ದಶಮಾನ? – ಸಂಘಸುಖಗಳನ್ನರಸುತ್ತಾ!

ಸಂಘಸುಖ-ಡಿಸೆಂಬರ್ ೨೦೧೦
ದಶಮಾನ? – ಸಂಘಸುಖಗಳನ್ನರಸುತ್ತಾ!
– ಬಿ.ಸುರೇಶ
ಖಾಲಿಪಾತ್ರೆಯ ಎದುರು…
ಬರುವ ಆದಾಯಕ್ಕೂ ಬದುಕಿನ ಅಗತ್ಯಗಳಿಗೂ ಸಂಬಂಧವೇ ಇಲ್ಲ ಎಂಬಂತಹ ಕಾಲಘಟ್ಟದಲ್ಲಿ ಬಡ ಹೆಂಗಸೊಬ್ಬಳು ತನ್ನೆದುರಿಗೆ ಉರಿಯುತ್ತಿರುವ ಒಲೆಯ ಮೇಲೆ ಖಾಲಿ ಪಾತ್ರೆಯನ್ನಿಟ್ಟು ಕಾಯುವಂತಹ ಮನಸ್ಥಿತಿಯೇ ಬಹುತೇಕ ನಮ್ಮೆಲ್ಲರದೂ ಆಗಿದೆ. ಯಾಕೆಂದರೆ ನಮ್ಮ ಸಂಘಟನೆಗೆ ಇದು ದಶವರ್ಷ. ಕಳೆದ ಡಿಸೆಂಬರ್ ಎರಡನೆಯ ಭಾನುವಾರಕ್ಕೆ ಈ ಸಂಘಟನೆ ಹುಟ್ಟಿ ಹತ್ತು ವರ್ಷ ಆಯಿತು. ಆದರೆ ಅದನ್ನು ಯಾರೂ ಗಮನಿಸಿದಂತೆಯೇ ಕಾಣುತ್ತಿಲ್ಲ. ಆ ಬಗ್ಗೆ ಎಲ್ಲಿಯೂ ಸದ್ದಿಲ್ಲ. ನಾವು ಮಾಡಿದ ಎಲ್ಲಾ ವಿವರಗಳೂ ಮಾಧ್ಯಮದಲ್ಲಿ ಬರಲಿ ಎಂದೆನ್ನುತ್ತಲೇ ಬದುಕು ಕಂಡುಕೊಂಡಿರುವ ನಾವ್ಯಾರೂ ಈ ನಮ್ಮ ಸಂಘಟನೆಯ ಹುಟ್ಟುಹಬ್ಬ ಕುರಿತು ಮಾಧ್ಯಮಗಳ ಮೂಲಕವಾದರೂ ಮಾತಾಡಲಿಲ್ಲ. ಹೀಗ್ಯಾಕೆ ಆಯಿತೋ ಅರಿಯೇ. ಅದಕ್ಕಾಗಿ ಆತ್ಮವಿಮರ್ಶೆಯ ಮಾತನ್ನಾಡಬೇಕಾಗಿದೆ. ಹೊಸ ನಿರೀಕ್ಷೆಗಳನ್ನು ಹುಡುಕಬೇಕಿದೆ. ಯಾಕೆ ಹೀಗೆ ಎಂದು ಆಲೋಚಿಸಬೇಕಿದೆ.

ಕಳೆದ ಎರಡನೆಯ ಭಾನುವಾರ ಟಿವಿ ಸಂತೆಯನ್ನು ಆಯೋಜಿಸಲಾಗಿತ್ತು. ಉತ್ಸಾಹ ಹುಟ್ಟಿಸುವ ಅನೇಕ ಆಟಗಳು ಅಲ್ಲಿದ್ದವು. ಅನೇಕ ಧಾರಾವಾಹಿಗಳ ತಂಡಗಳು ಈ ಸಂತೆಯಲ್ಲಿ ಎಲ್ಲರೂ ಪಾಲ್ಗೊಳ್ಳಲಿ ಎಂದೇ ಚಿತ್ರೀಕರಣವನ್ನು ನಿಲ್ಲಿಸಿದ್ದವು. ಆದರೂ ಆ ಸಂತೆಯಲ್ಲಿ ಪಾಲ್ಗೊಂಡವರ ಸಂಖ್ಯೆ ಕಡಿಮೆ. ಅಂದರೆ ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಕ್ಕೆ ಎರಡನೆಯ ಭಾನುವಾರವೂ ಚಿತ್ರೀಕರಣ ಇದೆ ಎಂಬುದಷ್ಟೇ ಕಾರಣವಲ್ಲ. ಚಿತ್ರೀಕರಣ ಇಲ್ಲದ ದಿನವೂ ಈ ಜನಕ್ಕೆ ಸಂಘಟನೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಉತ್ಸಾಹ ಇಲ್ಲ. (ಇದು ಎಲ್ಲರಿಗೂ ಸೇರಿಸಿ ಆಡಿದ ಮಾತಲ್ಲ. ಕೆಲವರಿಗೆ ನಿಜವಾಗಿಯೂ ಅನಿವಾರ್ಯ ಎಂಬ ಒತ್ತಡ ಬಂದಿರಬಹುದು. ಅಂತಹವರನ್ನು ಹೊರತುಪಡಿಸಿ ಈ ಮಾತುಗಳನ್ನು ಹೇಳಲಾಗಿದೆ.) ಹೀಗಾದಾಗ ಕಷ್ಟಪಟ್ಟು ಇಂತಹ ಕಾರ್ಯಕ್ರಮವನ್ನು ಯೋಜಿಸಿದವರ ಮನಸ್ಥಿತಿ ಹೇಗಿರಬಹುದು ಎಂದು ಆಲೋಚಿಸಿ.


ಇದೇ ಪರಿಸ್ಥಿತಿ ಈಚೆಗೆ ಚಲನಚಿತ್ರ ವಾಣಿಜ್ಯ ಮಂಡಳಿಯು ಕರೆದಿದ್ದ ನಿರ್ಮಾಪಕರ ಸಭೆಯಲ್ಲಿಯೂ ಇತ್ತು. ಆ ಸಭೆಗೆ ಈಗ ಸಿನಿಮಾ ತಯಾರಿಸುತ್ತಾ ಇರುವ ದಿಗ್ಗಜರೆನಿಸಿಕೊಮಡವರು ಬರಲೇ ಇಲ್ಲ. ಇದ್ದ ಕೆಲವರು ತಮ್ಮದೇ ಲೋಕದಲ್ಲಿ ಇದ್ದರು. ಹೀಗಾಗಿ ಕಾರ್ಮಿಕರ ವೇತನ ಹೆಚ್ಚಿಸುವ ವಿಷಯ ಚರ್ಚಿಸಲು ಸೇರಿದ್ದ ಆ ಸಭೆಯು ಯಾವ ತೀರ್ಮಾನವೂ ತೆಗೆದುಕೊಳ್ಳದೇ ಮುಗಿದುಹೋಯಿತು. ನಮ್ಮ ಸಂಘಟನೆಯ ಪರಿಸ್ಥಿತಿ ಅದಕ್ಕಿಂತ ಭಿನ್ನವಲ್ಲ. ಬರಲಿರುವ ಏಪ್ರಿಲ್ ತಿಂಗಳಲ್ಲಿ ಟೆಲಿವಿಷನ್ ಕಾರ್ಮಿಕರ ಕನಿಷ್ಟ ವೇತನದ ಪರಾಮರ್ಶೆ ಆಗಬೇಕಿದೆ. ಆಗ ನಮ್ಮ ನಿರ್ಮಾಪಕರುಗಳೂ ಹೀಗೆಯೇ ಮಾಡುವ ಎಲ್ಲಾ ಸಾಧ್ಯತೆಯೂ ಇದೆ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಆಲೋಚಿಸ ಬೇಕಾದ ಹಲವು ವಿಷಯಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.
ನನಗೆ ಬೇಕಾದ್ದೇನು? ಸಂಘಟನೆ ಏನು ಮಾಡುತ್ತಿದೆ?

ಇದು ಎಲ್ಲಾ ಸದಸ್ಯರೂ ಮತ್ತೆ ಮತ್ತೆ ಕೇಳುವ ಪ್ರಶ್ನೆ. ಈ ಪ್ರಶ್ನೆಗೆ ಸಂಘಟನೆ ಸ್ವತಃ ಉತ್ತರ ಕೊಡಲಾಗದು. ಸಂಘಟನೆಯಲ್ಲಿ ಪಾಲ್ಗೊಳ್ಳುವ ಆ ಸದಸ್ಯರೇ ಉತ್ತರ ಹುಡುಕಬೇಕು. ಸಧ್ಯದ ಮಟ್ಟಿಗೆ ಸಂಘಟನೆಯಲ್ಲಿರುವ ಎಲ್ಲರಿಗೂ ಮತ್ತೆ ಅಪಘಾತ ವಿಮೆಯ ಲಾಭ ದೊರೆಯಲಿದೆ. ಅದಾಗಲೇ ಒಂದಿಬ್ಬರೂ ಈ ಹೊಸ ವಿಮೆಯ ಪ್ರಯೋಜನವನ್ನೂ ಪಡೆದಿದ್ದಾರೆ. ಸಂಘಟನೆಯಿಮದ ಹೊರಗೆ ಉಳಿದಿರುವ ಅನೇಕರು ಒಳಗೆ ಬರಲು ಈ ಕಾರಣವೇ ಸಾಕು. ಇನ್ನುಳಿದ ಸದಸ್ಯರಾಗಿಯೂ ಸಂಘಟನೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದವರೊಂದಿಗೆ ನೇರ ಸಂವಾದಕ್ಕೆ ಇಳಿಯಬೇಕಿದೆ. ಅಂತಹವರು ತಮ್ಮ ಅಗತ್ಯಗಳನ್ನು ನೇರವಾಗಿ ಹೇಳಬೇಕಿದೆ. ಇಂತಹವರಲ್ಲಿ ಕಾರ್ಮಿಕ ವಲಯದವರ ಸಮಸ್ಯೆ ಭಿನ್ನವಾದುದು. ಕಲಾವಿದರ ವಲಯದ ಸಮಸ್ಯೆ ಮತ್ತೂ ಭಿನ್ನವಾದುದು. ಹೀಗಾಗಿ ಈ ಎರಡೂ ವಲಯಗಳ ಸದಸ್ಯರನ್ನು ಪ್ರತ್ಯೇಕವಾಗಿ ಸೇರಿಸಿ ಮಾತಾಡಿಸುವ ಪ್ರಯತ್ನವನ್ನು ಆಯಾ ವಲಯದ ಸಂಘಟಕರು/ ಚುನಾಯಿತ ಸದಸ್ಯರು ಮಾಡಬೇಕಿದೆ.

ಟೆಲಿವಿಷನ್ ಕಲಾವಿದರ ಸಮಾವೇಶ
ಇಂತಹದೊಂದು ಬೃಹತ್ ಸಮಾವೇಶವನ್ನು ಬರಲಿರುವ ದಿನಗಳಲ್ಲಿ ಹಮ್ಮಿಕೊಳ್ಳಲು ಸಾಧ್ಯವಾಗಬೇಕು. ಆ ದಿನ ಈ ನಾಡಿನ ಎಲ್ಲಾ ಟೆಲಿವಿಷನ್ ಕಲಾವಿದರು ಒಂದೆಡೆ ಸಿಗುವಂತಾಗಬೇಕು. ಅಂದೇ ಅವರೆಲ್ಲರ ಫೋಟೊಗಳನ್ನು ತೆಗೆದು ಪ್ರತ್ಯೇಕ ಮಾಹಿತಿ ಕೋಶ ತಯಾರಿಸಲು ಸಾಧ್ಯವಾಗಬೇಕು. ಅವರಲ್ಲಿ ಯಾರಾದರೂ ನಮ್ಮ ಸಂಗಟನೆಯ ಸದಸ್ಯರಾಗಿಲ್ಲದೆ ಇದ್ದರೂ ಪರವಾಗಿಲ್ಲ. ಅಂತಹವರನ್ನೂ ಆ ಸಮಾವೇಶದಲ್ಲಿ ಬಾಗಿಯಾಗಿ ಅನ್ನುವ ಮೂಲಕ ನಮ್ಮಲ್ಲಿನ ಎಲ್ಲಾ ಕಲಾವಿದರನ್ನು ಕುರಿತ ಬೃಹತ್ ಮಾಹಿತಿ ಕೋಶವೊಂದನ್ನು ಸಂಘಟನೆಯೇ ಹೊರತರುವಂತಾಗಬೇಕು. ಅದರಿಂದಾಗಿ ಕೇವಲ ಮಾಹಿತಿಯ ಲಾಭವಷ್ಟೇ ಅಲ್ಲದೆ ಎಲ್ಲರನ್ನೂ ಒಂದೆಡೆಗೆ ಸೇರಿಸಿದ ಅನುಕೂಲ ದೊರೆಯಲಿದೆ. ಇಂತಹ ಸಮಾವೇಶದಲ್ಲಿ ಎಲ್ಲಾ ಹಿರಿಯ ಕಿರಿಯ ಕಲಾವಿದರ ಮುಖಾಮುಖಿ ಭೇಟಿಯಾಗುತ್ತದೆ. ಆ ಮೂಲಕ ಪ್ರತಿಭೆಯನ್ನು ಪೋಷಿಸುವ ಹಲವು ಬಗೆಗಳು ಹಿರಿಯರಿಂದ ಕಿರಿಯರಿಗೆ ತಲುಪಬಹುದು. ಅಂತಹದೊಂದು ಸಮಾವೇಶ ಮಾಡಿ ಎಂದು ಈ ಮೂಲಕ ಕಲಾವಿದರ ವಲಯದ ಗೆಳೆಯರಲ್ಲಿ ಮನವಿ ಮಾಡಿಕೊಳ್ಳುತ್ತೇನೆ.

ನಮ್ಮ ರಾಜ್ಯಕ್ಕೆ ವಲಸೆ ಬರುತ್ತಿರುವ ನೆರೆರಾಜ್ಯಗಳ ನಿರ್ಮಾಪಕರು!
ಈಚೆಗೆ ಕರ್ನಾಟಕದ ಟೆಲಿವಿಷನ್ ಕಾರ್ಯಕ್ರಮ ತಯಾರಕರಲ್ಲಿ ಸ್ಥಳೀಯರಿಗಿಂತ ನೆರೆಯ ರಾಜ್ಯಗಳಿಂದ ಬಂದವರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಸ್ಥಳೀಯರಲ್ಲಿ ಉದ್ಯಮಶೀಲತೆಯ ಕೊರತೆ ಇದೆ ಎಂದೆಲ್ಲಾ ವಾಹಿನಿಯ ಮುಖ್ಯಸ್ಥರು ಹೇಳುವುದುಂಟು. ಇದನ್ನು ದೂರ ಮಾಡುವುದು ಸಹ ನಮ್ಮ ನಿರ್ಮಾಪಕರ ವಲಯದ ಜವಾಬ್ದಾರಿಯಾಗಿದೆ. ಪ್ರಾಯಶಃ ಈ ನಾಡಿನ ಎಲ್ಲಾ ನಿರ್ಮಾಪಕರನ್ನೂ ವರ್ಷಕ್ಕೆ ಒಂದು ಭಾರಿಯಾದರೂ ಒಂದೆಡೆ ಸೇರಿಸುವುದು ಅಗತ್ಯ. ಆ ದಿನ ವಾಹಿನಿಗಳ ಮುಖ್ಯಸ್ಥರುಗಳನ್ನೂ ಅವರೆಲ್ಲರ ಜೊತೆಗೆ ಮುಖಾಮುಖಿಯಾಗಿಸುವ ಪ್ರಯತ್ನವಾದರೆ ಅದರಿಂದ ಸ್ಥಳೀಯ ನಿರ್ಮಾಪಕರಿಗೆ ತಮ್ಮ ಕೊರತೆಗಳನ್ನು ನೀಗಿಕೊಳ್ಳುವ ಹೊಸ ಮಾರ್ಗಗಳು ದೊರಕಬಹುದು. ಈ ನಿಟ್ಟಿನಲ್ಲಿ ನಿರ್ಮಾಪಕರ ವಲಯದವರು ಈ ಕೂಡಲೇ ಆಲೋಚಿಸಬೇಕಿದೆ. ತನ್ಮೂಲಕ ಹೆಚ್ಚುತ್ತಿರುವ ಪರಭಾಷಾ ನಿರ್ಮಾಪಕರ ಸಂಖ್ಯೆಯ ಮೇಲೆ ಹಿಡಿತ ಸಾಧಿಸಬಹುದು ಎಂದು ನನ್ನ ಭಾವನೆ.
‘ಹಿಡಿತ’ ಎಂಬ ಮಾತನ್ನು ಸ್ವಲ್ಪ ವಿವರಿಸುತ್ತೇನೆ. ನೆರೆಯ ರಾಜ್ಯಗಳ ನಿರ್ಮಾಪಕರು ಈ ನಾಡಿಗೆ ಬರುವುದು ತಪ್ಪಲ್ಲ. ಅದು ಭಾರತದಂತಹ ಒಕ್ಕೂಟ ವ್ಯವಸ್ಥೆಯಲ್ಲಿ ಅನಿವಾರ್ಯ. ಈ ನಾಡಿನ ಎಲ್ಲ ಪ್ರಜೆಗಳೂ ದೇಶದ ಯಾವುದೇ ಭಾಗದಲ್ಲಿ ಅನ್ನ ಸಂಪಾದಿಸಬಹುದು, ವ್ಯವಹಾರ ಮಾಡಬಹುದು. ಅದು ಮೂಲಭೂತ ಹಕ್ಕು. ಆದರೆ ಹೀಗೆ ನಮ್ಮ ರಾಜ್ಯಕ್ಕೆ ಬಂದ ಹೊಸಬರಿಂದಾಗಿ ಆಗಿರುವ ತೊಂದರೆಗಳನ್ನು ಗಮನಿಸಿದರೆ ಗಾಬರಿಯಾಗುತ್ತದೆ. ಮೊದಲಿಗೆ ನಮ್ಮಲ್ಲಿದ್ದ ಚಿತ್ರೀಕರಣ ತಾಣಗಳ ಬೆಲೆಗಳು ಹೆಚ್ಚಾಗಿವೆ. ಇದು ಬಹುತೇಕ ಮುಪ್ಪಟ್ಟು ಏರಿಕೆಯಾಗಿದೆ. ಇದಕ್ಕೆ ನೆರೆಯ ರಾಜ್ಯದವರು ತಮ್ಮಲ್ಲಿನ ‘ಅಭ್ಯಾಸ’ಗಳನ್ನು ಇಲ್ಲಿಗೂ ತರುತ್ತಿರುವುದು ಬಹುಮುಖ್ಯ ಕಾರಣವಾಗಿದೆ. ಈ ಕಾರಣದಿಂದಾಗಿ ಹೊಸ ನಿರ್ಮಾಪಕರಿಗೆ ಇಲ್ಲಿನ ‘ಅಭ್ಯಾಸ’ಗಳನ್ನು ಪರಿಚಯಿಸಬೇಕಿದೆ. ಈ ಪರಿಚಯಿಸುವ ಕೆಲಸವನ್ನೇ ನಾನು ಹಿಡಿತ ಎಂದು ಕರೆದಿದ್ದೇನೆ.
ಇದೇ ಸಮಯದಲ್ಲಿ ಸ್ಥಳೀಯ ನಿರ್ಮಾಪಕರಿಗೆ ವಾಹಿನಿಗಳು ಹೆಚ್ಚಿನ ಅವಕಾಶ ಕೊಡುವಂತಾಗಲು ಸಹ ನಾವು ಹೊಸ ಪ್ರಯತ್ನಗಳನ್ನು ಮಾಡಬೇಕಿದೆ. ವಾಹಿನಿಗಳವರಿಗೆ ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ ಎಂದು ಮಾತ್ರ ಹೇಳುವುದಲ್ಲದೇ, ಸ್ಥಳೀಯ ನಿರ್ಮಾಪಕರಿಗೂ ಅವಕಾಶ ನೀಡಿ ಎಂದು ಹೇಳಬೇಕಾಗುತ್ತದೆ.
ಇದೆಲ್ಲವೂ ಆಗಲು ನಾವು ನಿರ್ಮಾಪಕರುಗಳೆಲ್ಲರ ಸಮಾವೇಶವನ್ನು ಮಾಡುವುದು ಅಗತ್ಯವಾಗಿದೆ. ಪ್ರಾಯಶಃ ನಮ್ಮ ನಿರ್ಮಾಪಕರ ವಲಯದ ಸದಸ್ಯರು ಈ ನಿಟ್ಟಿನಲ್ಲಿ ಬೇಗ ಕಾರ್ಯಪ್ರವೃತ್ತರಾಗುತ್ತಾರೆ ಎಂದುಕೊಳ್ಳೋಣ.
ಇನ್ನೂ…
ಸಂಘಟನೆಯನ್ನು ಕಟ್ಟುವ ದೃಷ್ಟಿಯಿಂದ ಮಾತ್ರವೇ ಅಲ್ಲದೇ ಈ ಉದ್ಯಮದ ಒಳಗಿರುವ ಅನೇಕ ತೊಂದರೆಗಳನ್ನು ನಿವಾರಿಸಲು ಸಂಘಟನೆಯ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಟೆಲಿವಿಷನ್ ಉದ್ಯಮದಲ್ಲಿರುವ ಎಲ್ಲರೂ ನಮ್ಮ ಸಂಘಟನೆಯ ದಶಮಾನೋತ್ಸವವನ್ನು ಆಚರಿಸದೆ ಹೋದರಡ್ಡಿಯಿಲ್ಲ. ಆದರೆ ಸಂಘವನ್ನು ಉಳಿಸಿಕೊಳ್ಳಲು ಒಟ್ಟಿಗೆ ಇರಬೇಕಾದುದು ಅಗತ್ಯವಾಗಿದೆ.
* * *

Leave a Reply

Your email address will not be published. Required fields are marked *