ಕಾರ್ಮಿಕರು ಮತ್ತು ಸಮಕಾಲೀನ ಮಾಲೀಕರು ಎಂಬ…

ಮತ್ತೊಂದು ಕಾರ್ಮಿಕರ ದಿನಾಚರಣೆ ಬಂದು ಹೋಗಿದೆ. ಈ ನಡುವೆ ನಮ್ಮ ದೇಶದ ಪ್ರಜಾಸತ್ತೆಯ ಪರೀಕ್ಷೆ ಎಂಬಂತೆ ಲೋಕಸಭೆಗಾಗಿ ಮಹಾ ಚುನಾವಣೆಗಳು ಬಂದು ಹೋಗಿವೆ. ಹೊಸ ಸರ‍್ಕಾರ ರಚನೆಯಾಗಲು ಬಹುಕಾಲ ಬೇಕಿಲ್ಲ. ಅದಕ್ಕಾಗಿ ಹೊಸ ಸರ್ಕಸ್ಸುಗಳು ಆರಂಭವಾಗಲಿವೆ (ಮೇ ೧೬ರ ನಂತರ). ಈ ಅವಧಿಯ ನಡುವೆ ಬಂದು ಹೋದ ಮೇ ದಿನಾಚರಣೆಯನ್ನು ಕುರಿತು ಮಾತಾಡುವಾಗ ಸಮಕಾಲೀನ ಸಂದರ್ಭದಲ್ಲಿ ಟೆಲಿವಿಷನ್ ಉದ್ಯಮದಲ್ಲಿ ಮಾಲೀಕತ್ವ ಎಂಬುದು ಹೇಗಾಗಿದೆ ಮತ್ತು ಕಾರ‍್ಮಿಕರನ್ನು ಅವರು ನೊಡುವ ರೀತಿ ಹೇಗೆ ಬದಲಾಗಿದೆ ಎಂಬುದನ್ನು ಗಮನಿಸಬೇಕೆನಿಸಿ ಈ ಮಾತುಗಳನ್ನಾಡುತ್ತಾ ಇದ್ದೇನೆ.

ಈಚೆಗೆ ನಮ್ಮ ಉದ್ಯಮದ ಕಾರ‍್ಮಿಕರ ಕನಿಷ್ಟ ವೇತನ ಕುರಿತ ಚರ್ಚೆಯೊಂದು ಆಯಿತು. ಆ ಸಭೆಗೆ ಬಂದಿದ್ದ ಬಹುತೇಕರು ತಮ್ಮನ್ನ ತಾವು ನಿರ‍್ಮಾಪಕರು ಎಂದು ಗುರುತಿಸಿಕೊಳ್ಳುತ್ತಾ ಇದ್ದರು. ಆದರೆ ಅವರಾರಿಗೂ ಹಣ ಹೂಡುವವನ ಧ್ವನಿ ಇರಲಿಲ್ಲ. ಕಾರಣವೇನೆಂಬುದನ್ನ ಅದಾಗಲೇ ನಾನು ಇದೇ ಕಲಮ್ಮಿನಲ್ಲಿ ನಿಮ್ಮೊಡನೆ ಚರ್ಚಿಸಿದ್ದೇನೆ. ಯಾವುದೋ ವಾಹಿನಿಯ ಜೊತೆಗೆ ಒಪ್ಪಂದ ಮಾಡಿಕೊಂಡು, ಅವರು ಕೊಡಮಾಡುವ ರಾಯಧನಕ್ಕೆ ತಕ್ಕಂತೆ ತಮಗೊಂದಿಷ್ಟು ಲಾಭ ಬಂದರೆ ಸಾಕು ಎಂದು ಕಾರ‍್ಯಕ್ರಮವನ್ನು ಮಾಡುವವರೇ ನಮ್ಮಲ್ಲಿ ಬಹುತೇಕರು. ಇವರ ನಡುವೆ ಸ್ವತಃ ಹಣ ಹೂಡಿ ಕಾರ‍್ಯಕ್ರಮ ತಯಾರಿಸುವವರೇ ಅಲ್ಪಸಂಖ್ಯಾತರು. ಈ ಅಲ್ಪಸಂಖ್ಯಾತರ ಸಮಸ್ಯೆಗಳು ಭಿನ್ನ. ಬಹುಸಂಖ್ಯಾತರ ಆಲೋಚನಾ ಕ್ರಮವೇ ಭಿನ್ನ. ಸ್ವತಃ ಹಣ ಹೂಡುವವನಿಗೆ ಮಾರುಕಟ್ಟೆಯ ವ್ಯತ್ಯಯಗಳು ಮತ್ತು ಅದನ್ನು ನಿಭಾಯಿಸುವುದು ಹೇಗೆ ಎಂಬ ಗಾಬರಿಗಳಿದ್ದರೆ, ರಾಯಧನದ ಕಾರ‍್ಯಕ್ರಮ ಮಾಡುವವನಿಗೆ ತನಗೆ ಕಾರ‍್ಯಕ್ರಮ ನೀಡಿದ ವಾಹಿನಿಯಲ್ಲಿನ ಯಾವುದೋ ವ್ಯಕ್ತಿಯನ್ನ ಮೆಚ್ಚಿಸುವುದಷ್ಟೇ ಸಾಕಾಗಿರುತ್ತದೆ. ಹೀಗಾಗಿ ಕಾರ‍್ಮಿಕರ ಸಮಸ್ಯೆಯನ್ನ ಇವರಿಬ್ಬರು ಅರ್ಥೈಸುವ ಕ್ರಮ ಬೇರೆಬೇರೆಯದು. ಇದರಿಂದಾಗಿ ಕಾರ‍್ಮಿಕರ ಸಮಸ್ಯೆಗಳಿಗೆ ಸಿಗುವ ಪರಿಹಾರವೂ ಅಪೂರ್ಣವೇ ಆಗಿರುತ್ತದೆ.

ಉದಾಹರಣೆಗೆಂದು ಮಾರ್ಚ್ ತಿಂಗಳ ಅಂತ್ಯದಲ್ಲಿ ನಡೆದ ಸಭೆಯ ವಿವರವನ್ನೇ ಗಮನಿಸಬಹುದು. ಭಾರತದಲ್ಲಿ ಹಣದುಬ್ಬರ ಹೆಚ್ಚಾಗಿದೆ. ಜೊತೆಗೆ ಆರ್ಥಿಕ ಕುಸಿತದ ಸಮಸ್ಯೆಯೂ ಇದೆ. ಇದರಿಂದಾಗಿ ಸಾಮಾನ್ಯೇತಿ ಸಾಮಾನ್ಯನೊಬ್ಬ ಬೆಂಗಳೂರಿನಂತಹ ಷಹರದಲ್ಲಿ ಬದುಕಬೇಕೆಂದರೆ, ಆತನ ಸಂಸಾರ ನಿರ್ವಹಣೆಗೆ ಕನಿಷ್ಟವೆಂದರೂ ತಿಂಗಳಿಗೆ ಏಳೆಂಟು ಸಾವಿರ ಬೇಕಾಗುತ್ತದೆ. ಏಕೆಂದರೆ ಈ ನಗರದಲ್ಲಿ ತೀರಾ ಸಣ್ಣ ಮನೆಯೊಂದರ ಬಾಡಿಗೆಯೂ ಸಹ ಮೂರು ಸಾವಿರವಾಗುತ್ತದೆ. ಆತ ಕಡಿಮೆ ಬಾಡಿಗೆಯ ಮನೆಗಾಗಿ ಊರಾಚೆ ಮನೆ ಮಾಡಿದರೆ ಆತನ ಓಡಾಟದ ವೆಚ್ಚ ಹೆಚ್ಚಾಗುತ್ತದೆ. ಇವೆರಡನ್ನು ನಿಭಾಯಿಸುವುದರ ಜೊತೆಗೆ ಆತ ತನ್ನ ಮಕ್ಕಳಿಗೆ ಯೋಗ್ಯ ವಿದ್ಯಾಭ್ಯಾಸ ಒದಗಿಸುವ ಕಷ್ಟವಿದೆ. ಹೆಂಡತಿ ಮಕ್ಕಳಿಗೆ ಎರಡು ಹೊತ್ತಿನ ಊಟಕ್ಕೆ ಬೇಕಾದಷ್ಟು ಸಂಪಾದಿಸಬೇಕಾದ ಅವಶ್ಯಕತೆಯಿದೆ. ಈ ಲೆಕ್ಕ ಹಿಡಿದರೆ ತಿಂಗಳೊಂದಕ್ಕೆ ಆತನಿಗೆ ಬೇಕಾಗುವುದು ಕನಿಷ್ಟ ಏಂಟು ಸಾವಿರವಾದರೂ ಆದೀತು. ಇದೇ ವಿಷಯ ಹಿಡಿದು ನಾವು ಚರ್ಚಿಸುತ್ತಾ ಇದ್ದೆವು, ಮೇಲೆ ತಿಳಿಸಿದ ಸಭೆಯಲ್ಲಿ. ಇದಕ್ಕೆ ರಾಯಧನ ಕಾರ‍್ಯಕ್ರಮ ಮಾಡುವವರು, ‘ನಮಗೆ ವಾಹಿನಿಯಿಂದ ಬರುವುದಿಷ್ಟು. ನಮಗೆ ತಗಲುವ ಖರ್ಚು ಇಷ್ಟು. ಸಂಬಳ ಹೆಚ್ಚಿಸಿದರೆ ನಮಗೆ ಉಳಿಯುವುದೇನು’ ಎಂದರೆ, ಸ್ವತಃ ಹಣ ಹೂಡುವವರು ಮಾರುಕಟ್ಟೆಯಲ್ಲಿ ಆಗಿರುವ ವ್ಯತ್ಯಾಸಗಳನ್ನು ಹಿಡಿದು ಮಾತಾಡುತ್ತಾ ಇದ್ದರು. ಜಾಹೀರಾತುದಾರರು ಕೊಡುವ ಹಣವೇ ಕಡಿಮೆಯಾಗಿರುವಾಗ ಕಾರ‍್ಯಕ್ರಮ ನಿರ್ವಹಣೆ ಹೇಗೆ ಎಂಬುದು ಅವರ ಅಭಿಪ್ರಾಯವಾಗಿತ್ತು. ಈ ಎರಡೂ ಮಾತುಗಳು ಮೇಲ್ನೋಟಕ್ಕೆ ಅತ್ಯಂತ ಸಮಂಜಸವಾಗಿ ಕಾಣುತ್ತವೆ. ಆದರೆ ಇವುಗಳ ಒಳಹೂರಣವನ್ನು ಗಮನಿಸಿದರೆ ಈ ನಾಡಲ್ಲಿ ಹಣ ಹೂಡುವವರೆಲ್ಲರೂ ಮತ್ಯಾರದೋ ಮರ್ಜಿಯಲ್ಲಿ ಇದ್ದಾರೆ ಎಂಬುದು ದೃಗ್ಗೋಚರವಾಗುತ್ತದೆ. ಇದು ಕಾರ್ಮಿಕರ ದೃಷ್ಟಿಯಿಂದ ಆತಂಕದ ವಿಚಾರ. ಜೊತೆಗೆ ಈ ಉದ್ಯಮದ ಭವಿಷ್ಯದ ದೃಷ್ಟಿಯಿಂದಲೂ ಕಾತರವನ್ನು ಉಂಟು ಮಾಡುವ ವಿಷಯ. ಇಂತಲ್ಲಿ ಕಾರ‍್ಮಿಕರ ಬೆವರಿಗೆ ತಕ್ಕ ಬೆಲೆಯನ್ನು ಒದಗಿಸುವುದೇ ಕಷ್ಟವಾಗುತ್ತದೆ. ಇಲ್ಲಿ ಕನಿಷ್ಟ ವೇತನದ ನಿಷ್ಕರ್ಷೆಗೂ ನಾವು ಮಾನವೀಯ ಮೌಲ್ಯಗಳನ್ನ ಹೇರಿ ಒತ್ತಡ ತರಬೇಕಾಗುತ್ತದೆ.

ಇದೇ ವಿಷಯವನ್ನ ಕ್ಯೂಬಾದ ಕ್ರಾಂತಿಯ ನಾಯಕನಾಗಿದ್ದ ಮತ್ತು ಕ್ಯೂಬಾ ದೇಶಕ್ಕೆ ಬಹುಕಾಲ ಅಧ್ಯಕ್ಷನಾಗಿದ್ದ ಫೀಡೆಲ್ ಕ್ಯಾಸ್ಟ್ರೋ ತನ್ನ ‘ಮೈ ಲೈಫ್’ ಎಂಬ ಪುಸ್ತಕದಲ್ಲಿ ಮಾತಾಡುತ್ತಾನೆ. ಕ್ಯೂಬಾದಲ್ಲಿ ಕ್ರಾಂತಿಯಾಗುವ ಮುನ್ನ ಆ ದೇಶದಲ್ಲಿ ಎರಡು ಬಗೆಯ ಜಮೀನನ್ನ ಉಳ್ಳವರು ಇದ್ದರು. ಒಂದು : ತಾವೇ ನೆಲದ ಒಡೆಯರೂ ಆಗಿ, ತಾವೇ ಆ ನೆಲದಲ್ಲಿ ಬೆಳೆದು, ಮಾರುತ್ತಿದ್ದ ಜನ. ಇಂತಹವರ ಸಂಖ್ಯೆ ತುಂಬಾ ಕಡಿಮೆಯಿತ್ತು. ಮತ್ತೊಂದು ಬಗೆಯವರು : ಯಾರದ್ದೋ ನೆಲ, ಅಲ್ಲಿ ಒಪ್ಪಂದದ ಅವಧಿಗೆ ಎಂದು ಬೆಳೆ ತೆಗೆಯುವ ಕಂಪೆನಿ ಯಾವುದೋ ದೇಶದ್ದು. ಆ ಬೆಳೆಯನ್ನು ಕಟಾವು ಮಾಡುವ ಕಂಪೆನಿ ಇನ್ಯಾವುದೋ. ಆ ಬೆಳೆ ಕೊಳ್ಳುವ ಕಂಪೆನಿ ಮತ್ತೊಂದು. ಹೀಗೆ ಅನೇಕ ಮಾಲೀಕರ ಕೈ ಕೆಳಗೆ ಕ್ಯೂಬಾದ ರೈತ ದುಡಿಯುತ್ತಿದ್ದ. ಈ ರೈತರ ಕನಿಷ್ ವೇತನ ಭರಿಸುವುದು ಕಷ್ಟವೆನಿಸಿದಾಗ ಅನೇಕ ಮಾಲೀಕರ ಆಡಳಿತದಲ್ಲಿದ್ದ ನೆಲಕ್ಕೆ ವಿದೇಶಿ ಬಡವರನ್ನ ಕರೆತಂದು ದುಡಿಯಲು ಬಿಡುತ್ತಾ ಇದ್ದರು. ಆ ಬಡವರಿಗೆ ಕೆಲಸ ಸಿಕ್ಕಿತಲ್ಲ ಎಂಬುದೇ ದೊಡ್ಡ ವಿಷಯ. ಹಾಗಾಗಿ ತಮ್ಮ ದುಡಿಮೆಗೆ ತಕ್ಕ ಫಲ ದೊರೆಯಿತೇ ಎಂಬ ಚಿಂತೆಯನ್ನು ಮಾಡುವ ಶಕ್ತಿಯೂ ಅವರಿಗಿರುತ್ತಾ ಇರಲಿಲ್ಲ. ಹೀಗಾಗಿ, ಕ್ಯೂಬಾದಲ್ಲಿ ಕೊಳೆಗೇರಿಗಳ ಸಂಕ್ಯೆ ಜಾಸ್ತಿಯಾಗಿತ್ತು. ಅಲ್ಲಿದ್ದ ಬಡವರ ಆರೋಗ್ಯ ಹದಗೆಡುತ್ತಿತ್ತು. ಹಸಿವು ಅನೇಕ ಅಪರಾಧಗಳಿಗೆ ದಾರಿ ಮಾಡುತ್ತಾ ಇತ್ತು. ಈ ಪರಿಸ್ಥಿತಿಯೇ ಆ ದೇಶದಲ್ಲಿ ಕ್ರಾಂತಿಯಾಗಲು ಕಾರಣವಾದದ್ದು. ಆ ದೇಶವು ಅಮೇರಿಕಾದ ಹಿಡಿತದಲ್ಲಿದ್ದ ಮಾರುಕಟ್ಟೆಯ ನಿಯಮಗಳನ್ನು ಧಿಕ್ಕರಿಸಿ ನಿಂತದ್ದು ಈಗ ಇತಿಹಾಸ. ಆ ದೇಶ ಇಂದಿಗೂ ಶ್ರೀಮಂತವಲ್ಲ. ಆದರೆ ಅಲ್ಲಿ ಅನಾರೋಗ್ಯ ಮತ್ತು ಹಸಿವಿನ ಸಮಸ್ಯೆ ಇಲ್ಲ. ಅಲ್ಲಿನ ಜನ ಇಂದಿಗೂ ಸಂಜೆಯಾದರೆ ಹಾಡುತ್ತಾ ಕುಣಿಯುತ್ತಾ ಇರುತ್ತಾರೆ.

ನಮ್ಮ ದೇಶದಲ್ಲಿಯೂ ಸಂಜೆಯಾದರೆ ಹಾಡುತ್ತಾ, ಕುಣಿಯುತ್ತಾ ಇರುವವರು ಪಬ್ಬುಗಳಲ್ಲಿ ಮತ್ತು ಶ್ರೀಮಂತ ವರ್ಗ ಏರ್ಪಡಿಸುವ ಸಂಜೆಯ ಕಾರ್ಯಕ್ರಮಗಳಲ್ಲಿ ಕಾಣುತ್ತಾರೆ. ಆದರೆ ಅಲ್ಲಿ ನಮ್ಮ ಕಾರ್ಮಿಕ ವರ್ಗದವರಿಗೆ ಪ್ರವೇಶವಿಲ್ಲ. ಆಕಸ್ಮಿಕವಾಗಿ ಅಲ್ಲೊಬ್ಬ ಕಾರ್ಮಿಕ ಕಂಡರೂ ಅವನು ಆ ಮೋಜಿನ ನಡುವೆ ಎಷ್ಟನ್ನು ಕುಡಿಯಬೇಕು, ಎಷ್ಟು ಹಾಡಬೇಕು ಎಂಬ ವಿವೇಚನೆ ಇಲ್ಲದಂತವನಾಗಿ ಎಲ್ಲರಿಂದ ಕುಡುಕ ಎಂತಲೋ ಅಥವಾ ಇಂತಹವರನ್ನ ಪಾರ್ಟಿಗೆ ಕರೆಯಬಾರದು ಎಂತಲೋ ಹೇಳಿಸಿಕೊಳ್ಳುತ್ತಾ ಇರುತ್ತಾನೆ.

ಈ ವಿಷಯ ಒಂದೆಡೆಗಾದರೆ ನಮ್ಮಲ್ಲಿಯೂ ಕನಿಷ್ಟ ವೇತನದ ಒತ್ತಡವನ್ನು ತಪ್ಪಿಸಲು ಅನೇಕರು ಹಳ್ಳಿಗಳಿಂದ ಕರೆತಂದ ಅಮಾಯಕರನ್ನು ಕೆಲಸಕ್ಕೆ ತೊಡಗಿಸಿರುವುದನ್ನು ನೋಡುತ್ತೇವೆ. ಆ ಅಮಾಯಕರಿಗೆ ನಮ್ಮ ಮಾಲೀಕ ವರ್ಗ ಉಳಿದುಕೊಳ್ಳಲು ಮನೆಯನ್ನು ಕೊಟ್ಟಿದ್ದೇವೆ ಎಂದು ಹೇಳಿಕೊಳ್ಳುತ್ತದೆಯಾದರೂ ಅಂತಹ ಮನೆಯೆಂಬುದು ಬಹುತೇಕ ದೊಡ್ಡಿಯಂತೆ ಇರುತ್ತದೆ. ಅದು ಮನುಷ್ಯರು ಇರಬಹುದಾದ ತಾಣವಂತೂ ಆಗಿರದು. ಇನ್ನೂ ಹಾಗೇ ದುಡಿಯುವ ಜನ ತಮಗೆ ತಿಂಗಳಿಗೊಮ್ಮೆ ದುಡ್ಡು ಕೊಡುವವನನ್ನು ದೇವರು ಎಂದು ಭಾವಿಸಿರುತ್ತಾರೆಯೇ ಹೊರತು ತಮ್ಮ ದುಡಿಮೆಯನ್ನ ಆತ ಬಳಸಿಕೊಳ್ಳುತ್ತಾ ಇದ್ದಾನೆ ಎಂಬುದು ಸಹ ಅವರಿಗೆ ತಿಳಿದಿರುವುದಿಲ್ಲ. ಹೀಗಾಗಿ ನಮ್ಮ ಸಭೆಯಲ್ಲಿ ತೀರ‍್ಮಾನವಾದ ಕನಿಷ್ಟ ವೇತನವೆಂಬುದನ್ನು ಕೆಲವರು ಮಾತ್ರ ನೀಡಿ, ಉಳಿದವರು ನೀಡದೆಯೇ ಉಳಿದಿರುವುದು, ಮತ್ತದು ಯಾರಿಗೂ ತಿಳಿಯದೆ ಇರುವಂತಹದು ಈಗಿನ ಪರಿಸ್ಥಿತಿ.

ಇಂತಹ ಪರಿಸ್ಥಿತಿಯಿಂದ ತಪ್ಪಿಸಿಕೊಂಡು ಇಡೀ ಉದ್ಯಮವೇ ಆರೋಗ್ಯಕಾರೀ ಸ್ಥಿತಿಯಲ್ಲಿ ಇರುವಂತಾಗಲೂ ನಾವು ಬೇರೆಯ ಯೋಚನೆಗಳನ್ನು ಮಾಡಬೇಕಿದೆ. ಅದರಲ್ಲಿ ಮೊದಲ ಯೋಚನೆ ಮಾಲೀಕತ್ವ ಅಥವ ಹಣ ಹೂಡುವವರು ಯಾರಾಗಿರಬೇಕು ಎಂಬುದು. ಈ ನೆಲದ ಮತ್ತು ಇಲ್ಲಿಯ ಜನರ ಅಗತ್ಯಗಳಿಗಾಗಿ ಹಣ ತಿಡಗಿಸುವವನಿಗೆ ಇಲ್ಲಿನ ಕಾರ‍್ಮಿಕರ ಸಮಸ್ಯೆ ಅರ್ಥವಾಗುವ ಹೃದಯವಿರುತ್ತದೆ. ನಮ್ಮ ಸಮಕಾಲೀನ ಸಂದರ್ಭ ಕ್ಯೂಬಾದ ಕ್ರಾಂತಿಯ ಮುನ್ನ ಇದ್ದ ಸ್ಥಿತಿಯಲ್ಲೇ ಇದೆ. ಇಲ್ಲಿ ವಾಹಿನಿ ನಡೆಸುವವನು ಯಾರೋ, ಅದಕ್ಕೆ ಕಾರ್ಯಕ್ರಮ ತಯಾರಿಸುವವನು ಯಾರೋ, ಆ ಕಾರ್ಯಕ್ರಮವನ್ನು ಮಧ್ಯವರ್ತಿಯಾಗಿ ಮಾಡುವವನು ಇನ್ನಾರೋ! ಹೀಗಾಗಿ, ಇಲ್ಲಿನ ಟೆಲಿವಿಷನ್ ಬಹಳಷ್ಟು ಕಾರ‍್ಯಕ್ರಮಗಳಲ್ಲಿ ಕನ್ನಡದ ಹೃದಯವೂ ಇರುವುದಿಲ್ಲ. ಆ ಹೃದಯ ಯಾವುದು ಎಂಬುದನ್ನು ಅರಿಯುವ ಪ್ರಯತ್ನ ಕಾರ್ಪೋರೇಟ್ ಸೆಟಪ್‌ನಲ್ಲಿ ಆಗುವುದು ಇಲ್ಲ. ಅಲ್ಲಿ ಕೇವಲ ಮೀಟಿಂಗ್‌ಗಳು ಆಗುತ್ತವೆ. ತೀರ್ಮಾನಗಳು ನಮಗ್ಯಾರಿಗೂ ಉಪಯುಕ್ತವಾಗುವುದಿಲ್ಲ.

ಈ ಮಾತಿಗೆ ಉದಾಹರಣೆಯಾಗಿ ಮೊನ್ನೆ ನಡೆದ ಅಪಘಾತವೊಂದನ್ನು ಕುರಿತ ವಿವರ ನೀಡುತ್ತೇನೆ. ಅದೊಂದು ಟೆಲಿವಿಷನ್ ಸೀರಿಯಲ್ಲಿನ ಚಿತ್ರೀಕರಣ ನಡೆಯುತ್ತಾ ಇತ್ತು. ಕ್ಯಾಮೆರಾ ಕ್ರೇನ್ ಮೇಲೆ ಇರುವಾಗಲೇ ಹತ್ತಿರದಲ್ಲಿದ್ದ ಜೇನುಗೂಡಿಗೆ ತೊಂದರೆಯಾಗಿ ಹುಳಗಳು ಎಲ್ಲರನ್ನ ಕಡಿದವು. ಎಲ್ಲರೂ ಸಾಮಗ್ರಿ ಮರೆತು ಓಡಿದರು. ಕ್ಯಾಮೆರಾ ಬಿದ್ದು, ಅದರ ಲೆನ್ಸ್ ಮತ್ತು ಮದರ್‌ಬೋರ್ಡ್ ಹಾಳಾಯಿತು. ಈಗ ಈ ಹಾಳಾದ ಸಾಮಗ್ರಿಗೆ ಯಾರು ಪರಿಹಾರ ಕೊಡಬೇಕು ಎಂಬ ಪ್ರಶ್ನೆ ಹುಟ್ಟಿತು. ಆ ಕ್ಯಾಮೆರಾ ಯಾವುದೋ ಶ್ರೀಮಂತ ಇನ್ಯಾವುದೋ ವ್ಯಕ್ತಿಗೆ ನೀಡಿದದ್ದು. ಇದಕ್ಕಾಗಿ ಸದರಿ ವ್ಯಕ್ತಿ ಆ ಶ್ರೀಮಂತನಿಗೆ ತಿಂಗಳಿಗಿಷ್ಟು ಎಂದು ಹಣ ನೀಡುತ್ತಾನೆ. ಸದರಿ ಚಿತ್ರೀಕರಣಕ್ಕಾಗಿ ಸಲಕರಣೆಗಳನ್ನು ಒದಗಿಸಿದ್ದ ಹೊರಾಂಘಟಣ ಚಿತ್ರೀಕರಣ ಘಟಕದವರು ಹೀಗೆ ಕ್ಯಾಮೆರಾವನ್ನು ಇನ್ಯಾರಿಂದಲೋ  ಪಡೆದಿದ್ದ ವ್ಯಕ್ತಿಯ ಬಳಿಯಲ್ಲಿ ಮಧ್ಯವರ್ತಿಯಾಗಿ ಬಾಡಿಗೆಗೆ ಗೊತ್ತುಪಡಿಸಿರುತ್ತಾರೆ. ಇನ್ನು ಸದರಿ ಧಾರಾವಾಹಿಯಾದರೋ ಯಾವುದೋ ಖಾಸಗಿ ವಾಹಿನಿಗಾಗಿ ನೆರೆರಾಜ್ಯದ ನಿರ್ಮಾಪಕರೊಬ್ಬರಿಗಾಗಿ ಇಲ್ಲಿವನರೊಬ್ಬರು ತಯಾರಿಸುತ್ತಾ ಇರುವುದು. ಕ್ಯಾಮೆರಾಗೆ ಹೇಗೆ ಮೂರು ಹಂತದ ಮಾಲೀಕತ್ವವೋ ಹಾಗೆಯೇ ಧಾರಾವಾಹಿ ತಯಾರಿಕೆಗೂ ಮೂರುಹಂತದ ಮಾಲೀಕತ್ವ. ಇನ್ನು ಆ ಕ್ಯಾಮೆರಾದ ಜೊತೆಗೆ ಸಹಾಯಕನಾಗಿ ಹೋಗಿದ್ದ ಕಾರ್ಮಿಕ ಅದಾಗಲೇ ನಾನು ಹೇಳಿದ ಹಾಗೆ ಯಾವುದೋ ಹಳ್ಳಿಯಿಂದ ಉದರಂಭರಣಕ್ಕೆ ಬಂದವನು. ಆತ ಕ್ಯಾಮೆರಾವನ್ನು ಹೊರಲು ಶಕ್ತ. ಆದರೆ ಕ್ಯಾಮೆರಾದ ಎಲೆಕ್ಟ್ರಾನಿಕ್ ವಿವರವನ್ನು ನಿರ್ವಹಿಸುವ ಜ್ಞಾನ ಅವನಿಗಿಲ್ಲ. ಹಾಗಾಗಿ ಆತನಿಗೆ ಅವರು ಕೊಡುವ ಕನಿಷ್ಟ ವೇತನ ಸರಿಯಿದೆಯೋ ಇಲ್ಲವೋ ಎಂಬ ಪ್ರಶ್ನೆಯೇ ಬರದು. ಅದರೊಂದಿಗೆ ಆತ ಪೂರ್ಣಪ್ರಮಾಣದ ಕ್ಯಾಮೆರಾ ಸಹಾಯಕನಲ್ಲವಾದ್ದರಿಂದ ಆತನಿಗೆ ನಮ್ಮ ಸಂಘಟನೆಯ ಗುರುತಿನ ಚೀಟಿಯೂ ದೊರೆತಿಲ್ಲ. ಈ ಎಲ್ಲಾ ಗೊಂದಲಗಳ ನಡುವೆ ಕ್ಯಾಮೆರಾ ಬಿದ್ದಿದೆ. ಅಪಘಾತವಾಗಿದೆ. ಅದಕ್ಕೆ ತಗಲುವ ವೆಚ್ಚ ಕನಿಷ್ಟವೆಂದರೂ ಎರಡು ಲಕ್ಷ ರೂಪಾಯಿಗಳು. ಇದನ್ನು ತುಂಬಿಸಿಕೊಡುವವರು ಯಾರು ಎಂಬುದು ಪ್ರಶ್ನೆ. ವಾಹಿನಿಯೊಂದಿಗೆ ಒಪ್ಪಂದ ಮಾಡಿಕೊಂಡವನು ಭಾರೀ ಉದಾರಿಯಂತೆ, ತನ್ನ ಜೇಬಿನಿಂದ ನೀಡುವಂತೆ ಏನೋ ನೀಡುತ್ತಾನೆ. ಅದು ಅವನ ಪ್ರಕಾರ ಸಹಾಯ, ಜವಾಬ್ದಾರಿಯಲ್ಲ. ಇನ್ನು ಚಿತ್ರೀಕರಣದಲ್ಲಿದ್ದ ಮೇಸ್ತ್ರಿ ಕೆಲಸ ಮಾಡುವವನು ತನ್ನ ಜವಾಬ್ದಾರಿ ಏನೂ ಇಲ್ಲ ಎಂದು ಬಿಡುತ್ತಾನೆ. ಆ ಕ್ಯಾಮೆರಾವನ್ನು ಬಾಡಿಗೆಗೆಂದು ಗೊತ್ತುಪಡಿಸಿದವನು ತಾನು ಕೇವಲ ಮಧ್ಯವರ್ತಿ ಎನ್ನುತ್ತಾನೆ. ಆ ಕ್ಯಾಮೆರಾವನ್ನು ತಿಂಗಳ ಬಾಡಿಗೆಗೆ ಗುತ್ತಿಗೆ ತೆಗೆದುಕೊಂಡವನು ಸಹ ಇದು ನನ್ನ ಜವಾಬ್ದಾರಿ ಅಲ್ಲ ಎನ್ನುತ್ತಾನೆ. ಆದರೆ ಈ ಕ್ಯಾಮೆರಾಕ್ಕೆ ಹಣ ಹೂಡಿದ ಆ ಶ್ರೀಮಂತ ಮಾತ್ರ ಯಾರ ಕಣ್ಣೆದುರಿಗೂ ಬರದೆ ಎಲ್ಲರನ್ನೂ ಕುಣಿಸುತ್ತಾ ಇರುತ್ತಾನೆ.

ಇದು ನಮ್ಮ ಸಮಕಾಲೀನ ಟೆಲಿವಿಷನ್ ಉದ್ಯಮದ ಪರಿಸ್ಥಿತಿ.

ಈ ಸಂಘಟನೆಯ ಅನೇಕ ಸದಸ್ಯರು ನಮ್ಮ ಸಂಘಟನೆ ಹಾಗಿರಬೇಕು, ಹೀಗಿರಬೇಕು ಎಂದು ಮಾತಾಡುತ್ತಾ, ಸಂಘಟನೆಯ ಏಳು ಬೀಳುಗಳನ್ನು ಕುರಿತು ಮಾತಾಡುತ್ತಾ ಇರುತ್ತಾರೆ. ಅವರಾರಿಗೂ ನಾನು ಮೇಲೆ ತಿಳಿಸಿದ ವಾಸ್ತವದ ಪರಿಚಯವಿಲ್ಲ. ಅವರೆಲ್ಲರೂ ತಮ್ಮ ಉದ್ಯಮ ಬೃಹತ್ತಾಗಿ ಬೆಳೆಯುತ್ತಿದೆ ಎಂಬ ಭ್ರಮೆಯಲ್ಲಿಯೇ ಇರುತ್ತಾರೆ. ಉದ್ಯಮ ಬೆಳೆದಿದೆ ಎಂಬುದು ಸತ್ಯ. ಆದರೆ ಈ ಉದ್ಯಮದಲ್ಲಿ ಲಾಭವನ್ನು ಹಂಚಿಕೊಳ್ಳುವವರು ಹರಿದು ಹಂಚಿಹೋಗಿದ್ದಾರೆ. ಮೇಲಿರುವ ಶ್ರೀಮಂತ ಮಹಾ ಜಾಣ. ಅವನು ಕಣ್ಣೆದುರಿಗೆ ಬರದೆ ಲಾಭವನ್ನ ನುಂಗುತ್ತಾ ಇರುತ್ತಾನೆ. ಇಲ್ಲಿ ಬೆವರು ಹರಿಸುವವರು ಮಾತ್ರ ಯಾರೊಂದಿಗೆ ಮಾತಾಡಬೇಕು ಎಂದು ತಿಳಿಯದೆ ಒದ್ದಾಡುತ್ತಲೇ ಇರುತ್ತಾನೆ.

ಈ ಸಮಸ್ಯೆಗೆ ಪರಿಹಾರ ಸುಲಭದ್ದಲ್ಲ. ಅದಕ್ಕೆ ಈ ಉದ್ಯಮದಲ್ಲಿ ಊಟ ಹುಡುಕುತ್ತಾ ಇರುವ ಪ್ರತಿಯೊಬ್ಬರೂ ಒಗ್ಗಟ್ಟಾಗಬೇಕು. ನಿಮ್ಮ ಆಸುಪಾಸಲ್ಲಿರುವ ಪ್ರತಿಯೊಬ್ಬನೂ ಸಂಘಟನೆಯ ಛಾತ್ರದ ಕೆಳಗೆ ಬರುವವನೇ ಎಂದು ಪರಿಶೀಲಿಸಬೇಕು. ಹಾಗಲ್ಲದೆ ಹೋದಲ್ಲಿ ಅಂತಹವರನ್ನ ತಂಡದಿಂದ ದೂರ ಇರಿಸಬೇಕು. ಯಾವುದೇ ಹೊಸ ನಿರ್ಮಾಪಕ ಬಂದಾಗಲೂ ಆತ ಸಂಘಟನೆಯಲ್ಲಿ ನೋಂದಣಿ ಮಾಡಿದ್ದಾನೆಯೇ ಎಂದು ವಿಚಾರಿಸಬೇಕು. ಇಲ್ಲವಾದಲ್ಲಿ ನೋಂದಣಿ ಆಗುವವರೆಗೆ ನಾವು ಕೆಲಸ ಮಾಡುವುದಿಲ್ಲ ಎಂದು ಹಠ ಹಿಡಿಯಬೇಕು. ಇಷ್ಟನ್ನು ನೀವು ಮಾಡದಿದ್ದಲ್ಲಿ, ನೀವೂ ಸಹ ಮೊನ್ನಿನ ಅಪಘಾತದಲ್ಲಿ ಮುರಿದು ಬಿದ್ದ ಕ್ಯಾಮೆರಾದ ಸ್ಥಿತಿಯಲ್ಲಿಯೇ ಇರುತ್ತೀರಿ. ನಿಮ್ಮ ರಿಪೇರಿಗೂ ಯಾರೂ ವಾರಸುದಾರರು ಇರುವುದಿಲ್ಲ. ಹಾಗಾಗದಂತೆ ನೊಡಿಕೊಳ್ಳುವುದು ನಿಮ್ಮದೇ ಜವಾಬ್ದಾರಿಯಾಗಿರುತ್ತದೆ.

5 thoughts on “ಕಾರ್ಮಿಕರು ಮತ್ತು ಸಮಕಾಲೀನ ಮಾಲೀಕರು ಎಂಬ…

 1. ತುಂಬಾ ಅರ್‍ಥಪೂರ್ಣ ಲೇಖನ. ಇವತ್ತಿನ ಟೆಲಿವಿಷನ್ ಉದ್ಯಮ ಮಾತ್ರ ಅಲ್ಲ. ಎಲ್ಲಾ ಉದ್ಯಮದಲ್ಲೂ ಹೀಗೆ ಆಗಿದೆ. ಬಂಡವಾಳ ಹಾಕಿದವನು ಎಲ್ಲೋ ಇರ್‍ತಾನೆ. ದುಡಿಯೋರು ಅವನನ್ನ ನೋಡಿಯೂ ಇರೋದಿಲ್ಲ. ನಮ್ಮ ಗೋಳನ್ನ ಯಾರಿಗೆ ಹೇಳಬೇಕು ಎಂದು ಗೊತ್ತಾಗೋದೇ ಇಲ್ಲ.
  ಥ್ಯಾಂಕ್ಸ್! ಕಣ್ಣು ತೆರೆಸೋ ಆರ್‍ಟಿಕಲ್ ಬರೆದಿದ್ದಕ್ಕೆ.

 2. ಉದ್ಯಮದ ಒಳ ಮುಖಕ್ಕಿಡಿದ ಕನ್ನಡಿ ಈ ಲೇಖನ.

  ಉಪಯುಕ್ತ ಮಾಹಿತಿಯೊಂದಿಗೆ ವಿವೇಚನೆಗೆ ಪ್ರೇರೇಪಿಸುತ್ತದೆ.

  ಧನ್ಯವಾದಗಳು.

  -ಚಂದಿನ

 3. ಸರ್,
  ತುಂಬಾ ಉತ್ತಮವಾದ, ಮಾಹಿತಿಯುತ ಬರಹ…ನಿಮ್ಮೆಲ್ಲ ಬರಹಗಳು ಸುದೀರ್ಘವಾಗಿದ್ದರೂ ಅಷ್ಟೇ ಮಾಹಿತಿಯುತವಾಗಿರುತ್ತವೆ…ಉತ್ತಮ ಬರಹ ಉಣಬಡಿಸಿದ್ದಕ್ಕೆ ಧನ್ಯವಾದಗಳು…
  ವಿನಾಯಕ ಕೋಡ್ಸರ

 4. ಸುರೇಶ್ ಸರ್,

  ಕಾರ್ಮಿಕರ ಬಗೆಗಿನ[ಅದರಲ್ಲೂ ನಿಮ್ಮದೇ ಉದ್ಯಮದ ಕಾರ್ಮಿಕರು]ಕಾಳಜಿ ಇಡೀ ಲೇಖನದಲ್ಲಿ ವ್ಯಕ್ತವಾಗುತ್ತದೆ. ಆಳವಾದ ಅದ್ಯಯನದ ಜೊತೆ ಎಲ್ಲಾ ಮಾಹಿತಿಗಳನ್ನು ಉದಾಹರಣೆಗಳ ಸಮೇತ ವಿವರಿಸಿದ್ದೀರಿ…ಓದುತ್ತಾ ಹೆಚ್ಚೆಚ್ಚು ವಿಚಾರಗಳನ್ನು ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗುತ್ತದೆ…ನಿಮ್ಮ ಉಳಿದ ಲೇಖನಗಳನ್ನು ಓದಬೇಕೆನಿಸುತ್ತದೆ…ಧನ್ಯವಾದಗಳು

  ಶಿವು.ಕೆ ARPS.

Leave a Reply

Your email address will not be published. Required fields are marked *