ನಾಟಕವಾಗುವ ದಾರಿಯಲ್ಲಿ… ‘ಕಳೆದುಹೋದವರು’

(ಮುಮ್ಮಡಿ ಕೃಷ್ಣರಾಜ ಒಡೆಯರನ್ನು ಕುರಿತ ಐತಿಹಾಸಿಕ ನಾಟಕ, ಲೇಖಕರು: ಡಿ.ಎ.ಶಂಕರ್. ಪ್ರಕಾಶಕರು: ಸಂವಹನ ಪ್ರಕಾಶನ, ೧೨/೧ಎ, ಈವ್ನಿಂಗ್ ಬಜಾರ್ ಹಿಂಭಾಗ, ಶಿವರಾಂಪೇಟೆ, ಮೈಸೂರು – ೫೭೦೦೦೧, ಡೆಮಿ ಅಷ್ಟದಳ/ ಮೊದಲ ಮುದ್ರಣ:೨೦೧೧/ ೮೦ ಪುಟ/ಬೆಲೆ- ೫೦ರೂ.)

(ಈ ಲೇಖನವು ಪ್ರಜಾವಾಣಿಯ ಸಾಪ್ತಾಹಿಕ ಪುರವಣೆಯಲ್ಲಿ ೩೦ ಅಕ್ಟೋಬರ್ ೨೦೧೧ರಂದು ಪ್ರಕಟವಾಗಿದೆ)

ಐತಿಹಾಸಿಕ ನಾಟಕವೊಂದನ್ನು ರಚಿಸುವುದು ಯಾವತ್ತಿಗೂ ಕಷ್ಟದ ಕೆಲಸ. ಯಾವ ದೃಷ್ಟಿಕೋನದಿಂದ ಒಂದು ಕಾಲಘಟ್ಟದ ಇತಿಹಾಸವನ್ನು ನೊಡಬೇಕು ಎಂಬುದೇ ನಾಟಕಕಾರನ ಮುಂದೆ ದೊಡ್ಡ ಸವಾಲಾಗಿ ಬಿಡುತ್ತದೆ. ಹೀಗಾಗಿಯೇ ಸಮಕಾಲೀನ ಕಾಲಘಟ್ಟದಲ್ಲಿ ಐತಿಹಾಸಿಕ ವಸ್ತುವನ್ನು ನಾಟಕವಾಗಿಸಿದವರ ಸಂಖ್ಯೆ ಕಡಿಮೆ. ಇದಕ್ಕೆ ಒಂದು ಕಾಲದಲ್ಲಿ ಆಗಿಹೋದ ಘಟನೆಯನ್ನು ಇಂದು ನಮ್ಮೆದುರಿಗೆ ಇರುವ ಅನೇಕ ರಾಜಕೀಯ ಹಾಗೂ ತತ್ವಗಳ ಮೂಸೆಯಲ್ಲಿ ಇಟ್ಟು ನೋಡಿದಾಗ, ಐತಿಹಾಸಿಕ ವಿವರಗಳ ನಡುವೆ ಯಾರು ನಾಯಕರಾಗಬೇಕು, ಪ್ರತಿನಾಯಕರಾರು ಎಂಬ ಪ್ರಶ್ನೆಗೆ ಉತ್ತರಿಸುವುದೇ ನಾಟಕಕಾರರಿಗೆ ಬೃಹದಾಕಾರದ ಸಮಸ್ಯೆ ಆಗಿಬಿಡುವುದು ಪ್ರಧಾನ ಕಾರಣ. ಇದರಾಚೆಗೆ ಐತಿಹಾಸಿಕ ವಿವರವೊಂದರ ಒಳಗಿರುವ ನಾಟಕೀಯ ಹೂರಣವನ್ನು ಕಟ್ಟಿಕೊಡುವಾಗ ಇತಿಹಾಸಕ್ಕೆ ಬದ್ಧವಾಗಬೇಕೋ ನಾಟಕೀಯ ಗುಣಗಳಿಗೆ ಬದ್ಧವಾಗಬೇಕೋ ಎಂಬ ದ್ವಂದ್ವವೂ ಸಹ ನಾಟಕಕಾರರನ್ನು ಕಾಡುತ್ತದೆ. ಈ ಕಾರಣಗಳಿಂದಾಗಿಯೇ ಕನ್ನಡದಲ್ಲಿ ಬಂದಿರುವ ಐತಿಹಾಸಿಕ ನಾಟಕಗಳಲ್ಲಿ ಗಿರೀಶರ ‘ತುಘಲಕ್’ ‘ತಲೆದಂಡ’, ಲಂಕೇಶರ ‘ಗುಣಮುಖ’ಗಳಂತೆ ಇನ್ನುಳಿದ ಐತಿಹಾಸಿಕ ನಾಟಕಗಳು ಸಾರ್ವಕಾಲಿಕ ಎಂಬಂತೆ ಜನಮಾನಸದ ನೆನಪಲ್ಲಿ ಉಳಿದಿಲ್ಲ. ಇನ್ನು ಕೆಲವು ಐತಿಹಾಸಿಕ ನಾಟಕಗಳು ತಮ್ಮ ವಾಚಾಳಿತನದಿಂದಾಗಿ ಮಾತ್ರ ನೆನಪಲ್ಲಿ ಉಳಿದಿರುವುದನ್ನು ಗಮನಿಸಬಹುದು. ಈ ಎಲ್ಲಾ ವಿವರಗಳ ಹಿನ್ನೆಲೆಯಲ್ಲಿ ಮೈಸೂರಿನ ಅರಸುಕುಲದ ಟಿಪ್ಪು ಸುಲ್ತಾನ್ ನಂತರದ ಕಾಲಘಟ್ಟವನ್ನು ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಜೀವನದ ಸುತ್ತ ಹೆಣೆದ ವಿವರವನ್ನು ಕನ್ನಡದ ಪ್ರಸಿದ್ಧ ಚಿಂತಕ ಹಾಗೂ ಸಾಹಿತಿಗಳಾದ ಡಿ.ಎ.ಶಂಕರ್ ಅವರು ‘ಕಳೆದುಹೋದವರು’ ಎಂಬ ಹೆಸರಿನಲ್ಲಿ ನಾಟಕವಾಗಿಸಿರುವುದು ಸ್ತುತ್ಯರ್ಹ ಪ್ರಯತ್ನ.

ಮೈಸೂರಿನ ಇತಿಹಾಸವನ್ನು ಕುರಿತಂತೆ ಅನೇಕ ನಾಟಕಗಳು ಕನ್ನಡದಲ್ಲಿ ಬಂದಿವೆ. ಸಂಸರು ಬಹುತೇಕ ಇದೇ ವಿಷಯವನ್ನು ವಸ್ತುವಾಗಿಸಿ ಕನ್ನಡದ ಸಂದರ್ಭದಲ್ಲಿ ಅಪರೂಪ ಎನ್ನಿಸುವ ಅನೇಕ ನಾಟಕಗಳನ್ನು ನೀಡಿದ್ದಾರೆ. ಲಿಂಗದೇವರು ಹಳೆಮನೆಯವರು ಸಹ ಮೈಸೂರಿನ ಇತಿಹಾಸವನ್ನು ಹಿನ್ನೆಲೆಯಾಗಿರಿಸಿಕೊಂಡು ಕೆಲವು ನಾಟಕ ಬರೆದಿದ್ದಾರೆ. ಈಗ ಇದೇ ಮೈಸೂರಿನ ಇತಿಹಾಸವನ್ನು ಡಿ.ಎ.ಶಂಕರ್ ಅವರು ತಮ್ಮ ‘ಕಳೆದುಹೋದವರು’ ನಾಟಕದಲ್ಲಿ ಇರಿಸಿದ್ದಾರೆ. ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಹದಿನಾಲ್ಕು ವರ್ಷದವರಿದ್ದಾಗ ಸಿಂಹಾಸನದ ಮೇಲೆ ಕೂತವರು. ನಂತರ ಬ್ರಿಟಿಷರ ಪರೋಕ್ಷ ಆಳ್ವಿಕೆಯ ಸಂಕಟಗಳ ಜೊತೆಗೆ, ದಿವಾನರಾಗಿದ್ದ ಪೂರ್ಣಯ್ಯನವರ ಅಧಿಕಾರಿ ಧೋರಣೆಯನ್ನು ಅನುಭವಿಸುತ್ತಾ ಬೆಳೆದವರು. ಇದೇ ಕಾಲಘಟ್ಟದಲ್ಲಿ ಬ್ರಿಟಿಷರನ್ನು ವಿರೋಧಿಸುತ್ತಿದ್ದ, ಟಿಪ್ಪುಸುಲ್ತಾನನೇ ತಮ್ಮ ಅರಸ ಎಂದುಕೊಂಡಿದ್ದ, ದಾಸ್ಯದಿಂದ ಮುಕ್ತಿ ಬೇಕು ಎಂದು ಬಯಸುತ್ತಿದ್ದ ದೋಂಡಿಯಾ ವಾಘ್ ಮತ್ತು ತರೀಕೆರೆ ಪಾಳೇಗಾರರ ಮನಸ್ಸುಗಳು ಮೈಸೂರಿನ ಕೈಗೊಂಬೆ ಸರಕಾರವನ್ನು ವಿರೋಧಿಸುತ್ತಿದ್ದವು. ಇವುಗಳ ಜೊತೆಗೆ ಮುಮ್ಮಡಿ ಕೃಷ್ಣರಾಜರಿಗೆ ಇದ್ದ ಅನೇಕ ಆಸಕ್ತಿಗಳು ಸೇರಿ ಈ ಕಾಲಘಟ್ಟದ ಇತಿಹಾಸದಲ್ಲಿ ಅನೇಕ ರೋಚಕ ಹಾಗೂ ನಾಟಕೀಯ ವಿವರಗಳು ಸಿಗುತ್ತವೆ. ಈ ವಿವರಗಳನ್ನು ಡಿ.ಎ.ಶಂಕರ್ ಅವರು ೧೦ ದೃಶ್ಯಗಳ ನಾಟಕವಾಗಿಸಿದ್ದಾರೆ.

ಡಿ.ಎ.ಶಂಕರ್ ಅವರು ಇಂಗ್ಲೀಷ್ ಹಾಗೂ ಕನ್ನಡಗಳಲ್ಲಿ ಅನೇಕ ಕೃತಿಗಳನ್ನು ರಚಿಸಿರುವ ಸವ್ಯಸಾಚಿ. ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದವರು. ತಮ್ಮ ಬಹುಬಗೆಯ ಓದುಗಳ ಲಾಭವನ್ನು ಸಂಪುಷ್ಟವಾಗಿ ಇಂತಹ ನಾಟಕವೊಂದರಲ್ಲಿ ಬಳಸುವುದು ಅವರಿಗೆ ಸಾಧ್ಯವಾಗಿದೆ. ಹಾಗಾಗಿಯೇ ಈ ನಾಟಕದಲ್ಲಿ ಮುಮ್ಮಡಿಯವರ ಕಾಲದ ಎಲ್ಲಾ ಮಗ್ಗುಲುಗಳನ್ನು ಯಾವುದೇ ಪಕ್ಷ ವಹಿಸದೆ ಪ್ರೇಕ್ಷಕರ ಎದುರಿಗೆ ಇರಿಸುವ ಪ್ರಯತ್ನವನ್ನು ಲೇಖಕರು ಮಾಡುತ್ತಾರೆ. ಈ ವಿವರಗಳನ್ನು ಕುರಿತಂತೆ ನಾಟಕಕ್ಕೆ ಮುನ್ನುಡಿ ಬರೆದಿರುವ ದೇ.ಜ.ಗೌ. ಸಹ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಆದರೆ ಈ ವಸ್ತುವಿಗೆ ಇರುವ ಶಕ್ತಿ ನಾಟಕಕೃತಿಗೆ ದಕ್ಕಿಲ್ಲ. ಇದು ನಾಟಕದ ಆಕೃತಿಯಲ್ಲೇ ಮೂಡಿರುವ ಸಮಸ್ಯೆ. ನಾಟಕಕಾರರು ಅತ್ಯಂತ ಕಿರುದೃಶ್ಯಗಳನ್ನು ಬರೆದಿರುವುದು ಸಹ ಪಾತ್ರಗಳ ಭಾವವಲಯದ ಅನಾವರಣಕ್ಕೆ ಸಹಾಯ ಮಾಡುವುದಿಲ್ಲ. ಹೀಗಾಗಿ ಐತಿಹಾಸಿಕ ವಿವರದ ಪರಿಚಯ ಸಿಗುತ್ತದೆ. ಆ ವಿವರದೊಳಗಿನ ನಾಟಕೀಯತೆ ಅನಾವರಣಗೊಳ್ಳದೆ ಉಳಿಯುತ್ತದೆ. ಇದರಿಂದಾಗಿ ಈ ನಾಟಕದ ಪ್ರಮುಖ ಪಾತ್ರಗಳಾಗಿರುವ ಮುಮ್ಮಡಿಯಾಗಲೀ ಪೂರ್ಣಯ್ಯ ಆಗಲಿ ಪಾತ್ರವಾಗಿ ತೆರೆದುಕೊಳ್ಳದೆ ಕೇವಲ ಐತಿಹಾಸಿಕ ಸತ್ಯಗಳಾಗಿ ಮಾತ್ರ ಗೋಚರಿಸುತ್ತಾರೆ. ನಾಟಕದ ಕಟ್ಟಡ ನಿರ್ಮಿತಿಯನ್ನು ಮಾಡಿಕೊಳ್ಳವಲ್ಲಿ ಲೇಖಕರು ಐತಿಹಾಸಿಕ ವಿವರಗಳಿಗೆ ಮಾತ್ರ ಪ್ರಾಮುಖ್ಯತೆ ನೀಡಿ, ಆ ವಸ್ತುವಿನ ಒಳಗಿನ ನಾಟಕ ಶಕ್ತಿಯತ್ತ ಗಮನ ಕೊಡದೆ ಇರುವುದು ‘ಕಳೆದುಹೋದವರು’ವಿನ ಪ್ರಮುಖ ಕೊರತೆಯಾಗಿ ಕಾಣುತ್ತದೆ.

ನಾಟಕದ ಹತ್ತೂ ದೃಶ್ಯಗಳಿಗೆ ಸೇತುಬಂಧ ಸೃಷ್ಟಿಸಲು ಹಾಡುಗಳನ್ನು ಬಳಸಲಾಗಿದೆ. ಪುರಂದರದಾಸರ, ವಚನಕಾರರ, ಲಾವಣಿಕಾರರ ಪದ್ಯಗಳಲ್ಲದೆ ಲೇಖಕರೇ ಬರೆದಿರುವ ಕೆಲವು ಹಾಡುಗಳು ಸಹ ಇಲ್ಲಿವೆ. ಇವು ಮುಂದೆ ಮೂಡಲಿರುವ ದೃಶ್ಯಕ್ಕೆ ಸಂವಾದಿಯಾಗಬೇಕೆಂದು ಬಳಸಿರುವಂತಹದು. ಆದರೆ ಈ ಹಾಡನ್ನು ಮೇಳದವರು ಹಾಡಬೇಕೋ ಅಥವಾ ಹಿನ್ನೆಲೆಯಲ್ಲಿ ದೃಶ್ಯ ಬದಲಾಗುವ ಅವಧಿಗೆ ಎಂದು ಹಾಡಬೇಕೋ ಎಂಬುದನ್ನು ಲೇಖಕರು ಸೂಚಿಸುವುದಿಲ್ಲ. ಪ್ರಾಯಶಃ ಶಕ್ತಿಯುತವಾಗಿ ನಾಟಕ ಕಟ್ಟಬಲ್ಲ ರಂಗನಿರ್ದೇಶಕರು ತಾವೇ ಈ ಹಾಡುಗಳನ್ನು ದೃಶ್ಯೀಕರಿಸುವ ಕುರಿತು ಯೋಚಿಸಬೇಕಾಗುತ್ತದೆ. ನಾಟಕವೊಂದನ್ನು ಕಟ್ಟುವ ಲೇಖಕನಿಗೆ ರಂಗಸಾಧ್ಯತೆಗಳ ಅನುಭವ ಗಟ್ಟಿಯಾದ್ದಾಗಿಲ್ಲದೆ ಇದ್ದಾಗ ಇಂತಹದು ಆಗುತ್ತದೆ. ಆದರೆ ಡಿ.ಎ.ಶಂಕರ್ ಅವರಿಗೆ ಇಂಗ್ಲೀಷ್ ನಾಟಕಗಳ ಪರಿಚಯ ಹಾಗೂ ಪ್ರದರ್ಶನ ಸಾಧ್ಯತೆಯ ಪರಿಚಯವಿದೆ ಎಂಬುದಂತೂ ಸತ್ಯ. ಆದರೂ ಈ ನಾಟಕದಲ್ಲಿ ಅವರು ರಂಗಸಾಧ್ಯತೆಗಳನ್ನು ಬಳಸಿಕೊಳ್ಳುವ ಪ್ರಯತ್ನವನ್ನು ಮಾಡದಿರುವುದು ಸೋಜಿಗ. ಐದನೆಯ ದೃಶ್ಯದಲ್ಲಿ ರೆಸಿಡೆಂಟ್ ಆಫೀಸರ್‌ನನ್ನು ಪೂರ್ಣಯ್ಯ ಭೇಟಿ ಮಾಡುವಾಗಲೇ ಅಲ್ಲಿಗೆ ಬರುವ ಮಹಾರಾಣಿ ಲಕ್ಷ್ಮಿಯ ಪಾತ್ರ ಪ್ರವೇಶದ ಸನ್ನಿವೇಶವೊಂದು ಮಾತ್ರ ಉಳಿದೆಲ್ಲಾ ದೃಶ್ಯಗಳಿಗಿಂತ ಭಿನ್ನವಾಗಿ ನಾಟಕೀಯವಾಗಿ ಅನಾವರಣಗೊಳ್ಳುತ್ತದೆ.

ನಾಟಕದಲ್ಲಿ ಬಳಸಲಾಗಿರುವ ಮಾತುಗಳು ಗಮನಿಸಬೇಕಾದಂತಹದು. ದೃಶ್ಯ ೧ರಲ್ಲಿ ಪೂರ್ಣಯ್ಯನು ‘ಕುದುರೆ ನಡೆಸಲು ಕಲಿತರೆ ರಾಜ್ಯ ನಿಭಾಯಿಸಲು ಕಲಿತ ಹಾಗೆ’ ಎನ್ನುವುದು, ಅದೇ ದೃಶ್ಯದಲ್ಲಿ ‘ದೊರೆತನ ಎಂಬುದೇ ದೊಡ್ಡ ತುಂಟ ಕುದುರೆ. ಅದನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದೆಂದರೆ ಘಟವಾಣಿ ಸ್ತ್ರೀಯರನ್ನು ಹತೋಟಿಯಲ್ಲಿ ಇಟ್ಟುಕೊಂಡ ಹಾಗೆ’ ಎನ್ನುವುದು, ದೃಶ್ಯ ೩ ರಲ್ಲಿ ಬರುವ ‘ರಾಜ್ಯಭಾರವೆಂದರೆ ರಾಗಿ ಬೀಸುವಷ್ಟೇ ಕಷ್ಟ’ ಎನ್ನುವುದು, ದೃಶ್ಯ ೯ರಲ್ಲಿ ಅನೇಕ ಧ್ವನಿಗಳು ಮುಮ್ಮಡಿಯ ಜೊತೆಗೆ ಮಾತಾಡುವಾಗ ಬಳಸಲಾಗಿರುವ ಸಾಲುಗಳು… ಹೀಗೆ ಈ ನಾಟಕದುದ್ದಕ್ಕೂ ಬಹುಕಾಲ ನೆನಪಲ್ಲಿ ಉಳಿಯುವಂತಹ ಮಾತುಗಳನ್ನು ಕಟ್ಟಲಾಗಿದೆ. ಇದು ಲೇಖಕರ ಜೀವನಾನುಭವಕ್ಕೆ ನೇರ ಸಾಕ್ಷಿ.

ನಾಟಕದ ಅಂತ್ಯದಲ್ಲಿ ಮುಮ್ಮಡಿಯ ಪಾತ್ರವು ತನ್ನ ಸೋಲುಗಳನ್ನು ನೆನೆಯುತ್ತಾ ಅದೇ ಕಾಲಘಟ್ಟದಲ್ಲಿ ಆಗುತ್ತಿದ್ದ ಭಾರತದ ಸ್ವಾತಂತ್ರ ಚಳುವಳಿಗೆ ಮೈಸೂರು ಸಂಸ್ಥಾನವು ಪ್ರತಿಕ್ರಿಯಿಸದೆ ಉಳಿದುದಕ್ಕೆ ಹೀಗೆ ಹೇಳುತ್ತಾನೆ, ‘ನಮ್ಮ ಪಾಲಿಗೆ ಎರಡು ದಾಸ್ಯವಿತ್ತು. ಒಂದು, ದೇಶದೆಲ್ಲೆಡೆ ಇದ್ದದ್ದು. ಮತ್ತೊಂದು ನಮ್ಮ ರಾಜ್ಯವನ್ನೇ ನಾವು ಕಳೆದುಕೊಂಡು, ಅದರ ವಾಪಸಾತಿಗೆ ಚಾತಕ ಪಕ್ಷಿಯಂತೆ ಕಾಯುತ್ತಾ ಇದ್ದದ್ದು… …ನಾವು ಪುರುಷತ್ವ ಕಳೆದುಕೊಂಡು, ಗಾಡಿಗೆ ಹೂಡಿದ ಎತ್ತುಗಳಾಗಿದ್ದೆವು. ಕ್ಷುದ್ರ ಆಶೆಯಿಂದ ಕಾಲ ನಡೆಸಿದ ಹಾಗೆ ನಡೆದುಬಿಟ್ಟೆವು.’ ಈ ಮಾತುಗಳೇ ನಾಟಕದ ಹೂರಣ. ಆದರೆ ಇವು ನಾಟಕದಲ್ಲಿ ದೃಶ್ಯವಾಗಿ ಅನಾವರಣಗೊಳುತ್ತಿಲ್ಲ ಎಂಬುದೊಂದೇ ಕೊರತೆ. ಪ್ರಾಯಶಃ ಉತ್ತಮ ರಂಗನಿರ್ದೇಶಕರು ಇಂತಹ ಪಠ್ಯವೊಂದನ್ನು ದೃಶ್ಯವಾಗಿ ಕಟ್ಟಿದಾಗ ಈ ಎಲ್ಲಾ ಕೊರೆಗಳೂ ಮುಚ್ಚಿ, ಇದು ಅಪರೂಪದ ರಂಗಕೃತಿಯಾಗಬಹುದು.

ಒಟ್ಟಾರೆಯಾಗಿ ‘ಕಳೆದುಹೋದವರು’ ನಾಟಕವು ಕನ್ನಡಕ್ಕೆ ದೊರೆತ ಮತ್ತೊಂದು ಐತಿಹಾಸಿಕ ನಾಟಕ. ಇಂತಹ ನಾಟಕಗಳು ರಂಗಕೃತಿಯಾಗಿ ಹೇಗೆ ಅರಳಿಯಾವು ಎಂಬ ಕುತೂಹಲವಂತೂ ಇದ್ದೇ ಇರುತ್ತದೆ. ಈ ವಸ್ತವನ್ನು ಕನ್ನಡಿಗರಿಗೆ ಪರಿಚಯಿಸುವ ಪ್ರಯತ್ನ ಮಾಡಿರುವ ಲೇಖಕರ ಪ್ರಯತ್ನವನ್ನಂತೂ ಮೆಚ್ಚಲೇಬೇಕು.

* * *