ಬಿ.ಸುರೇಶ ಅವರ `ಪ್ರೀತಿಯೆಂಬ ಅಚ್ಚರಿ!’

ಕಥಾ ಸಾರಾಂಶ

ಅನು ಮತ್ತು ಸರ್ವೋತ್ತಮ ಪ್ರೀತಿಸಿ ಮದುವೆಯಾದವರು. ಅವರದು ಅನ್ಯೋನ್ಯ ದಾಂಪತ್ಯ. ಇವರು ಮದುವೆಯಾಗುವ ಕಾಲದಲ್ಲಿ ಇವರನ್ನು ವಿರೋಧಿಸಿದ್ದ ಅವರಿಬ್ಬರ ಮನೆಯವರುಗಳ ಬೆಂಬಲವಿಲ್ಲದೆಯೇ ಈ ದಂಪತಿಗಳು ನಗುನಗುತ್ತಾ ತಮ್ಮ ಸಣ್ಣ ಆದಾಯದಲ್ಲಿಯೇ ನೆಮ್ಮದಿಯಾಗಿ ಬದುಕುತ್ತಿರುವವರು. ಕೆಲಸ ಮುಗಿಸಿ ಬರುವ ಗಂಡನಿಗಾಗಿ ರುಚಿರುಚಿಯಾದ ಅಡಿಗೆ ಮಾಡಿಟ್ಟು, ಅವನು ಬಂದೊಡನೆ ಅವನೊಂದಿಗೆ ಸರಸದ ಮಾತಾಡುತ್ತಲೇ ತಮ್ಮ ಪ್ರೇಮ ಪ್ರಕರಣದ ಘಟನೆಗಳನ್ನು ನೆನೆಸಿಕೊಳ್ಳುತ್ತಾ ಅನು-ಸರ್ವೋತ್ತಮ ಇಬ್ಬರೂ ಅಪರೂಪದ ಜೋಡಿಗಳಾಗಿ ಬದುಕುತ್ತಾ ಇದ್ದವರು. ಸರ್ವೋತ್ತಮನಿಗೆ ತಾನು ದುಡಿಯುತ್ತಿರುವ ಟ್ರಾನ್ಸ್‌ಪೋರ್ಟ್ ಆಫೀಸಿನಲ್ಲಿ ಸಣ್ಣ ಸಂಬಳದ ಕೆಲಸ. ಆತ ತನ್ನ ಮಡದಿಗೆ ಆ ಕೆಲಸದ ವಿವರಗಳನ್ನು ಹೇಳುತ್ತಲೇ ತಾನೊಬ್ಬ ದೊಡ್ಡ ಹೀರೋ ಎಂದು ಭಾವಿಸಿಕೊಂಡು ಬದುಕುತ್ತಾ ಇದ್ದಾನೆ. ಇಂತಹ ದಂಪತಿಗಳು ಒಂದು ರಾತ್ರಿ ವಿಚಿತ್ರ ಆಘಾತಕ್ಕೆ ಸಿಕ್ಕಿಬೀಳುತ್ತಾರೆ. ಕೆಮ್ಮುವ ಅನುವಿಗೆ ಜೊತೆಯಲ್ಲಿ ರಕ್ತವೂ ಬಾಯಿಂದ ಸುರಿದಾಗ ಡಾಕ್ಟರಲ್ಲಿಗೆ ಹೋಗುತ್ತಾರೆ. ಡಾಕ್ಟರ್ ಅನುವಿಗೆ ಬ್ಲಡ್ ಕ್ಯಾನ್ಸರ್ ಆಗಿದೆ ಎಂದು ತಿಳಿಸುತ್ತಾರೆ. ಅವರ ಪ್ರೀತಿಯ ನೆಲೆಯಲ್ಲಿ ಇದು ದೊಡ್ಡ ವಿಷಯ ಅಲ್ಲ ಎಂದು ಭಾವಿಸಿ ಔಷಧೋಪಚಾರಕ್ಕೆ ಸರ್ವೋತ್ತಮ ಮತ್ತು ಅನು ಸಿದ್ಧವಾಗುತ್ತಾರೆ.


ಆದರೆ ಅನುವಿನ ಆಸ್ಪತ್ರೆಯ ಖರ್ಚುಗಳನ್ನು ನಿಭಾಯಿಸಲಾಗದ ಸರ್ವೋತ್ತಮ ನಿಧಾನವಾಗಿ ಅನುವಿನಿಂದ ವಿಮುಖನಾಗ ತೊಡಗುತ್ತಾನೆ. ಅವಳೊಂದಿಗೆ ತಾನು ಪ್ರತಿಭಾರಿಯೂ ಆಸ್ಪತ್ರೆಗೆ ಹೋಗುತ್ತಿದ್ದವನು ಅದರಿಂದ ತಪ್ಪಿಸಿಕೊಳ್ಳಲು ಆರಂಭಿಸುತ್ತಾನೆ. ಈ ನಡುವೆ ಅನು ಸಹ ಮೊದಲಿನಷ್ಟು ಉತ್ಸಾಹ ಇಲ್ಲದವಳಾಗುತ್ತಾಳೆ. ಅವಳಿಗೆ ನೀಡುವ ಕೆಮೊಥೆರಪಿಯಲ್ಲಿ ಅವಳ ಮುಖವೂ ಸಹ ಕಪ್ಪಿಡುತ್ತಾ ಹೋಗುತ್ತದೆ. ಕೂದಲು ಉದುರ ತೊಡಗುತ್ತದೆ. ಅದಕ್ಕಾಗಿ ಅವಳು ತಲೆಗೆ ಬಟ್ಟೆ ಕಟ್ಟಿಕೊಂಡು ಓಡಾಡಲು ಆರಂಭಿಸುತ್ತಾಳೆ. ಈ ನಡುವೆ ಅದೇ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ನಿಂದಲೇ ನರಳುತ್ತಾ ಇರುವ ರೋಗಿ ವಿಶ್ವಾಸ್‌ನ ಪರಿಚಯ ಅನುವಿಗೆ ಆಗುತ್ತದೆ. ಅವರಿಬ್ಬರೂ ಒಂದೇ ದೋಣಿಯ ಪಯಣಿಗರು. ಆದರೆ ಅನುವಿಗೆ ಬೆಳೆದಿದ್ದ ನೆಗೆಟಿವ್ ಮೈಂಡ್‌ಸೆಟ್‌ಗಿಂತ ಭಿನ್ನವಾಗಿ ವಿಶ್ವಾಸ್ ಪಾಸಿಟಿವ್ ಆಗಿರುವವನು. ಆತನ ಮಾತು ಕೇಳುತ್ತಾ ನಗು ಮರೆತಿದ್ದ ಅನುವಿನ ಮುಖದಲ್ಲೂ ನಗು ಸುಳಿಯತೊಡಗುತ್ತದೆ. ಇದೇ ಸಮಯದಲ್ಲಿ ಒಂದು ದಿನ ಪರಊರಿಗೆ ಕೆಲಸದ ಮೇಲೆ ಹೋಗುತ್ತೇನೆ ಎಂದು ಹೊರಟ ಸರ್ವೋತ್ತಮ ಮತ್ತೆ ಮರಳುವುದೇ ಇಲ್ಲ. ತಂದೆ-ತಾಯಿಯನ್ನೂ ಬಿಟ್ಟು ಪ್ರೀತಿಸಿದವನ ಜೊತೆಗೆ ಬಂದಿದ್ದ ಅನು ದಿಢೀರನೆ ಒಂಟಿಯಾಗುತ್ತಾಳೆ. ಆಸ್ಪತ್ರೆಯ ಖರ್ಚು, ಮನೆಯ ಖರ್ಚು ನಿಭಾಯಿಸಲಾಗದೆ ಒದ್ದಾಡುತ್ತಾಳೆ.
ಆಸ್ಪತ್ರೆಯಲ್ಲಿ ಅವಳಿಗೆ ಸಿಗುವ ವಿಶ್ವಾಸ ತನ್ನ ಮಡದಿ ತನ್ನಿಂದ ಡಿವೋರ್ಸ್ ತೆಗೆದುಕೊಂಡದ್ದನ್ನು ದೊಡ್ಡ ಜೋಕ್ ಎಂಬಂತೆ ಹೇಳುತ್ತಾನೆ. ಅನು ಅವನ ತಮಾಷೆಗೆ ನಗಲಾಗದೆ ತನ್ನ ಗಂಡನೂ ಸಹ ತನ್ನಿಂದ ದೂರ ಸರಿದ ವಿಷಯ ತಿಳಿಸುತ್ತಾಳೆ. ತಾವು ಪ್ರೀತಿಸಿ ಮದುವೆಯಾದವರೂ ಎಂಬುದೇ ಸುಳ್ಳಾಯಿತು ಎನ್ನುತ್ತಾಳೆ. ತನ್ನ ತಂದೆ-ತಾಯಿಯನ್ನೂ ಬಿಟ್ಟು ತಾನು ಇಂತಹವನ ಜೊತೆಗೆ ಬಂದು ತಪ್ಪು ಮಾಡಿದೆ ಎಂದು ಕೊರಗುತ್ತಾಳೆ. ಅವಳನ್ನು ತಮಾಷೆಯ ಮೂಲಕವೇ ವಿಶ್ವಾಸ ಸಂತೈಸುತ್ತಾನೆ.
ಅವಳ ಆಸ್ಪತ್ರೆಯ ಖರ್ಚಿನ ಬಿಲ್ಲು ಕಟ್ಟಲು ಹೋದವಳಿಗೆ ಯಾರೋ ಅದನ್ನು ಕಟ್ಟಿದ್ದಾರೆ ಎಂದು ತಿಳಿದು ಅನುವಿಗೆ ಅಚ್ಚರಿಯಾಗುತ್ತದೆ. ಯಾರದು ಎಂದು ತಿಳಿಯುವ ಅವಳ ಪ್ರಯತ್ನಕ್ಕೆ ಉತ್ತರ ಸಿಗುವುದಿಲ್ಲ.
ನಿಧಾನವಾಗಿ ತನ್ನ ಮನೆಯ ಬಾಡಿಗೆಯನ್ನೂ ಯಾರೋ ಕಟ್ಟಿದ್ದಾರೆ, ತಾನು ದಿನಸಿ ತರುತ್ತಿದ್ದ ಅಂಗಡಿಗೂ ಯಾರೋ ದುಡ್ಡು ಕೊಟ್ಟಿದ್ದಾರೆ ಎಂದು ತಿಳಿದು ಅನುವಿಗೆ ಮತ್ತೆ ಅಚ್ಚರಿಯಾಗುತ್ತದೆ.
ಆಸ್ಪತ್ರೆಯಲ್ಲಿ ಸಿಗುವ ವಿಶ್ವಾಸನಿಗೆ ತನ್ನ ಅಚ್ಚರಿಯನ್ನು ಹೇಳುತ್ತಾಳೆ. ಅವನು ಅದನ್ನು ಸಹ ತಮಾಷೆ ಎಂಬಂತೆ ಮಾತಾಡುತ್ತಾನೆ.
ದಿನಗಳೆದಂತೆ ತನ್ನ ಬಿಲ್ಲು ಕಟ್ಟುತ್ತಾ ಇರುವವನು ವಿಶ್ವಾಸ ಎಂದು ಅನುವಿಗೆ ತಿಳಿಯುತ್ತದೆ. ಅನು ಸಿಟ್ಟಾಗುತ್ತಾಳೆ. ತಾನೇ ವಿಶ್ವಾಸನ ಬಳಿಗೆ ಸಾಗಿ ನೀವು ನನ್ನನ್ನ ಬುಟ್ಟಿಗೆ ಹಾಕಿಕೊಳ್ಳಲು ಪ್ರಯತ್ನಿಸುತ್ತಾ ಇದ್ದೀರಾ ಎಂದೆಲ್ಲಾ ಜಗಳವಾಡುತ್ತಾಳೆ.
ಮನೆಗೆ ಬಂದು ದುಃಖದಲ್ಲಿ ಮಲಗಿದ್ದವಳಿಗೆ ತಾನು ವಿಶ್ವಾಸನನ್ನು ಬಯ್ಯಬಾರದಿತ್ತೇ ಎಂಬ ಅನುಮಾನ ಕಾಡುತ್ತದೆ. ಆದರೂ ಮುಗುಮ್ಮಾಗಿಯೇ ಇರುತ್ತಾಳೆ.
ಕೆಲದಿನದ ನಂತರ ಆಸ್ಪತ್ರೆಯಲ್ಲಿ ವಿಶ್ವಾಸ ಎದುರಿಗೆ ಸಿಕ್ಕು ಅವರಿಬ್ಬರ ನಡುವೆ ಜಗಳವೇ ಆಗಿಲ್ಲ ಎಂಬಂತೆ ತಮಾಷೆ ಮಾಡುತ್ತಾ ಮಾತಾಡುತ್ತಾನೆ. ಅನು ಅವನನ್ನು ನೀವ್ಯಾಕೆ ಹಾಗೆ ಮಾಡಿದಿರಿ ಎಂದು ಕೇಳುತ್ತಾಳೆ. ವಿಶ್ವಾಸ ಯಾವತ್ತಿದ್ದರೂ ಸಾಯೋನಿಗೆ ದುಡ್ಡಿನ ಅವಶ್ಯಕತೆ ಇರೋಲ್ಲ ಅಲ್ವಾ ಎಂದು ಆ ಮಾತನ್ನೂ ಅತ್ಯಂತ ಸರಸವಾಗಿ ಹೇಳುತ್ತಾನೆ. ತನಗೆ ಉಪಯೋಗ ಆಗದೆ ಉಳಿದಿದ್ದ ಹೆಚ್ಚುವರಿಯನ್ನು ನಿಮ್ಮ ಲೆಕ್ಕಕ್ಕೆ ಜಮಾ ಮಾಡಿ ದುಡ್ಡು ಕಾಪಾಡುವ ವರಿಯಿಂದ ತಪ್ಪಿಸಿಕೊಂಡೆ ಎಂದು ನಗುತ್ತಾನೆ. ಅನು ಬಯ್ಯುತ್ತಾ ಬುಟ್ಟಿಗೆ ಹಾಕಿಕೊಳ್ಳುವ ಆರೋಪ ಮಾಡಿದ್ದನ್ನು ಸಹ ತಮಾಷೆ ಮಾಡುತ್ತಾನೆ. ಸಾಯೋನಿಗೆ ಜಗತ್ತಿನ ಎಲ್ಲರ ಮೇಲೆ ಪ್ರೀತಿ ಇರುತ್ತೆ ಅಂತಾನೆ. ಹಾಗೆಯೇ ನಿಮ್ಮ ಮೇಲೂ ಪ್ರೀತಿ ಇದೆ. ಆ ಪ್ರೀತಿ ಮಲಗುವ ಮನೆಯಲ್ಲಿ ಕೊನೆಯಾಗುವಂತಹುದಲ್ಲ ಎನ್ನುತ್ತಾನೆ. ಅನುವಿಗೆ ಅವನ ಮಾತು, ತಮಾಷೆ ಮತ್ತಷ್ಟು ಅಚ್ಚರಿಗಳನ್ನು ನೀಡುತ್ತದೆ.
ಅನು ತನ್ನ ಮನೆಯಲ್ಲಿ ಅವನ ಮಾತುಗಳ ಆನಂದದಲ್ಲಿ ಇರುವಾಗಲೇ ಅವಳಿಗೊಂದು ಕಾಗದ ಬರುತ್ತದೆ. ಆ ಕಾಗದವು ಅವಳಿಗೆ ಯಾವುದೋ ಕಂಪೆನಿಯಲ್ಲಿ ಕೆಲಸ ಸಿಕ್ಕಿದೆ ಎಂದು ತಿಳಿಸುತ್ತದೆ. ತನ್ನ ಅನಾರೋಗ್ಯದ ಕಾಲದಲ್ಲಿ ತನಗಾಗಿ ಕೆಲಸಕ್ಕೆ ಅರ್ಜಿ ಹಾಕಿದವರು ಯಾರು ಎಂಬ ಗೊಂದಲದಲ್ಲಿ ಇರುವವಳಿಗೆ ಇದು ವಿಶ್ವಾಸನದೇ ಕೆಲಸ ಎನಿಸುತ್ತದೆ.
ಮತ್ತೆ ಆಸ್ಪತ್ರೆಯಲ್ಲಿ ವಿಶ್ವಾಸನನ್ನ ಭೇಟಿ ಮಾಡಿ ಯಾಕೆ ಹೀಗೆ ಎನ್ನುತ್ತಾಳೆ. ನನಗೆ ಡೇಟ್ ಕೊಟ್ಟಿದ್ದಾರೆ. ಸಾವು ಈ ವರ್ಷದ ಒಳಗೆ ಬರಲಿದೆ. ನನ್ನ ಕೆಲಸವನ್ನ ನಿಮಗೆ ಕೊಡಬಹುದು ಎಂದು ನಾನೇ ಬರೆದೆ ಎನ್ನುತ್ತಾನೆ. ಅನು ಅಚ್ಚರಿಯಲ್ಲಿರುವಾಗಲೇ ಅವಳ ಖಾಯಿಲೆ ಬಹುತೇಕ ಗುಣವಾಗಿದೆ ಎನ್ನುವ ಡಾಕ್ಟರ್. ಅನು ಮತ್ತೆ ವಿಶ್ವಾಸನೊಂದಿಗೆ ಮಾತಾಡಲೆಂದು ನೋಡುವಾಗ ಆತ ಕಾಣುವುದಿಲ್ಲ. ಆತನನ್ನು ಹುಡುಕುತ್ತಾ ಹೋಗುವ ಅನು.
ವಿಶ್ವಾಸ ಅವನ ಮನೆಯಲ್ಲಿ ಸಿಗುತ್ತಾನೆ. ದೊಡ್ಡ ಮನೆಯಲ್ಲಿ ಒಬ್ಬಂಟಿಯಾಗಿರುವ ವಿಶ್ವಾಸ. ಅನು ಇನ್ನು ಮುಂದೆ ತಾನೂ ಈ ಮನೆಯಲ್ಲಿಯೇ ಇರುತ್ತೇನೆ ಎನ್ನುತ್ತಾಳೆ. ಯಾಕಾಗಿ ಎನ್ನುವ ವಿಶ್ವಾಸನಿಗೆ ನಮ್ಮಿಬ್ಬರಲ್ಲಿ ಮೊದಲು ಯಾರು ಹೋಗುತ್ತಾರೋ ತಿಳಿಯದು. ಅಲ್ಲಿಯವರೆಗೆ ನಗುನಗುತ್ತಾ ಬದುಕೋಕ್ಕೆ ಕಂಪೆನಿ ಬೇಕು ಅಲ್ವಾ ಎನ್ನುತ್ತಾಳೆ. ವಿಶ್ವಾಸ ಅಚ್ಚರಿಯಲ್ಲಿ ಉಳಿಯುತ್ತಾನೆ.
ಅನು ವಿಶ್ವಾಸನ ಆರೈಕೆ ಮಾಡುತ್ತಲೇ ತನ್ನ ಕೆಲಸಕ್ಕೂ ಹೋಗಲು ಆರಂಭಿಸುತ್ತಾಳೆ.
ಒಂದು ದಿನ ವಿಶ್ವಾಸನ ಖಾಯಿಲೆ ತೀರಾ ಉಲ್ಬಣಗೊಂಡಾಗ ಆತನ ಸೇವೆ ಮಾಡುವ ಅನುವಿಗೆ ನೀವು ನನ್ನ ಸೇವೆ ಯಾಕೆ ಮಾಡುತ್ತಿದ್ದೀರಿ? ನನ್ನನ್ನ ಬುಟ್ಟಿಗೆ ಹಾಕಿಕೊಳ್ತಾ ಇದ್ದೀರಾ ಎಂದು ಕೇಳುವ ವಿಶ್ವಾಸನ ತಮಾಷೆಯ ಮಾತಿಗೆ ಅಷ್ಟೇ ತಮಾಷೆಯಾಗಿ ಯಾಕಾಗಬಾರದು ನನ್ನ ಗಂಡ ನನ್ನಿಂದ ದೂರ ಹೋದ, ನಿಮ್ಮ ಮನೆಯಾಕೆ ನಿಮ್ಮಿಂದ ದೂರ ಸರಿದಿದ್ದಾಳೆ. ನಾವಿಬ್ಬರೂ ಜೊತೆಯಾಗಿ ಬದುಕಬಹುದಲ್ಲಾ ಎನ್ನುವ ಅನು. ಜನ ನೂರು ಮಾತಾಡ್ತಾರಲ್ಲ ಎನ್ನುವ ವಿಶ್ವಾಸನಿಗೆ ಅರಿಸಿನದ ಕೊನೆ ಕಟ್ಟು ನನ್ನ ಕೊರಳಿಗೆ ಇದನ್ನು ಕಟ್ಟಿ ಜನರ ಮಾತೂ ತಪ್ಪುತ್ತದೆ ಎನ್ನುತ್ತಾಳೆ. ವಿಶ್ವಾಸ ಅಚ್ಚರಿಯಲ್ಲಿ ಉಳಿಯುತ್ತಾನೆ.
ಮಾರನೆಯ ದಿನ ಆಸ್ಪತ್ರೆಯಲ್ಲಿ ಡಾಕ್ಟರ್ ಎದುರಿಗೆ ಅನು-ವಿಶ್ವಾಸ ಹಾರ ಬದಲಿಸಿಕೊಳ್ಳುತ್ತಾರೆ. ಇಬ್ಬರೂ ನಗುತ್ತಾ ಹೊರಡುವಾಗ ‘ಅವರಿಬ್ಬರೂ ಸುಖವಾಗಿದ್ದರೂ ಸಾಯುವ ವರೆಗೆ’ ಎಂಬ ಶೀರ್ಷಿಕೆ ಬರುತ್ತದೆ.
* * *

ಬಿ.ಸುರೇಶ ಅವರ
ಪ್ರೀತಿ ಎಂಬ ಅಚ್ಚರಿ!
ದೃಶ್ಯ ಕ್ರಮ
ದೃಶ್ಯ ೧/ ಹಗಲು-ರಾತ್ರಿ/ ಒಳಾಂಗಣ/ ಅನು ಮನೆ
ಮನೆಯೊಳಗೆ ಸೋತವಳಂತೆ ಕುಳಿತಿರುವ ಅನುವಿನ ಚಿತ್ರಿಕೆಗಳು.
ಅವಳು ವಾಂತಿ ಮಾಡಿಕೊಳ್ಳುವಾಗ ಬೀಳುವ ರಕ್ತ.
ಯಾರೇ ಬಾಗಿಲು ಬಡಿದರೂ ತೆಗೆಯದೇ ಮನೆಯ ಒಳಗೆ ಕುಳಿತಿರುವ ಅನು.
ಹಸಿವಾದಾಗ ಖಾಲಿ ಪಾತ್ರೆಗಳನ್ನು ನೋಡುತ್ತಾ, ನೀರು ಕುಡಿಯುತ್ತಾ ಸಮಯ ಕಳೆವ ಅನು.
ಯಾರ‍್ಯಾರೋ ಬಾಗಿಲು ಬಡಿದರೂ ತೆಗೆಯದೇ ಮನೆಯೊಳಗೇ ಕುಳಿತಿರುವ ಅನು. (ಮನೆಯ ಮಾಲೀಕ/ ಮಾಲೀಕನ ಮಡದಿ/ ಹಾಲಿನಾಕೆ/ ದಿನಸಿ ಅಂಗಡಿಯವರು ಹೀಗೇ ನಾಲ್ಕೈದು ಜನ ವಿಭಿನ್ನ ಸಮಯಗಳಲ್ಲಿ ಮನೆಯ ಬಾಗಿಲು ಬಡಿಯುತ್ತಾರೆ)
ಇಂತಹ ಅನೇಕ ಚಿತ್ರಿಕೆಗಳ ಮೇಲೆ ಆರಂಭಿಕ ಶೀರ್ಷಿಕೆಗಳು ಬರುತ್ತವೆ.
ಅಂತಿಮವಾಗಿ ಅನುವಿನ ಬಳಿಗೆ ಸಾಗುವ ಕ್ಯಾಮೆರಾ. ಅನು ಸೋತವಳಂತೆ ಹಾಸಿಗೆಯಲ್ಲಿ ಮುದುಡಿ ಮಲಗಿದ್ದಾಳೆ.
ದೃಶ್ಯ ೨/ ಹಗಲು/ ಹೊರಾಂಗಣ/ ರಸ್ತೆ
ಸರ್ವೋತ್ತಮ ಅನುವಿಗೆ ಐ ಲವ್ ಯೂವ್ ಅನ್ನುತ್ತಾನೆ. ಅನು ನಾಚುತ್ತಾಳೆ. ಪಾರ್ಕಿನ ಪಕ್ಕದ ಬೀದಿಯಲ್ಲಿ ನಡೆಯುವ ಈ ಮಾತುಗಳಲ್ಲಿ ನಮ್ಮನೆಯೋರು ಒಪ್ಪಲ್ಲ ಎನ್ನುವ ಅನು. ಸರ್ವೋತ್ತಮ ಯಾರೊಪ್ಪದಿದ್ದರೂ ನಾನು ಅವಳ ಕೈ ಬಿಡುವುದಿಲ್ಲ ಎನ್ನುತ್ತಾನೆ. ಪ್ರೀತಿ ಯಾವತ್ತಿದ್ದರೂ ಗೆಲ್ಲುತ್ತೆ ಎನ್ನುತ್ತಾನೆ. ಅನು ಸಂಭ್ರಮದಲ್ಲಿ ಉಳಿಯುತ್ತಾಳೆ.
ದೃಶ್ಯ ೨ಎ
ಅನು ಮನೆಯಲ್ಲಿ ಸಂಕಟ ಪಡುತ್ತಾಳೆ. ವಾಂತಿ ಮಾಡಿದವಳಿಗೆ ರಕ್ತ ಹೋಗುತ್ತದೆ. ಸಂಕಟದಿಂದ ಕುಸಿದು ಕೂರುವವಳ ಬಳಿಗೆ ಸಾಗುವ ಕ್ಯಾಮೆರಾ
ದೃಶ್ಯ ೩/ ಹಗಲು/ ಹೊರಾಂಗಣ/ ಹೋಟೆಲ್
ತನ್ನ ತಂದೆ ಈ ಮದುವೆಗೆ ಒಪ್ಪಲಿಲ್ಲ ಎನ್ನುವ ಅನು. ನಮ್ಮ ಮನೆಯಲ್ಲೂ ಅದೇ ಕತೆ ಎನ್ನುವ ಸರ್ವೋತ್ತಮ. ಹಾಗಾದರೆ ಈಗೇನು ಎನ್ನುವ ಅನು. ಇನ್ನೇನು ನನಗೆ ಕೆಲಸ ಇದೆ. ನಿನಗೂ ಕೆಲಸ ಇದೆ. ಮನೆಯವರ ಮಾತು ಕೇಳೋದ್ಯಾಕೆ ಮದುವೆ ಆಗೋಣ ಎನ್ನುವ ಸರ್ವೋತ್ತಮ. ಅನು ಯಾವಾಗ ಎನ್ನುತ್ತಾಳೆ. ಮುಂದಿನ ತಿಂಗಳು ಸಂಬಳ ಬಂದ ತಕ್ಷಣ ಎನ್ನುವ ಸರ್ವ.
ದೃಶ್ಯ ೩ಎ
ಅನು ಮನೆಯಲ್ಲಿ ಮಂಚದ ಮೇಲೆ ಮಲಗಿದ್ದಾಳೆ. ಅವಳಿಗೆ ಸಂಕಟವಾಗುತ್ತದೆ. ಮರಳಿ ಅವಳ ಸಮೀಪಕ್ಕೆ ಸಾಗುವ ಕ್ಯಾಮೆರಾ
ದೃಶ್ಯ ೪/ ಹಗಲು/ ಹೊರಾಂಗಣ/ ರಸ್ತೆ
ಅನುವಿನ ಗೆಳತಿ ಈ ವಯಸ್ಸಿಗೆ ಮದುವೇನಾ ಎಂದು ರೇಗಿಸುತ್ತಾಳೆ. ಅನು ತನ್ನ ಸಮಜಾಯಿಷಿ ಹೇಳುತ್ತಾಳೆ. ಆದರೂ ಅಪ್ಪ-ಅಮ್ಮನನ್ನೂ ಬಿಟ್ಟು ಯಾವುದೋ ಹುಡುಗನ ಹಿಂದೆ ಹೋಗ್ತೀನಿ ಅಂತೀಯಲ್ಲಾ ನಾಳೆ ಅವನು ಕೈ ಕೊಟ್ಟರೆ ಆಸರೆ ಯಾರು ಎನ್ನುವ ಗೆಳೆತಿ. ಅನುವಿಗೆ ತನ್ನ ಪ್ರೀತಿಯ ಬಗ್ಗೆ ವಿಶೇಷ ನಂಬಿಕೆ ಇದೆ.
ದೃಶ್ಯ ೪ಎ
ರಾತ್ರಿ ತನ್ನ ಮನೆಯಲ್ಲಿ ಸಂಕಟ ಪಡುವ ಅನು
ದೃಶ್ಯ ೫/ ಹಗಲು/ ಹೊರಾಂಗಣ/ ದೇವಸ್ಥಾನದಲ್ಲಿ
ಅನು ಮತ್ತು ಸರ್ವ ಹಾರ ಬದಲಿಸಿಕೊಳ್ಳುತ್ತಾರೆ. ಜೊತೆಯಲ್ಲಿರುವ ಗೆಳತಿಗೆ ಸಿಹಿ ತಿನ್ನಿಸುತ್ತಾರೆ. ಮುಂದೆ ಎನ್ನುವ ಗೆಳತಿ. ಸರ್ವ ತಾನು ಮನೆ ನೋಡಿದ್ದೇನೆ ಎನ್ನುತ್ತಾನೆ.
ದೃಶ್ಯ ೬/ ಹಗಲು/ ಹೊರಾಂಗಣ/ ಅನು ಮನೆ
ಹೊಸ ಮನೆಗೆ ಬರುವ ದಂಪತಿಗಳನ್ನು ತಾವೇ ಆರತಿ ಮಾಡಿ ಕರೆದುಕೊಳ್ಳುವ ಮನೆಯ ಮಾಲೀಕರ ಮಡದಿ. ಮಾಲೀಕರ ಮಡದಿ ಮಂಜುಳಮ್ಮನಿಗೆ ಈ ಹುಡುಗರನ್ನು ಕಂಡರೆ ಸಂತೋಷ ಅನ್ನುವುದಕ್ಕಿಂತ ಕೇಳಿದಷ್ಟು ಅಡ್‌ವಾನ್ಸ್ ಕೊಟ್ಟಿದ್ದಾರೆ ಎಂಬ ಸಂತಸ. ಇಬ್ಬರೂ ಸರಿಯಾಗಿ ಬಾಡಿಗೆ ಕೊಟ್ಟ್‌ಕೊಂಡಿರಿ ಎನ್ನುತ್ತಾರೆ.
ದೃಶ್ಯ ೭/ ಹಗಲು/ ಒಳಾಂಗಣ/ ಅನು ಮನೆ
ಹೊಸ ಮನೆಯಲ್ಲಿ ನವದಂಪತಿಗಳ ಸರಸ. ನಾಳೆಯಿಂದ ಕೆಲಸಕ್ಕೆ ಹೋಗಬೇಕಲ್ಲಾ ಎಂಬ ಚಿಂತೆ. ರಜೆ ಹಾಕಿದರೆ ಸಂಪಾದನೆ ಸಾಲುವುದಿಲ್ಲ ಎಂಬ ಮಾತು. ಆಗಲೇ ಕೆಮ್ಮುವ ಅನು. ಗಾರ್ಮೆಂಟ್ ಫ್ಯಾಕ್ಟರಿಯ ಧೂಳಿನಿಂದ ನನಗೆ ಸಿಕ್ಕ ಬಳುವಳಿ ಎಂದು ತಮಾಷೆ ಮಾಡುವ ಅನು. ಸರ್ವ ಕೂಡ ಆರಾಮಾಗುತ್ತಾನೆ.
ದೃಶ್ಯ ೮/ ಮಾಂಟಾಜ್
ನವದಂಪತಿಗಳು ಅವಸರದಿಂದ ಫ್ಯಾಕ್ಟರಿಗೆ ಹೋಗುವುದು. ರಸ್ತೆಯ ಮೂಲೆಯಲ್ಲಿ ಗಂಡನಿಗೆ ಕಾಯುತ್ತಾ ನಿಂತವಳಿಗೆ ಸಿಗುವ ಸರ್ವ. ತರಕಾರಿ ಕೊಳ್ಳುವುದು. ಮನೆಯಲ್ಲಿ ಇಬ್ಬರೂ ಸೇರಿ ಅಡಿಗೆ ಮಾಡುವುದು. ಆಗಾಗ ಕೆಮ್ಮುವ ಅನು ನೀರು ಕುಡಿಯುವುದು. ಅವರಿಬ್ಬರ ಸಂಸಾರ ಕುರಿತಂತೆ ಗೆಳತಿಯ ತಮಾಷೆ. ಪ್ರೀತಿ ಇದ್ದಾಗ ಯಾವುದೂ ಕಷ್ಟ ಅಲ್ಲ ಎನ್ನುವ ಅನು.
ದೃಶ್ಯ ೮ಎ
ತನ್ನ ಮಾತು ಸ್ವತಃ ಸುಳ್ಳಾಯಿತು ಎಂದು ದುಃಖಿಸುವ ಅನು
ದೃಶ್ಯ ೯/ ರಾತ್ರಿ/ ಒಳಾಂಗಣ/ ಅನು ಮನೆ
ಮನೆಯಲ್ಲಿ ಗಂಡನ ತಮಾಷೆಯ ನಡುವೆ ಮನೆಗೆಲಸ ಮಾಡುತ್ತಿರುವ ಅನುವಿಗೆ ಭಯಂಕರ ಕೆಮ್ಮು ಬರುತ್ತದೆ. ಈ ಬಾರಿ ರಕ್ತ ಕಾರಿಕೊಳ್ಳುತ್ತಾಳೆ. ಗಾಬರಿಯಾಗುವ ಸರ್ವ. ಅವನಿಗೆ ಸ್ವತಃ ಧೈರ್ಯ ಹೇಳುವ ಅನು. ಡಾಕ್ಟರ್ ಬಳಿ ಹೋಗುವ ತೀರ್ಮಾನ
ದೃಶ್ಯ ೧೦/ ಹಗಲು/ ಒಳಾಂಗಣ/ ಆಸ್ಪತ್ರೆ
ಆಸ್ಪತ್ರೆಯಲ್ಲಿ ಅನುವನ್ನು ಪರೀಕ್ಷಿಸಿರುವ ಡಾಕ್ಟರ್ ಸರ್ವನಿಗೆ ಮಾತಾಡುತ್ತಾ ಇದು ಬ್ಲಡ್ ಕ್ಯಾನ್ಸರ್ ಎನ್ನುತ್ತಾರೆ. ಇದನ್ನು ವಾಸಿ ಮಾಡಬಹುದು. ಸಮಯ ಬೇಕಾಗುತ್ತದೆ ಎನ್ನುತ್ತಾರೆ.
ದೃಶ್ಯ ೧೧/ ಹಗಲು/ ಒಳಾಂಗಣ/ ಅನು ಮನೆ
ತನ್ನ ಮಡದಿಗಾಗಿ ದುಃಖಿಸುವ ಸರ್ವನಿಗೆ ಅನು ಧೈರ್ಯ ಹೇಳುತ್ತಾಳೆ. ಔಷಧಿಗಳನ್ನು ತೆಗೆದುಕೊಂಡರೆ ಎಲ್ಲವೂ ಸರಿಹೋಗುತ್ತದೆ ಎನ್ನುವ ಅನು.
ದೃಶ್ಯ ೧೨/ ಹಗಲು/ ಹೊರಾಂಗಣ/ ರಸ್ತೆ
ಔಷಧಿಗಳನ್ನು ಕೊಂಡು ತರುವ ಸರ್ವ, ರಸ್ತೆಯಲ್ಲಿ ನಿಂತ ಅನುವಿಗೆ ನೀಡುತ್ತಾನೆ. ಇವತ್ತು ಗಾರ್ಮೆಂಟ್ ಫ್ಯಾಕ್ಟರಿಯಲ್ಲಿಯೂ ರಕ್ತ ಬಂದು ಕೆಲಸ ಮಾಡಲಾಗಲಿಲ್ಲ. ನನ್ನ ಕೆಲಸ ಹೊಯಿತು ಎನ್ನುವ ಅನು. ಮುಂದೆ ಎಂದು ಗಾಬರಿಯಾಗುವ ಸರ್ವ. ನೋಡೋಣ ಯಾವುದಾದರೂ ದಾರಿ ಇರುತ್ತೆ ಎನ್ನುವ ಅನು.
ದೃಶ್ಯ ೧೩/ ಹಗಲು/ ಒಳಾಂಗಣ/ ಅನು ಮನೆ
ಮನೆಯಲ್ಲಿ ಹಾಲು ದಿನಸಿ ತರಲು ದುಡ್ಡು ಸಾಲುತ್ತಿಲ್ಲ ಎಂಬ ಮಾತಾಡುವ ಸರ್ವ. ಅನು ಎರಡು ದಿನ ಕಡಿಮೆ ತಿಂದರಾಯಿತು ಎನ್ನುತ್ತಾಳೆ. ಆದರೆ ಎಷ್ಟು ದಿನ ಹೀಗೆ ಎನ್ನುವ ಸರ್ವ. ಪ್ರೀತಿ ಇರುವವರಿಗೆ ಇನ್ಯಾವುದೂ ಕಷ್ಟ ಆಗಬಾರದು ಅಲ್ವಾ? ಎನ್ನುವ ಅನು. ಸರ್ವ ಮಾತಿಲ್ಲದೆ ಹೊರಗೆ ಹೋಗುತ್ತಾನೆ.
ದೃಶ್ಯ ೧೩ ಎ
ಅನು ಕೆಮ್ಮುತ್ತಾ ತಮಗೆ ಪ್ರೀತಿ ಇದ್ದದ್ದೇ ಸುಳ್ಳಾ ಹಾಗಾದ್ರೆ ಎನ್ನುತ್ತಾಳೆ. ಆಗಲೇ ಮತ್ಯಾರೋ ಬಾಗಿಲು ಬಡಿದು ಅವಳನ್ನು ಕೂಗುತ್ತಾರೆ. ಉತ್ತರಿಸದೆ ಹೆದರಿಕೆಯಿಂದಲೇ ಹೊರಗಿನ ದಿಕ್ಕಲ್ಲಿ ನೋಡುವ ಅನು. ಹೊರಗೆ ಮನೆಯ ಮಾಲೀಕರಾದ ಮಂಜುಳಮ್ಮ ಅನುವನ್ನು ಮತ್ತೆ ಮತ್ತೆ ಕೂಗುತ್ತಾ ಇದ್ದಾರೆ. ಈ ಗಂಡ – ಹೆಂಡತಿ ಅದೆಲ್ಲಿ ನಾಪತ್ತೆ ಆದರು ಎಂದವರು ಗೊಣಗುತ್ತಾ ಸಾಗುತ್ತಾರೆ. ಅನು ಅವರಿರುವವರೆಗೆ ಕೆಮ್ಮು ತಡೆದಿದ್ದವಳು ನಿರಾಳವಾಗಿ ಕೆಮ್ಮುತ್ತಾಳೆ. ನಿಟ್ಟುಸಿರಿಟ್ಟು ನೀರು ಕುಡಿಯುತ್ತಾಳೆ. ಮತ್ತೆ ನೆನಪಿಗೆ ಜಾರುತ್ತಾಳೆ.
ದೃಶ್ಯ ೧೪/ ಆಸ್ಪತ್ರೆ – ಡಾಕ್ಟರ್ ಛೇಂಬರ್
ಆಸ್ಪತ್ರೆಗೆ ಒಬ್ಬಳೇ ಬಂದಿರುವ ಅನು ಡಾಕ್ಟರ್ ಬಳಿ ತಮ್ಮ ಆದಾಯ ಔಷಧಿ ಕೊಳ್ಳಲು ಸಾಲುತ್ತಿಲ್ಲ ಎನ್ನುತ್ತಾಳೆ. ಡಾಕ್ಟರ್ ಯಾವುದಾದರೂ ದಾನಿಯನ್ನು ಹುಡುಕಿ ಎನ್ನುತ್ತಾರೆ. ತನಗೆ ಈ ಊರಲ್ಲಿ ಯಾರ ಪರಿಚಯವೂ ಇಲ್ಲ ಎನ್ನುವ ಅನು. ಸಿಗ್ತಾರೆ ನೀನು ಆ ಬಗ್ಗೆ ಚಿಂತಿಸಬೇಡಮ್ಮಾ ಎನ್ನುವ ಡಾಕ್ಟರ್.
ದೃಶ್ಯ ೧೪ಎ/ ಆಸ್ಪತ್ರೆ ಕಾರಿಡಾರ್
ಕಾರಿಡಾರ್‌ನಲ್ಲಿ ಬೇಸರದಿಂದ ನಡೆಯುವ ಅನುವಿಗೆ ಢೀ ಕೊಡುವ ವಿಶ್ವಾಸ್. ತಮಾಷೆ ಮಾಡುತ್ತಾನೆ. ಅನು ಅವನತ್ತ ಅಸಡ್ಡೆಯಿಂದ ನೋಡಿ ಹೊರಡುತ್ತಾಳೆ.
ದೃಶ್ಯ ೧೫/ ಹಗಲು/ ಒಳಾಂಗಣ/ ಅನು ಮನೆ
ಮನೆಯೊಳಗೆ ಬರುವ ಅನುವಿಗೆ ಸಿಗುವುದೆಲ್ಲಾ ಖಾಲಿ ಪಾತ್ರೆಗಳು. ಅವಳು ಹಾಗೆ ತಡಕುವಾಗಲೇ ಅವಳಿಗೊಂದು ಪತ್ರ ಸಿಗುತ್ತದೆ. ತೆಗೆದು ನೋಡುವ ಅನು. ಸರ್ವ ಪತ್ರ ಬರೆದಿದ್ದಾನೆ. ತಾನು ಅವಳನ್ನು ಪ್ರೀತಿಸಿದೆ. ಮದುವೆಯಾದೆ. ಆದರೆ ಈಗ ಅವಳನ್ನು ನೋಡಿಕೊಳ್ಳುವಷ್ಟು ಚೈತನ್ಯ ತನಗಿಲ್ಲ. ನನ್ನ ಆದಾಯದಲ್ಲಿ ಅವಳ ಖಾಯಿಲೆಗೆ ಔಷಧಿ ತರುವುದು ಸಹ ಸಾಧ್ಯವಿಲ್ಲ. ಹೀಗಾಗಿ ತಾನು ಅನುವಿನಿಂದ ದೂರಕ್ಕೆ ಸಾಗುತ್ತಾ ಇದ್ದೇನೆ ಎಂದು ಬರೆದಿದ್ದಾನೆ. ಆ ಪತ್ರ ನೋಡಿ ಕಣ್ಣೀರಾಗುವ ಅನು. ದಿಕ್ಕು ತೋಚದಂತೆ ಅಳುತ್ತಾಳೆ.
ದೃಶ್ಯ ೧೬/ ಹಗಲು/ ಒಳಾಂಗಣ/ ಅನು ಮನೆ
ಅನು ಮನೆಗೆ ಬಂದಿರುವ ಅವಳ ಗೆಳತಿ “ಅವಸರದಲ್ಲಿ ಮದುವೆಗೆ ಸಿದ್ಧವಾದಾಗಲೇ ನಾನು ಹೇಳಿದ್ದೆ. ಈಗೇನು ಮಾಡ್ತೀಯಾ?” ಎನ್ನುತ್ತಾಳೆ. ದಿಕ್ಕು ತೋಚದಂತೆ ಕುಳಿತಿರುವ ಅನುವಿಗೆ ಅಪ್ಪ-ಅಮ್ಮನನ್ನು ಸಂಪರ್ಕಿಸುವುದು ಅವಮಾನದ-ಸೋಲಿನ ಸಂಗತಿ. ಗೆಳತಿ ಅವಳಿಗೆ ಕೊಂಚ ದುಡ್ಡು ಕೊಟ್ಟು, ಮತ್ತೆ ಫ್ಯಾಕ್ಟಿರಿಯಲ್ಲಿ ಯಾವುದಾದರೂ ಕೆಲಸ ಸಿಗುತ್ತಾ ನೋಡ್ತೀನಿ ಎನ್ನುತ್ತಾಳೆ. ಅನು ಅವಳಿಗೆ ಉತ್ತರಿಸದ ಸ್ಥಿತಿಯಲ್ಲಿ ಬಿಮ್ಮನೆ ಕುಳಿತೇ ಇದ್ದಾಳೆ.
ದೃಶ್ಯ ೧೬ಎ
ಅದೇ ಸ್ಥಿತಿಯಲ್ಲಿ ಕುಳಿತಿರುವ ಅನುವಿಗೆ ಎಚ್ಚರವಾಗುವಂತೆ ಮತ್ತೆ ಬಾಗಿಲ ಸದ್ದು. ಮಂಜುಳಮ್ಮ ಆವಳಿಗಾಗಿ ತಂದಿರುವ ಪಾಯಸದ ಕುರಿತು ಕೂಗುತ್ತಾರೆ. ಅನುಮಾನದಿಂದ ಕಿಟಕಿಯ ಸಂದಿಯಿಂದ ನೋಡುವ ಅನು. ಬಾಡಿಗೆ ಕೊಡದೆ ಇರುವವರಿಗೆ ಪಾಯಸ ಯಾಕೆ ಎನ್ನುವ ಅನು. ಬಾಡಿಗೆ ಬಂತಲ್ಲೇ ಹುಡುಗಿ ಎನ್ನುವ ಮಂಜುಳಮ್ಮ. ಅಚ್ಚರಿಯಲ್ಲಿ ಉಳಿಯುವ ಅನು.
ಬಾಗಿಲು ತೆಗೆದು ಪಾಯಸ ಪಡೆಯುತ್ತಾ ಬಾಡಿಗೆ ಕೊಟ್ಟವರಾರು ಎನ್ನುತ್ತಾಳೆ. ಯಾರೋ ಆಸ್ಪತ್ರೆಯವರು ಬಂದಿದ್ದ್ರು. ಹಾಲಿನ ದುಡ್ಡು, ದಿನಸಿ ಅಂಗಡಿಯೋರ‍್ದು, ಬಾಡಿಗೆ ಬಾಕಿ ಎಲ್ಲಾ ಕೊಟ್ಟು ಹೋದ್ರು ಎನ್ನುತ್ತಾರೆ. ಬೆರಗಾಗುವ ಅನು.
ದೃಶ್ಯ ೧೭/ ಹಗಲು/ ಒಳಾಂಗಣ/ ಆಸ್ಪತ್ರೆ
ಡಾಕ್ಟರನ್ನ ಭೇಟಿ ಮಾಡಿ ನಿಮ್ಮ ಸಹಾಯಕ್ಕೆ ಥ್ಯಾಂಕ್ಸ್ ಎನ್ನುವ ಅನುವಿಗೆ ಸಹಾಯ ಮಾಡಿದವನು ನಾನಲ್ಲ, ವಾರ್ಡ್ ನಂಬರ್ ೬ರಲ್ಲಿ ಇರುವವರು ಎನ್ನುವ ಡಾಕ್ಟರ್.
ದೃಶ್ಯ ೧೭ಎ/ ಆಸ್ಪತ್ರೆ –ಕಾರಿಡಾರ್ ಮತ್ತು ವಾರ್ಡ್
ವಾರ್ಡ್ ೬ ಅನ್ನು ಹುಡುಕುತ್ತಾ ಸಾಗುವ ಅನುವಿಗೆ ಮತ್ತೆ ಢೀ ಕೊಡುವ ವಿಶ್ವಾಸನ ತಮಾಷೆ. ಅನು ಸಿಟ್ಟಿನಿಂದ ಆತನನ್ನು ನೋಡುತ್ತಾಳೆ. ವಾರ್ಡ್ ೬ರಲ್ಲಿ ಯಾರೂ ಇಲ್ಲ. ಇಲ್ಲಿದ್ದವರು ಯಾರು ಎನ್ನುವ ಅನುವಿಗೆ ಅಲ್ಲಿದ್ದ ನರ್ಸ್ ಈಗ್ತಾನೆ ನಿನಗೆ ಡ್ಯಾಷ್ ಹೊಡದ್ರು ಅಂತ ಬೈದ್ಯಲ್ಲಾ ಅದೇ ವ್ಯಕ್ತಿ ಎನ್ನುತ್ತಾಳೆ. ಬೆರಗಾಗುವ ಅನುವಿಗೆ ಆತನ ಹೆಸರು ವಿಶ್ವಾಸ್ ಎಂದು ತಿಳಿಯುತ್ತದೆ. ಆತನನ್ನು ಹುಡುಕಿಕೊಂಡು ಹೋಗುತ್ತಾಳೆ.
ಕಾರಿಡಾರಿನಲ್ಲಿ ಮತ್ಯಾರಿಗೋ ಡಿಕ್ಕಿ ಹೊಡೆದು ತಮಾಷೆ ಮಾಡುತ್ತಾ ಮಾತಾಡುತ್ತಿರುವ ವಿಶ್ವಾಸ್. ಅನು ಆತನ ಬಳಿಗೆ ಬಂದು ಥ್ಯಾಂಕ್ಸ್ ಎನ್ನುತ್ತಾಳೆ. ಡಿಕ್ಕಿ ಹೊಡೆದಿದ್ದಕ್ಕಾ ಎನ್ನುವ ವಿಶ್ವಾಸ್. ಅಲ್ಲ ನನಗೆ ದುಡ್ಡು ಕೊಟ್ಟು ಸಹಾಯ ಮಾಡಿದ್ದಕ್ಕೆ ಎನ್ನುವ ಅನು. ಆತ ಅದ್ಯಾವ ದೊಡ್ಡ ವಿಷಯ ಬಿಡಿ ಎಂದು ಎಲ್ಲಿಗೋ ಹೊರಟು ಬಿಡ್ತಾನೆ.
ಡಾಕ್ಟರ್ ಆತನಿಗೆ ಬೋನ್‌ಮ್ಯಾರೋ ಕ್ಯಾನ್ಸರ್ ಇದೆ ಆದರೆ ಎಲ್ಲರೊಂದಿಗೂ ನಗ್ತಾ ಎಲ್ಲರಿಗೂ ಸಹಾಯ ಮಾಡ್ತಾ ಇರ‍್ತಾನೆ ಎನ್ನುತ್ತಾರೆ. ಅನುವಿಗೆ ಆತನ ಬಗ್ಗೆ ಗೌರವ ಮತ್ತು ಅನುಕಂಪ ಶುರುವಾಗುತ್ತದೆ. ಡಾಕ್ಟರ್ ‘ಅನುವಿಗೆ ಖಾಯಿಲೆ ವಾಸಿಯಾಗುವ ಅವಕಾಶ ಇದೆ. ಆತನಿಗಿಲ್ಲ. ಆತ ಇನ್ನಾರು ತಿಂಗಳು ಇರ‍್ತಾನೆ ಅಷ್ಟೆ’ ಎನ್ನುತ್ತಾರೆ. ಅನುವಿಗೆ ಈ ಮಾತು ಕೇಳಿ ಅಯ್ಯೋ ಅನಿಸುತ್ತದೆ.
ದೃಶ್ಯ ೧೮/ ಹಗಲು/ ಅನುಮನೆ
ಮನೆಗೆ ಬರುವ ಅನುವಿಗೆ ಕಾಯುತ್ತಾ ಇರುವ ಗೆಳತಿ. ಫ್ಯಾಕ್ಟರಿಯಲ್ಲಿ ಅವಳಿಗಾಗಿ ಮಾತಾಡಿದೆ ಸಮಯ ಬೇಕು ಎಂದಿದ್ದಾರೆ ಎನ್ನುತ್ತಾ ಅನುವಿನ ತಂದೆ-ತಾಯಿ ಸಿಕ್ಕಿದ್ದನ್ನು ಅವರು ಅನುವಿನ ಮುಖವನ್ನು ನೋಡುವುದಿಲ್ಲ ಎಂದಿದ್ದನ್ನು ತಿಳಿಸುತ್ತಾಳೆ. ಮತ್ತೆ ಸರ್ವೋತ್ತಮ ಸಿಕ್ಕಿದ್ದ ಎನ್ನುತ್ತಾಳೆ. ಎಲ್ಲಿ ಎನ್ನುವ ಅನುವಿಗೆ ಮರಳಿ ಪ್ರೀತಿ ದೊರೆಯುತ್ತದೆ ಎಂಬ ಸಂತೋಷವಿದೆ. ಅವನೀಗ ಊರಿಂದೂರಿಗೆ ತಿರುಗುವ ಯಾವುದೋ ಆಟೋಮೋಬೈಲಿನ ಕೆಲಸ ಮಾಡುತ್ತಾ ಇದ್ದಾನೆ. ತುಂಬಾ ಸೋತುಹೋಗಿದ್ದಾನೆ ಎನ್ನುತ್ತಾಳೆ. ಅವನ ಕಂಪೆನಿ ವಿಳಾಸ ಕೊಡು ಪತ್ರ ಬರೆಯುತ್ತೇನೆ ಎನ್ನುವ ಅನು. ಮುಂದಿನ ಸಲ ಅವನು ಸಿಕ್ಕಾಗ ತಗೋತೀನಿ ಎನ್ನುತ್ತಾಳೆ. ಆದರೆ ಅವನಾಸೆಯನ್ನು ಅನು ಬಿಡುವುದೇ ಒಳ್ಳೆಯದು ಎನ್ನುತ್ತಾಳೆ.
ದೃಶ್ಯ ೧೯/ ಹಗಲು/ ಒಳಾಂಗಣ/ ಆಸ್ಪತ್ರೆ
ಅನುವನ್ನು ಪರೀಕ್ಷಿಸುವ ಡಾಕ್ಟರ್ ಅವಳ ಖಾಯಿಲೆ ಬಹುತೇಕ ವಾಸಿಯಾಗುತ್ತಾ ಇದೆ ಎಂದು ತಿಳಿಸುತ್ತಾರೆ. ಅನುವಿಗೆ ಸಂತಸ. ಹತ್ತಿರದಲ್ಲಿರುವ ವಿಶ್ವಾಸ ರೇಗಿಸುತ್ತಾನೆ. ಬೇಗ ನಮಗೆಲ್ಲಾ ಸ್ವೀಟ್ ಕೊಡ್ಬೇಕು ಕಣ್ರೀ ಎನ್ನುತ್ತಾನೆ. ನನ್ನ ದೇಹದ ಖಾಯಿಲೆ ವಾಸಿಯಾದರೆ ಸಾಕಾಗೋದಿಲ್ಲ ಸ್ವಾಮಿ, ಜೇಬಿನ ಖಾಯಿಲೆಗೂ ಔಷಧಿ ತಗೋತೀನಿ. ಆಮೇಲೆ ಸಿಹಿ ಕೊಡ್ತೀನಿ ಎನ್ನುವ ಅನುವಿನ ದನಿಯಲ್ಲಿ ವಿಷಾದವಿದೆ.
ದೃಶ್ಯ ೨೦/ ಅನುಮನೆ
ಮನೆಗೆ ಬರುವಾಗ ತನ್ನ ಗೆಳತಿಗೆ ವಿಶ್ವಾಸನ ಕುರಿತು ತಿಳಿಸುತ್ತಾ ಬರುವ ಅನು. ಗೆಳತಿ ಇದೇನೋ ಹೊಸ ಕತೆ ಶುರುವಾಗ್ತಾ ಇದ್ಯಲ್ಲೇ ಎಂದು ರೇಗಿಸುತ್ತಾಳೆ. ಇಬ್ಬರೂ ಮನೆಯೊಳಗೆ ಬಂದಾಗ ಮತ್ತೊಂದು ಅಚ್ಚರಿ ಕಾದಿದೆ. ಅನುವಿಗೆ ಪತ್ರವೊಂದು ಬಂದಿದೆ. ಆ ಪತ್ರವು ಅವಳಿಗೆ ಯಾವುದೋ ಕಂಪೆನಿಯಲ್ಲಿ ಕೆಲಸ ಕೊಟ್ಟಿರುವ ಬಗ್ಗೆ ತಿಳಿಸುತ್ತದೆ. ಅನು ಅಚ್ಚರಿಯಲ್ಲಿ ಉಳಿಯುತ್ತಾಳೆ. ತಾನು ಅರ್ಜಿ ಸಹ ಹಾಕದೆ ಇಂತಹದೊಂದು ಪತ್ರ ಬಂದಿದೆಯಲ್ಲಾ ಎಂದು ಆಲೋಚಿಸುವಾಗ ಇದೂ ಸಹ ವಿಶ್ವಾಸನದೇ ಕೆಲಸ ಎನಿಸುತ್ತದೆ. ಗೆಳತಿ ಅವನ್ಯಾರೇ ಅವನು? ಅವನ್ಯಾಕೇ ನಿನಗೆ ಕೆಲಸ ಕೊಡಿಸಬೇಕು ಎನ್ನುತ್ತಾಳೆ. ವಿಚಾರಿಸುವೆ ಎನ್ನುವ ಅನು.
ದೃಶ್ಯ ೨೧/ ಆಸ್ಪತ್ರೆ
ಆಸ್ಪತ್ರೆಯಲ್ಲಿ ವಿಶ್ವಾಸ್ ಇಲ್ಲ. ಆತನನ್ನು ಮನೆಗೆ ಷಿಫ್ಟ್ ಮಾಡಲಾಗಿದೆ ಎಂದು ತಿಳಿಯುತ್ತದೆ. ವಿಳಾಸ ಪಡೆದು ಸಾಗುವ ಅನು
ದೃಶ್ಯ ೨೨/ ವಿಶ್ವಾಸ್ ಮನೆ
ದೊಡ್ಡ ಮನೆಯಲ್ಲಿ ಒಂಟಿಯಾಗಿರುವ ವಿಶ್ವಾಸ್. ಸಾಯುವವನಿಗೆ ಕೆಲಸದ ಅಗತ್ಯ ಇರಲಿಲ್ಲ. ಅದಕ್ಕೇ ತನ್ನ ಕೆಲಸವನ್ನು ನಿಮಗೆ ಕೊಡಬಹುದೆಂದು ಕಂಪೆನಿಗೆ ಬರೆದೆ ಎನ್ನುವ ವಿಶ್ವಾಸ್. ಸ್ವತಃ ಆತನೇ ಆ ಕಂಪೆನಿಯ ಮಾಲೀಕ ಎಂಬುದು ಗೊತ್ತಿರುವ ಅನು ಅವನ ಉದಾರತೆಗೆ ಥ್ಯಾಂಕ್ಸ್ ಹೇಳುತ್ತಾಳೆ. ಥ್ಯಾಂಕ್ಸ್ ಎಲ್ಲಾ ಬೇಡ ತನಗಾಗಿ ತನ್ನ ಮನೆಯಲ್ಲಿ ಒಂದಿಷ್ಟು ತಿಳಿ ಸಾರು ಮಾಡಿಕೊಡಿ ಎನ್ನುತ್ತಾನೆ. ಅನು ಧಾರಾಳವಾಗಿ ಎಂದು ಒಪ್ಪಿಕೊಳ್ಳುತ್ತಾಳೆ.
ಆತನಿಗೆ ಊಟ ಬಡಿಸುವಾಗ ಯಾಕೆ ಆತ ಒಬ್ಬಂಟಿ ಎನ್ನುತ್ತಾಳೆ. ಅನುವಿನ ಗಂಡ ಅವಳಿಗೆ ಕಾಯಿಲೆ ಎಂದು ತಿಳಿದೊಡನೆ ಓಡಿಹೋದ ಹಾಗೆ ತನ್ನ ಹೆಂಡತಿಯೂ ತನ್ನನ್ನು ಬಿಟ್ಟು ಹೋದಳು ಎನ್ನುವ ವಿಶ್ವಾಸನ ಮಾತು ಕೇಳಿ ಅನುವಿಗೆ ಅಚ್ಚರಿಯಾಗುತ್ತದೆ. ಇನ್ನು ನಾನು ಆಸ್ಪತ್ರೆಯಲ್ಲಿದ್ದರೂ ಒಂದೇ ಇಲ್ಲಿದ್ದರೂ ಒಂದೇ ಅಂತ ಡಾಕ್ಟರ್ ಹೇಳಿದ್ರು, ಆದರೆ ಇಲ್ಲಿರೋದು ಇನ್ನೂ ಬೋರ್ ಎನ್ನುವ ವಿಶ್ವಾಸ್‌ಗೆ ತಾನು ದಿನ ಬಂದು ಅಡಿಗೆ ಮಾಡಿಟ್ಟು ಹೋಗುವುದಾಗಿ ತಿಳಿಸುವ ಅನು.
ದೃಶ್ಯ ೨೩/ ರಾತ್ರಿ/ ಅನುಮನೆ
ಮನೆಗೆ ಗೆಳತಿಯ ಜೊತೆಗೆ ಬರುವ ಅನು. ಗೆಳತಿಗೆ ಹೊಸ ಕೆಲಸದ ಅನುಭವ ಹೇಳುತ್ತಾಳೆ. ವಿಶ್ವಾಸ್‌ನಿಂದಾಗಿ ಮುಗಿದು ಹೋಗಿದ್ದ ಬದುಕಿಗೆ ಹೊಸ ವಿಶ್ವಾಸ ಬಂತು ಎನ್ನುತ್ತಾಳೆ. ಆದರೆ ಆತ ಅಷ್ಟು ದೊಡ್ಡ ಮನೆಯಲ್ಲಿ ಒಬ್ಬಂಟಿ ಎನ್ನುತ್ತಾ ತಾನು ಅವನಿಗೆ ನಿತ್ಯ ಅಡಿಗೆ ಮಾಡಿ ಕೊಂಡೊಯ್ಯುತ್ತಾ ಇದ್ದೇನೆ ಎನ್ನುತ್ತಾಳೆ. ಗೆಳತಿಗೆ ವಿಶ್ವಾಸ ಮತ್ತು ಅನು ಸಂಬಂಧ ಯಾವ ಕಡೆಗೆ ಸಾಗುತ್ತಿದೆ ಎಂಬ ಅನುಮಾನ.
ದೃಶ್ಯ ೨೪/ ವಿಶ್ವಾಸ್ ಮನೆ
ವಿಶ್ವಾಸನಿಗೆ ಊಟ ಬಡಿಸುತ್ತಾ, ಅವನ ಮನೆಯನ್ನು ಸ್ವಚ್ಛ ಗೊಳಿಸುತ್ತಾ ಮಾತಾಡುವ ಅನು ಈ ಮನೆಯಲ್ಲಿ ಒಬ್ಬಂಟಿಯಾಗಿರುವುದಕ್ಕಿಂತ ಇನ್ಯಾರನ್ನಾದರೂ ಮದುವೆ ಆಗೋದ್ತಾನೆ ಎನ್ನುತ್ತಾಳೆ. ವಿಶ್ವಾಸ ನಗ್ತಾ, ಸಾಯುವವನಿಗೆ ಸಂಗಾತಿ ಯಾಕ್ರೀ? ಇಷ್ಟರ ಮೇಲೆ ನಾನು ಓಕೆ ಅಂದರೂ ನಾಳೆ ವಿಧವೆ ಆಗೋಕ್ಕೆ ಯಾವ ಹೆಣ್ಣು ಮಗಳು ಒಪ್ಕೋತಾಳ್ರೀ ಎನ್ನುತ್ತಾನೆ. ಅನು ಅವನನ್ನೇ ಅನುಕಂಪದಿಂದ ನೋಡುತ್ತಾಳೆ.
ದೃಶ್ಯ ೨೫/ ಅನು ಮನೆ
ಮನೆಗೆ ಬರುವ ಅನುವಿಗೆ ಅನಾಮಧೇಯ ಪತ್ರ ಬಂದಿದೆ. ಅದರಲ್ಲಿ ಅವಳ ಮತ್ತು ವಿಶ್ವಾಸನ ಸಂಬಂಧ ಕುರಿತು ಮಾತಿದೆ. ಜೊತೆಯಲ್ಲಿರುವ ಮಂಜುಳಮ್ಮ ಇದು ನಿನ್ನ ಗಂಡನದೇ ಕಿತಾಪತಿ ಎನ್ನುತ್ತಾರೆ. ತಾನು ಸಾಕಾಕ್ಕಾಗ್ಲಿಲ್ಲ. ಈಗ ಹೊಟ್ಟೆ ಉರ‍್ಕೋತಾ ಇದಾನೆ ಎನ್ನುತ್ತಾರೆ. ಗೆಳತಿಯೂ ಸಹ ಹೌದು ಎನ್ನುತ್ತಾಳೆ. ಅನು ದುಃಖಿತಳಾಗಿ ಕುಳಿತಾಗ ನಾಳೆ ನಾನು ಬರ‍್ತೀನಿ ನಿನ್ನ ಜೊತೆ ಆ ವಿಶ್ವಾಸನ ಮನೆಗೆ ಎನ್ನುವ ಮಂಜುಳಮ್ಮ.
ದೃಶ್ಯ ೨೬/ ವಿಶ್ವಾಸನ ಮನೆ
ವಿಶ್ವಾಸನ ಮನೆಗೆ ಅನುವಿನ ಜೊತೆಯಲ್ಲಿ ಬರುವ ಮಂಜುಳಮ್ಮ ಮತ್ತು ಗೆಳತಿ. ಅನುವಿಗೆ ಬರುತ್ತಿರುವ ಅನಾಮಧೇಯ ಪತ್ರಗಳ ಕುರಿತು ಹೇಳುತ್ತಾರೆ. ಇದಕ್ಕೆ ಇರುವುದು ಒಂದೇ ಪರಿಹಾರ ಎನ್ನುವ ಮಂಜುಳಮ್ಮ ಅವರಿಬ್ಬರಿಗೂ ಮದುವೆ ಎನ್ನುತ್ತಾರೆ. ಬೆರಗಾಗುವ ವಿಶ್ವಾಸ. ಅನುವಿನ ಅಭಿಪ್ರಾಯ ಕೇಳುತ್ತಾನೆ. ಸುಮ್ಮನಿರುವ ಅನುವಿನ ಕೈ ಹಿಡಿದು ನಡೆಯಿರಿ ಹೊರಡೋಣ ಎನ್ನುತ್ತಾನೆ.
ದೃಶ್ಯ ೨೭/ ಆಸ್ಪತ್ರೆ
ಡಾಕ್ಟರ್ ಬಳಿಗೆ ಬಂದು ನಾವು ಮದುವೆ ಆಗಬಹುದೇ ಎನ್ನುವ ವಿಶ್ವಾಸನಿಗೆ ಧಾರಾಳವಾಗಿ ಎನ್ನುವ ಡಾಕ್ಟರ್. ಆಗ ಹೊರಗಿರುವ ಅನುವನ್ನು ಕರೆಯುವ ವಿಶ್ವಾಸ. ಅವಳನ್ನು ಕಂಡು ಡಾಕ್ಟರ್ ಸ್ವತಃ ಅಚ್ಚರಿ ಪಡುತ್ತಾರೆ. ಅನು ಜೊತೆಗೆ ಇರುವ ಇತರರು ಅವರಿಗೆ ಹಾರ ಇತ್ಯಾದಿ ಕೊಡ್ತಾರೆ. ಅವರೆಲ್ಲರ ಸಮ್ಮುಖದಲ್ಲಿ ಅನು ಮತ್ತು ವಿಶ್ವಾಸ ಮದುವೆ ಆಗ್ತಾರೆ.
ಕೈ ಹಿಡಿದು ಸಾಗುವವರ ಎದುರಿಗೆ ಬರುವ ಸರ್ವೋತ್ತಮ. ಅವನನ್ನು ನೋಡಿ ಅನುವಿಗೆ ಅಚ್ಚರಿ. ಸರ್ವೋತ್ತಮ ತಾನೇ ಸಿಹಿ ಕೊಡುತ್ತಾನೆ. ವಿಶ್ವಾಸ ಮತ್ತು ಅನು ಸಿಹಿ ತಿನ್ನುವಾಗ ಅಂತಿಮ ಶೀರ್ಷಿಕೆ ಕಾಣಿಸುತ್ತದೆ.
“ಅವರಿಬ್ಬರೂ ಸುಖವಾಗಿದ್ದರು!… ಸಾಯುವ ವರೆಗೆ!”

* * *
ಬಿ.ಸುರೇಶ ಅವರ
ಪ್ರೀತಿ ಎಂಬ ಅಚ್ಚರಿ!
(ಚಿತ್ರಕತೆ ಸಂಭಾಷಣೆ ಪ್ರತಿ)
ಕತೆ/ ಚಿತ್ರಕತೆ : ಬಿ.ಸುರೇಶ
ಸಂಭಾಷಣೆ : ಕೇಶವಚಂದ್ರ
ದೃಶ್ಯ-೧/ಹಗಲು-ರಾತ್ರಿ/ಒಳಗೆ-ಹೊರಗೆ/ಅನು ಮನೆ
-ಸಬ್ಜೆಕ್ಟೀವಲ್ಲಿ ಕ್ಯಾಮೆರಾ ತೀರಾ ಕೆಳ ಮಧ್ಯಮ ವರ್ಗದ ಮನೆಯೊಂದನ್ನ ರಿವೀಲ್ ಮಾಡುತ್ತಾ ಸಾಗಿ [ಹ್ಯಾಂಡೆಲ್ಡ್ ಆದರೆ ಚೆನ್ನ] ಮನೆಯ ಕೋಣೆಯೊಂದರ ಮೂಲೆಯಲ್ಲಿ ತಲೆ ತಗ್ಗಿಸಿ ಮುದುರಿ ಕುಳಿತಿರುವ ಹೆಂಗಸೊಬ್ಬಳು ಕಾಣ್ತಾಳೆ. ಅವಳ ಮುಖ ಕಾಣ್ತಿಲ್ಲ.
-ಮನೆಯಾಚೆ ಯಾರೋ ಒಬ್ಬಾತ ಬಂದು ಬಾಗಿಲು ಬಡೀತಾನೆ
-ಒಳಗೆ ಅನು ಮುದುಡಿದ್ದ ಮುಖ ಮೇಲೆತ್ತುತ್ತಾಳೆ [ರಿವೀಲ್] ಅವಳ ಮುಖದಲ್ಲಿ ಗಾಬರಿ ಇದೆ.
-ವಿವಿಧ ಆಂಗಲ್‌ಗಳಿಂದ ಅವಳ ಹೆದರಿದ ಮುಖದ ಅನಾವರಣ
-ಆತ ಬಾಗಿಲು ಬಡಿಯೋದು ಮುಂದುವರೆಯುತ್ತೆ
-ಅನೂಗೆ ಕೆಮ್ಮು ಉಕ್ಕಿ ಬರಲು ಶುರುವಾಗತ್ತೆ, ಆದರೆ ಅವಳು ತನ್ನ ಬಾಯನ್ನು ತಾನೇ ಅದುಮಿಕೊಂಡು ಮನೆಯಲ್ಲಿ ತಾನಿಲ್ಲ ಎನಿಸಿಕೊಳ್ಳುವ ಯತ್ನ ಮಾಡ್ತಿದ್ದಾಳೆ
-ಬಾಗಿಲು ಬಡಿಯುತ್ತಿದ್ದವನು ರೋಸಿದಂತೆ ಕೋಪದಲ್ಲೇ ಅಲ್ಲಿಂದ ತೆರಳುತ್ತಾನೆ
-ಅನು ಉಕ್ಕಿ ಬರುತ್ತಿದ್ದ ಕೆಮ್ಮನ್ನು ಕೈಯಲ್ಲಿ ಬಾಯಿ ಮುಚ್ಚಿ ತಡೆಯುತ್ತಿದವಳು, ಬಾಗಿಲು ಬಡಿಯೋದು ನಿಂತದ್ದು-ನಿಶ್ಯಬ್ದವಾದದ್ದು ಗಮನಿಸಿ ತನ್ನ ಬಾಯಿ ಮುಚ್ಚಿದ್ದ ಕೈಯ್ಯನ್ನು ತೆಗೆಯುತ್ತಾಳೆ, ಕೈ ನೋಡ್ತಾಳೆ
-ಕೈಯಲ್ಲಿ ಲಾಲಾರಸದೊಡನೆ ಜಿನುಗಿದ್ದ ರಕ್ತ ಕಾಣುತ್ತದೆ
-ಆಕೆಯ ಕಣ್ಣಲ್ಲಿ ಆತಂಕ, ಗಾಬರಿ, ತುಟಿಗಳಲ್ಲಿ ನಡುಕ ಅಗಲೇ ಮತ್ತ್ಯಾರೋ ಕಾಲಿಂಗ್ ಬೆಲ್ಲ್ ಮಾಡಿದ ಶಬ್ದಕ್ಕೆ ಮತ್ತೆ ಬೆಚ್ಚಿದಂತೆ ನೋಡ್ತಾಳೆ
-ಹೊರಗೆ ಹಾಲಿನ ಕ್ಯಾನ್ ಹಿಡಿದವಳ್ಯಾರೋ ಬೆಲ್ಲ್ ಮಾಡ್ತಾ ಇದ್ದಾಳೆ
-ಅನು ಸುಮ್ಮನೆ ಬಾಗಿಲ ಕಡೆಗೆ ನೋಡ್ತಾ ಇದ್ದಾಳೆ, ಮತ್ತೆ ಶುರುವಾಗುವ ಕೆಮ್ಮು, ಮತ್ತೆ ಕೈಯಿಂದ ಬಾಯಿಗೆ ಬೀಗ, ಹಿನ್ನಲೆಯಲ್ಲಿ ಬೆಲ್ಲಿನ ಶಬ್ದ
-ಬೆಲ್ಲ್ ಮಾಡ್ತಿದ್ದಾಕೆ ಮನೆಯಲ್ಲಿ ಯಾರೂ ಇಲ್ಲವೆಂದು ವಾಪಸ್ ಬಂದ ದಾರಿ ಹಿಡಿಯುತ್ತಾಳೆ.
-ಅನು ಬಚ್ಚಲು ಮನೆಗೆ ಬಂದು ಕೆಮ್ಮುತ್ತಾಳೆ
-ಬಾಯಿಂದ ಉದುರುವ ರಕ್ತದ ಕಫ಼
-ಅನು ತುಟಿಗಳ ನಡುಕ.
-ಮತ್ತೆ ಇನ್ನ್ಯಾರೋ ಹೊರಗೆ ಬಾಗಿಲು ಬಡೀತಾರೆ
-ಅನು ಅದರ ಬಗ್ಗೆ ಗಮನಕೊಡದೆ ಕೂತಿದ್ದಾಳೆ
-ಶೆಟ್ಟರಂಗಡಿಯ ಹುಡುಗನಂತೆ ಕಾಣುವಾತನೊಬ್ಬ ಬಂದು ಬಾಗಿಲು ಬಡೀತಾನೆ
-ಆಗಲೂ ಇನ್ನ್ಯಾವುದೋ ಜಾಗದಲ್ಲಿ ಹಾಗೇ ಕೂತಿದ್ದಾಳೆ
-ಅಡಿಗೆ ಮನೆಗೆ ಬರುವ ಅನು, ಪಾತ್ರೆಗಳನ್ನೆಲ್ಲ ತಡಕುತ್ತಾಳೆ
-ಯಾವ ಪಾತ್ರೆಗಳಲ್ಲೂ ಏನೂ ಇಲ್ಲ, ಯಾವ ಡಬ್ಬಿಗಳಲ್ಲೂ ಏನೂ ಇಲ್ಲ
-ಸೂತ ಮುಖ ಹೊತ್ತು ಯಥೇಚ್ಚವಾಗಿ ನೀರು ಕುಡಿದು ಸಾಗ್ತಾಳೆ
-ಕೋಣೆಯ ಹಾಸಿಗೆಯಮೇಲೆ ಸೋತವಳಂತೆ ಮುದುಡಿ ಮಲಗುತ್ತಾಳೆ, ಅವಳ ಕ್ಲೋಸ್‌ಗೆ ಸಾಗುವ ಕ್ಯಾಮೆರಾ. ಅವಳ ಕಣ್ಣಲ್ಲಿ ತುಂಬಿದ ನೀರು
ದೃಶ್ಯ-೨/ಹಗಲು/ಹೊರಗೆ/ರಸ್ತೆ ಅಥವಾ ಪಾರ್ಕ್
-ಕೆಂಪು ಗುಲಾಬಿಯೊಂದರ ಕ್ಲೋಸಿಂದ ಓಪನ್ ಆದರೆ, ಫ಼ೋಕಸ್ ಷಿಫ಼್ಟ್ ಆದರೆ ಅದನ್ನು ಹಿಡಿದು ಸ್ಮೈಲ್ ಮಾಡ್ತಾ ಇರುವ ಯುವಕನೊಬ್ಬ ಕಾಣ್ತಾನೆ.
ಯುವಕ: ಐ ಲವ್ ಯು ಅನು!….
-ಆಕೆ ನಾಚಿದವಳಂತೆ ನಂತರ ಬೆದರಿದವಳಂತೆ ಅತಿತ್ತ ತಲೆಯಾಡಿಸುತ್ತಿದ್ದಾಳೆ. [ಅವಳು ಗಾರ್ಮೆಂಟ್ ಕೆಲಸಕ್ಕೆ ಹೋಗುತ್ತಿರುವವಳು ಎಂಬಂತೆ ಕಾಣಬೇಕು]
ಯುವಕ: ಯಾಕ್ ಅನು.. ನನ್ನ್ ಕಂಡ್ರೆ ನಿನಗ್ ಇಷ್ಟ ಇಲ್ವಾ?..
ಅನು: ನಾನ್ ಇಷ್ಟ ಪಟ್ರೂ.. ನಮ್ಮಪ್ಪ ಅಮ್ಮ ಈ ಪ್ರೀತೀನ್ ಒಪ್ಪಲ್ಲ..
-ಆತನ ರಿಯಾಕ್ಷನ್
ಅನು: ಅವರಿಗೆ ಇದೆಲ್ಲಾ ಇಷ್ಟ ಆಗಲ್ಲ.. ನಾನ್ ಹೋಗ್ತೀನಿ..
-ಅವಳ ಕೈ ಹಿಡಿವ ಯುವಕ
-ಆಕೆ ಬೆದರಿದಂತೆಯೇ ಅತ್ತಿತ್ತ ನೋಡ್ತಾಳೆ
ಯುವಕ: ಪ್ರಯತ್ನಾನೆ ಪಡ್ದೆ ಆಗಲ್ಲ ಅಂದ್ರೆ ಹೇಗೆ ಅನು?.. ನನಗ್ ನನಗ್ ನೀನಿಲ್ದೆ ಬದ್ಕೋಕ್ಕಾಗಲ್ಲ ಅನು! ನಿಜವಾಗ್ಲೂ!
ಅನು: ನನಗೂ ಹಾಗೇ ಅನ್ಸತ್ತೆ… ಆದ್ರೆ…
ಸರ್ವ: ನೀನ್ ಹೆದರ‍್ಕೋಬೇಡ.. ನಮ್ಮನೇಲೂ ಈ ಪ್ರೀತೀನ್ ಒಪ್ಕೊಳಲ್ಲ ಅಂತ ನನಗ್ ಗೊತ್ತು.. ಆದ್ರೂ ಪ್ರಯತ್ನ ಪಡ್ತೀನಿ.. ಅವರ್ ಮುಂದೆ ನಮ್ಮ್ ಪ್ರೀತಿ ವಿಷ್ಯ ಹೇಳ್ತೀನಿ.. ನಿನ್ನನ್ನ್ ಅಲ್ದೆ ನಾನ್ ಇನ್ನ್ ಯಾರನ್ನೂ ಮದ್ವೆ ಆಗಲ್ಲ ಅಂತ ಖಡಾಖಂಡಿತವಾಗ್ ಹೇಳ್ತೀನಿ.. ನೀನೂ ನಿಮ್ಮನೆಲ್ ಧೈರ್ಯವಾಗ್ ಮಾತಾಡು..
ಅನು: ಇಲ್ಲ ಸರೂ.. ನಮ್ಮಪ್ಪ-ಅಮ್ಮ ಇಬ್ರೂ ಯಾವ್ ಕಾರಣಕ್ಕೂ ನಮ್ಮಿಬ್ಬರ್ ಪ್ರೀತೀನ್ ಒಪ್ಪಲ್ಲ..
ಸರ್ವ: ನಂಬ್ಕೆ ಇಟ್ಕೊಂಡ್ ಟ್ರೈ ಮಾಡು.. ಒಪ್ಪಿದ್ರೆ ಸಂತೋಷ..
ಅನು: ಇಲ್ದಿದ್ರೆ?..
ಸರ್ವ: [ನಕ್ಕು] ಪ್ರೀತಿ ಗೆದ್ದೇ ಗೆಲ್ಲತ್ತೆ.. ನಾನಂತೂ ಹಿಡ್ದಿರೋ ಈ ನಿನ್ನ್ ಕೈ ಬಿಡಲ್ಲ.. [ಎಂದು ಅವಳ ಕೈಯನ್ನು ಗಟ್ಟಿಯಾಗಿ ಹಿಡಿಯುತ್ತಾನೆ]
-ಅನು ಮುಖದಲ್ಲಿ ಸಂಭ್ರಮದ ಕಳೆ.
ದೃಶ್ಯ-೩/ಹಗಲು/ಹೊರಗೆ/ರಸ್ತೆ ಅಥವಾ ಪಾರ್ಕ್
-ಇಬ್ಬರೂ ಮೌನವಾಗಿ ಹೆಜ್ಜೆ ಹಾಕ್ತಾ ಇದ್ದಾರೆ
ಅನು: ಪ್ರೀತಿ-ಗೀತಿ ಅಂತ ಬಾಲ ಬಿಚ್ಚೋದಾದ್ರೆ.. ನಾಳೆಯಿಂದ ನೀನ್ ಕೆಲ್ಸಕ್ಕೇ ಹೋಗ್‌ಬೇಕಾಗಿಲ್ಲ ಅಂದ್ರು, ನಮ್ಮಪ್ಪ!.. [ಅವನನ್ನು ಪ್ರಶ್ನೆಯಿಂದ ನೋಡ್ತಾಳೆ]
-ಆತ ಏನೂ ಮಾತಾಡ್ತಾ ಇಲ್ಲ
ಅನು: ನಿಮ್ಮನೆಲ್ ಏನಂದ್ರು ಸರೂ?..
ಸರ್ವ: ನಮ್ಮನೇಲೂ ಅದೇ ಕೇಸೇ.. ಪ್ರೀತಿಸ್ತೀನಿ ಅಂದಿದ್ದಕ್ಕೆ.. ಬಾರ‍್ಸ್‌ತೀನಿ ಅಂದ್ರು.. ಒದ್ದ್ ಆಚೆಗ್ ಹಾಕ್ತೀನಿ ಅಂದ್ರು..
ಅನು: ಹಾಗಾದ್ರೆ ಮುಂದೆ?..
-ಆತ ನೋಡಿ ಸುಮ್ಮನೆ ಸ್ಮೈಲ್ ಮಾಡ್ತಾನೆ
ಅನು: ನಮ್ಮ್ ಪ್ರೀತಿ ಇಲ್ಲಿಗೇ ಕೊನೆ ಆಗ್‌ಬಿಡ್‌ಬೇಕಾ?..
ಸರ್ವ: ಪ್ರೀತಿಗ್ ಕೊನೆ ಅನ್ನೋದೂ ಇಲ್ಲ.. ಅದ್ ಸಾಯೋದೂ ಇಲ್ಲ ಅನು.. ಎಲ್ಲಿವರ‍್ಗೂ ಪ್ರೇಮಿಗಳ್ ಮನ್ಸ್ ಗಟ್ಟಿಯಾಗಿರತ್ತೋ ಅಲ್ಲೀವರ‍್ಗೂ ಪ್ರೀತಿ ಸಾಯೋಲ್ಲ ಅನು!
ಅನು: ಅದ್ ಹೇಗೆ?.. ಇಬ್ಬರ್ ಮನೇಲ್ ಒಪ್ಪ್‌ತಿಲ್ಲ ಅಂದ್‌ಮೇಲೆ..
ಸರ್ವ: [ತಡೆದು] ಇಬ್ಬರೂ ದುಡೀತಾ ಇದ್ದೀವಿ.. ಇಬ್ಬರ‍್ಗೂ ಜೀವ್ನಕ್ಕ್ ಆಗೋಷ್ಟ್ ಸಂಪಾದ್ನೆ ಇದೆ.. ಇನ್ನೊಬ್ಬರ್ ಒಪ್ಗೆಗ್ ಯಾಕ್ ಕಾಯ್‌ಬೇಕು ನಾವು?..
-ಆಕೆಯ ಅಚ್ಚರಿಯ ರಿಯಾಕ್ಷನ್
ಸರ್ವ: ಮುಂದಿನ್ ತಿಂಗಳು ಸಂಬಳ ಬರ‍್ತಿದ್ದ್‌ಹಾಗೆ ನಮ್ಮ್ ಮದ್ವೆ.. ಅವತ್ತಿಂದಾನೇ ನಮ್ಮ್ ಹೊಸಾ ಸಂಸಾರ ಶುರು.. ಏನು?. ಓಕೆನಾ?..
ದೃಶ್ಯ-೪/ಹಗಲು/ಹೊರಗೆ/ರಸ್ತೆ
ಗೆಳತಿ: ಏನೇ ಅನು ತಮಾಷೆ ಮಾಡ್ತಾ ಇದ್ದೀಯಾ?.. [ಅಚ್ಚರಿಯಲ್ಲಿ ಗೆಳತಿ ಕೇಳ್ತಾಳೆ]
ಅನು: ಇಲ್ಲ.. ನಿಜಾನೇ ಹೇಳ್ತಾ ಇದ್ದೀನಿ..
ಗೆಳತಿ: ನಿನ್ನ್ ವಯಸ್ಸ್ ಎಷ್ಟ್ ಅನ್ನೋದಾದ್ರೂ ಗೊತ್ತಿದ್ಯಾ ನಿಂಗೆ?
ಅನು: ಕಾನೂನ್ ಪ್ರಕಾರ ಮದ್ವೆ ಆಗೋಷ್ಟಂತೂ ವಯಸ್ಸ್ ಆಗಿದೆ..
ಗೆಳತಿ: ಸಮ್ಸಾರ ಮಾಡೋಕ್ಕ್ ಇಷ್ಟ್ ಸಾಕಾಗಲ್ಲ್‌ವೇ ಅನು?..
ಅನು: ಮದ್ವೆ ಆಗೋದು ಅಂತ ನಿರ್ಧಾರ ಮಾಡಾಗಿದೆ.. ಇನ್ನ್ ಯಾರ್ ಏನೇ ಹೇಳ್‌ದ್ರೂ ನಾವ್ ಕೇಳೋಲ್ಲ..
ಗೆಳತಿ: ಅನೂ, ಈ ವಯಸ್ಸಲ್ಲಿ.. ನೀನ್ ಅಪ್ಪ-ಅಮ್ಮನ್ನೂ ಬಿಟ್ಟು ಯಾರ‍್ನೋ ನಂಬ್ಕೊಂಡ್ ಹೋಗ್ತಾ ಇರೋದು ನನಗ್ ಯಾಕೋ ಸರಿ ಕಾಣ್ತಾ ಇಲ್ಲ ಅನು.. ದುಡುಕಿ ನಿನ್ನ್ ಲೈಫ಼್‌ನ ಅನ್ಯಾಯವಾಗ್ ಹಾಳ್ ಮಾಡ್ಕೋಬೇಡ.. ಅಕಸ್ಮಾತ್ ಅವನೇನಾದ್ರೂ ಕೈ ಕೊಟ್ರೆ?..
ಅನು: ನನಗ್ ಸರ್ವೋತ್ತಮ್ ಮೇಲೆ ಪೂರ್ತಿ ನಂಬ್ಕೆ ಇದೆ.. ಅವನ್ ನನ್ನನ್ನ್ ಎಲ್ಲಾರ್‌ಗಿಂತ ಜಾಸ್ತಿ ಪ್ರೀತಿಸ್ತನೆ.. ಖಂಡಿತ ಚೆನ್ನಾಗ್ ನೋಡ್ಕೊಳ್ತನೆ.. ನೀನು ನಮ್ಮ ಮದುವೇಗ್ ಬಾ, ಸಾಕು! ಇನ್ಯಾರು ಬರದೇ ಇದ್ದರೂ ಪರವಾಗಿಲ್ಲ.
-ಎನ್ನುವಾಗ ಗೆಳತಿಯ ಮುಖದಲ್ಲಿ ಇನ್ನೂ ಅನುಮಾನದ ಭಾವ
ದೃಶ್ಯ-೫/ಹಗಲು/ಒಳಗೆ-ಹೊರಗೆ/ಅನು ಮನೆ
-ಆಗಲೇ ಬಾಗಿಲು ಬಡಿದಿದ್ದ ಮನೆಯ ಮಾಲಕಿ ಯಾರನ್ನೋ ಎದುರು ನೋಡ್ತಾ ನಿಂತಿದ್ದಾಳೆ.
-ಅದೇ ವೇಳೆಗೆ ಗೇಟ್ ಮುಂದೆ ಕೊಟ್ರ ಕೊಟ್ರ ಎಂದು ಸದ್ದು ಮಾಡ್ತಾ ಬಂದು ನಿಲ್ಲುವ ಆಟೋ. ಆಟೋಯಿಂದ ಇಳಿವ ನವದಂಪತಿಗಳು. ಜೊತೆಯಲ್ಲಿ ಅನು ಗೆಳತಿ ಬೃಂದಾ ಕೂಡ ಇದ್ದಾಳೆ
-ಮನೆಯ ಮಾಲಕಿ ಅವರನ್ನು ನೋಡಿ ಬಾಯಿ ಅಗಲ ಮಾಡಿ ಹಲ್ಲು ಕಿರೀತಾಳೆ
-ಅವರೂ ಮಾಲಕಿಯನ್ನು ನೋಡಿ ಹಲ್ಲು ಕಿರೀತಾರೆ. ಅನು, ಸರು ಆಗ ತಾನೇ ಮದುವೆಯಾಗಿ ಬಂದಂಥಾ ಕುರುಹು ಕಾಣುವಂತಿದ್ದಾರೆ. ಅವರು ಹಾರವನ್ನು ಕೈಯಲ್ಲಿ ಹಿಡಿದಿದ್ದಾರೆ. ಅಥವಾ ಗೆಳತಿಯೂ ಹಿಡಿದಿರಬಹುದು.
ಮಾಲಕಿ: ಬನ್ನಿ ಬನ್ನಿ.. ನಿಮಗೇ ಕಾಯ್ತಾ ಇದ್ದೆ.. ಬೀಗ ತೆಗೀತೀನ್ ಇರಿ.. [ಎಂದು ಕೆಳಗಿನ ಮನೆಯ ಬೀಗ ತೆಗೀತಾಳೆ]
-ಅವರು ಸಂತೋಷದಿಂದ ಒಳಗೆ ಹೋಗಲಿದ್ದಾಗ
ಮಾಲಕಿ: ಒಂದ್ ನಿಮ್‌ಷ ಇರ್ರಪ್ಪ.. ಈಗ್ ತಾನೇ ಮದ್ವೆ ಆಗ್ ಬರ‍್ತ ಇದ್ದೀರ.. ಮೊದಲ್ನೇ ಸಲ ಮನೆ ಒಳಗ್ ಕಾಲಿಡೋವಾಗ ಹಂಗೆ ಸಲೀಸಾಗ್ ನುಗ್ಗ್ ಹೋಗ್‌ಬಿಡೋದೇ? ಆರತಿ-ಪಾರ‍್ತಿ ಎಲ್ಲ ರೆಡಿ ಮಾಡಿದ್ದೀನಿ.. ಇರಿ.. [ಎಂದು ಹೆಳ್ತಾ ಅವಳು ಆಗಲೆ ರೆಡಿ ಮಾಡಿ ತಂದಿದ್ದ ಸೇರಿನ ಪಡಿ ಮತ್ತು ಆರತಿಯನ್ನು ತರ‍್ತಾಳೆ]
-ಅವರೆಲ್ಲರ ಖುಷಿ
ಮಾಲಕಿ: [ಗೆಳತಿಗೆ] ಏನಮ್ಮ ಹುಡ್ಗಿ.. ತಗೋ.. ಇದನ್ನ್ ಹೊಸ್ಲು ಮೇಲಿಡು.. [ಎಂದು ಸೇರನ್ನು ಕೊಡ್ತಾಳೆ. ಆಕೆ ಇಡುವ ಮುಂಚೆ] ನಾನ್ ಒಳಗಡೆ ಹೋಗ್‌ಬಿಡ್ತೀನ್ ಇರು.. [ಎಂದು ತಾನು ಕುಂಕುಮ ಕಲೆಸಿದ ನೀರಿನ ತಟ್ಟೆಯನ್ನು ಹಿಡಿದು ಮನೆಯೊಳಗೆ ಹೋಗ್ತಾಳೆ. ಗೆಳತಿ ಸೇರನ್ನು ಹೊಸ್ತಿಲ ಮೇಲೆ ಇಡ್ತಾಳೆ]
-ಅನೂಗೆ ಖುಷಿ, ಅವಳು ಸರ್ವನ ಮುಖ ನೋಡ್ತಾಳೆ, ಆತನೂ ಹೆಮ್ಮೆಯಿಂದ ಹೇಗೆ ನಾನ್ ಹಿಡ್ದಿರೋ ಮನೆ ಮಾಲಕಿ ಎಂಬಂತೆ ನೋಡ್ತಾನೆ
-ಮಾಲಕಿ ಒಳಗಿಂದ ಇಬ್ಬರನ್ನು ನಿಲ್ಲಿಸಿ ಆರತಿ ಮಾಡ್ತಾಳೆ
-ನಂತರ ಅದನ್ನು ಹೊರಗೆ ಗೇಟಾಚೆ ಉದ್ದಕ್ಕೂ ಸುರಿದು ಬರ‍್ತಾಳೆ
-ಮತ್ತೆ ಅಲ್ಲಿಗೆ ಹೋಗಿ
ಮಾಲಕಿ: ಹುಂ.. ಈಗ್ ಬಲ್ಗಾಲಲ್ಲ್ ಸೇರನ್ನ್ ಒದ್ದು ಒಳಗ್ ನಡೀ..
-ಅವರು ಹಾಗೆ ಮಾಡ್ತಾರೆ
-ನಂತರ ಎಲ್ಲರೂ ಮನೆಯೊಳಕ್ಕೆ ಬರ‍್ತಾರೆ, ಗಂಡು ಹೆಣ್ಣೂ ಆಕೆಯ ಕಾಲಿಗೆ ನಮಸ್ಕರಿಸುತ್ತಾರೆ. ಆಕೆ ಆಶೀರ್ವಾದ ಮಾಡುತ್ತಾ
ಮಾಲಕಿ: ನೂರ್ ವರ್ಷ ಸುಖವಾಗಿ ಸಂತೋಷವಾಗ್ ಬಾಳಿ.. ನಾನ್ ಕೇಳಿದ ಆಡ್ವಾನ್ಸ್ ಕೊಟ್ಟ್ ಹಾಗೆ.. ಬಾಡ್ಗೇನೂ ಕರೆಕ್ಟಾಗ್ ಟೈಂಗ್ ಕೊಟ್ಟ್‌ಬಿಡಿ.. ಬರ‍್ಲಾ?
-ಎನ್ನುವಾಗ ಅವನು ತಲೆಯಾಡಿಸುತ್ತಾನೆ. ಆಕೆ ಸಾಗ್ತಾಳೆ
ಗೆಳತಿ: ಓಹೋ.. ಅಡ್ವಾನ್ಸ್ ಸರ‍್ಯಾಗ್ ಕೊಟ್ಟಿದ್ದಕ್ಕಾ? ಇಷ್ಟೆಲ್ಲ ಉಪಚಾರ?..
ಸರ್ವ: ಮತ್ತೆ.. ಹಾಗೇನಾದ್ರೂ ಗೋಲ್‌ಮಾಲ್ ಮಾಡ್ದೆ ಹೋದ್ರೆ ನಮ್ಮಂಥೋರ‍್ಗ್ ಮನೆ ಯಾರ್ ಕೊಡ್ತರೆ?
ಗೆಳತಿ: ಹೇಗೋ.. ಮನೆ ಸಿಕ್ಕಿದೆ.. ನೀವ್ ಇಷ್ಟ ಪಟ್ಟ್ ಹುಡ್ಗೀನೂ ಸಿಕ್ಕಿದ್ದಾಳೆ.. ಇನ್ನ್ ನೀವ್ ಇಷ್ಟ ಪಟ್ಟ್ ಹಾಗೆ ಬದುಕೋದೊಂದೆ ಬಾಕಿ ಇರೋದು.. ಆಲ್ ದ ಬೆಸ್ಟ್..
-ಅವರಿಬ್ಬರು ಪರಸ್ಪರ ಮುಖ ನೋಡ್ತಾ ತಲೆಯಾಡಿಸುತ್ತಾರೆ
ದೃಶ್ಯ-೬/ಹಗಲು-ರಾತ್ರಿ/ಒಳಗೆ/ಅನು ಮನೆ
-ಅನು ಒಲೆ ಮೇಲೆ ಹಾಲು ಕಾಯಿಸುತ್ತಾ ಇದ್ದಾಳೆ, ಅದರತ್ತ ನೋಡದೆ ಬೇರೆಲ್ಲೋ ನೋಡ್ತಾ ಏನೋ ಯೋಚಿಸುತ್ತಿದ್ದಾಳೆ. ಆಗಲೇ ಅದೇ ಫ಼್ರೇಮಿಗೆ ಬರುವ ಸರ್ವನ ಮುಖ ಭಾಗ. ಆತ ಮೆಲ್ಲಗೆ ಅನುಳ ಕುತ್ತಿಗೆ ಬಾಗಕ್ಕೆ ಬಾಯಿಂದ ಬಿಸಿ ಗಾಳಿ ಬಿಡುತ್ತಾನೆ.
-ಆಕೆ ಏನೋ ಎಂದುಕೊಂಡು ಕೈಯನ್ನು ಗಾಳಿಯಲ್ಲಿ ಒಂದೆರಡು ಬಾರಿ ತೂಗಿಸುತ್ತಾಳೆ.
-ಆತ ಸ್ಮೈಲ್ ಮಾಡ್ತಾ ಮತ್ತೆ ಅದೇ ರೀತಿ ಮಾಡುವಾಗ
-ಆಕೆ ಅವನೆಂದು ತಿಳಿದು ನಾಚುತ್ತಾಳೆ
-ಆತ ಅವಳ ಸೊಂಟ ಬಳಸುತ್ತಾನೆ ಅವಳನ್ನು ತಬ್ಬಿ ಹಿಡಿಯುತ್ತಾನೆ. ಇಬ್ಬರ ಕಣ್ಣುಗಳ ಎಕ್ಸ್‌ಚೇಂಜ್..
ಡಿಸಾಲ್ವ್
-ಅವರಿಬ್ಬರೂ ಕೂತು ಊಟ ಮಾಡ್ತಾ ಇದ್ದಾರೆ [ಒಂದೇ ತಟ್ಟೆಯಲ್ಲಿ]
-ಆತ ಆಕೆಗೆ ತಿನ್ನಿಸೋದು. ಅವಳು ಆತನಿಗೆ ತಿನ್ನಿಸೋದು ಅವರ ಪ್ರೀತಿಯ ಅನಾವರಣ
ಡಿಸಾಲ್ವ್
-ರೂಮಲ್ಲಿ ಒಬ್ಬರನ್ನೊಬ್ಬರು ನೋಡ್ತಾ ಮಂಚದ ಮೇಲೆ ಕೂತಿದ್ದಾರೆ. ಆಗ ಇದ್ದಕ್ಕಿದ್ದಂತೆ ಅವಳ ಕಣ್ಣಲ್ಲಿ ನೀರು
ಸರ್ವ: ಏನಾಯ್ತು ಅನು?..
ಅನು: ಅಮ್ಮ-ಅಪ್ಪ! ಅವರು ಏನ್ ಅಂದ್ಕೋತಿರ‍್ತಾರೋ! ಪಾಪ!.. [ಎಂದು ಬಿಕ್ಕಳಿಸುತ್ತಾಳೆ]
ಸರ್ವ: ಇನ್ನ್ ಮೇಲ್ ನಿನಗ್ ಅಪ್ಪ-ಅಮ್ಮ ಎಲ್ಲ ನಾನೇ.. ಇದು ಸಂತೋಷವಾಗಿರ್‌ಬೇಕಾದ್ ಟೈಮು.. ಈ ಹೊತ್ತಲ್ಲಿ ಅಳ್‌ಬಾರ‍್ದು.. ಬಾ ಮಲಕ್ಕೋ.. [ಎಂದು ಮಲಗಿಕೊಳ್ಳೂವಾಗ]
ಡಿಸಾಲ್ವ್
-ಬೆಳಕಾಗಿದೆ ಆತ ಇನ್ನೂ ಮಲಗಿದ್ದಾನೆ. ಕಣ್ಣ್ ಬಿಟ್ಟು ನೋಡುವಾಗ ಬೆಳಕರಿದಿದ್ದು ಗೊತ್ತಾಗಿ ನೋಡ್ತಾನೆ ಪಕ್ಕದಲ್ಲಿ ಅವಳಿಲ್ಲ. ಟೈಂ ನೋಡ್ತಾನೆ ತಕ್ಷಣ ಏಳ್ತಾನೆ
-ಅನು ಸ್ನಾನ ಮಾಡಿ ಆಗ ತಾನೇ ಕೂದಲು ಒರೆಸುತ್ತಾ ಹೊರಗೆ ಬರ‍್ತಾಳೆ, ಅವಳು ತನ್ನ ಜಡೆ ಕೂದಲನ್ನು ಒಮ್ಮೆ ಕೊಡೊವೊಕ್ಕೂ ಅದು ಅಲ್ಲಿಗೆ ಬರುವ ಸರ್ವನ ಮುಖದಲ್ಲಿ ತುಂತುರು ಹನಿಯಾಗಿ ಚಿಮ್ಮುತ್ತದೆ.
-ಆತ ಅವಳ ನೋಡ್ತಾನೆ
-ಅವಳೂ ಆತನ್ನ ನೋಡ್ತಾಳೆ
-ಆತ ಅವಳಿಗೆ ಹತ್ತಿರಾಗಲು ಹವಣಿಸುವಾಗ
ಅನು: [ಅವನನ್ನು ದೂರ ತಳ್ಳಿ] ಕೆಲಸಕ್ಕೆ ರಜ ಇಲ್ಲಪ್ಪಾ!.. ಹೊತಾಯ್ತು. ಹೋಗ್ ಸ್ನಾನ ಮಾಡು..
ಸರ್ವ: [ಅವನು ಕೆಲಸವನ್ನು ನೆನೆದು] ಅನು.. ಇವತ್ತ್ ನಮ್ಮ್ ಮದ್ವೆ ಆಗ್ ಎರಡ್ನೇ ದಿನ.. ಇವತ್ತೇ ಕೆಲ್ಸಕ್ಕ್ ಹೋಗ್‌ಬೇಕಾ?..
ಅನು: ನಮ್ಮ್ ಹಿಂದೆ ಸಪೋರ್ಟ್‌ಗೆ ಅಂತ ಯಾರೂ ಇಲ್ಲ.. ನಾವೇ ದುಡೀಬೇಕು.. ನಾವೇ ಸಂಪಾದಿಸ್ಬೇಕು ಕಣೋ!
-ಆತನ ರಿಯಾಕ್ಷನ್
ಅನು: ಮನೆ ಬಾಡಿಗೆ, ರೇಶನ್ನು, ಕರೆಂಟು, ನೀರು, ತರಕಾರಿ ಎಲ್ಲಾದಕ್ಕೂ ದುಡ್ಡ್ ಬೇಕು ಅಂದ್ರೆ.. ನಾವಿಬ್ರೂ ರಜ ಹಾಕ್ದೆ ಕೆಲ್ಸ ಮಾಡ್ಲೇಬೇಕು..
-ಆತನೂ ಅದು ಸರಿ ಎಂಬಂತೆ ತಲೆಯಾಡಿಸುತ್ತಾನೆ
ಅನು: ನಾನ್ ತಿಂಡಿ ಮಾಡ್ತೀನಿ.. ಬೇಗ್ ಸ್ನಾನ ಮಾಡ್ಕೊಂಡ್ ಬಾ.. [ಎನ್ನುತ್ತಾ ಹೊರಡುವಾಗ ಇದ್ದಕ್ಕಿದ್ದಂತೆ ಕೆಮ್ಮಲಾರಂಭಿಸುತ್ತಾಳೆ. ಒಂದೇ ಸಮನೆ]
ಸರ್ವ: [ಅಚ್ಚರೀಲಿ] ಏನಾಯ್ತು ಅನು ಇದ್ದಕ್ಕಿದ್ದ್‌ಹಾಗೆ..
ಅನು: [ಸಾವರಿಸಿಕೊಂಡು] ಇಷ್ಟ್ ವರ್ಷದಿಂದ ಗಾರ್ಮೆಂಟ್ಸಿನ್ ಧೂಳ್ ಕುಡ್ದಿದ್ದೀನಲ್ಲ.. ಅದ್ ಕೊಟ್ಟಿರೋ ಗಿಫ಼್ಟು ಈ ಕೆಮ್ಮು.. ಗಾಬರಿ ಆಗೋಂಥದ್ದ್ ಏನಿಲ್ಲ.. ಹೋಗು ಸ್ನಾನ ಮಾಡು.. [ಎಂದು ಸಾಗುತ್ತಾಳೆ, ಈತ ಅವಳು ಹೋದತ್ತಲೆ ನೋಡುತ್ತಾ ಸ್ವಲ್ಪ ಹೆದರಿದಂತಿದ್ದವನು ನಂತರ ಸ್ಮೈಲ್ ತಂದುಕೊಂಡು ಸ್ನಾನಕ್ಕೆ ಸಾಗ್ತಾನೆ]

ದೃಶ್ಯ-೭/ಹಗಲು/ಹೊರಗೆ/ಮಾಂಟೇಜಸ್ ಹಲವು ಜಾಗ
-ಗಡಿಬಿಡಿಯಲ್ಲಿ ಮನೆಯ ಹೊರ ಬಂದು ಬೀಗ ಹಾಕಿ ಇಬ್ಬರೂ ಒಟ್ಟಿಗೆ ಹೊರಡುವುದು, ಅದನ್ನು ನೋಡುವ ಮನೆಯ ಮಾಲಕಿ ಸ್ಮೈಲ್
ಡಿಸಾಲ್ವ್
-ದಾರಿಯಲ್ಲಿ ಗೆಳತಿ ಬೃಂದಾ ಇಬ್ಬರಿಗೂ ಸಿಗುವುದು, ಮಾತುಕತೆ ನಗು ಇತ್ಯಾದಿ, ಅವರ ಅವಸರ ಸಾಗುತ್ತಾರೆ. ಗೆಳತಿ ಬೃಂದಾಳ ಸ್ಮೈಲ್ ಮೇಲೆ
ಡಿಸಾಲ್ವ್
-ರಸ್ತೆಯ ತಿರುವೊಂದರಲ್ಲಿ ಕಾಯ್ತಾ ಇರುವ ಅನು. ಅಲ್ಲಿಗೆ ಓಡಿದವನಂತೆ ಬರುವ ಸರ್ವ, ಅವರಿಬ್ಬರೂ ಅಲ್ಲಿಂದ ಕೈ ಕೈ ಹಿಡಿದುಕೊಂಡು ಸಾಗುತ್ತಾರೆ
ಡಿಸಾಲ್ವ್
-ಇಬ್ಬರೂ ಒಂದು ಅಂಗಡಿಯಲ್ಲಿ ಹೋಗಿ ತರಕಾರಿ ಕೊಳ್ತಾರೆ. ಇವಳು ಚೌಕಾಸಿ ಮಾಡ್ತಾಳೆ, ಅವಳನ್ನ ಆನಂದದಿಂದ ನೋಡುವ ಸರ್ವ
ಡಿಸಾಲ್ವ್
-ಮನೆಯಲ್ಲಿ ಅಡಿಗೆ ಮಾಡಿದ್ದಾಳೆ, ಆ ಪಾತ್ರೆಗಳನ್ನು ತಂದು ನೆಲದ ಮೇಲೆ ಇಡ್ತಾಳೆ, ಊಟ ಬಡಿಸುತ್ತಾಳೆ, ಮತ್ತೆ ಮೊದಲಿನಂತೆ ಪ್ರೀತಿಯಿಂದ ಒಂದೇ ತಟ್ಟೆಯಲ್ಲಿ ಪರಸ್ಪರರು ತಿನ್ನುತ್ತಾರೆ.
-ಊಟ ಮಾಡುವಾಗ ಅವಳು ಮತ್ತೆ ಕೆಮ್ಮುತ್ತಾಳೆ
-ಸರ್ವ ನೀರು ಕುಡಿಸಿ ತಲೆ ತಟ್ಟುತ್ತಾನೆ. ಅವಳ ಕಣ್ಣಲ್ಲಿ ಅವನ ಪ್ರೀತಿಯ ಬಿಂಬ
ಡಿಸಾಲ್ವ್
-ಗೆಳತಿಯರಿಬ್ಬರೂ ಒಂದೆಡೆ ಮಾತಾಡ್ತಾ ಇದ್ದಾರೆ
ಗೆಳತಿ: ಹಾಗಾದ್ರೆ ಹ್ಯಾಪಿಯಾಗಿದ್ದೀಯ ಅನ್ನು?..
ಅನು: ಇರೋದ್ರಲ್ಲೇ ಸಂತೋಷ ಪಡ್ತೀವಿ ಅನ್ನೋರ‍್ಗೆ ದುಃಖ ಇರಲ್ಲ ಬೃಂದಾ.. ನಮಗ್ ಬರೋ ಆದಾಯಕ್ಕ್ ತಕ್ಕ್ ಹಗ್ ಬದುಕ್ತಾ ಇದ್ದೀವಿ.. ಪರಸ್ಪರ ಪ್ರೀತಿಸ್ತಾ ಇದ್ದೀವಿ.. ಪ್ರೀತಿ ಇರೋವಾಗ ಯಾವ್ ಕಷ್ಟಾನೂ ದೊಡ್ಡದಲ್ಲ..
ಗೆಳತಿ: ಗ್ರೇಟ್.. ನೀನ್ ಮನೆ ಬಿಟ್ಟ್ ಬಂದು ಎಲ್ಲ್ ಜೀವ್ನ ಹಾಳ್ ಮಾಡ್ಕೊಳ್ತೀಯೋ ಅಂತಿದ್ದೆ.. ಆದ್ರೆ ನೀನ್ ಚೆನ್ನಾಗಿದ್ದೀಯ.. ವೆರಿಗುಡ್.. ಈ ಸಂತೋಷ ಪ್ರೀತಿ ಯಾವಾಗ್ಲೂ ಹೀಗೆ ಇರ‍್ಲಿ..
ದೃಶ್ಯ-೮/ರಾತ್ರಿ/ಒಳಗೆ/ಅನು ಮನೆ
-ಇಬ್ಬರೂ ಮನೆಯ ಬಾಗಿಲು ತೆಗೆದು ಒಳಗೆ ಬರ‍್ತಾರೆ. ದಣಿದಂತಿದ್ದಾರೆ. ಬಂದು ಸುಸ್ತಾದಂತೆ ಕೂರ‍್ತಾರೆ, ಅವಳು-ಅವನ ತೊಡೆಯ ಮೇಲೆ ಹಾಗೇ ಮಲಗುತ್ತಾಳೆ, ಅವನು ಅವಳ ತಲೆ ನೇವರಿಸಿ ಸ್ಮೈಲ್ ಮಾಡ್ತಾ ನೋಡಿ ಹಾಗೇ ಒರಗಿಕೊಳ್ತಾನೆ.
-ಅವಳು ಪ್ರಶಾಂತವಾಗಿ ಮಲಗಿದ್ದಾಳೆ
-ಅವನು ಒರಗಿದ್ದವನು ಏನೋ ನೆನೆದಂತೆ ಅವಳತ್ತ ನೋಡ್ತಾನೆ
-ಅವಳು ಸಣ್ಣದಾಗಿ ಕೆಮ್ಮಲು ಆರಂಭಿಸುತ್ತಾಳೆ. ಅವನು ಮತ್ತೆ ತಲೆ ನೇವರಿಸುತ್ತಾನೆ, ಆ ಕೆಮ್ಮು ಜಾಸ್ತಿಯಾಗತ್ತೆ, ಅವಳು ಕೆಮ್ಮು ಜಾಸ್ತಿಯಾಗಿ ಎದ್ದು ಕೂರುತ್ತಾಳೆ, ಆತ ಗಾಬರಿಯಾಗುವಷ್ಟು ಸತತ ಕೆಮ್ಮುತ್ತಾಳೆ.
ಸರ್ವ: ಅನು.. ಏನಾಯ್ತು.. ನೀರ್‌ಬೇಕಾ?..
-ಅವಳು ಕೆಮ್ಮುತ್ತಲೇ ಹುಂ ಅಂತಾಳೆ, ಸರ್ವೋತ್ತಮ ಅಲ್ಲಿಂದ ಅಡಿಗೆ ಮನೆಯತ್ತ ಓಡುತ್ತಾನೆ. ಇವಳು ಬಿಟ್ಟು ಬಿಟ್ಟು ಕೆಮ್ಮುತ್ತಲೇ ಇದ್ದಾಳೆ. ಸರ್ವ ನೀರು ತರ‍್ತಾನೆ ಕುಡಿಸುತ್ತಾನೆ, ನೀರು ಕುಡೀವಾಗಲೂ ಆಕೆ ಕೆಮ್ಮುತ್ತಲೇ ಇದ್ದಾಳೆ
ಸರ್ವ: ಸಾಕಾ? [ಅವಳು ತಲೆಯಾಡಿಸುತ್ತಾಳೆ] ಯಾಕ್ ದಿನೇ ದಿನೇ ನಿನ್ನ್ ಕೆಮ್ಮ್ ಜಾಸ್ತೀನೆ ಆಗ್ತಾ ಇದ್ಯಲ್ಲಾ?.. ಏನಾಯ್ತು?..
ಅನು: ಏನೋ ಗೊತ್ತಿಲ್ಲಾ ಸರೂ.. [ಸಾವರಿಸಿ]
ಸರ್ವ: ಸರಿ ಮಲಕ್ಕೋ ಈಗ.. [ಎಂದು ಮಲಗಿಸಿ ಹೊದಿಸುತ್ತಾನೆ, ಅವಳು ಮಲಗ್ತಾಳೆ. ಈತ ಅಲ್ಲೇ ಕೂತು ಯೋಚಿಸಲು ಶುರುಮಾಡ್ತಾನೆ]
-ಕೆಲಕ್ಷಣ ಕಳೆದು ಮತ್ತೆ ಲೈಟಾಗಿ ಕೆಮ್ಮುತ್ತಾಳೆ. ಅವನು ನೋಡ್ತಾನೆ. ಆ ಕೆಮ್ಮು ಮೆಲ್ಲಗೆ ಇನ್‌ಕ್ರೀಸ್ ಆಗತ್ತೆ.
-ಇವನು ಗಾಬರಿಯಾಗಿ ನೋಡ್ತಾನೆ, ಅವಳ ಕೆಮ್ಮು ಹೆಚ್ಚಾದಾಗ ಮತ್ತೆ ಉಳಿದ ನೀರನ್ನು ತಗೊಂಡು ಅನೂಗೆ ಕುಡಿಸುತ್ತಾನೆ, ಆಗಲೂ ಕೆಮ್ಮುತ್ತಿರುವ ಅನು ಲೋಟದೊಳಗೆ ಸ್ವಲ್ಪ ವಾಮಿಟ್ ಮಾಡಿದಂತೆ ಉಗುಳುತ್ತಾಳೆ.
-ಅದರಲ್ಲಿ ಸ್ವಲ್ಪ ರಕ್ತ ಬರುತ್ತದೆ
-ಸರ್ವ ಅದನ್ನು ನೋಡದೆ ಪಕ್ಕಕ್ಕಿಟ್ಟು ಅವಳ ಬಾಯಿ ಒರೆಸಲು ನೋಡುವಾಗ ಅವಳ ಕಟವಾಯಿಯಲ್ಲಿ ರಕ್ತದ ಸಣ್ಣ ಜಿನುಗು ಕಾಣತ್ತೆ
ಸರ್ವ: [ಗಾಬರಿಯಾಗಿ] ಅನು.. ರಕ್ತ?..
-ಅವಳೂ ಒರೆಸಿಕೊಂಡು ನೋಡ್ತಾಳೆ, ಗಾಬರಿಯಾಗಿ ಗೊತ್ತಿಲ್ಲ ಎನ್ನುವಂತೆ ತಲೆಯಾಡಿಸುತ್ತಾಳೆ
-ಆತ ಒಂದು ಬಗೆಯ ಗಾಬರಿಯಲ್ಲಿ ನೋಡುವಾಗ
-ಮತ್ತೆ ಕೆಮ್ಮಲಾರಂಭಿಸುವ ಅನು. ಪುನ: ನೀರು ಕೊಡಲು ನೋಡ್ತಾನೆ
-ನೀರಲ್ಲಿ ರಕ್ತದ ಉಗುಳು ಕಾಣತ್ತೆ
-ಸರ್ವ ಗಾಬರಿ, ಆಗಲೆ ಅವಳ ಕೆಮ್ಮು ಇನ್ನೂ ಹೆಚ್ಚಾಗಿ ನೀರು ನೀರು ಎನ್ನುವಾಗ ಅವನು ಅದೇ ನೀರನ್ನು ಅಥವಾ ಪಕ್ಕದಲ್ಲಿ ಚೊಂಬಲ್ಲಿ ತಂದಿದ್ದ ನೀರನ್ನು ಕುಡಿಸ ಹೋಗುವಾಗ ಅವಳು ಯಥೇಚ್ಛ ರಕ್ತವನ್ನೇ ವಾಂತಿ ಮಾಡ್ತಾಳೆ
ಸರ್ವ: ಅನು.. [ಎಂದು ಗಾಬರೀಲಿ ಕೂಗ್ತಾನೆ] ಏಳು.. ಈಗ್ಲೇ ಆಸ್ಪತ್ರೆಗ್ ಹೋಗೋಣ ನಡಿ..
ಅನು: ಇಷ್ಟೆಕ್ಕೆಲ್ಲ ಯಾಕೆ..
ಸರ್ವ: ಇಷ್ಟೊಂದ್ ರಕ್ತ ಬರ‍್ತಾ ಇದೆ.. ಯಾಕೆ ಅಂತೀಯಲ್ಲ ನಡೀ ಹೋಗಣ.. [ಎಂದು ಅವಳನ್ನು ಏಳಿಸಿ ಕೆರೆದೊಯ್ತಾನೆ]
ದೃಶ್ಯ-೯/ರಾತ್ರಿ/ಒಳಗೆ/ಆಸ್ಪತ್ರೆ
-ಸರ್ವೋತ್ತಮ ಕಾರಿಡಾರಲ್ಲಿ ಕೂತಿದ್ದಾನೆ. ಅವನಿಗೆ ಟೆನ್ಷನ್ ಇದೆ. ಅವನು ಆತಂಕದಲ್ಲಿ ಉಗುಳು ನುಂಗ್ತಾ ಇದ್ದಾನೆ. ಅಲ್ಲಿಗೆ ಬರುವ ಡಾಕ್ಟರ್
ಡಾಕ್ಟರ್: ಮಿಸ್ಟರ್ ಸರ್ವೋತ್ತಮ್.. [ಆತ ಚಕ್ಕನೆ ಎದ್ದು ನೋಡ್ತಾನೆ]
ಸರ್ವ: [ಗಾಬರಿ ಆತಂಕಗಳಲ್ಲಿ] ಡಾಕ್ಟರ್.. ಏನಾಗಿದೆ ಅನೂಗೆ?.. ಯಾಕ್ ಅಷ್ಟೋಂದ್ ರಕ್ತ ಕಕ್ಕ್‌ತಾ ಇದ್ದಾಳೆ?..
ಡಾಕ್ಟರ್: ಸರ್ವೋತ್ತಮ್.. ನೀವ್ ಸ್ವಲ್ಪ ಧೈರ್ಯ ತಗೋಬೇಕು..
-ಎನ್ನುತ್ತಿದ್ದಂತೆ ಅಧೈರ್ಯಗೊಂಡಂತೆ ನಿಲ್ತಾನೆ.
ಡಾಕ್ಟರ್: ನಿಮ್ಮ್ ಹೆಂಡ್ತಿಗೆ ಲ್ಯುಕೇಮಿಯಾ!…
-ಅವನಿಗೆ ಅರ್ಥ ಆಗಿಲ್ಲ.
ಡಾಕ್ಟರ್: .. ಬ್ಲಡ್ ಕ್ಯಾನ್ಸರ್..
-ಸರ್ವೋತ್ತಮನಿಗೆ ದೊಡ್ಡ ಷಾಕ್
ಡಾಕ್ಟರ್: ಈ ಖಾಯ್ಲೆ ಅವ್ರಿಗ್ ಬಂದು ತುಂಬ ದಿವ್ಸ ಆಗಿದೆ.. ನೀವ್ ಯಾಕ್ ಅವರನ್ನ್ ಇಷ್ಟ್ ಲೇಟಾಗ್ ಕರ‍್ಕೊಂಡ್ ಬಂದ್ರಿ?
-ಅವನಿಂದ ಮಾತೇ ಹೊರಡ್ತಾ ಇಲ್ಲ
ಡಾಕ್ಟರ್: ಎನೀವೇ.. ಈಗ್ಲಾದ್ರೂ ಆಸ್ಪತ್ರೆಗ್ ತೋರ‍್ಸ್‌ಬೇಕು ಅಂತ ನಿಮಗ್ ಅನ್ನಿಸ್ತಲ್ಲಾ! ಅದಕ್ಕ್ ಖುಷಿ ಪಡ್‌ಬೇಕು ಅಷ್ಟೆ.. ಬಟ್ ನೀವ್ ಗಾಬರಿ ಆಗ್‌ಬೇಕಾದ್ ಅಗತ್ಯ ಇಲ್ಲ.. ಇದೂ ವಾಸಿ ಆಗಬೋದಾದ ಖಾಯಿಲೆ!
-ಆತನ ರಿಯಾಕ್ಷನ್
ಡಾಕ್ಟರ್: ಟ್ರೀಟ್‌ಮೆಂಟ್ ಸರ‍್ಯಾಗ್ ತಗೋಬೇಕು ಅಷ್ಟೇ.
-ಆತನ ಆತಂಕದ ರಿಯಾಕ್ಷನ್
ಡಾಕ್ಟರ್: ನಿಮ್ಮ್ ಹೆಂಡ್ತೀಗೆ ನೀವೇ ಧೈರ್ಯ ಕೊಡ್‌ಬೇಕು.. ಅವರು ನಮ್ಮ ಟ್ರೀಟ್‌ಮೆಂಟ್‌ಗೆ ಕೋಆಪರೇಟ್ ಮಾಡಿದಾಗ ಮಾತ್ರಾನೆ ಅವರ್ ಫ಼ಾಸ್ಟ್ ಆಗ್ ರಿಕವರ್ ಆಗೋದು.. [ಎಂದು ಸಾಗ್ತಾನೆ. ಆತನ ಗೊಂದಲದ ರಿಯಾಕ್ಷನ್]
ದೃಶ್ಯ-೧೦/ರಾತ್ರಿ/ಒಳಗೆ/ಅನು ಮನೆ
-ಸರ್ವೋತ್ತಮ ಕಣ್ಣಲ್ಲಿ ನೀರು ತುಂಬಿಕೊಂಡು ಕಿಟಕಿಯತ್ತ ನೊಡ್ತಾ ಇದ್ದಾನೆ, ಅಲ್ಲಿಗೆ ಬರುವ ಅನು ಅವನ ಭುಜದ ಮೇಲೆ ಕೈಯಿಟ್ಟು
ಅನು: ಸರೂ..
-ಆತ ತಿರುಗುತ್ತಾನೆ, ಅವನ ಕಣ್ಣಿಂದ ನೀರು ಜಾರುತ್ತದೆ
ಅನು: [ತಾನೂ ಅಳುತ್ತಿದ್ದವಳು ಕಣ್ಣು ಒರೆಸಿಕೊಂಡು] ನನಗೋಸ್ಕರ ನೀನ್ ಕಣ್ಣೀರ್ ಹಾಕ್‌ಬೇಡ್ವೋ…
ಸರ್ವ: [ಅವಳನ್ನು ನೋಡಿ] ಈ ಕಣ್ಣೀರ್‌ಗ್ ಮಾತ್ರಾನೆ ಅಲ್ವಾ, ಅನು, ನಮ್ಮ್ ದುಃಖಾನ ಕಡ್ಮೆ ಮಾಡೋ ಶಕ್ತಿ ಇರೋದು..
ಅನು: ಸರು.. ನನಗ್ ಕ್ಯಾನ್ಸರ್ ಬಂದಿದೆ ಅಂದ್ರೆ ಏನಾಯ್ತೀಗ? ನಾನ್ ನಿನಗಿಂತ ನಾಲ್ಕ್ ದಿನ ಮುಂಚೆ ಸಾಯ್‌ಬೋದಷ್ಟೇ.. ಆದ್ರೆ.. ಅಲ್ಲೀವರ‍್ಗಾದ್ರೂ ನಾವ್ ಚೆನ್ನಾಗ್ ಬದ್ಕ್‌ಬೋದಲ್ಲ.. ಆ ಅವಕಾಶನಾದ್ರೂ ನಮಗ್ ಇದ್ಯಲ್ಲ ಸರು..
ಸರ್ವ: [ಅವಳನ್ನೇ ನೋಡ್ತಾ] ಇಲ್ಲ ಅನು.. ನಿನ್ನನ್ನ್ ಬಿಟ್ಟ್ ನನಗ್ ಬದ್ಕಿರೋಕ್ಕಾಗಲ್ಲ.. ಎಂದು ಅಳುತ್ತಾನೆ. ಮಂಚದ ಮೇಲೆ ಕುಸಿದು ತಲೆಯನ್ನು ಕೈಗಳಲ್ಲಿ ಹುಡುಗಿಸುತ್ತಾನೆ.
ಅನು: ಬೆನ್ನ ಹಿಂದೆ ಇದ್ದ ಸಾವು ಕಣ್ಮುಂದೆ ಬಂದಿದೆ! ಈಗ ನೀನೂ ಹೀಗಾಡಿದ್ರೆ ನಾನ್ ಹೇಗ್ ಬದುಕ್ಲೋ?..
-ಅವನು ನೋಡ್ತಾನೆ
ಅನು: ಈ ಕ್ಯಾನ್ಸರ್‌ಗೆ.. ನಮ್ಮ್ ಪ್ರೀತಿನ್ ಬಲಿ ತಗೊಳ್ಳೊ ಶಕ್ತಿ ಇಲ್ಲ ಸರೂ..
-ಅವನಲ್ಲಿ ಏನೋ ಧೈರ‍್ಯ ಕಾಣತ್ತೆ
ಅನು: ನಮ್ಮ್ ಪ್ರೀತಿ ಮುಂದೆ ಯಾವ್ ಕಾಯ್ಲೇನೂ ಏನೂ ಮಾಡೋಲ್ಲ..
-ಅವನ ರಿಯಾಕ್ಷನ್
ಅನು: ಸರೂ.. ನಾನ್ ಈ ಖಾಯ್ಲೆನ್ ಗೆಲ್ತೀನೋ! ಖಂಡಿತಾ! ನಿನ್ನ ಪ್ರೀತಿ ಒಂದು ಇದ್ದ್ರೆ ಸಾಕು ಕಣೋ!
-ಎನ್ನುವಾಗ ಅವನೂ ನಿಡುಸುಯ್ದು ಅವಳನ್ನು ಅಪ್ಪುತ್ತಾನೆ, ಇಬ್ಬರ ಸಂತೋಷದ ಕಣ್ಣೀರು
ದೃಶ್ಯ-೧೨/ಹಗಲು/ಹೊರಗೆ/ರಸ್ತೆ
-ಸರ್ವ ಔಷಧದ ಅಂಗಡಿಯಿಂದ ಕೆಲವು ಔಷಧಗಳನ್ನು ತೆಗೆದುಕೊಂಡು ಹೊರಡುತ್ತಾನೆ
-ಅವನು ಮಾಮೂಲಿ ಅವಳಿಗಾಗಿ ಕಾಯುವ ಜಾಗದಲ್ಲಿ ಕಾದು ನಿಲ್ತಾನೆ
-ಆಗಲೇ ಭಾರವಾದ ಹೆಜ್ಜೆಗಳನ್ನಿಟ್ಟು ಇತ್ತ ಬರ‍್ತಾ ಇರುವ ಅನೂನ ನೋಡ್ತಾನೆ
-ಸರ್ವ ಅಚ್ಚರಿಯಲ್ಲಿ ನೋಡ್ತಾನೆ. ಅನು ಅದೆ ಫ಼್ರೇಮಿಗೆ ಬರುತ್ತಾಳೆ. ಅವಳು ತಲೆಬಗ್ಗಿಸಿರೋದನ್ನ ನೋಡಿ ತಾನೇ ತಲೆ ಎತ್ತುತ್ತಾನೆ
-ಅವಳ ಕಣ್ಣಲ್ಲಿ ನೀರು ತುಂಬಿಕೊಂಡಿದೆ
ಸರ್ವ: ಮತ್ತೇನಾಯ್ತು?.. ಯಾಕ್ ಅಳ್ತಾ ಇದ್ದೀಯಾ?..
ಅನು : ನನ್ನ ಕೆಲಸ ಹೋಯ್ತು!
ಸರ್ವ ಅಚ್ಚರಿ-ಗಾಬರಿ
ಅನು: ಫ಼್ಯಾಕ್ಟ್ರೀಲೂ ಕೆಮ್ಮ್ ಬಂತು. ರಕ್ತ ವಾಂತಿ ಆಯ್ತು.. ಆ ಸೂಪರ್‌ವೈಜರ್ ಹೋಗಿ ಓನರ್‌ಗೆ ಹೇಳ್ದಾ! ಫ್ಯಾಕ್ಟರೀಲ್ಲೇ ಏನಾದ್ರೂ ಆದ್ರೆ ಖರ್ಚು ತಲೆ ಮೇಲೆ ಬರತ್ತೆ ಅಂತ ಕೆಲ್ಸದಿಂದ ತೆಗ್ದ್‌ಬಿಟ್ರು ಕಣೊ, ನನ್ನನ್ನ!…
– ಎನ್ನುವಾಗ ಆತನ ಷಾಕ್
– ಅನು ಅಳ್ತಾಳೆ.
ಸರ್ವ: [ಪೂರ್ತಿ ಹೆದರಿದಂತೆ] ಹಾಗಾದ್ರೆ ಮುಂದೆ?.. ನನ್ನೊಬ್ಬನ್ ಸಂಬಳದಲ್ಲಿ ನಮ್ಮ್ ಜೀವ್ನ ಹೇಗಾಗತ್ತೆ ಅನೂ?..
ಅನು: [ಅವಳು ಕಣ್ಣೋರೆಸಿಕೊಂಡು] ಈ ಕೆಲ್ಸ ಹೋದ್ರೇನಂತೆ.. ಇನ್ನ್ ಯಾವ್ದಾದ್ರೂ ಕೆಲ್ಸ ಹುಡುಕ್ತೀನಿ… ನಡೀ ಹೋಗೋಣ.. [ಎಂದು ಆಕೆ ಮುಂದೆ ಸಾಗುತ್ತಾಳೆ. ಆತನ ರಿಯಾಕ್ಷನ್]
ದೃಶ್ಯ-೧೩/ಹಗಲು/ಒಳಗೆ/ಅನು ಮನೆ
[ಒಂದಷ್ಟು ದಿನಗಳು ಕಳೆದಿವೆ ಎಂಬಂತೆ]
-ಸರ್ವ ತಲೆಮೇಲೆ ಕೈ ಹೊತ್ತವನಂತೆ ಕೂತಿದ್ದಾನೆ. ಅಲ್ಲಿಗೆ ಲೈಟಾಗಿ ಆಗಾಗ ಕೆಮ್ಮಾತ್ತಾ ಬರುವ ಅನು ಏನಾಯ್ತು ಎಂಬಂತೆ ನೋಡ್ತಾ
ಅನು: ಸರೂ.. [ಎನ್ನುವಾಗ ಆತ ತಲೆ ಎತ್ತಿ ನೋದ್ತಾನೆ. ಆತನಿಗೆ ಅವಳನ್ನು ನೋಡುವ ಆಸಕ್ತಿಯೂ ಇಲ್ಲವೆಂಬಂತೆ ಬೇರೆಡೆಗೆ ತಿರುಗುತ್ತಾನೆ] ಯಾಕ್ ಹೀಗ್ ಕೂತಿದ್ದೀಯಾ?.
ಸರ್ವ: ಜೇಬ್ ಖಾಲಿ ಆಗಿದೆ.. ಯಾವ್ ಪದಾರ್ಥ ತರೋದಕ್ಕೂ ನನ್ನ್ ಹತ್ರ ದುಡ್ಡಿಲ್ಲ.. ನನ್ನೊಬ್ಬನ್ ದುಡ್ಮೆ ಯಾವ್ದಕ್ಕೂ ಆಗ್ತಾ ಇಲ್ಲ.. ಹಾಲು. ತರಕಾರಿ, ದಿನಸಿ.. ಯಾವ್ದಕ್ಕೂ ದುಡ್ಡು ಸಾಲ್ತಾ ಇಲ್ಲ..
ಅನು: ಅದಕ್ಕ್ ಯಾಕ್ ಬೇಜಾರು ಮಾಡ್ಕೊತ್ತೀಯೋ?.. ಇರೋದ್ರಲ್ಲೇ ಅಡ್ಜಸ್ಟ್ ಮಾಡಿದ್ರಾಯ್ತು ಬಿಡು..
ಸರ್ವ: ಹೇಗ್ ಮಾಡೋದು?..
ಅನು: ಒಂದ್ ಹೊತ್ತ್ ಊಟ ಬಿಟ್ರಾಯ್ತು ಬಿಡು..
-ಎನ್ನುವಾಗ ಆತನ ರಿಯಾಕ್ಷನ್
ಅನು: ಏಳು.. ಆಫೀಸಿಗ್ ಹೊರಡು.
ಸರ್ವ: ಎಷ್ಟ್ ದಿನ ಅಂತ ಒಂದ್ ಹೊತ್ತ್ ಊಟ ಬಿಡೋಕ್ಕಾಗತ್ತೆ?..
ಅನು: ನಮ್ಮಿಬ್ಬರಲ್ಲ್ ಪ್ರೀತಿ ಇರೋವರ‍್ಗೂ..
– ಆತ ಸಂಕಟದಿಂದ ಕಣ್ಣ್ ಮುಚ್ಚುತ್ತಾನೆ.
ಅನು: ಯೋಚ್ಸ್‌ಬೇಡ.. ನಮ್ಮ್ ಪ್ರೀತಿ ಆ ಹಸ್ವನ್ನ.. ಆ ಕೊರತೇನ.. ಎಲ್ಲಾನೂ ಗೆಲ್ಲತ್ತೆ.. [ಎನ್ನುವಾಗ ಇದೆಲ್ಲ ಮಾತಿಗಷ್ಟೆ ಎಂಬಂತೆ ನೋಡಿ ಅಲ್ಲಿಂದ ಏನೂ ಹೇಳದೆ ಇದ್ದು ಸಾಗ್ತಾನೆ, ಅನು ಗೊಂದಲದ ರಿಯಾಕ್ಷನ್]
ದೃಶ್ಯ-೧೪/ಹಗಲು/ಒಳಗೆ/ಆಸ್ಪತ್ರೆ
-ಡಾಕ್ಟರ್ ಮುಂದೆ ಒಬ್ಬಳೇ ಕುಳಿತಿರುವ ಅನು, ಆತ ಪ್ರಿಸ್ಕ್ರಿಪ್ಷನ್ ಬರೆದು ಕೊಡುತ್ತಾ
ಡಾಕ್ಟರ್: ಇವತ್ತ್ ಸರ್ವೋತ್ತಮ್ ಅವರ್ ಯಾಕ್ ಬರ‍್ಲಿಲ್ಲ?..
ಅನು: ರಜಗಳೆಲ್ಲ ಖಾಲಿ ಆಗಿದಾವೆ ಡಾಕ್ಟರ್.. ದುಡ್ಯೋದ್ ಅವನೊಬ್ನೆ.. ಕೆಲ್ಸಕ್ಕ್ ಹೋಗ್ಲಿಲ್ಲ ಅಂದ್ರೆ ಪೇಮೆಂಟ್ ಕಟ್ ಮಾಡ್ತರೆ.. ಅದಕ್ಕೆ ನಾನೊಬ್ಬಳೆ ಬಂದೆ..
-ಡಾಕ್ಟರ್ ರಿಯಾಕ್ಷನ್
ಡಾಕ್ಟರ್: [ತಲೆಯಾಡಿಸಿ] ಓ.. [ಎಂದು ಏನೂ ಹೇಳೋದೋ ತೋಚದೆ] ಆಕ್ಚುಯಲೀ ನಿಮ್ಮ್ ಟ್ಯಾಬ್ಲೆಟ್ಸ್ ಚೇಂಜ್ ಮಾಡಿದ್ದೀನಿ.. ತಗೊಳ್ಳೀ.. ಇವನ್ನ ಇವತ್ತಿಂದಾನೇ ತಗೋಬೇಕು..
-ಅವಳು ಅದನ್ನು ಭಾರವಾದ ಕೈಗಳಲ್ಲಿ ತಗೊಳ್ತಾಳೆ ಅವನನ್ನೇ ನೋಡ್ತಾಳೆ
ಡಾಕ್ಟರ್: ಏನಾಯ್ತಮ್ಮ?.. ಯಾಕ್ ಹಾಗ್ ನೋಡ್ತಿದ್ದೀರಿ?..
ಅನು: ನೀವ್ ಬರೀತಿರೋ ಮೆಡಿಸನ್ಸ್ ತಗೊಳ್ಳೋಕ್ಕೆ ನಮ್ಮ್ ಸಂಬಳ ಸಾಕಾಗ್ತಾ ಇಲ್ಲ ಡಾಕ್ಟರೇ..
ಡಾಕ್ಟರ್: ಯಾರಾದ್ರೂ ಡೊನರ‍್ಸ್‌ನ ಹುಡುಕೀ..
ಅನು: ಈ ಊರಲ್ಲಿ ದಾನ ಮಾಡಿ ಅಂತ ಯಾರನ್ನ ಕೇಳೋದು ಸಾರ್?…
ಡಾಕ್ಟರ್: ಪ್ರಯತ್ನ ಪಡಿ.. ಮನುಷ್ಯತ್ವ ಇರೋರು ಯಾರಾದ್ರೂ ಸಿಕ್ಕೇ ಸಿಗ್ತಾರೆ.. [ಎನ್ನುವಾಗ ಆಕೆ ಇನ್ನೇನೂ ಮಾತಾಡದೆ ಪ್ರಿಸ್ಕಿಪ್ಷನ್ ಹಿಡಿದು ಎದ್ದು ಹೊರಡ್ತಾಳೆ]
ದೃಶ್ಯ-೧೪ಎ/ಹಗಲು/ಒಳಗೆ/ಆಸ್ಪತ್ರೆ
-ಅನು ಪ್ರಿಸ್ಕಿಪ್ಷನ್ ಹಿಡಿದು ಡಾಕ್ಟರ್ ರೂಮಿಂದ ಹೊರಕ್ಕೆ ಬರುವಾಗ ಯಾರೋ ನಗ್ತಾ ಬಂದು ಅನೂಗೆ ಡಿಕ್ಕಿ ಹೊಡೀತಾನೆ. ಅವಳು ಇನ್ನೇನು ಬೀಳುವುದರಲ್ಲಿದ್ದಾಗ ಅವಳನ್ನು ಹಿಡಿದು ನಿಲ್ಲಿಸಿ
ಆತ: ನೋಡ್ಕೊಂಡ್ ಹೋಗ್ರೀ.. [ನಗುತ್ತಲೇ]
-ಅವಳು ಕೋಪದಿಂದ ನೋಡ್ತಾಳೆ
ಆತ: ಅಯ್ಯೋ.. ನೋಡ್ಕೊಂಡ್ ಹೋಗಿ ಅಂದ್ರೆ ನುಂಗ್‌ಹಾಕ್ಕೊಂಡ್ ಹೋಗೋ ತರ ನೋಡ್ತಿದ್ದೀರಲ್ರೀ?..
-ಅನು ಕೋಪದಿಂದಲೇ ನೋಡ್ತಾಳೆ
ಆತ: [ಸ್ಮೈಲ್ ಮಾಡ್ತಾ] ಅನ್ಯಾಯವಾಗ್ ಬಿದ್ದು ತಲೆ ಒಡ್ಕೊಳ್ತಾ ಇದ್ರಲ್ಲ ಅಂತ ಹೇಳ್ದೆ.. ನನ್ನ್ ಮಾತಿಂದ ನಿಮಗೇನಾದ್ರೂ ಬೇಜಾರಾಗಿದ್ರೆ.. [ತಡೆದು] ಮಾಡ್ಕೊಳ್ಳೋಕ್ಕ್ ಹೋಗ್‌ಬೇಡಿ.. [ಎಂದು ಹೇಳಿ ಅಲ್ಲಿಂದ ನಗುನಗುತ್ತಲೇ ಸಾಗಿಬಿಡುತ್ತಾನೆ]
-ಅನು ಇನ್ನೂ ಕೋಪದಿಂದ ನೋಡ್ತಾಳೆ, ಮತ್ತೆ ಸಾಗ್ತಾಳೆ
ದೃಶ್ಯ-೧೫/ಹಗಲು/ಒಳಗೆ/ಅನು ಮನೆ
-ಮುಚ್ಚಿರುವ ಬಾಗಿಲನ್ನು ತೆರೆದುಕೊಂಡು ಒಳಗೆ ಬರುವ ಅನು. ಅವಳಿಗೆ ಬಿಸಿಲಿಗೂ ಸುಸ್ತಿಗೂ ತಲೆ ಸುತ್ತಿದಂತಾಗುತ್ತದೆ ಬಂದು ನೀಳಲಿದ್ದವಳು ಗೋಡೆ ಹಿಡಿದು ನಿಲ್ತಾಳೆ, ಸಾವರಿಸಿ ಹೊಟ್ಟೆ ಹಸಿವು ಎಂಬಂತೆ ಹೊಟ್ಟೆಹಿಡಿದುಕೊಂದು ಅಡಿಗೆ ಮನೆಯತ್ತ ಸಾಗುತ್ತಾಳೆ.
-ಅಡಿಗೆ ಮನೆಗೆ ಬಂದು ತಿನ್ನಲು ಏನಾದರೂ ಇದೆಯಾ ಎಂದು ಮತ್ತೆ ಪಾತ್ರೆ ಪಗಡೆಗಳನ್ನೆಲ್ಲ ಹುಡುಕುತ್ತಾಳೆ ಏನೂ ಸಿಗುವುದಿಲ್ಲ. ಬೇಜಾರು ಮಾಡಿಕೊಳ್ತಾ ನೀರು ತಗೊಳ್ಳಲು ಹೋಗುವಾಗ ಷೆಲ್ಫ್ ಮೇಲೆ ಏನೋ ನೋಡಿದಂತೆ ಅಚ್ಚರಿಯಾಗ್ತಾಳೆ.
-ಅಲ್ಲಿ ಒಂದು ಪತ್ರ ಕಾಣುತ್ತದೆ
-ಆಕೆ ಏನೆಂದು ಆತಂಕದಿಂದ ಎತ್ಕೊಂಡು ನೋಡ್ತಾಳೆ ಓಪನ್ ಮಾಡ್ತಾಳೆ
ಅನು,
ನಾನೂ-ನೀನು ಪರಸ್ಪರ ಇಷ್ಟ ಪಟ್ಟು, ಪ್ರೀತ್ಸಿ ಮದ್ವೆ ಆದ್ವಿ.. ಕೊನೆವರ‍್ಗೂ ಸುಖವಾಗ್ ಬಾಳ್ತೀವಿ ಅಂದ್ಕೊಂಡ್ವಿ.. ಇರೋದ್ರಲ್ಲ್ ಅಡ್ಜಸ್ಟ್ ಮಾಡ್ಕೊಂಡ್ ಬದುಕ್‌ಬೇಕು ಅಂದ್ಕೊಡ್ವಿ.. ಆದ್ರೆ ಹಾಗಾಗ್‌ಲಿಲ್ಲ.. ನಿನಗ್ ಬಂದ್ ಖಾಯ್ಲೆ ನಮ್ಮ್ ಸುಖ ನೆಮ್ಮದಿನೆಲ್ಲ ಕಿತ್ಕೊಂಡ್‌ಬಿಡ್ತು..
-ಆಕೆ ಅದುರುತ್ತಾ ನೋಡ್ತಾಳೆ
ನಿನ್ನ್ ಕೆಲ್ಸ ಕಿತ್ಕೊಳ್ತು.. ನಿನ್ನ್ ಆರೋಗ್ಯ ಕಿತ್ಕೊಳ್ತು.. ನನ್ನ್ ನೆಮ್ಮದಿ ಕಿತ್ಕೊಳ್ತು.. ಯಾವತ್ತೂ ಸಾಲ ಮಾಡ್ದೆ ಇರೋ ನನ್ನನ್ನ ಎಲ್ಲಾರ್ ಹತ್ರ ದುಡ್ಡ್‌ಗೋಸ್ಕರ ಭಿಕ್ಷೆ ಬೇಡೋಹಾಗ್ ಮಾಡ್ತು..
-ಅನು ಕಣ್ಣ್ ತುಂಬಿಕೊಳ್ಳತ್ತೆ
ಆಗಲ್ಲ ಅನು.. ನನಗ್ ಈ ಥರದ್ ಜೀವ್ನ ಆಗಲ್ಲ.. ಗಂಜಿ ಕುಡ್‌ದ್ರೂ ಯಾರ್ ಮುಂದೆನೂ ಕೈ ಚಾಚ್ದೆ ಬದುಕ್‌ಬೇಕು ಅಂದ್ಕೊಂಡಿದ್ದೋನ್ನ.. ಎಲ್ಲಾರ್ ಮುಂದೆ ತಲೆ ತಗ್ಸೋಹಾಗ್ ಮಾಡ್‌ಬಿಡ್ತು ನಿನ್ನ್ ಖಾಯ್ಲೆ.. ದಿನಾ ದಿನಾ ಔಷಧಿ ಖರ್ಚು.. ಆಸ್ಪತ್ರೆ ಖರ್ಚ್ ಏರ್ಕೆ ಆಗ್ತಾಇದೆ.. ನಾನ್ ಎಲ್ಲಿಂದ ತರ‍್ಲಿ?..
-ಅನು ಕಣ್ಣೀರು ಜಾರತ್ತೆ
ಇನ್ನ್ ನನ್ನಿಂದ ಆಗಲ್ಲ ಅನು.. ಈ ಸಾಲಗಾರ್ ಜೀವ್ನ, ಈ ತೊಳಲಾಟ.. ಜಂಜಾಟ.. ನನ್ನಿಂದ ಆಗಲ್ಲ.. ಅದಕ್ಕೆ.. ನಾನ್ ನಿನ್ನನ್ನ.. ನನ್ನ್ ಪ್ರೀತೀನ್ ಬಿಟ್ಟು ದೂರ ಹೋಗ್ತಾ ಇದ್ದೀನಿ.. ನನ್ನನ್ನ್ ಕ್ಷಮ್ಸ್‌ಬಿಡು..
ನಿನ್ನ
ಸರು..
-ಎಂದಿದ್ದ ಲೆಟರ್ರನ್ನು ಓದಿ ಪಾತಾಳಕ್ಕೆ ಇಳಿದಂತೆ ಕುಸಿದು ಹೋಗ್ತಾಳೆ, ದಿಕ್ಕೇ ತೋಚದೆ ಕೂತುಬಿಡುತ್ತಾಳೆ
ದೃಶ್ಯ-೧೬/ಹಗಲು/ಒಳಗೆ/ಅನು ಮನೆ
-ನ್ಯೂಟ್ರಲ್‌ಯಿಂದ ಪ್ಯಾನ್ ಆದರೆ ಗೆಳತಿ ನಿಂತಿದ್ದಾಳೆ. ಅವಳು ಅತ್ತಿತ್ತ ತಲೆಯಾಡಿಸುತ್ತಾ
ಗೆಳತಿ: ನೀನ್ ಎಲ್ಲಾರ‍್ನೂ ಬಿಟ್ಟ್ ಮದ್ವೆ ಆಗ್ತೀನಿ ಅಂದಾಗ್ಲೇ ನನಗ್ ಈ ಭಯ ಇತ್ತು.. ಅದಕ್ಕೇ ನಿನಗ್ ಆಗ್ಲೇ ಬಡ್ಕೊಂಡೆ.. ದುಡ್‌ಕ್‌ಬೇಡ ಅಂತ ಎಷ್ಟ್ ಹೇಳ್ದೆ.. ಆಗ್ ನನ್ನ್ ಮಾತ್ ಕೇಳ್ದೆ.. ನನ್ನ್ ಪ್ರೀತಿ ಮೇಲ್ ನನಗ್ ನಂಬ್ಕೆ ಇದೆ ಅಂದೆ.. ಈಗ್ ಏನಾಯ್ತು ಆ ನಿನ್ನ್ ಪ್ರೀತಿ?..
-ಅನು ಅಳ್ತಾಳೆ
ಗೆಳತಿ: [ಅವಳ ಬಳಿಗೆ ಹೋಗಿ ಸಮಧಾನಿಸುತ್ತಾ] ಈಗ್ ಅತ್ರೆ ಏನ್ ಬಂತು ಭಾಗ್ಯ.. ಹೋಗು.. ನಿಮ್ಮಪ್ಪ ಅಮ್ಮನ್ ಹತ್ರನಾದ್ರೂ ಹೋಗಿ ತಪ್ಪಾಯ್ತು ಅಂತ ಹೇಳು.. ನಿನ್ನ್ ಮನೇಗ್ ಹೋಗ್ ಸೇರ‍್ಕೋ.. ಇನ್ನಾದ್ರೂ ನೆಮ್ಮದಿಯಾಗಿರು..
ಅನು: ಇಲ್ಲ ಬೃಂದಾ.. ನಾನ್ ಅಲ್ಲಿಗ್ ಹೋಗಲ್ಲ.. ಸೋತು ಅಲ್ಲೀಗ್ ಹೋದ್ರೆ ನನ್ನ್ ಬಾಳ್ ನರ‍್ಕ ಆಗ್‌ಬಿಡತ್ತೆ.. ನಾನ್ ಎಲ್ಲಿಗೂ ಹೋಗಲ್ಲ.. [ಎಂದು ಮತ್ತೆ ಅಳ್ತಾಳೆ]
ಗೆಳತಿ: [ಕೆಲಕ್ಷಣ ಯೋಚಿಸಿ ಅವಳ ತಲೆ ಎತ್ತಿ] ಆಯ್ತು ನಿನ್ನಿಷ್ಟ ಬಂದ್ ಹಾಗ್ ಮಾಡು.. ಸಧ್ಯಕ್ಕೆ ಈ ದುಡ್ಡ್ ಇಟ್ಕೋ.. [ಕೊಡ್ತಾಳೆ]
-ಅನು ಅಳ್ತಾ ತಗೊಳ್ತಾಳೆ
ಗೆಳತಿ: ಹಾಗೇ.. ನಿನಗ್ ಬೇರೆ ಎಲ್ಲಾದ್ರೂ ಕೆಲ್ಸ ಸಿಗ್‌ಬೋದಾ ಅಂತ ನೋಡ್ತೀನಿ.. ಹುಷಾರು.. ಏನೇ ಬೇಕಾದ್ರೂ ಫೋನ್ ಮಾಡು.. [ಎಂದು ಹೊರಡುತ್ತಾಳೆ, ಅನು ದುಡ್ಡು ನೋಡ್ತಾ ಉಳೀತಾಳೆ]
ದೃಶ್ಯ-೧೬ಎ/ಹಗಲು/ಒಳಗೆ-ಹೊರಗೆ/ಅನು ಮನೆ
-ಗೆಳತಿ ಹೋದಾಗ ಕೂತಿರುವ ಸ್ಥಿತಿಯಲ್ಲೇ ಇರುವ ಅನು ಹಾಗೇ ಕಣ್ಣು ಮುಚ್ಚಿದ್ದಾಳೆ, ‘ಅನ್ನ್‌ಪೂರ್ಣ.. ಅನ್ನ್‌ಪೂರ್ಣ’ ಎಂಬ ಮನೆಯ ಮಾಲಕಿಯ ಕೂಗಿಗೆ ಎಚ್ಚರಾಗತ್ತೆ.
ಮಂಜುಳಮ್ಮ: [ಹೊರಗೆ ನಿಂತು ಕೈಯಲ್ಲಿ ಏನೋ ಬಟ್ಟಲು ಹಿಡಿದು] ಅನ್ನಪೂರ್ಣ.. ಅನ್ನಪೂರ್ಣ.. [ಕೂಗ್ತಾಳೆ] ಪಾಯ್ಸ ಮಾಡಿದ್ದೀನಿ ಬಾಗ್ಲ್ ತೆಗ್ಯಮ್ಮ..
ಅನು: [ತನ್ನಲ್ಲೇ] ಪಾಯ್ಸ! [ಎಂದು ವ್ಯಂಗ್ಯವಾಗಿ ತನ್ನಲ್ಲೇ ನಗುತ್ತಾ ಕಿಟಕಿಯತ್ತ ನೋಡಿ ಇಣುಕುತ್ತಾಳೆ]
-ಆಕೆ ನಿಜವಾಗಿ ಬಟ್ಟಲು ಹಿಡಿದು ನಿಂತಿರೋದು ಕಾಣತ್ತೆ
ಅನು: [ಕಿಟಕಿ ತೆಗೆಯುತ್ತಾಳೆ] ಮಂಜುಳಮ್ಮಾವ್ರೇ..
ಮಂಜುಳಮ್ಮ: [ಅತ್ತ ಬಂದು] ಇದ್ಯಾಕಮ್ಮ ಬಾಗ್ಲ್ ತೆಗೀದೆ ಇಲ್ಲೇ ಇಣ್ಕ್ ಹಾಕ್ತಾ ಇದ್ದೀಯಾ?.. ಪಾಯ್ಸ ತಂದಿದ್ದೀನಿ ತಗೋ..
ಅನು: ಬಾಡ್ಗೆ ಕೊಡ್ದೆ ಇರೋರ‍್ಗೆ ಪಾಯ್ಸ ಬೇರೆ ಯಾಕಮ್ಮ?.. ನಾನ್ ಈಗಿರೋ ಪರಿಸ್ಥಿತೀಲಿ.. ನೀರ್ ಕುಡ್ಯೋದ್ ಒಂದೇ ಲಾಯಕ್ಕು..
ಮಂಜುಳಮ್ಮ: ಅಯ್ಯೋ ಹುಡ್ಗಿ.. ಬಾಡ್ಗೆ ಬಂತಲ್ಲೇ ಆಗ್ಲೇ..
-ಆಕೆ ಅಚ್ಚರೀಲಿ ನೋಡ್ತಾಳೆ
ಮಂಜುಳಮ್ಮ: ಹುಂ.. ಬಾಗ್ಲ್ ತೆಗೀ ಬಾ..
-ಎನ್ನುವಾಗ ಆಕೆ ಅನುಮನದಲ್ಲೇ ಸಾಗಿ
-ಬಾಗಿಲು ತೆಗೀತಾಳೆ, ಮಂಜುಳಮ್ಮ ಒಳ ಬಂದು ಪಾಯಸ ಕೊಡ್ತಾಳೆ.
ಅನು: [ಅದನ್ನು ಪಡೆದು] ನಮ್ಮನೆ ಬಾಡ್ಗೆ ಕೊಟ್ಟಾಯ್ತಾ?.. ಯಾರ್ ಕೊಟ್ರು?..
ಮಂಜುಳಮ್ಮ: ಅದ್ಯಾರೋಪ್ಪ ಆಸ್ಪತ್ರೆಯಿಂದ ಬಂದಿದ್ದೀನಿ ಅಂದ್ರು.. ಅವರೇ ಅಂಗಡಿ ಬಾಕಿ, ಹಾಲಿನ್ ಬಾಕಿ, ಬಾಡ್ಗೆ ಎಲ್ಲಾ ಕೊಟ್ಟ್ ಹೋದ್ರು..
-ಎನ್ನುವಾಗ ಆಕೆಯ ಬೆರಗಿನ ರಿಯಕ್ಷನ್
ದೃಶ್ಯ-೧೭/ಹಗಲು/ಒಳಗೆ/ಆಸ್ಪತ್ರೆ
ಡಾಕ್ಟರ್: ನೋನೋನೋ?.. ನಾನ್ ನಿಮಗ್ ಯಾವ್ ಹೆಲ್ಪ್ ಮಾಡಿಲ್ಲ.. ನೀವ್ ಥ್ಯಾಂಕ್ಸ್ ಹೇಳ್‌ಬೇಕಾಗಿರೋದು ನನಗಲ್ಲ!
ಅನು: ಮತ್ತೆ?.. ನನ್ನ್ ಮನೆ ಬಾಡ್ಗೆ, ರೇಷನ್ ಬಿಲ್ಲು.. ಇದನ್ನೆಲ್ಲ ಯಾರ್ ಕೊಟ್ರು ಡಾಕ್ಟರ್?.. ಯಾರೋ ಆಸ್ಪತ್ರೆಯಿಂದ ಬಂದ್ ಕೊಟ್ರು ಅಂದ್ರಲ್ಲ..
ಡಾಕ್ಟರ್: ಅದ್ ನಿಜಾನೇ.. ಆದ್ರೆ ಅದು ನಾನಲ್ಲ.. ನಿಮಗ್ ಸಹಾಯ ಮಾಡಿದ್ ಮನುಷ್ಯ ೬ನೇ ನಂಬರ್ ವಾರ್ಡಲ್ಲಿದಾರೆ.. ಅಲ್ಲೇ ಹೋಗ್ ನೋಡಿ..
-ಎನ್ನುವಾಗ ಅಚ್ಚರೀಲಿ ನೋಡ್ತಾಳೆ ಮತ್ತೆ ಅಲ್ಲಿಂದ ಹೊರಡ್ತಾಳೆ
ದೃಶ್ಯ-೧೭ಎ/ಹಗಲು/ಒಳಗೆ/ಆಸ್ಪತ್ರೆ
-ಅನು ಆಸ್ಪತ್ರೆಯ ಕಾರಿಡಾರಲ್ಲಿ ೬ನೆ ನಂಬರ್ ವಾರ್ಡ್ ಎಲ್ಲಿದೆ ಎಂದು ಹುಡುಕುತ್ತಾ ಬರ‍್ತಾ ಇದ್ದಾಳೆ. ಆಗಾಗ ಕೆಮ್ಮುತ್ತಾ ವಾರ್ಡ್ ನಂಬರ್ ನೋಡ್ತಾ ಇರುವಾಗ ಯಾರೋ ಡಿಕ್ಕಿ ಹೊಡಿತಾರೆ, ಕೋಪದಿಂದ ನೋಡುವ ಆಕೆ
-ಆತನೂ ನೋಡ್ತಾನೆ
-ಪಕ್ಕದಲ್ಲೇ ಏನೋ ಮಾಡ್ತಾ ನಿಂತಿದ್ದ ನರ್ಸ್ ನೋಡ್ತಾಳೆ ನಗ್ತಾ ಅಲ್ಲೇ ತನ್ನ ಕೆಲಸ ಮುಂದುವರೆಸುತ್ತಾಳೆ
ಆತ: [ನೋಡಿ ಚುಡಾಯಿಸುವಂತೆ] ಏನ್ರೀ ನೀವು.. ದಿನಾ ಬಂದ್ ನನಗೇ ಡಿಕ್ಕಿ ಹೊಡೀತೀರಲ್ರೀ?.. ನಾನೇನ್ರೀ ಮಾಡಿದ್ದೆ ನಿಮಗೆ?.. ನಿಜವಾಗ್ಲೂ ನಿಮಗ್ ಎಲ್ಲೋ ಕಣ್ಣ್ ಕುರುಡು ಅನ್ಸತ್ತೆ.. ಹೋಗಿ.. ಮೊದ್ಲು ಕಣ್ಣ್ ಟೆಸ್ಟ್ ಮಾಡ್ಸ್‌ಕೊಳ್ಳಿ..
ಅನು: ನನ್ನ್ ಕಣ್ಣ್ ಚೆನ್ನಾಗೆ ಇದೆ.. ಕಣ್ಣು ಬುದ್ಧಿ ಎರಡೂ ಚೆನ್ನಾಗಿಲ್ದೆ ಇರೋದು ನಿಮಗೆ.. ಮೊದ್ಲು ನೀವ್ ಹೋಗಿ ಎರಡನ್ನೂ ಟೆಸ್ಟ್ ಮಾಡ್ಸ್‌ಕೊಂಡ್ ಬನ್ನಿ..
ಆತ: [ಅದಕ್ಕೂ ಸ್ಮೈಲ್ ಮಾಡಿ] ಆಯ್ತು.. ಟೆಸ್ಟ್ ಮಾಡ್ಸ್‌ಕೊತೀನಿ?.. ಅದರ್ ಬಿಲ್ಲ್ ನೀವ್ ಕೊಡ್ತೀರಾ?.. ಹೋಗ್ರೀರೀ ಹೇಳೋಕ್ಕ್ ಬಂದ್‌ಬಿಟ್ರು.. [ಎಂದು ಸಾಗುತ್ತಾನೆ]
-ಅನು ಸಿಟ್ಟಲ್ಲಿ ನೋಡಿ ಮತ್ತೆ ವಾರ್ಡ್ ನಂಬರ್ ಆರನ್ನು ಹುಡುಕುವಾಗ
-ಪಕ್ಕದ್ದೇ ೬ನೆ ನಂಬರ್ ಎಂಬುದು ಗೊತ್ತಾಗತ್ತೆ.
-ಅದನ್ನು ನೋಡಿ ಅವಳು ಒಳಗೆ ಹೋಗ್ತಾಳೆ
-ವಾರ್ಡ್ ಒಳಗೆ ಯಾರೂ ಇಲ್ಲ, ಬೆಡ್ ಖಾಲಿ ಇದೆ,
ಅವಳು ಮತ್ತೆ ಆಚೆ ಬರ‍್ತಾಳೆ
ಅನು: [ಹೊರಬಂದು ಅಲ್ಲೇ ಇದ್ದ ನರ್ಸನ್ನು ಕೇಳ್ತಳೆ] ಸಿಸ್ಟರ್.. ಈ ವಾರ್ಡಲ್ಲ್ ಯಾರೋ ಇರ‍್ತಾರೆ ಅಂದ್ರು ಡಾಕ್ಟ್ರು! ಯಾರವ್ರು?.. ಈಗೆಲ್ಲಿದಾರೆ?..
ಸಿಸ್ಟರ್: [ನಗ್ತಾ] ಈಗ್ತಾನೆ ನಿಮಗ್ ಡಿಕ್ಕಿ ಹೊಡ್‌ದ್ರಲ್ಲ.. ಅವರೇ ೬ನೇ ನಂಬರ್ ವಾರ್ಡಲ್ಲಿರೋರು!
-ಅನು ಅಚ್ಚರಿ
ಸಿಸ್ಟರ್: ವಿಶ್ವಾಸ್ ಅಂತ ಅವರ್ ಹೆಸರು.. [ಎನ್ನುತ್ತಿದ್ದಂತೆ ಅವಳು ಅತ್ತ ಓಡ್ತಾಳೆ]
-ಇನ್ನೊಂದು ಕಾರಿಡಾರಿಗೆ ಅವನನ್ನೇ ಹುಡುಕುತ್ತಾ ಬರುತ್ತಾಳೆ.
-ಅಲ್ಲೊಂದೆಡೆ ಮತ್ಯಾರಿಗೋ ಡಿಕ್ಕಿ ಹೊಡೆದು ‘ಹೋಗಿ ಕಣ್ಣ್ ಟೆಸ್ಟ್ ಮಾಡ್ಸ್‌ಕೊಳ್ಳಿ’ ಎಂದು ಹೇಳೋದನ್ನ ನೋಡಿ ಅಲ್ಲಿಗೆ ಓಡಿ ಬರುವ ಅನು, ಆತ ಅವರೊಂದಿಗೆ ತಮಾಷೆ ಮಾಡಿ ಹೋಗುತ್ತಿದ್ದಾಗ
ಅನು: ವಿಶ್ವಾಸ್ ಅವರೇ.. [ಎನ್ನುವಾಗ ಆತ ನಿಂತು ತಿರುಗುತ್ತಾನೆ]
ಆತ: ಏನ್ರೀ.. ಇನ್ನೂ ಟೆಸ್ಟ್ ಮಾಡ್ಸಿಲ್ಲ.. ಈಗ್ ಹೋಗ್ತಾ ಇದ್ದೀನಿ..
ಅನು: ಐ ಯಾಮ್ ಸಾರಿ.. ನಾನ್ ಮಾತಾಡಿದ್ದ್ ತಪ್ಪು.. ನಿಮ್ಮಿಂದ ತುಂಬಾ ಉಪಕಾರ ಆಯ್ತು.. ತುಂಬಾ ಥ್ಯಾಂಕ್ಸ್..
ವಿಶ್ವಾಸ್: [ನಗ್ತಾ] ಯಾಕ್ ಡಿಕ್ಕಿ ಹೊಡ್ದಿದ್ದಕ್ಕಾ?..
ಅನು: ಅಲ್ಲ.. ನನಗ್ ಸಹಾಯ ಮಾಡಿದ್ದಕ್ಕೆ.. ನೀವು ನನಗೆ ದೊಡ್ಡ ಉಪಕಾರ ಮಾಡಿದೀರಿ!
ವಿಶ್ವಾಸ್: ಅದೇನ್ ದೊಡ್ಡ್ ವಿಷ್ಯ ಬಿಡ್ರಿ?.. ನನ್ನ್ ಹತ್ರ ಇತ್ತು ಕೊಟ್ಟೆ.. ಅಷ್ಟೆ. ದೇರ್ ಇಸ್ ನಥಿಂಗ್ ಬಿಗ್ ಅಬೌಟ್ ದಟ್! [ಎಂದು ಸಾಗುತ್ತಾನೆ. ಅವಳು ಅವನನ್ನೇ ಬೆರಗಾಗಿ ನೋಡ್ತಾ ನಿಂತಿರುವಾಗಲೇ, ಅಲ್ಲಿಗೆ ಅಕಸ್ಮಾತ್ ಬರುವ ಡಾಕ್ಟರ್]
ಡಾಕ್ಟರ್: ಅನ್ನಪೂರ್ಣ ಅವರೇ, ಆತನ ಹೆಸರು ವಿಶ್ವಾಸ್! ಆತಂಗೆ ಬೋನ್ ಮ್ಯಾರೋ ಕ್ಯಾನ್ಸರ್..
-ಎಂಬ ದನಿ ಕೇಳಿ ಅತ್ತ ತಿರುಗುವ ಅನುಗೆ ಅಚ್ಚರಿ
ಡಾಕ್ಟರ್: ಆದ್ರೆ ಅ ಮನುಷ್ಯ ನೋಡಿ.. ಯಾವಾಗ್ಲೂ ತನಗ್ ಏನೂ ಆಗೇ ಇಲ್ಲ ಅನ್ನೋ ಥರ.. ಎಲ್ಲಾರ್ ಜೊತೆ ತಮಾಷೆ ಮಾಡ್ಕೊಂಡು.. ಕಷ್ಟದಲ್ಲಿರೋರ‍್ಗ್ ಸಹಾಯ ಮಾಡ್ಕೊಂಡು ಜಾಲಿಯಾಗಿರ‍್ತಾರೆ..
-ಅವಳಿಗೆ ಆ ಮಾತು ಕೇಳಿ ಒಂದು ಬಗೆಯ ಗೌರವ, ಅನುಕಂಪ ಎರಡೂ ಉಂಟಾಗುತ್ತದೆ
ಡಾಕ್ಟರ್: ನಿಮ್ಮ್ ಕ್ಯಾನ್ಸರ್ ಕ್ಯೂರಬಲ್.. ಆದ್ರೆ ಅವರದ್ದು.. ಊಹೂಂ… ಇಂಪಾಸಿಬಲ್! [ಆಗಲ್ಲ ಎನ್ನುವಂತೆ ತಲೆಯಾಡಿಸುತ್ತಾನೆ]
-ಅವಳಿಗೆ ಷಾಕ್
ಡಾಕ್ಟರ್: ಅಬ್ಬಬ್ಬ ಅಂದ್ರೆ ಇನ್ನ್ ಆರ್ ತಿಂಗಳು, ಅಷ್ಟೇ!..
– ಅನುಗೆ ಅವನ ಬಗ್ಗೆ ಮರುಕ ಹುಟ್ಟತ್ತೆ, ಕಣ್ಣ್ ತುಂಬಿ ಬರತ್ತೆ,
– ವಿಶ್ವಾಸ್ ಯಾರೊಂದಿಗೋ ನಗ್ತಾ ಮಾತಾಡ್ತಾ ಇದ್ದಾನೆ.
ದೃಶ್ಯ-೧೮/ಹಗಲು/ಹೊರಗೆ/ಅನು ಮನೆ
-ಮನೆಯಾಚೆ ಅನೂಗಾಗಿ ಮೊದಲೆ ಬಂದು ಕಾಯುತ್ತಾ ಇರುವ ಬೃಂದಾ. ಅನು ಬರ‍್ತಾಳೆ
ಗೆಳತಿ: ಯಾಕೇ ಇಷ್ಟ್ ಹೊತ್ತಾಯ್ತು?.. [ಅವಳೇನೂ ಮಾತಾಡದೆ ಬೀಗ್ ತೆಗೀತಾಳೆ]
ಅನು: ಬಾ.. [ಎಂದು ಒಳಗೆ ಕರೆದೊಯ್ತಾಳೆ]
-ಇಬ್ಬರು ಒಳಗೆ ಬರುತ್ತಾರೆ
ಗೆಳತಿ: ಹೇಗಿದ್ದೀಯಾ?..
ಅನು: ಹಾಗೇ ಇದ್ದೀನಿ.. ಯಾರೋ ದಾನಿಗಳು ಸಹಾಯ ಮಾಡ್ತಾ ಇದಾರೆ. ಅದರಿಂದ ಸ್ವಲ್ಪ ಸುಧಾರಸ್ತಾ ಇದೀನಿ.
ಗೆಳತಿ : ಯಾರೇ ಅವರೂ
ಅನು : ವಿಶ್ವಾಸ್ ಅಂತ ಅವರ ಹೆಸರು!
ಗೆಳತಿ : ಓ!
ಅನು : ಅವರನ್ನ ನೋಡಿ ನನಗೆ ನನ್ನ ಜೀವನದ ಮೇಲೆ ವಿಶ್ವಾಸ ಬಂದಿದೆ ನೋಡು!
ಎನ್ನುತ್ತಾ ಮನೆಯೊಳಗೆ ಸಾಗುತ್ತಾಳೆ. ಹಿಂಬಾಲಿಸುವ ಗೆಳತಿ
ಗೆಳತಿ: [ನಿಡುಸುಯ್ದು] ಹೊಸ ಫ಼್ಯಾಕ್ಟ್ರೀಲ್ ನಿನಗ್ ಕೆಲ್ಸ ಕೊಡೋ ಬಗ್ಗೆ ಮಾತಾಡ್ದೆ.. [ಅನು ಇತ್ತ ನೋಡ್ತಾಳೆ] ಇನ್ನೂ ಸ್ವಲ್ಪ ದಿನ ಕಾಯ್‌ಬೇಕು ಅಂದಿದ್ದಾರೆ..
ಅನು: ಹುಂ.. [ಮತ್ತೆ ಏನೋ ಕೆಲಸದಲ್ಲಿ ತೊಡಗುತ್ತಾಳೆ]
ಗೆಳತಿ: ನಿಮ್ಮನೆಗ್ ಹೋಗಿದ್ದೆ..
-ಅವಳು ತಿರುಗಿ ನೋಡ್ತಾಳೆ
ಗೆಳತಿ: ನಿಂದೇನ್ ಪರಿಸ್ಥಿತಿ ಅಂತ ಕೇಳೋ ಸೌಜನ್ಯನೂ ಇಲ್ಲ ಯಾರ‍್ಗೂ.. [ವಿಷಾದದ ನಗೆ ನಗುವ ಅನು] ನಾನ್ ನಿನ್ನ್ ವಿಷ್ಯ ಮಾತಾಡ್‌ಬೇಕು ಅನ್ಣೊಷ್ಟ್ರಲ್ಲಿ.. ನೀನ್ ಅವರ್ ಪಾಲಿಗ್ ಸತ್ತ್‌ಹೋಗಿದ್ಯ ಅಂದ್‌ಬಿಟ್ರು..
-ಕಣ್ಣ್ ತುಂಬಿಕೊಳ್ತಾಳೆ
ಗೆಳತಿ: ಮುಂದಕ್ಕ್ ನಾನೇನೂ ಮಾತಾಡ್ಲಿಲ್ಲ.. ಬಂದ್‌ಬಿಟ್ಟೆ..
ಅನು ಅಳು ಕಂಟ್ರೋಲ್ ಮಾಡ್ತಾಳೆ.
ಗೆಳತಿ: [ಮತ್ತೆ ನಿಡುಸುಯ್ದು] ಇನ್ನೊಂದ್ ಷಾಕಿಂಗ್ ನ್ಯೂಸ್ ಇದೆ ನಿನಗೆ..
-ನೋಡುವ ಅನು
ಗೆಳತಿ: ಸರ್ವೋತ್ತಮ ಸಿಕ್ಕಿದ್ದ
-ಅವಳು ಆಸೆ ಕಂಗಳಿಂದ ನೋಡ್ತಾಳೆ
ಗೆಳತಿ: ಅವನೀಗ ಯಾವ್ದೋ ಆಟೋಮೊಬೈಲ್ ಕಂಪ್ನೀಲ್ ಕೆಲ್ಸ ಮಾಡ್ತಾ ಇದ್ದಾನೆ.. ಟೂರಿಂಗ್ ಜಾಸ್ತಿ ಅಂತೆ.. ತುಂಬಾ ಸೊರಗ್ ಹೋಗಿದಾನೆ ಅನು.. ನಿನಗೆ ಅನ್ಯಾಯ ಮಾಡ್ಬಿಟ್ಟೆ ಅಂತಿದ್ದಾ!
-ಅವಳಿಗೆ ಪಾಪ ಎನಿಸುತ್ತೆ
ಅನು: ಅವನ್ ಕಂಪ್ನಿ ಅಡ್ರೆಸ್ಸ್ ತಗೊಂಡ್ಯಾ?.. ಇದ್ರೆ ಕೊಡು.. ನಾನ್ ಅವನಿಗೊಂದ್ ಲೆಟರ್ ಬರೀತೀನಿ.
ಗೆಳತಿ: ಏನಂತ ಬರೀತೀಯಾ?.. ಮತ್ತೆ ಬಾ ಅಂತನಾ?.. ಅಥವಾ ನೀನ್ ಇರೋಕಡೆ ನಾನ್ ಬರ್ತೀನಿ ಅಂತನಾ?..
-ಅವಳು ನಿರುತ್ತರ.
ಗೆಳತಿ: ಏನೂ ಬರ‍್ಯೋದ್ ಬೇಡ… ನಾನ್ ಅವನ್ ಅಡ್ರೆಸ್ಸ್ ಕೇಳ್‌ಲಿಲ್ಲ..
ಅನು: ಯಾವ್ದಕ್ಕೂ ಇದ್ದಿದ್ರೆ ಚೆನ್ನಾಗಿರೋದು?..
ಗೆಳತಿ: ಅವನ್ ಪುನಃ ನಿನ್ನ್ ಜೊತೆ ಬರ‍್ತನೆ ಅನ್ನೋ ಆಸೆ ಇಟ್ಕೊಂಡಿದ್ದೀಯಾ?.. ಬೇಡ ಅನು.. ಅವನ್ ಯೋಚ್ನೆ ಬಿಟ್ಟ್‌ಬಿಡು..
ಅನು: ಬಿಟ್ಟ್‌ಬಿಟ್ಟಿದ್ದೀನಿ.. ಆದ್ರೂ ಸುಮ್ಮನೆ.. [ಅವಳು ಮುಂದೆ ಮಾತಾಡಲು ಆಗೋದಿಲ್ಲ]
ಗೆಳತಿ: [ಅತ್ತಿತ್ತ ತಲೆಯಾಡಿಸಿ] ನೆಕ್ಸ್ಟ್ ಟೈಮ್ ಸಿಕ್ಕಾಗ ತಗೊಂಡ್ ಬರ್ತೀನಿ.. [ಅನು ತಲೆಯಾಡಿಸುತ್ತಾಳೆ, ಅವನನ್ನು ನೆನೆವಂತೆ ಕಣ್ಣ್ ತುಂಬಿಕೊಳ್ತಾಳೆ]
ದೃಶ್ಯ-೧೯/ಹಗಲು/ಒಳಗೆ/ಆಸ್ಪತ್ರೆ
-ಯಾವುದೋ ರಿಪೋರ್ಟ್ ಒಂದರಿಂದ ಓಪನ್ ಆದರೆ ಅದನ್ನು ನೋಡ್ತಾ ಇರುವ
ಡಾಕ್ಟರ್: ವೆರಿ ಗುಡ್ ಅನ್ನ್‌ಪೂರ್ಣ! ತುಂಬಾನೆ ಚೆನ್ನಾಗ್ ಇಂಪ್ರೂವ್ ಆಗ್ತಾ ಇದ್ದೀರ! ಗುಡ್!
-ಆಕೆಗೆ ಖುಷಿಯಾಗತ್ತೆ. ಅಲ್ಲೆ ಇದ್ದ ವಿಶ್ವಾಸ್
ವಿಶ್ವಾಸ್: ಪರ್ವಾಗಿಲ್ವಲ್ರೀ ನೀವು.. ಕ್ಯಾನ್ಸರ್‌ನೇ ತಿಂದ್‌ಹಾಕ್ತಾ ಇದ್ದೀರಾ.. ಇದು ಒಳ್ಳೇ ಅಚೀವ್‌ಮೆಂಟು ಕಣ್ರೀ..
-ಆಕೆ ರಿಯಾಕ್ಷನ್
ವಿಶ್ವಾಸ್: ಇದೇ ಖುಷೀಲಿ ನಮಗ್ ಸ್ವೀಟ್ ಕೊಡ್‌ಬೇಕು ನೀವು..
ಅನು: ದೇಹಕ್ಕ್ ಅಂಟೀರೋ ಕ್ಯಾನ್ಸರ್ ಕಡ್ಮೆ ಆದ್‌ಹಾಗೆ.. ನನ್ನ್ ಜೇಬ್‌ಗ್ ಅಂಟಿರೋ ಕ್ಯಾನ್ಸರ್ರೂ ಕಡ್ಮೆ ಆಗ್‌ಬಿಟ್ರೆ, ಬರೀ ಸ್ವೀಟ್ ಯಾಕೆ ದೊಡ್ಡ್ ಪಾರ್ಟೀನೆ ಕೊಡ್‌ಬೋದು.. – ಎನ್ನುವಾಗ ಅವಳ ಮಾತಲ್ಲಿದ್ದ ವಿಷಾದವನ್ನು ಗಮನಿಸುವ ವಿಶ್ವಾಸ್
ಅನು: ಬರ‍್ತೀನಿ ಡಾಕ್ಟರ್.. [ಸಾಗ್ತಾಳೆ, ಇಬ್ಬರ ರಿಯಾಕ್ಷನ್, ವಿಶ್ವಾಸ್ ಯೋಚನೆ]
ದೃಶ್ಯ-೨೦/ಹಗಲು/ಒಳಗೆ-ಹೊರಗೆ/ಅನು ಮನೆ
ಇನ್ನೊಂದು ದಿನ
-ನ್ಯೂಟ್ರಲ್‌ಯಿಂದ ಅವರನ್ನು ತೋರುವುದು, [ನೆರಳಿಂದ ಅವರನ್ನು ರಿವೀಲ್ ಮಾಡಿದರೆ ಅನು ಮತ್ತು ಬೃಂದಾ ಕಾಣ್ತಾರೆ]
ಗೆಳತಿ: ಓಹೋ.. ಏನಮ್ಮ.. ಟ್ರೈನ್ ಯಾಕೋ ಯಾವ್ದೋ ಹೊಸಾ ಟ್ರ್ಯಾಕ್ ಹಿಡೀತಾ ಇರೋಹಾಗಿದೆ.. [ಎನ್ನುತ್ತಾ ಬಂದು ಗೇಟ್ ತೆಗೀತಾಳೆ] ವಿಶ್ವಾಸ್.. ಹೆಸರಿಗ್ ತಕ್ಕ್ ಹಾಗೇ.. ಚೆನ್ನಾಗ್ ವಿಶ್ವಾಸ ಗಳ್ಸ್‌ಕೊಂಡ್ ಬಿಟ್ಟಿದ್ದಾನೆ ಮೇಡಂದು..
ಅನು: ಹಾಗೆನಿಲ್ಲ.. ಅವ್ರ್ ತುಂಬಾ ಒಳ್ಳೇ ಮನುಷ್ಯ..
ಗೆಳತಿ: ಹೌದಮ್ಮ.. ನಾನೂ ಅದನ್ನೇ ಹೇಳಿದ್ದು.. ಒಳ್ಳೇ ಮನುಷ್ಯನ್ ಜೊತೆ.. ಒಂದ್ ಒಳ್ಳೇ ಸಂಬಂಧ.. [ಎಂದು ಛೇಡಿಸುವಾಗ]
ಅನು: ಸುಮ್ಮನೆ ಬಾ ಒಳಗೆ.. [ಎಂದು ಬಾಗಿಲು ತೆಗೆಯ ಹೋದಾಗ, ಬಾಗಿಲ ಚಿಲಕ್ದ ಸಂದಿಯಲ್ಲಿ ಒಂದು ಲೆಟರ್ ಕಾಣತ್ತೆ, ಅವಳು ಅಚ್ಚರಿಯಿಂದ ನೋಡ್ತಾಳೆ, ತಗೊಳ್ತಾಳೆ]
ಗೆಳತಿ: ಏನೇ ಅನು?.. ಆಗ್ಲೇ ಯಾವ್ದೋ ಲವ್ ಲೆಟರ್ ಬೇರೆ ಬಂದಿರೋಹಾಗಿದೆ?.. ಯಾರ‍್ದ್ ನೋಡು?..
ಅನು: ಇದು ಲವ್ ಲೆಟರ್ ಅಲ್ಲ.. ಯಾವ್ದೋ ಕಂಪ್ನಿಯಿಂದ ಬಂದಿರೋ ಲೆಟ್ಟರ್ರು..
-ಆಕೆ ಅವಳನ್ನು ಗುರಾಯಿಸಿದಂತೆ ಮಾಡಿ ಲೆಟರ್ ಕವರ್ ಓಪನ್ ಮಾಡ್ತಾಳೆ, ಓದುತ್ತಾಳೆ. ಓದುತ್ತಾ ಖುಷಿಯಾಗ್ತಾಳೆ
-ಗಮನಿಸೋ ಗೆಳತಿ
-ಲೆಟರ್ ಪೂರ್ತಿ ಓದಿದ ನಂತರ ಏನೋ ಗೊಂದಲವಾದಂತೆ ನಿಲ್ತಾಳೆ
ಗೆಳತಿ: ಯಾಕೇ ಅನು?.. ಏನ್ ಲೆಟರ್ ಅದು?.. ಯಾಕ್ ಮುಖ ಒಂಥರ ಮಾಡ್ಕೊಂಡೆ?..
ಅನು: ಈ ಲೆಟರು.. ನನಗ್ ಕೆಲ್ಸ ಸಿಕ್ಕಿದೆ ಅಂತ ಹೇಳ್ತಾ ಇದೆ.. ಆದ್ರೆ ನಾನ್ ಅಪ್ಲಿಕೇಷನ್ನೇ ಹಾಕ್ದೆ ನನಗ್ ಕೆಲ್ಸ ಹೇಗ್ ಸಿಗೋಕ್ಕ್ ಸಾಧ್ಯ?.. ನನ್ನ್ ಪರವಾಗಿ ನೀನ್ ಯಾವ್ದಾದ್ರೂ ಕಂಪನೀಗ್ ಅಪ್ಲೈ ಮಾಡಿದ್ಯಾ?..
ಗೆಳತಿ: ಇಲ್ಲ್‌ವಲ್ಲೇ…
ಅನು: [ಯೋಚಿಸಿ] ಹಾಗಾದ್ರೆ ೧೦೦% ಇದೂ ವಿಶ್ವಾಸ್ ಕೆಲ್ಸಾನೆ..
-ಆಕೆ ಯೋಚಿಸ್ತಾ ನಿಲ್ತಾಳೆ.
ದೃಶ್ಯ-೨೧/ಹಗಲು/ಒಳಗೆ/ಆಸ್ಪತ್ರೆ
-ಆಸ್ಪತ್ರೆಗೆ ಬರುವ ಅನು ಕೈಯಲ್ಲಿ ಕೆಲಸದ ಅಪಾಯಿಂಟ್ ಮೆಂಟ್ ಆರ್ಡರ್ ಇದೆ
-೬ನೇ ನಂಬರ್ ವಾರ್ಡಿಗೆ ಬರುತ್ತಾಳೆ, ಅಲ್ಲಿ ಬೇರೆ ಯಾರೋ ಇದ್ದಾರೆ
-ಅವಳಿಗೆ ಷಾಕ್
ಅನು: ಇಲ್ಲ್ ಮುಂಚೆ ಇದ್ದೋರ್ ಎಲ್ಲಿ?..
ಆತ: ಅವರ್ ಹೋಗ್‌ಬಿಟ್ರು..
-ಎನ್ನುವಾಗ ಆಕೆಗೆ ಮತ್ತೆ ದೊಡ್ಡ ಷಾಕ್ ಅವಳು ಅಲ್ಲಿಂದ ಓಡ್ತಾಳೆ
ಡಾಕ್ಟರ್ ಕ್ಯಾಬಿನ್
-ಡಾಕ್ಟರ್ ಕುಳಿತಿರುವಲ್ಲಿಗೆ ಬರುವ ಅನು ಸ್ವಲ್ಪ ಭಯಮಿಶ್ರಿತ ದುಃಖದೊಂದಿಗೆ
ಅನು: ಡಾಕ್ಟರ್..
ಡಾಕ್ಟರ್: ಏನ್ ಅನ್ನಪೂರ್ಣ?..
ಅನು: ವಿಶ್ವಾಸ್ ಎಲ್ಲಿ?..
ಡಾಕ್ಟರ್: ಅವರು ಡಿಸ್‌ಚಾರ್ಜ್ ಆದ್ರು..
-ಎನ್ನುವಾಗ ಅವಳ ಆತಂಕ ತಣ್ಣಗಾಗತ್ತೆ, ಸಮಾಧಾನಗೊಳ್ತಾಳೆ
ಡಾಕ್ಟರ್: ಯಾಕೆ ಏನಾಯ್ತು?..
ಅನು: [ಉಗುಳು ನುಂಗಿ] ಏನಿಲ್ಲ.. ನನಗೆ.. ಅವರ್ ಮನೆ ಅಡ್ರೆಸ್ಸ್ ಕೊಡ್ತೀರಾ?..
ಡಾಕ್ಟರ್: ರಿಸೆಪ್ಷನ್ನಲ್ಲ್ ಕೇಳಿ ಕೊಡ್ತರೆ..
ಅನು: ಥ್ಯಾಂಕ್ಸ್ ಡಾಕ್ಟರ್.. [ಎಂದು ಸಾಗ್ತಾಳೆ]
-ಡಾಕ್ಟರ್ ಅವಳ ಉದ್ವೇಗ ನೋಡಿ ತನ್ನಲ್ಲೇ ವಿಷಾದದ ನಗೆ ನಗ್ತಾನೆ
ದೃಶ್ಯ-೨೨/ಹಗಲು/ಒಳಗೆ/ವಿಶ್ವಾಸ್ ಮನೆ
-ಅನು ಬಾಗಿಲು ತೆರೆದಿರುವ ಮನೆಯೊಂದಕ್ಕೆ ಬರ್ತಾಳೆ. ಮನೆ ವಿಶಾಲವಾಗಿದೆ. ಅಲ್ಲಿ ಒಂದೆಡೆ ಕೂತು ವಿಶ್ವಾಸ್ ಯಾವುದೋ ಗೇಮ್ ಆಡ್ತಾ ಇದ್ದಾನೆ. ಅನು ಅವನತ್ತ ಬರುತ್ತಾಳೆ. ಅವನು ಬಂದವಳನ್ನು ನೋಡದೆ
ವಿಶ್ವಾಸ್: ಬನ್ನಿ ಬನ್ನಿ.. ವೆಲ್‌ಕಮ್ ಟು ಮೈ ಸ್ವೀಟ್ ಹೋಮ್..
-ಅನೂಗೆ ಅಚ್ಚರಿಯಾಗತ್ತೆ
ವಿಶ್ವಾಸ್: ಮತ್ತೆ?.. [ಎಂದು ಗೇಮ್ ಬಿಟ್ಟು ಅತ್ತ ನೋಡ್ತಾನೆ] ಬದ್ಕೋಕ್ಕ್ ಇನ್ನ್ ಬಹಳ ದಿನ ಉಳ್ದಿಲ್ಲ.. ಆಸ್ಪತ್ರೇಲೇ ಯಾಕ್ ಸಾಯ್ತೀಯ.. ಮನೆಗ್ ಹೋಗ್ ಸಾಯಿ ಅಂದ್ರು.. [ತಮಾಷೆಯೆಂಬಂತೆಯೇ] ಅದಕ್ಕೇ ಡಿಸ್‌ಚಾರ್ಜ್ ಮಾಡ್ಕೊಂಡ್ ಬಂದ್‌ಬಿಟ್ಟೆ..
-ಅನು ಕೈಯಲ್ಲಿ ಲೆಟರ್ ಹಿಡಿದಿರೋದು ನೋಡಿ
ವಿಶ್ವಾಸ್: ಏನು.. ಈ ಕೆಲ್ಸ ನಿಮಗ್ ಯಾರ್ ಕೊಡ್ಸ್‌ದ್ರು ಅಂತ ಕೇಳೋಕ್ಕ್ ಬಂದ್ರಾ?.. ಹೌದು.. ಇದ್ ನಂದೇ ಕೆಲ್ಸ..
ಅನು: ಯಾಕ್ ನನಗೋಸ್ಕರ ಅಪ್ಲಿಕೇಷನ್ ಹಾಕ್‌ದ್ರಿ?
ವಿಶ್ವಾಸ್: ನನಗೆ ಸಾಯೋ ಡೇಟ್ ಫ಼ಿಕ್ಸ್ ಆಗಿದೆ ಅಂದ್ರಲ್ಲ.. ಸಾಯೋನಿಗ್ ಕೆಲ್ಸ ಯಾಕ್ ಬೇಕು ಹೇಳಿ? ಅದಕ್ಕೆ ನನ್ನ ಕೆಲಸ ನಿಮಗ್ ಕೊಡೊ ವ್ಯವಸ್ಥೆಮಾಡ್ದೆ.. ಏನಾದ್ರೂ ತಪ್ಪ್ ಇದ್ಯಾ ನಾನ್ ಮಾಡಿದ್ರಲ್ಲಿ?
ಅನು: [ಭಾವುಕಳಾಗಿ] ಥ್ಯಾಂಕ್ಸ್! ತುಂಬಾ ಥ್ಯಾಂಕ್ಸ್! ನಿಮ್ಮ್ ಉಪಕಾರಕ್ಕೆ ತುಂಬ ಥ್ಯಾಂಕ್ಸ್.. (ಕಾಲಿಗೆ ಬೀಳುತ್ತಾಳೆ)
ವಿಶ್ವಾಸ್: ಈ ಫ಼ಾರ್ಮಾಲಿಟಿ ಎಲ್ಲ ಯಾಕ್ರೀ?.. ನಿಮಗ್ ನಿಜವಾಗ್ಲೂ ನನಗ್ ಥ್ಯಾಂಕ್ಸ್ ಹೇಳ್‌ಬೇಕು ಅನ್ಸಿದ್ರೆ ನನಗ್ ತುಂಬಾ ಹೊಟ್ಟೆ ಹಸ್ವಾಗ್ತಾ ಇದೆ.. ನನಗ್ ಒಂದ್ ಸ್ವಲ್ಪ ತಿಳಿ ಸಾರು ಅನ್ನ ಮಾಡ್‌ಕೊಡ್ತೀರಾ?
-ರಿಯಾಕ್ಷನ್
ವಿಶ್ವಾಸ್: ನಾನೇ ಮಾಡ್ಕೋಬೋದು.. ಆದ್ರೆ ನನ್ನ್ ಕೈ ಅಡ್ಗೆ ತಿಂದು ತಿಂದು ತುಂಬಾ ಬೋರ್‌ಆಗ್‌ಬಿಟ್ಟಿದೆರೀ.. ಮಾಡ್ಕೊಡ್ತೀರಾ?..
ಅನು: ಖಂಡಿತ ಮಾಡ್ಕೊಡ್ತೀನಿ..
ವಿಶ್ವಾಸ್: ಹಾಗಾದ್ರೆ ಬೇಗ ಮಾಡ್ಕೊಡಿ.. ಅಡ್ಗೆ ಮನೆ ಎಲ್ಲಿದೆ ಅಂತ ತೋರ‍್ಸ್‌ತೀನಿ.. [ಎಂದು ಕರೆದೊಯ್ತಾನೆ]
-ಅಡಿಗೆ ಮನೆಯಲ್ಲಿ ಎಲ್ಲವನ್ನೂ ಪರಿಚಯ ಮಾಡಿ, ವಿವರಿಸುತ್ತಾನೆ
ಅನು: ಆಯ್ತು.. ಒಂದ್ ಕಾಲ್ ಗಂಟೆ ವೇಯ್ಟ್ ಮಾಡಿ. ತಂದ್‌ಬಿಡ್ತೀನಿ..
ವಿಶ್ವಾಸ್: ಓಕೆ.. ಡನ್.. [ಎಂದು ಸಾಗ್ತಾನೆ]
ಡಿಸಾಲ್ವ್
-ಅಡಿಗೆಯನ್ನು ತಟ್ಟೆಗೆ ಬಡಿಸುತ್ತಾಳೆ ಬಿಸಿಬಿಸಿ ಅನ್ನ ಹೊಗೆ ಬರುತ್ತಿದೆ, ಆತ ಅದರ ಘಮವನ್ನು ಎಳೆಯುತ್ತಾ ಆಸ್ವಾಧಿಸುತ್ತಾನೆ. ಅವಳು ಸಾರು ಬಡಿಸುತ್ತಾಳೆ, ಅದರ ಘಮವನ್ನೂ ಎಳೆದು
ವಿಶ್ವಾಸ್: ಆಹಾ! ಘಮಾನೆ ಇಷ್ಟ್ ಅಧ್ಬುತವಾಗಿದೆ.. ಇನ್ನ್ ರುಚಿ ಹೇಗಿರ‍್ಬೋದು?.. [ಎನ್ನುತ್ತಾ ಕಲೆಸಿ ತಿನ್ನುತ್ತಾನೆ] ಅದ್ಭುತವಾಗಿದೆ ರೀ.. ಅತ್ಯದ್ಭುತವಾಗಿದೆ.. ಆಹಾ.. [ಎಂದು ಚಪ್ಪರಿಸುತ್ತಾ ತಿನ್ನುತ್ತಾನೆ]
-ಅವಳು ಅವನ ಆನಂದವನ್ನು ನೋಡ್ತಾ ಮನೆಯಲ್ಲೇಲ್ಲಾ ಸುತ್ತಾ ಕಣ್ಣಾಡಿಸುತ್ತಾ
ಅನು: ಇಷ್ಟ್ ದೊಡ್ಡ್ ಮನೆಲಿ ನೀವ್ ಯಾಕ್ ಒಬ್ರೇ ಇದ್ದೀರಾ?..
ವಿಶ್ವಾಸ್: ಹುಂ.. ಇನ್ನೂ ಒಬ್ಬರಿದ್ರು.. ಆದ್ರೆ ಅವರ್ ಈಗಿಲ್ಲ ಅಷ್ಟೇ.. [ತಿನ್ನುತ್ತಲೇ ಹೇಳ್ತಾನೆ]
ಅನು: ಯಾರ್ ಅವರು?..
ವಿಶ್ವಾಸ್: [ತುಂಬಾ ಕ್ಯಾಷುಯಲ್ ಆಗಿ] ನನ್ನ್ ಹೆಂಡ್ತಿ..
-ಆಕೆ ಷಾಕ್ ಆಗಿ ನೋಡ್ತಾಳೆ
-ಆತ ಆರಾಮವಾಗಿ ಊಟ ಮಾಡುತ್ತಲೇ ಅವಲನ್ನು ನೋಡಿ
ವಿಶ್ವಾಸ್: ಇದ್ಯಾಕ್ ಇಷ್ಟೋಂದ್ ಗಾಬರಿ ಆಗ್ ನೋಡ್ತಾ ಇದ್ದೀರಾ?.. ನನ್ನ್ ಹೆಂಡ್ತೀನೂ ಸತ್ತ್‌ಗಿತ್ತ್ ಹೋದ್ಲಾ ಅಂತನಾ?.
-ರಿಯಾಕ್ಷನ್
ವಿಶ್ವಾಸ್: ಇಲ್ಲರೀ.. ಹಾಗೆಲ್ಲ ಅಂದ್ಕೊಳ್ಳೋಕ್ಕ್ ಹೋಗ್‌ಬೇಡಿ.. ಪಾಪ! ಅವಳೆಲ್ಲೋ ನೆಮ್ಮದಿಯಾಗಿದಾಳೆ..
-ರಿಯಾಕ್ಷನ್
ವಿಶ್ವಾಸ್: [ಊಟ ಮಾಡುತ್ತಲೆ] ನಿಮಗ್ ಲ್ಯುಕೀಮೀಯ ಬಂತು ಅಂದ್ ತಕ್ಷಣ.. ನಿಮ್ಮ್ ಗಂಡ ನಿಮ್ಮನ್ನ್ ಬಿಟ್ಟ್ ಓಡ್‌ಹೋಗ್ಲಿಲ್ವಾ?.. ಹಾಗೆ ನನಗ್ ಬೋನ್‌ಮ್ಯಾರೋ ಕ್ಯಾನ್ಸರ್ ಅಂತ ಗೊತ್ತಾದ್ ತಕ್ಷಣ ಅವಳೂ ಹೊರಟ್ಳು!
-ಆಕೆ ಭಾವುಕಳಾಗಿ ನೋಡ್ತಾಳೆ
ವಿಶ್ವಾಸ್: ಅವಳು ಮಾಡಿದ್ದು ಸರೀನೇ ಅಲ್ವಾ? ಸಾಯೋರ‍್ಜೊತೆ ಯಾರ್ರೀ ಸಂಸಾರ ಮಾಡ್ತಾ ಇರ‍್ತಾರೆ? ಅವರನ್ನ ನಾವು ಬೈಯ್ಕೋಬಾರ‍್ದು! ಅಲ್ವಾ?..
-ಅವಳು ನಿರುತ್ತರೆ
ವಿಶ್ವಾಸ್: ನೋಡಿ.. ಹೇಗೋ ಆಸ್ಪತ್ರೆಲ್ ಅವರಿವರ್ ಕಾಲ್ ಎಳ್ಕೊಂಡು, ನಗ್ಸ್‌ಕೊಂಡು, ಚುಡಾಯ್ಸ್‌ಕೊಂಡು ಆರಾಮಾಗಿದ್ದೆ.. ನನ್ನನ್ನ್ ಡಿಸ್‌ಚಾರ್ಜ್ ಮಾಡ್ಸಿ ಈ ನರಕಕ್ಕ್ ಹಾಕ್‌ಬಿಟ್ರು..
-ರಿಯಾಕ್ಷನ್
ವಿಶ್ವಾಸ್: ನೀವೇ ಹೆಳ್ರೀ.. ಈ ಮನೇಲ್ ಒಬ್ಬನೆ ಹೇಗ್ರೀ ಇರ‍್ಲಿ?.. ನನಗಂತೂ ತಲೆ ಕೆಟ್ಟ್ ಹೋಗತ್ತಪ್ಪ.. ಏನೋ ಇವತ್ತ್ ರುಚಿಯಾದ್ ಊಟ ಸಿಗ್ತು.. ನಾಳೆಯಿಂದ ಅದೂ ಇಲ್ವಾ?..
ಅನು: ಯೋಚ್ನೆ ಮಾಡ್‌ಬೇಡಿ.. ನಾನ್ ಇನ್ನ್ ಮೇಲ್ ದಿನಾ ಬಂದು ನಿಮಗ್ ಅಡಿಗೆ ಮಾಡ್‌ಕೊಟ್ಟ್ ಹೋಗ್ತೀನಿ..
[ಆತನ ಮುಖದಲ್ಲಿ ಮಂದಹಾಸ]
ದೃಶ್ಯ-೨೩/ರಾತ್ರಿ/ಒಳಗೆ/ಅನು ಮನೆ
ಗೆಳತಿ: ಕಂಪ್ನಿ ಕೆಲ್ಸದ್ ಜೊತೆಗೆ ಅಡಿಗೆ ಕೆಲ್ಸಾನೂ ಮಾಡ್ತಾ ಇದ್ದೀಯಾ?..
ಅನು: ಆ ಮನುಷ್ಯ ಮನೇಲ್ ಒಬ್ಬಂಟಿ.. ನಾಲ್ಕ್ ದಿನ ಬದ್ಕೋ ಜೀವ.. ಆತ ಬದುಕಿರೋವರ‍್ಗೂ ಒಳ್ಳೇ ಊಟನಾದ್ರೂ ಮಾಡ್ಲಿ ಬಿಡು..
ಗೆಳತಿ : ಅದಕ್ಕೇ ಹೇಳೋದು ಹಲ್ಲಿದ್ದೋರ‍್ಗೆ ಕಡಲೇ ಇಲ್ಲ. ಕಡಲೇ ಇದ್ದೋರ‍್ಗೆ ಹಲ್ಲಿಲ್ಲ ಅಂತ. ಅಲ್ವಾ?
ಅನು: ಹೂಂ. ಒಂದೊಂದು ಮನೇಲ್ಲಿ ಒಂದೊಂದು ಕತೆ!
ಗೆಳತಿ : ನನಗನ್ಸೋದೇನು ಗೊತ್ತಾ? ಪ್ರೀತಿ ಅಂದ್ರೆ ಹುಡುಗ-ಹುಡುಗಿದಲ್ಲಾ ಕಣೆ! ಬದುಕಿನ ಬಗ್ಗೆ ಪ್ರೀತಿ ಇರ‍್ಬೇಕು. ಅಲ್ವಾ?
ಅನು ಸುಮ್ಮನೆ ತಲೆದೂಗುತ್ತಾಳೆ.
ದೃಶ್ಯ-೨೪/ಹಗಲು/ಒಳಗೆ/ವಿಶ್ವಾಸ್ ಮನೆ
-ಅನು ಆತ ಊಟ ಮಾಡಿದ ತಟ್ಟೆಯನ್ನು ತೊಳೆಯುತ್ತಿದ್ದಾಳೆ, ಅಲ್ಲಿಗೆ ಬರುವ ವಿಶ್ವಾಸ್
ವಿಶ್ವಾಸ್: ನಿಮಗ್ ನಾನು.. ಜಸ್ಟ್ ಅಡ್ಗೆ ಮಾಡ್‌ಕೊಡೋಕ್ಕ್ ಮಾತ್ರ ಪರ್ಮೀಷನ್ ಕೊಟ್ಟಿರೋದು.. ಇದನ್ನೆಲ್ಲ ಮಾಡೋಕ್ಕ್ ನಾನು ಹೇಳಿಲ್ಲ.. ಬಿಡಿ.. ಇದೆಲ್ಲ ನನ್ನ್ ಕೆಲ್ಸ..
ಅನು: ಅಟ್ ಲೀಸ್ಟ್ ನೀವೊಬ್ಬ ಕೆಲ್ಸದವರ್ನೂ ಇಟ್ಕೊಂಡಿಲ್ಲ.. ಯಾಕೆ?
ವಿಶ್ವಾಸ್: ಕೆಲ್ಸದೋವ್ರು ಎಲ್ಲಾ ಕೆಲ್ಸಾನೂ ‘ಕೆಲ್ಸ’ ಅಂತ ಮಾಡ್ತರೆ.. ಅದರಲ್ಲಿ ಪ್ರೀತಿ ಇರಲ್ಲ..
-ಅನು ನೋಡ್ತಾಳೆ
ವಿಶ್ವಾಸ್: ಅದಕ್ಕೆ ನನ್ನ್ ಕೈಲಾಗೋ ಕೆಲಸನೆಲ್ಲ ನಾನೇ ಮಾಡ್ಕೊತೀನಿ..
ಅನು: ನಿಮ್ಮ್ ಹೆಂಡ್ತಿ ಹೋದ್‌ಮೇಲೆ.. ನೀವ್ ಬೇರೆ ಮದ್ವೆ ಆಗ್‌ಬೋದಿತ್ತು.. ಅಲ್ವಾ?
ವಿಶ್ವಾಸ್: [ನಕ್ಕು] ಸಾಯೋ ಮನುಷ್ಯಂಗ್ ಸಂಗಾತಿ ಯಾಕ್ರೀ?.. ಸಾವ್ ಬೆನ್ನ್ ಹಿಂದೆ ಕೂತ್ಕೊಂಡ್ ಸವಾರಿ ಮಾಡ್ತಿರೋವಾಗ.. ನನ್ನ್ ಸ್ವಾರ್ಥಕ್ಕೋಸ್ಕರ ಇನ್ನೊಬ್ಬರ್ ಜೀವ್ನ ಬಲಿ ಕೋಡೋದು ಸರೀನಾ? ನೀವೇ ಹೇಳಿ?
-ಆಕೆಯ ರಿಯಾಕ್ಶನ್
ವಿಶ್ವಾಸ್: ಹಾಗೂ ಒಂದ್ ಪಕ್ಷ ನಾನ್ ಒಪ್ಕೊಂಡೆ ಅಂದ್ರೂ.. ಕಟ್ಕೊಂಡ್ ನಾಲ್ಕ್ ದಿನಕ್ಕ್ ವಿಧವೆ ಆಗೋಕ್ಕೆ ಯಾರ್ರೀ ಮುಂದೆ ಬರ‍್ತರೆ?..
-ಎನ್ನುವಾಗ ಅನು ಅವನನ್ನೇ ನೋಡ್ತಾ ಏನೋ ಯೋಚಿಸುತ್ತಾ ನಿಲ್ತಾಳೆ.
ದೃಶ್ಯ-೨೫/ರಾತ್ರಿ/ಒಳಗೆ/ಅನು ಮನೆ
ಓಪನ್ ಫ಼್ರಂ ನ್ಯೂಟ್ರಲ್
-ಅನು ಅಳ್ತಾ ಇದ್ದಾಳೆ, ಅವಳ ಕೈಲಿ ಒಂದು ಲೆಟರ್ ಇದೆ. ಅವಳ ಜೊತೆಯಲ್ಲಿ ಬೃಂದಾ ಮತ್ತು ಮನೆ ಮಾಲಕಿ ಮಂಜುಳಮ್ಮ ಇದ್ದಾರೆ
ಮಂಜುಳಮ್ಮ: ನೀನ್ ಅಳ್‌ಬೇಡ ಸುಮ್ಮನಿರಮ್ಮ.. ಈ ಲೆಟರ್ ಬರ‍್ದಿರೋದು ಬೇರೆ ಯಾರೂ ಅಲ್ಲ.. ಆ ನಿನ್ನ್ ಓಡ್ ಹೋದ್ ಗಂಡಾನೆ..
ಗೆಳತಿ: ಹೌದು ಕಣೇ ಅನು.. ಇದ್ ಅವನ್ದೇ ಕೆಲ್ಸ.. ಅವನಿಗ್ ನಿನ್ನನ್ನ್ ನೋಡ್ಕೊಳ್ಳೋ ಯೋಗ್ಯತೆನೂ ಇರ‍್ಲಿಲ್ಲ.. ಖರ್ಚಿಗ್ ತಕ್ಕ್ ಸಂಪಾದ್ನೆ ಮಾಡೋ ಆತ್ಮ ವಿಶ್ವಾಸನೂ ಇರ‍್ಲಿಲ್ಲ.. ಈಗ್ ನೀನ್ ಆ ವಿಶ್ವಾಸ್ ದಯೆಯಿಂದ ಚೆನ್ನಾಗಿದ್ದೀಯ ನೋಡು.. ಅದಕ್ಕೆ ಅವನಿಗೆ ಹೊಟ್ಟೆ ಕಿಚ್ಚ್ ಬಂದಿದೆ!
ಮಂಜುಳಮ್ಮ: ಅದಕ್ಕೆ ಅವನಿಂಥಾ ಅಸಹ್ಯವಾದ್ ಲೆಟರ್ ಬರ‍್ದಿದ್ದಾನೆ.. ಅವನ್ ಮುಂಡಾ ಮೋಚ್ತು..
-ಅನು ಅಳ್ತಾ ಇದ್ದಾಳೆ
ಗೆಳತಿ: ಇರೋ ಸಂಬಂಧ ಉಳ್ಸ್‌ಕೊಳ್ಳೋಕ್ಕ್ ಆಗ್ದಿದ್ರೂ ಇಲ್ದೆ ಇರೋದನ್ನ ಹುಟ್ಟ್ ಹಾಕಿ ಬೆರೇವ್ರ್ ಹೆಸರಲ್ಲ್ ಲೆಟರ್ ಬರ‍್ದಿದಾನೆ.. ಕಳ್ಳ್ ಕೊರಮ.. ಅವನ್ ಇನ್ನೊಂದ್ಸಲ ನನಗ್ ಸಿಗ್ಲಿ ಸರ‍್ಯಾಗ್ ನೀರ್ ಇಳ್ಸ್‌ತೀನಿ..
ಮಂಜುಳಮ್ಮ: ಏನೂ ಬೇಡ.. ಅವನ್ ಸಹವಾಸಕ್ಕೆ ಹೋಗ್‌ಬೇಡಿ.. ಏ ಅನ್ನಪೂರ್ಣ.. ನನ್ನನ್ನ್ ನಾಳೆ ಆ ವಿಶ್ವಾಸ್ ಮನೆಗ್ ಕರ‍್ಕೋಂಡ್ ಹೋಗು..
ಅನು: ಯಾಕೆ?.. [ಗಾಬರಿ]
ಮಂಜುಳಮ್ಮ: ನಾನ್ ಆ ಹುಡ್ಗನ್ ಜೊತೆ ಸ್ವಲ್ಪ ಮಾತಾಡ್‌ಬೇಕು..
ಅನು: ನೀವ್ ಅವರ್ ಜೊತೆ ಏನ್ ಮಾತಾಡ್ತೀರಾ?..

ದೃಶ್ಯ-೨೬/ಹಗಲು/ಒಳಗೆ/ಅನು ಮನೆ
ಹಾಫ಼್ ವೇ ಓಪನ್
ವಿಶ್ವಾಸ್: ಲೆಟರ‍್ಸ್ ಬರ‍್ತಾ ಇದ್ಯಾ?.. [ಎನ್ನುವ ವಿಶ್ವಾಸನ ಅಚ್ಚರಿಯ ರಿಯಾಕ್ಷನ್ ಎದುರು ಮಂಜುಳಮ್ಮ, ಅನು ಮತ್ತು ಬೃಂದಾ ಇದ್ದಾರೆ.]
ಮಂಜುಳಮ್ಮ: ಸುಳ್ಳ್ ಹೆಳ್ತಾ ಇಲ್ಲಪ್ಪ ನಾವು.. ನೀನೇ ನೋಡು.. [ಎಂದು ಲೆಟರ್ ಕೊಡ್ತಾಳೆ]
-ಅವನು ಲೆಟರ್ ನೋಡ್ತಾನೆ
-ರಿಯಾಕ್ಷನ್ಸ್
-ವಿಶ್ವಾಸ್ ಅನೂನ ನೋಡ್ತಾನೆ
-ಅನು ತಲೆ ತಗ್ಗಿಸಿದಂತೆ ಇದ್ದಾಳೆ
ಗೆಳತಿ: ಬರೀ ಲೆಟರ್‌ಗಳ್ ಮಾತ್ರ ಅಲ್ಲ.. ಅನು ನಿಮ್ಮ್ ಕಂಪ್ನೀಲೆ ಕೆಲ್ಸ ಮಾಡ್ಕೊಂಡು ನಿಮ್ಮನೆಗ್ ಬಂದು ಹೋಗಿ ಮಾಡ್ತಾ ಇರೋದ್ರಿಂದ,. ನಿಮ್ಮ್ ಮಧ್ಯೆ ಸಂಬಂಧ ಇದೆ ಅಂತಾನೇ ಮಾತಾಡ್ತಾ ಇದಾರೆ..
-ಆತನ ರಿಯಾಕ್ಷನ್
ಮಂಜುಳಮ್ಮ: ಅವಳ್ಗ್ ಬಂದಿರೋ ಈ ಕೆಟ್ಟ್ ಹೆಸರನ್ನ ಹೇಗ್ ಹೋಗ್ಸೋದು ಹೇಳಿ? ಈಗಾಗ್ಲೇ ಗಂಡ ಅನ್ಸ್‌ಕೊಂಡ್ ಮನುಷ್ಯ ಬಿಟ್ಟ್ ಓಡ್ ಹೋದ ಅಂತ ಜನ ಮಾತಾಡ್ತಿದ್ದಾರೆ.. ಈಗ್ ಇದೂ ಒಂದ್ ಕಳಂಕ ಬಂದ್ ಅಂಟ್ಕೊಂಡ್ರೆ.. ಅವಳ್ ಹೇಗ್ ನೆಮ್ಮದಿಯಿಂದ ಬದುಕೋದ್ ಹೇಳಿ?..
-ಆತ ಗೊಂದಲದಲ್ಲಿ ನಿಲ್ತಾನೆ
ಮಂಜುಳಮ್ಮ: ಸಧ್ಯಕ್ಕ್ ಇದನ್ನ್ ಸರಿ ಮಾಡೋಕ್ಕೆ ನನಗ್ ಕಾಣ್ತಾ ಇರೋ ಪರಿಹಾರ ಒಂದೇ..
-ಎಲ್ಲರ ಕುತೂಹಲ
ಮಂಜುಳಮ್ಮ: ನೀವಿಬ್ರು ಮದ್ವೆ ಆಗೋದು?..
-ವಿಶ್ವಾಸ್ ಷಾಕ್
-ಅನು ಷಾಕ್
ಗೆಳತಿ: ನನಗೂ ಅದೇ ಸರಿ ಅನ್ಸತ್ತೆ ಸಾರ್..
-ರಿಯಾಕ್ಷನ್ಸ್
ಮಂಜುಳಮ್ಮ: ಏನಪ್ಪ ವಿಶ್ವಾಸ.. ನಮ್ಮ್ ಹುಡ್ಗೀನ್ ಮದ್ವೆ ಆಗಿ ಅವಳ್ ಬಗ್ಗೆ ಕೆಟ್ಟ್‌ದಾಗ್ ಆಡ್ಕೊಳ್ತಿರೋ ಜನಕ್ಕೆ ಸರ‍್ಯಾದ್ ಉತ್ರ ಕೊಡ್ತೀಯಾ?..
-ವಿಶ್ವಾಸ್ ಏನೂ ಉತ್ತರಿಸದೆ ಎಲ್ಲರನ್ನೂ ಇನ್ನೊಮ್ಮೆ ನೋಡ್ತಾನೆ.
-ಅನು ಕೂಡ ಆತಂಕದಲ್ಲೇ ನೋಡ್ತಾಳೆ
ಮಂಜುಳಮ್ಮ: ಏನಪ್ಪ ಏನಾದ್ರು ಮಾತಾಡು..
ವಿಶ್ವಾಸ್: ಬರೀ ನನ್ನ್ ಅಭಿಪ್ರಾಯ ಕೇಳ್‌ಬಿಟ್ರೆ ಸಾಕಾ?.. ಅನ್ನ್‌ಪೂರ್ಣ ಅವರ್ ಏನ್ ಹೇಳ್ತರೆ ಅಂತ ತಿಳ್ಕೊಳ್ಳೋದ್ ಬೇಡ್ವಾ?.. [ಅವಳಿಗೆ] ಹೇಳಿ ಅನ್ನ್‌ಪೂರ್ಣ.. ಇವರೆಲ್ಲ ನಿಮ್ಮನ್ನ್ ಮದ್ವೆ ಆಗು ಅಂತಿದಾರೆ.. ಇದಕ್ಕ್ ನೀವೇನ್ ಹೇಳ್ತೀರಾ?..
-ಅನು ಏನೂ ಹೇಳಲಾಗದೆ ತಲೆತಗ್ಗಿಸಿಬಿಡ್ತಾಳೆ
-ಮಂಜುಳಮ್ಮ ಸಂತೋಷ
-ಬೃಂದಾ ಸಂತೋಷ
-ವಿಶ್ವಾಸ್ ಸೀದಾ ಅನುವಿನ ಬಳಿಗೆ ಬರ‍್ತಾನೆ. ಅವಳ ಕೈ ಹಿಡೀತಾನೆ
-ಎಲ್ಲರ ಅಚ್ಚರಿ ರಿಯಾಕ್ಷನ್
ವಿಶ್ವಾಸ್: ಬನ್ನಿ ನನ್ನ್ ಜೊತೆ.. [ಎಂದು ಕರೆದೊಯ್ತಾನೆ]
-ಅನು ಎಲ್ಲಿಗೆ ಎಂಬಂತೆ ನೋಡ್ತಾಳೆ
-ಎಲ್ಲರೂ ಎಲ್ಲಿಗೆ ಎಂಬ ಕುತೂಹಲದಲ್ಲಿ ನೋಡ್ತಾರೆ
-ವಿಶ್ವಾಸ್ ಕೈ ಹಿಡಿದುಕೊಂಡು ಹೊರಟೇಬಿಡ್ತಾನೆ ಇವರೂ ಅವನ ಜೊತೆಯಲ್ಲಿ ಹಿಂದೆ ಸಾಗ್ತಾರೆ
ದೃಶ್ಯ-೨೭/ಹಗಲು/ಒಳಗೆ/ಆಸ್ಪತ್ರೆ
-ಅನೂನ ಕರೆದುಕೊಂಡು ಬರುವ ವಿಶ್ವಾಸ. ಹಿಂದೆಯೇ ಏನೂ ಅರ್ಥವಾಗದೆ ಆತಂಕದಿಂದಲೇ ಅವರ ಹಿಂದೆ ಬರುವ ಮಂಜುಳಮ್ಮ ಮತ್ತು ಬೃಂದ
-ಕಾರಿಡಾರಿಗೆ ಬಂದು ನಿಲ್ತಾನೆ ಆಗಲೇ ಎದುರಿಗೆ ಬರುವ ರೆಗ್ಯುಲರ್ ಡಾಕ್ಟರ್ ಅವನು ಹಾಗೆ ಕರೆದು ತರೋದನ್ನ ಅಚ್ಚರಿಯಿಂದ ನೋಡ್ತಾನೆ
ಡಾಕ್ಟರ್: ಏನ್ ವಿಶ್ವಾಸ್ ಇದು.. ಅವರನ್ನ್ ಯಾಕ್ ಹಾಗ್ ಕರ‍್ಕೊಂಡ್ ಬರ‍್ತಾ ಇದ್ದೀರಾ?..
ವಿಶ್ವಾಸ್: [ಅಲ್ಲಿ ಬಂದು ಅವಳ ಹಿಡಿದ ಕೈ ಬಿಟ್ಟು] ಡಾಕ್ಟರ್..
-ಎನ್ನುವಾಗ ವಿಶ್ವಾಸ್ ಏನು ಹೇಳ್ತಾನೋ ಎಂಬ ಕುತೂಹಲ
ವಿಶ್ವಾಸ್: ನಾನ್ ಅನೂನ್ ಮದ್ವೆ ಆಗ್‌ಬೋದಾ?..
-ಎಲ್ಲರ ಖುಷಿ ಕುತೂಹಲದ ರಿಯಾಕ್ಷನ್
ವಿಶ್ವಾಸ್: ನಾನ್ ಮದ್ವೆ ಆಗೋದ್ರಿಂದ ಅವರಿಗೇನೂ ಸಮಸ್ಯೆ ಆಗಲ್ಲ ಅನ್ನೋದಾದ್ರೆ ಮಾತ್ರ ಆಗ್ತೀನಿ..
-ಅವಳ ರಿಯಾಕ್ಷನ್
ಡಾಕ್ಟರ್: ಛೇಛೇ.. ಏನೂ ಸಮಸ್ಯೆ ಇಲ್ಲ.. ನೀವ್ ಧಾರಾಳ್‌ವಾಗ್ ಮದ್ವೆ ಆಗ್‌ಬೋದು..
-ಎಲ್ಲರ ಖುಷಿ
ವಿಶ್ವಾಸ್: [ನಿಡುಸುಯ್ದು] ಡಾಕ್ಟರ್.. ನಮ್ಮ್ ಪಾಲಿನ್ ನಿಜವಾದ್ ದೇವ್ರ್ ನೀವೇ.. ಅದಕ್ಕೆ.. ನಾನ್ ನಿಮ್ಮ್‌ಗಳನ್ನ ಸಾಕ್ಷಿಯಾಗಿಟ್ಕೊಂಡು ಅನೂಗ್ ತಾಳಿ ಕಟ್ಟ್‌ಬೇಕು ಅಂದ್ಕೋತೀದೀನಿ.. ನಿಮ್ಮ್ ಪರ್ಮೀಷನ್ ಇದ್ಯಾ?..
-ಅವರು ತಲೆಯಾಡಿಸುತ್ತಾನೆ
-ಎಲ್ಲರೂ ಚಪ್ಪಾಳೆ ತಟ್ಟುತ್ತಾರೆ
ಡಿಸಾಲ್ವ್
-ಆಸ್ಪತ್ರೆಯ ಡಾಕ್ಟರ್‌ಗಳ ಎದುರಿಗೆ ವಿಶ್ವಾಸ್ ಅನೂಗೆ ಹಾರ ಹಾಕ್ತಾನೆ. ಎಲ್ಲರ ಚಪ್ಪಾಳೆ, ಎಲ್ಲರ ಖುಷಿ
-ವಿಶ್ವಾಸ್ ತಾಳಿ ಕಟ್ತಾನೆ
-ಮತ್ತೆ ಎಲ್ಲರ ಚಪ್ಪಾಳೆ
-ಇಬ್ಬರಿಗೂ ಡಾಕ್ಟರ್ ಸಿಸ್ಟರ್‌ಗಳೆಲ್ಲ ವಿಷ್ ಮಾಡ್ತಾರೆ.. ಕಂಗ್ರ್ಯಾಟ್ಸ್ ಹೇಳ್ತಾರೆ. ಎಲ್ಲರಿಗೂ ಸ್ವೀಟ್ ಕೊಡ್ತಾರೆ..
-ಎಲ್ಲಾ ಆದಮೇಲೆ ಇಬ್ಬರೂ ಕೈ ಕೈ ಹಿಡಿದು ಹೊರಡ್ತಾರೆ, ಅವರು ಖುಷೀಲಿ ಹೊರಡುವಾಗ ಫ಼್ರೇಂ ಫ಼್ರೀಜ಼್ ಆದರೆ ಅಲ್ಲೊಂದು ಕ್ಯಾಪ್ಷನ್
“ಅವರಿಬ್ಬರೂ ಸುಖವಾಗಿದ್ದರು!… ಸಾಯುವವರೆಗೂ…!”
* * *

One thought on “ಬಿ.ಸುರೇಶ ಅವರ `ಪ್ರೀತಿಯೆಂಬ ಅಚ್ಚರಿ!’

  1. ಚಿತ್ರಕಥೆ ಚೆನ್ನಾಗಿದೆ,ಸಿನಿಮಾ ವಿದ್ಯಾಥಿ೵ಗಳಗೆ ತುಂಬ ಉಪಯೋಗವಾಗುತ್ತೆ. 27 ದೃಶ್ಯಗಳಲ್ಲಿ 2.30 ಘಂಟೆ ಸಿನಿಮಾ ಮಾಡೋದಿಕ್ಕೆ ಆಗುತ್ತಾ.

Leave a Reply

Your email address will not be published. Required fields are marked *