡುವ ಎಲ್ಲ ವಿವರಗಳೂ ಶ್ರೀಮಂತ ಜನಸಮುದಾಯಗಳ ಮನೆಯ ಮಲಗುವ ಕೋಣೆಯಲ್ಲಿ ಆಗುವಂತಹದು. ಅಲ್ಲಿನ ಗಂಡಸು ತನ್ನ ಮನೆಯವರ ಕಣ್ಣುತಪ್ಪಿಸಿ ಇನ್ನಾವುದೋ ಹೆಣ್ಣಿನ ಜೊತೆಗೆ ಇರುತ್ತಾನೆ. ತನಗೆ ಮನೆಯಲ್ಲಿ ನೆಮ್ಮದಿಯಿಲ್ಲ ಎನ್ನುತ್ತಲೇ ತಾನು ಮಾಡುವ ಅನೈತಿಕ ಸಂಬಂಧವನ್ನ ಆ ಗಂಡಸು ಸಾಧನೆ ಎಂಬಂತೆ ಹೇಳಿಕೊಳ್ಳುತ್ತಾನೆ. ಇಂತಹ ಪಾತ್ರ ಸೃಷ್ಟಿಸಿದಾತನಿಗೆ ತಾನು ಯಾರಿಗಾಗಿ ಕಥೆ ಹೇಳುತ್ತಿದ್ದೇನೆ ಎಂಬ ಕಿಂಚಿತ್ ಕಾಳಜಿಯೂ ಇರುವುದಿಲ್ಲ. ಅವನು ಓತಪ್ರೋತವಾಗಿ ಬರೆಯುತ್ತಲೇ ಇರುತ್ತಾನೆ. ಅವನ ಮುಖದಲ್ಲಿ ಅವನಿಗೇ ಅರಿವಿಲ್ಲದಂತೆ ಪ್ರೇತಕಳೆಯೊಂದು ಇಳಿಯತೊಡಗುತ್ತದೆ. ಹೀಗೇ ನಮ್ಮ ನಡುವಿನ ಸೃಜನಶೀಲ ಲೇಖಕನೊಬ್ಬ ಸಾಯುತ್ತಾನೆ. ಇದೇ ಮಾತನ್ನು ಇದೇ ಟೆಲಿವಿಷನ್ ಉದ್ಯಮದ ನಿರ್ದೇಶಕರಿಗೆ, ಸಹನಿರ್ದೇಶಕರಿಗೆ, ಕಲಾವಿದರಿಗೆ, ಹಣ ಹೂಡುವ ನಿರ್ಮಾಪಕರಿಗೆ ಎಂದು ಆ ಪಿರಮಿಡ್ಡಿನ ಎಲ್ಲಾ ಹಂತಗಳಲ್ಲಿ ಇರುವ ಎಲ್ಲರಿಗೂ ಹೇಳಬಹುದು. ಅಲ್ಲಿ ಯಾರಿಗೂ ತಮ್ಮ ನೋಡುಗರ ಕಾಳಜಿಯಿಲ್ಲ. ಅವರಿಗೆ ಇರುವುದು ಕೇವಲ ತಿಂಗಳ ಅಂತ್ಯದಲ್ಲಿ ತನಗೆ ದೊರೆತದ್ದು ಏನು ಎಂಬ ಚಿಂತೆ. 

Continue reading

ಸದಭಿರುಚಿ- ಸಾಮಾಜಿಕ ಬದ್ಧತೆ ಮತ್ತು ಚಲನಚಿತ್ರ ತಯಾರಿಕೆ

ಹೀಗೊಂದು ಚಿಂತನೆಯ ಹುಳು ನನ್ನ ತಲೆ ಹೊಕ್ಕಿದ್ದಕ್ಕೆ ಕಾರಣಗಳಿದೆ. ಕೆಲದಿನಗಳ ಹಿಂದೆ ಸದಭಿರುಚಿಯ ಚಲನಚಿತ್ರಗಳ ತಯಾರಿಕೆಯನ್ನು ಕುರಿತು ಮಾತು ನಡೆಯುತ್ತಿತ್ತು, ಗೆಳೆಯರ ನಡುವೆ. ಆ ಗುಂಪಲ್ಲಿ ಒಂದಿಬ್ಬರು ಜನಪ್ರಿಯ ಚಿತ್ರ ತಯಾರಕರೂ ಇದ್ದರು. ಗುಂಪಿನ ನಡುವೆ ಹೀಗೆ ಬಹುಮುಖಿ ಚಿಂತಕರು ಇರುವುದೇ ನವ್ಯೋತ್ತರ ಸಮಾಜ ರಚನೆಯ ವೈಶಿಷ್ಟ್ಯ ಅಲ್ಲವೇ? ಇಲ್ಲಿ ಭರತನಾಟ್ಯ ಕಲಾವಿದರೊಬ್ಬರು ಓರಿಯೆಂಟಲ್ ದೇಶದ ಮೂಲದವರಾಗಿದ್ದು, ಹಾವ-ಭಾವಗಳು ಮಾತ್ರ ಸಾಂಪ್ರದಾಯಿಕ ಭರತನಾಟ್ಯದವಾಗಿದ್ದು, ಅವರ ಉಳಿದೆಲ್ಲಾ ವಿವರಗಳು ಜಗತ್ತಿನ ನಾನಾ ಮೂಲೆಗಳಿಂದ ಸಂಚಯಿತವಾದ ಪರಿಕರ-ಸಾಧನಗಳ ರಾಶಿಯಾಗಿರುತ್ತದೆಯಲ್ಲಾ! ಹಾಗೇ ಈ ನವ್ಯೋತ್ತರ ಸಮಾಜದ ಸಂರಚನೆಯಲ್ಲಿ, ಒಂದೇ ವೇದಿಕೆಯಲ್ಲಿ ತರಹೇವಾರಿ ಇಸಮ್ಮುಗಳು ಇರಬಹುದು. ಹಾಗಾಗಿಯೇ ಈ ಸಮಾಜದ ಕನವರಿಕೆಗಳು ಮತ್ತು ಕಳವಳಗಳು ಹಾಗೂ ಹೇವರಿಕೆಗಳು ವೈವಿಧ್ಯಮಯವಾಗಿರುತ್ತದೆ. ಅಂದಿನ ಆ ಸಭೆಯಲ್ಲಿಯೂ ಮಾತು ಹಲವು ಹತ್ತು ದಿಕ್ಕುಗಳಲ್ಲಿ ಹರಿದು, ಕಡೆಗೆ ಬಂದು ತಲುಪಿದ್ದು ಸದಭಿರುಚಿಯ ಚಿತ್ರಗಳನ್ನು ತಯಾರಿಸುವ ವಿವರಕ್ಕೆ.

Continue reading

ಮಲ್ಟಿಪ್ಲೆಕ್ಸ್ ಸಿನೆಮಾ ಮತ್ತು ಜನಮಾನಸ

ಸಿನಿಮಾ ಜಗತ್ತಿನಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡ ನನ್ನ ಗೆಳೆಯನೊಬ್ಬ ಈಚೆಗೆ ನನ್ನ ಬಳಿ ಬಂದು ಹೇಳಿದ. `ಗುರುವೇ, ನಾನೊಂದು ಕಮ್ಮಿ ಬಜೆಟ್ಟಿನ ಚಿತ್ರವನ್ನ ರಾಷ್ಟ್ರಭಾಷೆಯಲ್ಲಿ ತಯಾರಿಸಲು ಹೊರಟಿದ್ದೇನೆ. ಈ ಚಿತ್ರದಲ್ಲಿ ಇರುವುದು ಕಥೆಯಲ್ಲ. ಜಸ್ಟ್ ಮಜ! ಸಿನೆಮಾ ಒಂದೆರಡು ವಾರ ಓಡಿದರೂ ಸಾಕು. ಛಾನೆಲ್‌ಗಳಿಗೆ ಸಿನೆಮಾ ಮಾರಿ, ಬಂಡವಾಳ ಮಾತ್ರ ಅಲ್ಲ, ಲಾಭವನ್ನು ತೆಗೆಯುತ್ತೇನೆ’ ಎಂದ. ನಾನು ಬೆರಗಾಗಿ ಆ ನನ್ನ ಗೆಳೆಯನನ್ನ ನೋಡುತ್ತಿದೆ. ಯಾವುದೇ ಉದ್ದಿಶ್ಯವಿಲ್ಲದೆ ಸಿನೆಮಾದ ಕಥೆ ಹೆಣೆಯಬಹುದೇ ಎಂಬುದು ನನಗೆ ಅಚ್ಚರಿಯನ್ನು ತಂದಿತ್ತು. ನಿಧಾನವಗಿ ಯೋಚಿಸಿದಾಗ ಹೊಳೆದ ಕೆಲವು ಸತ್ಯಗಳಿವು.

ಈಚೆಗೆ ಆ ನನ್ನ ಸಹೋದ್ಯೋಗಿ ತಿಳಿಸಿದಂತಹ ಕಥೆ ಇಲ್ಲದ ಕಥನಗಳು ಸೃಷ್ಟಿಯಾಗುತ್ತಿವೆ. ಇವುಗಳನ್ನ ಉದ್ಯಮದವರು `ಮಲ್ಟಿಪ್ಲೆಕ್ಸ್ ಸಂಸ್ಕೃತಿ’ಯ ಸಿನಿಮಾ ಎನ್ನುತ್ತಾರೆ. ಇದೊಂದು ವಿಶಿಷ್ಟ ಬೆಳವಣಿಗೆ. ಈ ಹಣೆಪಟ್ಟಿಯ ಕೆಳಗೆ ಬರುವ ಸಿನೆಮಾಗಳಲ್ಲಿ ಕಥನ ಮತ್ತು ನಿರೂಪಣಾ ವಿಧಾನವೇ ಪ್ರಧಾನ. ಇಲ್ಲಿ ಕಥಾಹೂರಣ ಎಂಬುದು ತೆಳು ವಿವರವಾಗಿರುತ್ತದೆ. ಇಂತಹ ಸಿನೆಮಾಗೆ ಉದಾಹರಣೆಯಾಗಿ ನೀವು, `ಜಬ್ ವಿ ಮೆಟ್’, `ಗರಂಮಸಾಲ’, `ಹಾಯ್‌ಬೇಬಿ’ ಇತ್ಯಾದಿ ಹಲವು ಚಿತ್ರಗಳನ್ನು ಹೆಸರಿಸಬಹುದು. ಇವು ಮಲ್ಟಿಪ್ಲೆಕ್ಸ್‌ನಲ್ಲಿ ಪ್ರದರ್ಶನವಾಗಲೆಂದೇ ತಯಾರಾದ ಚಿತ್ರಗಳು. ಇವುಗಳನ್ನ ನೋಡುವ ನಗರಿಗರ ಸಂಖ್ಯೆಯು ಈಚೆಗೆ ಹೆಚ್ಚಾಗುತ್ತಿದೆ. ಈ ಗುಣ ಕನ್ನಡದ ಸಿನೆಮಾಗಳಿಗೂ ನಿಧಾನವಾಗಿ ಇಳಿಯುತ್ತಿದೆ. ತೆಳು ಕಥಾಹಂದರದೊಡನೆ ಮನರಂಜನೆ ಮತ್ತು ಪ್ರೇಕ್ಷಕನನ್ನು ಸದಾಕಾಲ `ತಿಳಿ’ಯಾದ ಸ್ಥಿತಿಯಲ್ಲಿ ಇರಿಸಲೆಂದೇ ಈ ಸಿನೆಮಾಗಳು ತಯಾರಾಗುತ್ತವೆ. ಅದಕ್ಕೆ ಉದಾಹರಣೆಯಾಗಿ `ಮುಂಗಾರುಮಳೆ’ `ಗಾಳಿಪಟ’, `ರಾಮ ಶಾಮ ಭಾಮ’ ದಂತಹ ಸಿನೆಮಾಗಳನ್ನು ಹೆಸರಿಸಬಹುದು.

Continue reading

ಟಿ.ವಿ. ಎಂಬ ಆಧುನಿಕ ಪುರಾಣವು – ಬಡ ಮಧ್ಯಮವರ್ಗವು!

ದೃಶ್ಯ ೧
ಹಗಲು. ಕಛೇರಿಗೆ ಹೋಗಲೆಂದು ಬಸ್ಸು ಕಾಯುತ್ತಾ ನಿಂತಿರುವ ಹೆಂಗೆಳೆಯರು ಮಾತಾಡುತ್ತಿದ್ದಾರೆ.
ಹೆಂಗಸು ೧ : ರೀ, ನೆನ್ನೆ ಆ ಧಾರಾವಾಹಿ ನೋಡ್ದ್ರಾ?
ಹೆಂಗಸು ೨ : ಹ್ಞೂಂ ಕಣ್ರಿ!
ಹೆಂಗಸು ೧ : ಅವಳು ಹಾಕ್ಕೊಂಡಿದ್ದ ಸೀರೆ ಎಷ್ಟು ಚೆನ್ನಾಗಿತ್ತು ಅಲ್ವಾ?
ಹೆಂಗಸು ೨ : ಅವಳ ಬಿಂದಿ ಅಂತೂ ನನಗ್ ತುಂಬಾ ಇಷ್ಟ ಆಯ್ತು.
ಹೆಂಗಸು ೧ : ನಮ್ಮ ಏರಿಯಾದಲ್ಲಿರೋ ಬ್ಯಾಂಗಲ್ ಸ್ಟೋರ್ಸ್ನಲ್ಲಿ ವಿಚಾರ್ಸೋಣ. ಆ ಥರಾ ಬಿಂದಿ ಬಂದಿದ್ದರೆ ತಗೋಳೋಣ
ಎಂದೆನ್ನುತ್ತಾ ಅವರು ಬಸ್ಸನ್ನೇರುತ್ತಾರೆ. ಬಸ್ಸಿನಲ್ಲಿಯೂ ಪ್ರಾಯಶಃ ಇದೇ ಮಾತು ಮುಂದುವರೆಯುತ್ತದೆ.

ದೃಶ್ಯ ೨
ಮಧ್ಯಾನ್ಹ. ದೇವಸ್ಥಾನದಲ್ಲಿ ಸೇರಿರುವ ಹೆಂಗಸರು. (ಕೆಲವೊಮ್ಮೆ ಗಂಡಸರು ಸಹ ಇರಬಹುದು). ಅಲ್ಲಿ ಆರಾಧನೆ ನಡೆಯುತ್ತಿದೆ. ಹೆಂಗಸರು ತಮ್ಮದೇ ಮಾತಿನಲ್ಲಿ ತೊಡಗಿದ್ದಾರೆ.
ಹೆಂಗಸು ೧ : ರೀ, ಬೇಗ ಪೂಜೆ ಮುಗ್ಸ್ಕೊಂಡ್ ಹೋಗ್ಬೇಕು ಕಣ್ರೀ!
ಹೆಂಗಸು ೨ : ಏನ್ರೀ ಅರ್ಜೆಂಟು?
ಹೆಂಗಸು ೧ : ಆ ಸೀರಿಯಲ್ ಶುರು ಆಗೋಷ್ಟರಲ್ಲಿ ಮನೇಲ್ಲಿರ್ಬೇಕು ಕಣ್ರೀ!
ಹೆಂಗಸು ೨ : ಹೌದು ಕಣ್ರೀ, ನೆನ್ನೆ ಅವಳ ಗಂಡಾನೇ ಇನ್ನೊಬ್ಬ ಹುಡುಗೀನ ಕರ್ಕೊಂಡ್ ಬಂದಿದಾನಲ್ರೀ. ಈಗವಳು ಏನ್ ಮಾಡ್ತಾಳೋ ನೋಡಬೇಕು.

Continue reading