“ಅನ್ವೇಷಣೆ’ಯ ಹಾದಿಯಲ್ಲಿ….

ಬೆಳಕಿನೊಳಗಣ ಬೆಳಗು – ೧೩

ನಮ್ಮ ಕನ್ನಡ ಚಿತ್ರರಂಗ ಎಂಬ ಮಹಾಸಾಗರದಲ್ಲಿ ಪ್ರತಿನಿತ್ಯವು ಒಂದು ಹೊಸ ಪ್ರಯೋಗ ಆಗುತ್ತಲೇ ಇದೆ. ಈ ಪ್ರಯೋಗಗಳು ಮೊದಲು ಹೊಸಅಲೆ ಅಥವಾ ಪ್ರಶಸ್ತಿ ಸಿನಿಮಾ ಎಂಬ ಹಣೆಪಟ್ಟಿಯ ಚಿತ್ರಗಳಲ್ಲಿಯೇ ಆಗುವುದು. ನಂತರ ಅದೇ ಪ್ರಯೋಗಗಳು ಪ್ರಧಾನವಾಹಿನಿಯ/ಜನಪ್ರಿಯ ಚಿತ್ರಗಳಲ್ಲಿ ಆಗುವುದನ್ನು ನಾವು ಕಾಣುತ್ತಲೇ ಬಂದಿದ್ದೇವೆ. ಒಂದೊಮ್ಮೆ ಕೃತಕ, ಅವಾಸ್ತವ, ಅಸಹಜ ವಿವರಗಳೊಡನೆ ಚಿತ್ರಿತವಾಗುತ್ತಿದ್ದ ಜನಪ್ರಿಯ ಸಿನಿಮಾಗಳಲ್ಲಿ ೮೦ರ ದಶಕದಿಂದಾಚೆಗೆ ವಾಸ್ತವ ಮತ್ತು ಸಹಜ ನಿರೂಪಣೆಯು ಬರಲು ಕಾರಣವಾದದ್ದೇ “ಹೊಸಅಲೆ’ಯ ಚಿತ್ರಗಳು ಪರಿಚಯಿಸಿದ ನಿರೂಪಣಾ ವಿಧಾನದಿಂದ. ಈ ನಿಟ್ಟಿನಲ್ಲಿ ಪ್ರಧಾನವಾಹಿನಿಯ ಜನರು “ಹೊಸಅಲೆ’ಯನ್ನು “ಜನರಿಂದ ದೂರಾಗುವ ಚಿತ್ರ ತಯಾರಿಸುತ್ತಾರೆ’ ಎಂದು ಹೀಗಳೆಯುವ ಬದಲು, “ಒಂದು ಉದ್ಯಮದ ಉಳಿವಿಗೆ ಮತ್ತೊಂದು ಪ್ರಯೋಗಶಾಲೆ’ ಎಂಬರ್ಥದಲ್ಲಿ ಸ್ವೀಕರಿಸಿ ಪೋಷಿಸಬೇಕು. ಅದು ಸಧ್ಯದ ಸ್ಥಿತಿಯಲ್ಲಿ ಆಗುತ್ತಿಲ್ಲ. ಆದರೂ ಪ್ರಯೋಗಪ್ರಿಯರು ತಮ್ಮ ಚಟುವಟಿಕೆಯನ್ನು ಬಿಟ್ಟುಕೊಟ್ಟಿಲ್ಲ. ಈ ನಿಟ್ಟಿನಲ್ಲಿ ಎಂಬತ್ತರ ದಶಕದ ಆರಂಭದ ದಿನಗಳಲ್ಲಿ ತಯಾರಾದ ನಾಗಾಭರಣ ನಿರ್ದೇಶನದ ‘ಅನ್ವೇಷಣೆ’ ಒಂದು ಅಪರೂಪದ ಪ್ರಯೋಗ. ಈ ಲೇಖನದಲ್ಲಿ ಆ ಚಿತ್ರದಲ್ಲಿ ಆದ ಪ್ರಯೋಗ ಕುರಿತಂತೆ ಒಂದಷ್ಟು ಅಭಿಪ್ರಾಯ ಹಂಚಿಕೊಳ್ಳೋಣ.

ಭಾರತದಲ್ಲಿ ಬೃಹತ್ ಉದ್ಯಮಗಳು ಆರಂಭವಾದ ನಂತರ ಮಧ್ಯಮವರ್ಗದ ಸಂಖ್ಯೆಯೂ ಹೆಚ್ಚಾಯಿತು. ಅವರಲ್ಲಿ ನಗರವಾಸಿ ಮಧ್ಯಮವರ್ಗದವರದ್ದು ಬಹುಮತ ಎನ್ನಬಹುದು. ಇಂತಹ ಮಧ್ಯಮವರ್ಗ ಹೊರನೋಟಕ್ಕೆ ತೃಪ್ತವಾಗಿ ಕಂಡರೂ ಒಳಗೆ ಭಯಗಳಿಂದ ಬದುಕುತ್ತಾ ಇರುತ್ತದೆ. ಈ ಭಯಕ್ಕೆ ಅನೇಕ ಕಾರಣಗಳಿವೆ. ಮೊದಲಿಗೆ ತನ್ನ ಕೆಲಸ ನಾಳೆಗೆ ಹೋಗಿಬಿಟ್ಟರೆ ಎಂ ಭಯ. ನಂತರ ನಾಳೆ ಬೀದಿಯಲ್ಲಿ ತನ್ನ ಮರ್ಯಾದೆ ಹೋಗುವಂತಹ ಪ್ರಸಂಗ ಬಂದರೆ ಎಂಬ ಭಯ. ಯಾವುದೋ ಹಳ್ಳಿಯಿಂದ ವಲಸೆ ಬಂದು ನಗರವಾಸಿಯಾಗಿರುವ ಅಂತಹವರಿಗೆ ತಾವು ಯಾವ ತೊಂದರೆಗೂ ಸಿಲುಕದಿದ್ದರೆ ಸಾಕು ಎಂಬ ಭಾವ ಇರುತ್ತದೆ. ಮಧ್ಯಮವರ್ಗದ ಇಂತಹ ಬಾವನೆಗಳನ್ನು ಬಳಸಿಕೊಂಡೇ ನಗರದಲ್ಲಿ ಮಧ್ಯವರ್ತಿಗಳು ಹಾಗೂ ಗೂಂಡಾಗಳು ಸೃಷ್ಟಿಯಾದದ್ದು. ಸುಮ್ಮನೆ ಒಮ್ಮೆ ಹಿಂದಿನ ದಿನಗಳನ್ನ ನೆನಪಿಸಿಕೊಳ್ಳಿ ಅರವತ್ತರ ದಶಕಕ್ಕೆ ಮುಂಚೆ ನಮ್ಮ ಊರುಗಳಲ್ಲಿ ಪೈಲ್ವಾನರಿದ್ದರು, ಗಿರಿಜಾ ಮೀಸೆಯ ಅಂತಹ ಪೈಲ್ವಾನರು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ದೇಹ ಪ್ರದರ್ಶಿಸಿ ಪರಿಹರಿಸುತ್ತಾ ಇದ್ದದ್ದು ಉಂಟು. ಕಾರ್ಖಾನೆಗಳು ಆರಂಭವಾದೊಡನೆ ಇಂತಹ ಪೈಲ್ವಾನರುಗಳ ಜಾಗವನ್ನು ಪುಡಿ ರೌಡಿಗಳು ಆಕ್ರಮಿಸಿಕೊಂಡರು. ಅವರು ತಮ್ಮ ದೇಹ ಪ್ರದರ್ಶನಕ್ಕೆ ಬದಲು ತಮ್ಮ ಆಯುಧಗಳನ್ನು ಪ್ರದರ್ಶಿಸಲು ಆರಂಭಿಸಿದರು. ಅದೇ ಆಯುಧಗಳಿಗೆ ಹೆದರಿದ ಮಧ್ಯಮವರ್ಗದವರು ಮತ್ತು ಅದೇ ಮಧ್ಯಮವರ್ಗದವರನ್ನು ನೆಚ್ಚಿಕೊಂಡು ವ್ಯಾಪಾರ ನಡೆಸುವ ವರ್ತಕರು ಈ ಪುಡಿರೌಡಿಗಳಿಗೆ ಮಾಮೂಲು ನೀಡಿ ಪೋಷಿಸತೊಡಗಿದರು. ಹೀಗಾಗಿ ಪ್ರತಿ ಬಡಾವಣೆಗೊಬ್ಬ ರೌಡಿ, ಆ ರೌಡಿಯ ಹಿಂದೊಂದು ಪುಂಡರ ಗುಂಪು ಎಂಬಂತೆ ರೌಡಿಗಳ ಸಂಖ್ಯೆ ಬೆಳೆಯತೊಡಗಿತು ಜೊತೆಗೆ ಮಧ್ಯಮವರ್ಗವೇ ಸೃಷ್ಟಿಸಿದ ಮಹಾನಗರಗಳು ಬೆಳೆಯತೊಡಗಿದವು. ಈ ಮಧ್ಯಮವರ್ಗದ ತಲ್ಲಣಗಳು, ಆತಂಕಗಳು ಕನ್ನಡ ಸಿನಿಮಾದಲ್ಲಿ ಪರಿಚಿತವಾಗಿರಲಿಲ್ಲ. ನಮ್ಮ ಸಿನಿಮಾಗಳು ಹೆಂಗೆಳೆಯರಿಗೆ ಆದರ್ಶಗಳನ್ನು ಹೇಳುವ, ಅರವತ್ತರ ದಶಕದ ಮೌಲ್ಯಗಳನ್ನು ಎಂಬತ್ತರ ದಶಕದಲ್ಲಿಯೂ ಹೇಳುವ ಯತ್ನದಲ್ಲಿದ್ದವು. ಇಂತಹ ಕಾಲದಲ್ಲಿ ತಯಾರಾದ ಚಿತ್ರ “ಅನ್ವೇಷಣೆ’. “ಅನ್ವೇಷಣೆ’ಯಲ್ಲಿ ಪ್ರಥಮಬಾರಿಗೆ ದುಡಿವ ಮಧ್ಯಮವರ್ಗ ಬದುಕುವ ವಠಾರಗಳು, ಅಲ್ಲಿನ ಬದುಕು, ಆ ಜನಗಳ ಸಣ್ಣಪುಟ್ಟ ಜಗಳಗಳು, ಮಧ್ಯಮವರ್ಗದವರನ್ನು ಕಾಡುವ ಗೂಂಡಾ ಅಥವಾ ರೌಡಿ ಜಗತ್ತಿನ ಪರಿಚಯ ಆಯಿತು ಎನ್ನಬಹುದು. ಈ ಎಲ್ಲಾ ವಿವರಗಳನ್ನು ಇಟ್ಟುಕೊಂಡು ವಾಸ್ತವ ನೆಲೆಗಟ್ಟಿನಲ್ಲಿ ಹೆಣೆದ ಕಥೆಯೊಂದನ್ನು ಶ್ರೀಮತಿ ಶಮಾಜೈದಿ ಅವರ ಚಿತ್ರಕಥೆಯೊಂದಿಗೆ ನಾಗಾಭರಣ ಕನ್ನಡ ತೆರೆಗೆ ತಂದರು. ಈ ಚಿತ್ರದಲ್ಲಿ ಮಧ್ಯಮವರ್ಗದ ಮಾದರಿ ಎಂಬಂತೆ ಅನಂತ್‌ನಾಗ್ ಮತ್ತು ಸ್ಮಿತಾಪಾಟೀಲ್ ದಂಪತಿಗಳು ಪಾತ್ರವಹಿಸಿದ್ದರು. ಗೂಂಡಾ ಅಥವಾ ರೌಡಿ ಜಗತ್ತಿನ ಮಾದರಿಯಾಗಿ ಸುಂದರ್‌ರಾಜ್, ಮಧ್ಯವರ್ತಿಯ ಪಾತ್ರದಲ್ಲಿ ಗಿರೀಶ್‌ಕಾರ್ನಾಡ್. ಹೀಗೆ ಘಟಾನುಘಟಿಗಳ ಸಂತೆಯೊಂದಿಗೆ ನಾಗಾಭರಣ ಒಂದು ಅಪರೂಪದ ಚಿತ್ರ ರೂಪಿಸಿದ್ದರು.
ಚಿತ್ರದ ಕಥೆಯನ್ನು ಸ್ಥೂಲವಾಗಿ ಹೀಗೆ ಹೇಳಬಹುದು. ಮಧ್ಯಮವರ್ಗದ ಕುಟುಂಬವೊಂದು ಮಹಾನಗರದ ವಠಾರ ಒಂದರಲ್ಲಿ ತನ್ನೆಲ್ಲಾ ಕಷ್ಟಗಳ ಜೊತೆಗೆ ಜೀವಿಸುತ್ತಿರುವಾಗಲೇ ಅವರ ಮನೆಯಲ್ಲಿ ಹೆಣವೊಂದು ಬಿದ್ದಿರುವುದು ತಿಳಿಯುತ್ತದೆ. ಗಂಡ-ಹೆಂಡತಿ-ಮಕ್ಕಳು ಮನೆಯಲ್ಲಿ ಇಲ್ಲದ ಸಮಯದಲ್ಲಿ ಆ ಮನೆಯನ್ನ ಹಿತ್ತಲಿನಿಂದ ಪ್ರವೇಶಿಸಿ ತಮ್ಮ ಖಾನಾ-ಪಾನ ಗೋಷ್ಟಿಗಳಿಗೆ ಬಳಸಿಕೊಳ್ಳುತ್ತಿದ್ದ ಪುಡಿರೌಡಿಯೊಬ್ಬನ ಹೆಣ ಅದು. ಆ ವಿಷಯ ಕುರಿತು ಪೊಲೀಸರಿಗೆ ತಿಳಿಸಿದರೆ ನಮ್ಮ ಮರ್ಯಾದೆಗೆ ಕುಂದು ಎಂದು ಭಾವಿಸುವ ಮಧ್ಯಮವರ್ಗದ ಕುಟುಂಬದವರು ಒಬ್ಬ ಮಧ್ಯವರ್ತಿಯನ್ನು ಹಿಡಿದು ಆ ಹೆಣವನ್ನು ತಮ್ಮ ಸುತ್ತಲಿನವರು ಯಾರಿಗೂ ತಿಳಿಯದಂತೆ ಸಾಗಹಾಕಲು ಪ್ರಯತ್ನಿಸುತ್ತಾರೆ. ಈ ಹಾದಿಯಲ್ಲಿ ಆ ರೌಡಿಗೂ ಆ ಮನೆಯವರಿಗೂ ಇದ್ದಂತಹ ಸಣ್ಣ ಸಂಬಂಧದ ವಿವರಗಳು, ಆ ಮಧ್ಯವರ್ತಿಗೂ ಸತ್ತವನಿಗೂ ನಡುವೆ ಇದ್ದಂತಹ ಸಂಪರ್ಕ ಇಂತಹ ಸೂಕ್ಷ್ಮಗಳನ್ನು ಹೇಳುತ್ತಲೇ ಕಥೆಯೂ ಮಧ್ಯವರ್ತಿಯೇ ಆ ರೌಡಿಯನ್ನು ಕೊಂದವನು ಎಂಬುದನ್ನೂ ತಿಳಿಸುತ್ತದೆ. ಆ ಕೊಲೆ ಆಗಲು ಕಾರಣವಾದದ್ದು ಏನು ಎಂಬ ವಿವರಗಳ ಜೊತೆಗೆ ಹೆಣವನ್ನು ವಠಾರದಲ್ಲಿರುವ ಯಾರಿಗೂ ಗೊತ್ತಾಗದಂತೆ ಸಾಗಿಸಲು ಅವರೆಲ್ಲರೂ ಪಡುವ ಕಷ್ಟವನ್ನು ಚಿತ್ರ ಬಿಡಿಸಿಡುತ್ತದೆ. ಘಟನಾತ್ಮಕವಾಗಿ ಬೆಳೆಯುವ ಈ ಚಿತ್ರದ ನಿರೂಪಣೆಯು ಅಲ್ಲಲ್ಲಿ ಪ್ರೇಕ್ಷಕರ ಕುತೂಹಲ ಹೆಚ್ಚಿಸಲು ಹೊಸ ವಿವರಗಳನ್ನು ನೀಡುತ್ತಾ ಕ್ಲೈಮ್ಯಾಕ್ಸ್ ತಲುಪುವ ಹೊತ್ತಿಗೆ ಕಥಾನಾಯಕ ಸ್ವತಃ ಮಧ್ಯವರ್ತಿಯೇ ಆಗಿಬಿಡುತ್ತಾನೆ. (ಅನಂತ್‌ನಾಗ್‌ರ ಜೊತೆಗಿದ್ದ ಪ್ರೇಕ್ಷಕ ಆತನಿಗೆ ತಿಳಿಯದಂತೆ ಮಧ್ಯವರ್ತಿ ಪಾತ್ರದ ಗಿರೀಶ್ ಕಾರ್ನಾಡರ ಕಡೆಗೆ ವಾಲುತ್ತಾನೆ.) ಆ ಮಧ್ಯವರ್ತಿ ಕುರಿತು ಪ್ರೇಕ್ಷಕರಲ್ಲಿ ಅನುಕಂಪ ಮೂಡತೊಡಗುತ್ತದೆ. ಆತನು ನಮ್ಮಂತೆಯೇ ಎಂಬ ಪ್ರೀತಿ ಬೆಳೆಯುವಷ್ಟರಲ್ಲಿ, ರೈಲಿನಿಂದ ಹೆಣ ಇರುವ ಪೆಟ್ಟಿಗೆಯನ್ನು ಯಾವುದೋ ಸೇತುವೆಯ ಬಳಿ ತಳ್ಳಲು ಪ್ರಯತ್ನಿಸುವ ಆ ಮಧ್ಯವರ್ತಿಯೂ ಸಹ ಹೆಣದ ಪೆಟ್ಟಿಗೆಯ ಜೊತೆಗೇ ರೈಲಿನಿಂದ ಬಿದ್ದು ಸಾಯುವುದನ್ನು ಚಿತ್ರ ಬಿಚ್ಚಿಡುತ್ತದೆ. ಹೀಗೆ ನಮ್ಮ ಮಧ್ಯಮವರ್ಗವನ್ನು ಕುರಿತು ಒಂದು ಸ್ಪಷ್ಟ ನಿಲುವು ನೀಡುವ “ಅನ್ವೇಷಣೆ’ ಪ್ರೇಕ್ಷಕನನ್ನು ಕಾಡುತ್ತದೆ.
ಪ್ರಾಯಶಃ ಕನ್ನಡದ ಹೊಸ ಅಲೆಯ ಸಂದರ್ಭದಲ್ಲಿ ತೀರಾ ವಿಶಿಷ್ಟ ಹೆಸರು “ಅನ್ವೇಷಣೆ’. ಚಿತ್ರದಲ್ಲಿದ್ದ ಸಹಜ ಅಭಿನಯ, ವಾಸ್ತವ ಎನಿಸುವಂತಹ ವಾತಾವರಣ, ಇವೆಲ್ಲವೂ ಪ್ರೇಕ್ಷಕನಲ್ಲಿ ಮೂಡುವ ಅನುಭೂತಿಗೆ ಕಾರಣವಾಗಿದ್ದವು. ಮತ್ತು ಈ ಲೇಖನದ ಆರಂಭದಲ್ಲಿಯೇ ನಾನು ಹೇಳಿದಂತೆ, ಈ ಚಿತ್ರದಲ್ಲಿ ಮಧ್ಯಮವರ್ಗವನ್ನು ತೋರಿಸಿದ ಕ್ರಮ ನಂತರ ನಮ್ಮ ಜನಪ್ರಿಯ ಚಿತ್ರಗಳಲ್ಲಿ ಆರಂಭವಾದ ಗೂಂಡಾ ಜಗತ್ತಿನ ಕಥೆಗಳನ್ನುಳ್ಳ ಚಿತ್ರಗಳಲ್ಲಿ ಬಳಕೆಯಾಗುತ್ತಿದೆ. (“ಓಂ’ ಚಿತ್ರದಲ್ಲಿ ನಾಯಕ ಪಾತ್ರಧಾರಿಯ ಮನೆಯ ವಿವರಗಳನ್ನು ಅಥವಾ ಈಚೆಗಿನ “ಜೋಗಿ’ ಚಿತ್ರದಲ್ಲಿ ಇರುವ ನಾಯಕನ ಪಾತ್ರದ ಹಿನ್ನೆಲೆಯ ವಿವರಗಳನ್ನು ಕಟ್ಟಿದ ರೀತಿಗೆ “ಅನ್ವೇಷಣೆ’ಯಂತಹ ಚಿತ್ರಗಳ ಪ್ರಯೋಗಪ್ರಿಯತೆಯೇ ಕಾರಣ.)
“ಅನ್ವೇಷಣೆ’ ತನ್ನ ಪ್ರಯೋಗ ವಿಶಿಷ್ಟತೆಯಿಂದ ಮಾತ್ರವಲ್ಲದೇ ಪ್ರೇಕ್ಷಕರ ಮೇಲೆ ಮೂಡಿಸುವ ಛಾಪಿನ ದೃಷ್ಟಿಯಿಂದಲೂ ಹೊಸಅಲೆಯ ಚಿತ್ರಗಳ ಸಂದರ್ಭದಲ್ಲಿ ವಿಶಿಷ್ಟ ಪ್ರಯೋಗ. ಈಗಲೂ ನಮ್ಮ ಅನೇಕ ಛಾನೆಲ್ಲುಗಳಲಿ “ಅನ್ವೇಷಣೆ’ ಪ್ರಸಾರವಾಗುತ್ತಾ ಇರುತ್ತದೆ. ಅಲ್ಲಿ ಮತ್ತೊಮ್ಮೆ ನೋಡಿ. ಅಥವಾ ನಿಮ್ಮೂರಿನ ಚಿತ್ರಮಂದಿರಕ್ಕೆ ಇಂತಹ ಚಿತ್ರವೊಂದನ್ನು ತರಿಸಿಕೊಂಡು ನೋಡಿ.
ನೆನಪಿರಲಿ : ಒಳ್ಳೆಯ ಚಿತ್ರಗಳನ್ನು ನೋಡುವ ಪ್ರೇಕ್ಷಕರಿದ್ದಾಗ ಮಾತ್ರ ಒಳ್ಳೆಯ ಚಿತ್ರಗಳ ತಯಾರಿಕೆ ನಿರಂತರವಾಗುತ್ತದೆ.

Leave a Reply

Your email address will not be published. Required fields are marked *