“ಅತಿಥಿ’ಯಾಗಿ ಬಂದ ಆತಂಕ

ಬೆಳಕಿನೊಳಗಣ ಬೆಳಗು – ೧೬

ಈಚೆಗೆ ನಮ್ಮಲ್ಲಿ ಬಿಡುಗಡೆಯಾದ “ಸಯನೈಡ್’ ಎಂಬ ಚಿತ್ರದ ಬಗ್ಗೆ ವಿಸ್ತೃತವಾದ ಪ್ರಚಾರ ಆಗುತ್ತಿದೆ. ಆ ಚಿತ್ರ ಹಿಂದಿಯಲ್ಲಿಯೂ ತಯಾರಾಗುತ್ತಿದೆ ಎಂಬುದು ಈಗ ಸುದ್ದಿಯಾಗಿದೆ. ಆದರೆ ಇದೇ ರೀತಿಯ ಚಿತ್ರಗಳು ಹಿಂದೆ ನಮ್ಮಲ್ಲಿ ತಯಾರಾಗಿಲ್ಲವೆ ಎಂಬ ಪ್ರಶ್ನೆ ಅನೇಕರಲ್ಲಿರಬಹುದು. ಖಂಡಿತಾ ಆಗಿದೆ. ಆಧುನಿಕ ಸಮಾಜದಲ್ಲಿ ಆತಂಕವಾದಿಗಳು ಆಗಮಿಸಿದ್ದರ ಜೊತೆಗೆ ಕನ್ನಡದಲ್ಲಿಯೂ ಈ ವಿವರವನ್ನು ಕುರಿತು ಚರ್ಚಿಸುವ ಅನೇಕ ಚಿತ್ರಗಳು ಬಂದಿವೆ. ಆ ದೃಷ್ಟಿಯಿಂದ ಪಿ.ಶೇಷಾದ್ರಿ ಅವರ ನಿರ್ದೇಶನದ “ಅತಿಥಿ’ ಮತ್ತು ಕೆ.ಎಸ್.ಎಲ್.ಸ್ವಾಮಿ ಅವರ ನಿರ್ದೇಶನದ “ಹರಕೆಯಕುರಿ’ ಪ್ರಮುಖ ಚಿತ್ರಗಳು ಎನ್ನಬಹುದು. ಇವುಗಳಲ್ಲಿ ಈ ಬಾರಿ ನಿಮ್ಮೊಂದಿಗೆ “ಅತಿಥಿ’ ಕುರಿತ ಕೆಲವು ಮಾತುಗಳನ್ನು ಹಂಚಿಕೊಳ್ಳುತ್ತೇನೆ.

ಇಂದು ಈ ದೇಶದಲ್ಲಿ ಮಾತ್ರವೇ ಅಲ್ಲ, ಜಗತ್ತಿನಾದ್ಯಂತ ಆತಂಕವಾದ ಮತ್ತು ಭಯೋತ್ಪಾದನೆ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣಗಳು ಹಲವು. ಮೊದಲನೆಯದಾಗಿ ಅಭಿವೃದ್ಧಿ ಅರ್ಥಶಾಸ್ತ್ರದ ಹೆಸರಲ್ಲಿ ಒಳಗೆ ನುಸುಳಿರುವ ಜಾಗತೀಕರಣ ಮತ್ತು ಉದಾರೀಕರಣಗಳು ಅನೇಕರನ್ನು ಅವಕಾಶ ವಂಚಿತರನ್ನಾಗಿಸುತ್ತಿದೆ. ಇದರಿಂದಾಗಿ ಉಳ್ಳವರ ಮತ್ತು ಇಲ್ಲದವರ ನಡುವಿನ ಸರಾಸರಿಯಲ್ಲಿ ಆಗಾಧ ಎನಿಸುವಂತಹ ವ್ಯತ್ಯಾಸಗಳು ಉಂಟಾಗಿವೆ. ಹೀಗೆ ಅವಕಾಶ ವಂಚಿತರಾದವರು ಹತಾಶರಾಗುತ್ತಾರೆ. ತಾವೂ ಸಹ ಮನುಷ್ಯರು ಎಂದು ಸಾಬೀತು ಪಡಿಸಲು ಮತ್ತು ತಮ್ಮ ಶಕ್ತಿ ಪ್ರದರ್ಶಿಸಲು ಉತ್ಸುಕರಾಗಿರುತ್ತಾರೆ. ಇಂತಹವರ ಸಂಖ್ಯೆಯು ಇಂದು ಅಪಾರವಾಗಿದೆ. ಇವರುಗಳನ್ನು ಧರ್ಮದ ಹೆಸರಲ್ಲಿ, ಭಾಷೆ ಅಥವಾ ಗಡಿಯ ಹೆಸರಲ್ಲಿ ಒಂದುಗೂಡಿಸುವ ಅನೇಕ ರಾಜಕೀಯ ಮತ್ತು ಧಾರ್ಮಿಕ ಪಂಗಡಗಳು/ಸಂಸ್ಥೆಗಳು ಸಹ ಜಗತ್ತಿನಾದ್ಯಂತ ಅಣಬೆಗಳಂತೆ ತಲೆ ಎತ್ತಿವೆ. ಇವುಗಳನ್ನ ಪೋಷಿಸುವ ವರ್ಗವೂ ಒಂದಿದೆ. ಅದು ಆಯುಧೋದ್ಯಮ. ಆ ಉದ್ಯಮಕ್ಕೆ ತನ್ನ ಉತ್ಪಾದನೆಯನ್ನು ಕೊಳ್ಳುವ ಜನರು ಬೇಕು. ಅದಕ್ಕಾಗಿ ಅಂತಹ ಉದ್ಯಮಗಳೇ ದೇಶವೊಂದರ ಸರ್ಕಾರವನ್ನು ನಿಯಂತ್ರಿಸುತ್ತವೆ. ವಿದೇಶಾಂಗ ನೀತಿಯು ಹೀಗೆ ಇರಬೇಕೆಂದು ಸೂಚಿಸುತ್ತವೆ. ಅಮೇರಿಕಾದ ಸಂದರ್ಭದಲ್ಲಿ ಇದೆಲ್ಲವೂ ಆಗುತ್ತಿರುವುದನ್ನು ನೋಡುತ್ತಿದ್ದೇವೆ. ಇದರಿಂದಾಗಿ ಜಗತ್ತಿನಾದ್ಯಂತ ರಕ್ತಪಾತ ಆಗುತ್ತಲೇ ಇದೆ. ಇದರ ಪರಿಣಾಮಗಳು ನಮ್ಮ ನಾಡಿನ ಮೇಲೂ ಆಗಿದೆ. ಇಂತಹ ವಿವರಗಳನ್ನೇ ಇಟ್ಟುಕೊಂಡು ಪಿ.ಶೇಷಾದ್ರಿ “ಅತಿಥಿ’ ರೂಪಿಸಿದ್ದಾರೆ.
ಈ ಚಿತ್ರದ ಪ್ರಧಾನ ಪಾತ್ರದಲ್ಲಿ ಇರುವವರು ಪ್ರಕಾಶ್ ರೈ, ದತ್ತಣ್ಣ, ಲಕ್ಷ್ಮಿ ಚಂದ್ರಶೇಖರ್. ಕಥೆ ಜೆ.ಎಂ.ಪ್ರಹ್ಲಾದ್ ಅವರದ್ದು. ಸಂಭಾಷಣೆ ಬೋಳುವಾರು ಮಹಮ್ಮದ್ ಕುಂಞ ಅವರದ್ದು. ಛಾಯಾಗ್ರಹಣ ಚಂದ್ರು ಅವರದ್ದು. ೧೬ಮಿ.ಮಿ.ನ ಸ್ವರೂಪದಲ್ಲಿ ಚಿತ್ರಿತವಾಗಿ ನಂತರ ೩೫ ಮಿ.ಮಿ.ಗೆ ಹಿಗ್ಗಿಸಿದ ಚಿತ್ರವಿದು. ಅತ್ಯಂತ ಕಡಿಮೆ ಬಜೆಟ್ಟಿನಲ್ಲಿ ತಯಾರಾಗಬೇಕು ಎಂದು ಯೋಜಿಸಿ ಹದಿಮೂರು ದಿನಗಳಲ್ಲಿ ಚಿತ್ರಿತವಾಗಿತ್ತು. ಹೀಗಾಗಿ ತಯಾರಿಕೆಯಲ್ಲಿ ಹಲಕೆಲವು ರಾಜಿಗಳಾಗಿದ್ದರೂ, ಮೂಲಕಥೆಯಲ್ಲಿರುವ ಸಾರವನ್ನು ಹಿಡಿಯುವಲ್ಲಿ ಈ ಚಿತ್ರ ಯಶಸ್ವಿಯಾಗಿತ್ತು. ಅಂತೆಯೇ ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿಯೂ ಕೂಡ ದೊರಕಿತ್ತು ಎಂಬುದನ್ನು ಇಲ್ಲಿ ನೆನೆಯಬಹುದು.
ಈ ಚಿತ್ರದ ಕಥೆ ಅತ್ಯಂತ ಸರಳಾವಾದುದು. ರಾಜಧಾನಿಯಲ್ಲಿ ಸೇತುವೆಯೊಂದನು ಸ್ಫೋಟಿಸುವ ಭಯೋತ್ಪಾದಕರ ತಂಡವೊಂದು, ಅದೇ ರಾಜ್ಯದ ಅಣೆಕಟ್ಟೊಂದನ್ನು ಸಹ ಸ್ಫೋಟಿಸುವ ಸಂಚು ರೂಪಿಸಿ, ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿರುವಾಗ ನಡೆವ ಸಣ್ಣ ಅವಘಡದಲ್ಲಿ ಭಯೋತ್ಪಾದಕರ ತಂಡದ ನಾಯಕನ ಕಾಲುಗಳಿಗೆ ಭಾರೀ ಪೆಟ್ಟು ಬೀಳುತ್ತದೆ. ನಗರದ ನಡುವೆ ಕಾಣಿಸಿಕೊಂಡರೆ ಕಷ್ಟವೆಂದು ಆ ನಾಯಕನನ್ನು ಮಲೆನಾಡಿನ ಸೆರಗಲ್ಲಿರುವ ಪುಟ್ಟ ಊರೊಂದರ ಡಾಕ್ಟರ್‌ನ ಮನೆಯಲ್ಲಿ ಭಯೋತ್ಪಾದಕರು ಇರಿಸುತ್ತಾರೆ. ಆ ಡಾಕ್ಟರ್‌ನನ್ನು ಬಂದೂಕಿನಿಂದ ಹೆದರಿಸುತ್ತಲೇ ತಮ್ಮ ಇರವಿನ ಸುಳಿವು ದೊರೆಯದಂತೆ ಮಾಡುತ್ತಾರೆ. ಇಲ್ಲಿ ಡಾಕ್ಟರ್‌ನನ್ನು ಹೆದರಿಸುವ ಸಲುವಾಗಿ ಆತನ ಮಡದಿಯನ್ನು ಅಪಹರಿಸುವ ಕೆಲಸವೂ ಆಗಿರುತ್ತದೆ. ಅದಾಗಿ ಸುಮಾರು ಒಂದು ವಾರ ಕಾಲ ಭಯೋತ್ಪಾದಕನೊಬ್ಬ ವೈದ್ಯನೊಬ್ಬನ ಮನೆಯಲ್ಲಿಯೇ ಕಳೆಯುತ್ತಾನೆ. ಹೀಗೆ ಬೇಡದ ಅತಿಥಿಯಾಗಿ ಒಬ್ಬ ಸಾಮಾನ್ಯ ವ್ಯಕ್ತಿಯ ಮನೆಯೊಳಗಡೆಗೆ ಬಂದ ಭಯೋತ್ಪಾದಕ/ಆತಂಕವಾದಿಯೊಬ್ಬನು ಡಾಕ್ಟರ್ ಮತ್ತು ಆತನ ಸುತ್ತಲ ಪರಿಸರದವರ ಜೊತೆಗೆ ಮಾತಾಡುತ್ತಲೇ ತನ್ನ ವೈಯಕ್ತಿಕ ಬದುಕಿನ ಬಗ್ಗೆ ಅನುಮಾನಕ್ಕೆ ಒಳಗಾಗುತ್ತಾನೆ. ಅಮಾಯಕ ಜನರನ್ನು ಕೊಂದು ಈ ಭಯೋತ್ಪಾದಕರು ಸಾಧಿಸುವುದಾದರೂ ಏನು ಎಂದು ಡಾಕ್ಟರ್ ಕೇಳುವ ಪ್ರಶ್ನೆಗೆ ಉತ್ತರವಿಲ್ಲದಂತಾಗುವ ಭಯೊತ್ಪಾದಕ ತಾನಿಟ್ಟಿರುವ ಹೆಜ್ಜೆಯನ್ನು ಹಿಂದಕ್ಕೆ ತೆಗೆದುಕೊಳ್ಳಲೆ ಎಂಬ ಗೊಂದಲಕ್ಕೆ ಈಡಾಗುತ್ತಾನೆ. ಆದರೆ ಸ್ವತಃ ಆತ ಸೇರಿಕೊಂಡಿರುವ ವ್ಯವಸ್ಥೆ ಆತನಿಗೆ ಬಿಡುಗಡೆ ಕೊಡುವುದಿಲ್ಲ. ಆದರೆ ಡಾಕ್ಟರ್ ಜೊತೆಗೆ ಆತಂಕವಾದಿ ಆಡುವ ಮಾತುಗಳು ಒಬ್ಬ ಭಯೊತ್ಪಾದಕನಲ್ಲಿ ಬದಲಾವಣೆಯನ್ನು ತರುವ ಸೂಚನೆ ಸ್ಪಷ್ಟವಾಗಿಯೇ ದೊರೆಯುತ್ತದೆ.
ಇದು “ಅತಿಥಿ’ ಚಿತ್ರದ ಹೂರಣ. ಈ ಹೂರಣದ ಒಳಗೆ ಕೇವಲ ಸಮಕಾಲೀನ ಇತಿಹಾಸವನ್ನು ಹಾಗೆಯೇ ಇಡುವ ಪ್ರಯತ್ನವಿಲ್ಲ. ಬದಲಿಗೆ ಆ ಇತಿಹಾಸದಲ್ಲಿ ಭಾಗಿಯಾಗುವವರು ಬದಲಾಗುವುದಕ್ಕೆ ಇರುವ ಮಾರ್ಗ ಕುರಿತ ಚರ್ಚೆಯಿದೆ. ಇದೇ ಈ ಚಿತ್ರದ ವೈಶಿಷ್ಟ್ಯ. ಕೇವಲ ಸಮಸ್ಯೆಯೊಂದನ್ನು ಹೇಳದೆ, ಆ ಸಮಸ್ಯೆಯ ಎಲ್ಲಾ ಮಗ್ಗುಲುಗಳನ್ನು ಕುರಿತು ಚರ್ಚೆಗಳನ್ನು ತೆಗೆಯುವ ಮೂಲಕ ಚಲನಚಿತ್ರವೊಂದು ಇಡೀ ಸಮಾಜದ ಸ್ವಾಸ್ಥ್ಯ ಕಾಪಾಡುವುದಕ್ಕೆ ಕಾರಣವಾಗಬಹುದು. ಹೀಗೊಂದು ತೂಕ ಇರದೆ ಹೋಗಿದ್ದರೆ “ಅತಿಥಿ’ ಸಹ “ಸೈಯನೈಡ್’ ಆಗಿಬಿಡುತ್ತಿತ್ತು. ಆ ಚಿತ್ರದಲ್ಲಿ ಭಯೋತ್ಪಾದಕರು ಬದಲಾಗುವ ಸೂಚನೆ ಇರಲಿ, ತಾವು ಮಾಡಿದ್ದಕ್ಕೆ ಪಶ್ಚಾತ್ತಾಪ ಕೂಡ ಪಡುವುದಿಲ್ಲ. ದೇಶವೊಂದರ ಪ್ರಧಾನಿಯನ್ನು ಕೊಂದವರು ಹುತಾತ್ಮರಂತೆ ಆಗಿಬಿಡುವುದು ಒಟ್ಟು ಸಮಾಜದ ದೃಷ್ಟಿಯಿಂದ ಅಪಾಯಕಾರಿ. ಈ ನಿಟ್ಟಿನಿಂದ ನಮ್ಮ ವಿದ್ಯಾರ್ಥಿಗಳು “ಅತಿಥಿ’ಯನ್ನು ನೋಡಬೇಕು. ಅದರಿಂದಾಗಿ ಒಂದಷ್ಷಾದರೂ ಮನಸ್ಸುಗಳು ಆರೋಗ್ಯಪೂರ್ಣ ಚಿಂತನೆಗೆ ತೊಡಗುವಂತಾದರೆ “ಅತಿಥಿ’ ತಯಾರಕರ ಶ್ರಮ ಸಾರ್ಥಕವಾಗುತ್ತದೆ.
ನಿಮ್ಮೂರಿನ ಚಿತ್ರಮಂದಿರದವರಿಗೆ ಇಂತಹ ಸದುದ್ದೇಶದ ಚಿತ್ರಗಳನ್ನು ಪ್ರದರ್ಶಿಸಲು ಹೇಳಿ. ಅಥವಾ ನಿಮ್ಮ ಶಾಲೆ/ ಕಾಲೇಜಿನಲ್ಲಿಯೇ ಒಂದು ಸದಭಿರುಚಿಯ ಚಿತ್ರ ವೀಕ್ಷಕರ ಸಂಘಟನೆಯನ್ನು ಆರಂಭಿಸಿ. ನಿಮಗೆ ಬೇಕಾದಂತಹ ಚಿತ್ರಗಳನ್ನು ಒದಗಿಸೋಣ.
ನೆನಪಿರಲಿ : ನಾವೆಂತಹುದನ್ನು ನೋಡುತ್ತೇವೋ ಅಂತಹುದೇ ಚಿತ್ರಗಳು ತಯಾರಾಗುತ್ತವೆ. ಕೇವಲ ಮನರಂಜನೆಗಾಗಿ ಚಿತ್ರ ನೋಡುವುದನ್ನು ಬಿಟ್ಟು, ನಿಮ್ಮ ಬದುಕನ್ನು, ನಿಮ್ಮ ಚಿಂತನಾಕ್ರಮವನ್ನು ಸರಿದಾರಿಗೆ ತರಬಲ್ಲಂತಹ ಚಿತ್ರಗಳನ್ನು ನೋಡಿ.

One thought on ““ಅತಿಥಿ’ಯಾಗಿ ಬಂದ ಆತಂಕ

Leave a Reply

Your email address will not be published. Required fields are marked *