ರಾಜಕೀಯ ಚಿತ್ರಗಳ ಹೆಸರಲ್ಲಿ…

ಬೆಳಕಿನೊಳಗಣ ಬೆಗು – ೧೦

ಕನ್ನಡ ಚಲನಚಿತ್ರದ ಸಂದರ್ಭದಲ್ಲಿ ರಾಜಕೀಯ ಚಿತ್ರಗಳು ಎಂಬ ಹೆಸರಲ್ಲಿ ಬಂದ ಚಿತ್ರಗಳು ಅನೇಕವಾದರೂ ನಿಜ ಅರ್ಥದಲ್ಲಿ ‘ರಾಜಕೀಯ’ವನ್ನು ವಸ್ತುವಾಗಿಸಿಕೊಂಡು ಬಂದ ಚಿತ್ರಗಳು ಬೆರಳೆಣಿಕೆಯಷ್ಟು ಮಾತ್ರ. ಅಂತಹ ಕೆಲವುಗಳಲ್ಲಿ ಒಂದು ಎಂ.ಎಸ್.ಸತ್ಯು ಅವರ ನಿರ್ದೇಶನದ ‘ಬರ’. ಈ ಚಿತ್ರದಲ್ಲಿ ‘ರಾಜಕೀಯ’ ಎಂಬುದು ನಮ್ಮ ಬದುಕನ್ನು ಹೇಗೆ ನಿಯಂತ್ರಿಸುತ್ತದೆ ಮತ್ತು ಅದರಿಂದ ಮಧ್ಯಮವರ್ಗದ ಬದುಕು ಹೇಗೆ ತಲ್ಲಣಿಸುತ್ತದೆ ಎಂಬ ವಿವರಗಳು ಪ್ರೇಕ್ಷಕನನ್ನು ತಲುಪುತ್ತವೆ. ಅದಕ್ಕಾಗಿ ‘ಬರ’ ಚಿತ್ರದಲ್ಲಿನ ವಿವರಗಳನ್ನು ಗಮನಿಸುವುದಕ್ಕಿಂತ ಮೊದಲು ನಾವು ನಮ್ಮಲ್ಲಿ ಬಂದ ಇನ್ನಿತರ ‘ರಾಜಕೀಯ’ ಚಿತ್ರ ಎಂಬ ಹಣೆಪಟ್ಟಿಯೊಡನೆ ಬಂದಂತಹ ಚಿತ್ರಗಳನ್ನು ಗಮನಿಸಬೇಕು.

ಭಾರತೀಯ ಚಿತ್ರಗಳು ಎಂದರೆ ನಿರಂತರವಾಗಿ ಕಥೆ ಹೇಳುವ ತವಕದಲ್ಲಿ ತಯಾರಾದ ಚಿತ್ರಗಳು ಎಂದು ಸಾಮಾನ್ಯೀಕರಿಸಿ ಹೇಳಬಹುದು. ಈ ಮಾತು ಹೆಚ್ಚಾಗಿ ಹೊಂದುವುದು ನಮ್ಮಲ್ಲಿ ತಯಾರಾಗುವ ಜನರಂಜನೆಯ ಚಿತ್ರಗಳಿಗೆ. ಅವುಗಳಲ್ಲಿ ಒಬ್ಬ ನಾಯಕ/ನಾಯಕಿಯ ಸುತ್ತಲೂ ಕಥೆಯನ್ನು ಹೆಣೆಯಲಾಗುತ್ತದೆ. ಆ ನಾಯಕ/ನಾಯಕಿ ಕಡುಬಡತನದಿಂದ ಅಥವಾ ಸಾಮಾನ್ಯೇತಿ ಸಾಮಾನ್ಯ ಎಂಬ ಹಿನ್ನೆಲೆಯಿಂದ ಬಂದಿರುತ್ತಾನೆ/ಳೆ. ಒಟ್ಟಾರೆಯಾಗಿ ಆತ/ಕೆ ಶ್ರೀರಾಮಚಂದ್ರನ ಅಷ್ಟೂ ಗುಣಗಳನ್ನುಳ್ಳಂತಹವರಾಗಿರುತ್ತಾನೆ/ಳೆ. ಅಂತಹ ವ್ಯಕ್ತಿಗೆ ಭೂತವಾಗಿ ಯಾವುದೋ ಖಳನೊಬ್ಬ ಎದುರಾಗುತ್ತಾನೆ. ಆ ವ್ಯಕ್ತಿಯ ಮನೆಯವರನ್ನು ಅಥವಾ ಆ ವ್ಯಕ್ತಿಗೆ ಅತ್ಯಂತ ಬೇಕಾದವರನ್ನು ಆ ಖಳ ಕೊಲ್ಲುತ್ತಾನೆ. ಆಗ ಆ ನಾಯಕ ಪಾತ್ರವು ಬೀದಿಗೆ ಬಂದು ಬೀಳುತ್ತದೆ. ಅಲ್ಲಿಂದ ಆರಂಭವಾಗುವ ಆ ಪಾತ್ರದ ಬದುಕು ಅನೇಕ ತಿರುವುಗಳೊಡನೆ ಸಾಗುತ್ತಾ ಅಂತಿಮವಾಗಿ ಮತ್ತೆ ಅದೇ ಖಳನ ಎದುರಿಗೆ ಬಂದು ನಿಲ್ಲುತ್ತದೆ. ಮಾರಾಮಾರಿಯಾಗುತ್ತದೆ. ನಾಯಕಪಾತ್ರದ ಗೆಲುವಿನ ಜೊತೆಗೆ ಕಥನ ಮುಗಿಯುತ್ತದೆ. ಇದು ಸಾಮಾನ್ಯವಾಗಿ ನಮ್ಮ ಎಲ್ಲ ಜನರಂಜನೆಯ ಸಿನೆಮಾಗಳಲ್ಲಿರುವ ಕಥಾಚೌಕಟ್ಟು. ಇನ್ನೂ ರಾಜಕೀಯ ಚಿತ್ರ ಎಂಬ ಹೆಸರಲ್ಲಿ ಬಂದ ಚಿತ್ರಗಳಲ್ಲಿ ಈ ಚೌಕಟ್ಟು ಬದಲಾಗುತ್ತದೆಯೇ? ಖಂಡಿತಾ ಇಲ್ಲ. ಜನರಂಜಕರು ಅದೇ ಚೌಕಟ್ಟಿಗೆ ಹೊಸ ಪೋಷಾಕು ತೊಡಿಸುತ್ತಾರೆ. ರಾಮನ ಎದುರಿಗೆ ಬರುವವ ಅದೇ ರಾವಣ. ಆದರೆ ಅವನ ಪೋಷಾಕು ಭಾರತದ ರಾಜಕೀಯ ನಾಯಕರದ್ದಾಗಿರುತ್ತದೆ. ಹೀಗಾದಾಗ ನೋಡುಗನಿಗೆ ಅಂತಹ ಚಿತ್ರದಿಂದ ‘ರಾಜಕೀಯ’ ತಿಳಿವಳಿಕೆ ಮೂಡುವ ಬದಲಿಗೆ ಅದೇ ಕಥೆಯನ್ನ ಮತ್ತೊಂದು ಪೋಷಾಕಿನಲ್ಲಿ ನೋಡಿದ ಅನುಭವವಾಗುತ್ತದೆ, ಅಷ್ಟೆ. ಇಂತಹ ಹೇರಳ ಚಿತ್ರಗಳು ನಮ್ಮ ಭಾಷೆಯಲ್ಲಿ ಬಂದಿವೆ. ರಾಜೇಂದ್ರಸಿಂಗ್(ಬಾಬು) ಅವರ ನಿರ್ದೇಶನದ ‘ಅಂತ’ ಚಿತ್ರದಿಂದ ಈಚೆಗೆ ಬಿಡುಗಡೆಯಾದ ‘ಧಮ್’ ತರಹದ ಚಿತ್ರಗಳವರೆಗೆ ಇದೇ ರೀತಿಯ ಕಥೆಗಳನ್ನು ನಮ್ಮ ಜನ ನೋಡಿದ್ದಾರೆ.
ಇಂತಹ ಚಿತ್ರಗಳು ಜನರಿಗೆ ಸಮಕಾಲೀನ ರಾಜಕೀಯವನ್ನು ತಿಳಿಯಪಡಿಸುವ ಬದಲಿಗೆ ನಮ್ಮ ಎಲ್ಲಾ ರಾಜಕೀಯ ನಾಯಕರು ಕೆಟ್ಟವರು ಎಂಬ (ಒಬ್ಬಿಬ್ಬ ವಿಭೀಷಣರನ್ನು ಹೊರತು ಪಡಿಸಿ) ಅಭಿಪ್ರಾಯ ಮೂಡಿಸುತ್ತವೆ. ಅಂತಹವರನ್ನೆಲ್ಲಾ ಅದೆಲ್ಲೋ ಇರುವ ನಮ್ಮ ನಾಯಕನೊಬ್ಬ ಬಂದು ಕೊನೆಗಾಣಿಸುತ್ತಾನೆ. ಆ ನಂತರ ನಮ್ಮ ಬದುಕು ಸುಂದರವಾಗುತ್ತದೆ ಎಂಬ ಭ್ರಮೆಗೆ ಪ್ರೇಕ್ಷಕರನ್ನು ದೂಡುತ್ತವೆ. ಇದು ಅಪಾಯಕಾರಿ. ಜನರಲ್ಲಿ ಚಿಂತನೆಯನ್ನು ಬೆಳೆಸುವ ಬದಲಿಗೆ, ಯಾವುದೋ ಭ್ರಮೆಗೆ ದೂಡುವುದು ಜನೋಪಕಾರಿಯಂತೂ ಆಗುವುದಿಲ್ಲ.
ಈ ನಿಟ್ಟಿನಲ್ಲಿ ಒಂದೆರಡು ಒಳ್ಳೆಯ ಪ್ರಯತ್ನಗಳು ನಮ್ಮಲ್ಲಿ ಆಗಿವೆ. ಅವುಗಳಲ್ಲಿ ‘ಬರ’, ‘ಆಕ್ಸಿಡೆಂಟ್’, ‘ತಬರನಕಥೆ’, ‘ಹರಕೆಯಕುರಿ’ಯಂತಹ ಕೆಲವು ಹೆಸರುಗಳನ್ನ ಹೇಳಬಹುದು. ಅವುಗಳಲ್ಲಿ ಎಂ.ಎಸ್.ಸತ್ಯು ಅವರ ನಿರ್ದೇಶನದ ‘ಬರ’ ಅನೇಕ ಅರ್ಥದಲ್ಲಿ ವಿಶೇಷ ಚಿತ್ರ. ಈ ಚಿತ್ರದಲ್ಲಿ ಅನಂತ್‌ನಾಗ್, ಸಿ.ಆರ್.ಸಿಂಹ ಮುಂತಾದ ನಟರು ಪಾತ್ರವಹಿಸಿದ್ದರು. ಸರಳವಾಗಿ ಹೇಳುವುದಾದರೆ ಒಂದು ಸಣ್ಣ ಜಿಲ್ಲಾ ಕೇಂದ್ರಕ್ಕೆ ಅಧಿಕಾರಿಯಾಗಿ ಬರುವ ವ್ಯಕ್ತಿಯು ಸ್ಥಳೀಯ ರಾಜಕೀಯ ನಾಯಕರುಗಳಿಂದ ಅನುಭವಿಸುವ ಕಿರಿಕಿರಿ, ಇದರಿಂದಾಗಿ ಅವನಿಗೆ ಯಾವುದೇ ಜನಪರ ಕೆಲಸ ಮಾಡಲಾಗದ ಸಂಕಟ ಈ ಚಿತ್ರದ ಪ್ರಧಾನ ಹೂರಣ. ಆ ಅಧಿಕಾರಿಗೆ ಇರುವ ಕಾಳಜಿಗಳನ್ನು ಆತ ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿದಾಗೆಲ್ಲಾ ಆತ ಅಡ್ಡಿಗಳನ್ನು ಎದುರಿಸುತ್ತಾ ಇರುತ್ತಾನೆ. ಇದೆಲ್ಲಾವನ್ನು ದಾಟಿಕೊಂಡು ಆತ ಒಂದು ನೀರಿನ ಬಾವಿ ತೋಡಿಸಲು ಪಡುವ ಕಷ್ಟವೊಂದೆಡೆಯಾದರೆ, ಅದನ್ನು ವಿರೋಧಿಸುವ ರಾಜಕೀಯ ನಾಯಕರು ಹೊತ್ತಿಸುವ ಕೋಮುಗಲಭೆ ಒಂದು ಕಡೆ. ಇವೆಲ್ಲವುಗಳ ಜೊತೆಗೆ ಸಮಕಾಲೀನ ರಾಜಕೀಯ ಸ್ಥಿತಿಯ ಸ್ಪಷ್ಟ ಚಿತ್ರವನ್ನು ಕಟ್ಟಿಕೊಡಲು ಸತ್ಯು ಪ್ರಯತ್ನಿಸುತ್ತಾರೆ. ಆ ಕೆಲಸದಲ್ಲಿ ಬಹುಪಾಲು ಯಶಸ್ವಿಯೂ ಆಗುತ್ತಾರೆ.
‘ಬರ’ದಲ್ಲಿ ಸತ್ಯು ಕೇವಲ ಭೌತಿಕವಾದ ಬರ ಕುರಿತು ಮಾತಾಡುವುದಿಲ್ಲ. ನಮ್ಮ ದೇಶದ ಸಮಕಾಲೀನ ಸ್ಥಿತಿಯಲ್ಲಿ ಇರುವ ಭೌದ್ಧಿಕ ಬರ, ನಮ್ಮ ರಾಜಕೀಯ ನಾಯಕರುಗಳ ದೂರದೃಷ್ಟಿ ಇಲ್ಲದ ಆಡಳಿತ ಇವುಗಳನ್ನು ಕುರಿತು ಮಾತಾಡುತ್ತಾರೆ. ಚಿತ್ರದ ಅಂತಿಮ ಕ್ಷಣಗಳಲ್ಲಿ ಜಿಲ್ಲಾಧಿಕಾರಿಯ ಮಗುವೇ ಕೋಮುಗಲಭೆಯಲ್ಲಿ ನಾಪತ್ತೆಯಾಗಿದೆ ಎಂದಾದಾಗ ಅದಕ್ಕೆ ಕಾರಣವಾಗಿದ್ದು ಮತ್ತೊಂದು ಕೋಮಿನ ರಿಕ್ಷಾದವನು ಎಂದೆಲ್ಲಾ ಆರೋಪಿಸುತ್ತಾ ಅಧಿಕಾರಿ ಮತ್ತವನ ಮನೆಯವರನ್ನ ತಲ್ಲಣಕ್ಕೆ ತಳ್ಳುವ ಪ್ರಯತ್ನವಾಗುತ್ತದೆ. ಭಾರತದ ಸಾಮಾನ್ಯ ಜನ ಜಾತಿ-ಧರ್ಮಗಳನ್ನು ಚಿಂತಿಸುವವರಲ್ಲ. ಅವರು ಎಲ್ಲಾ ಕಾಲಕ್ಕೂ ಮಾನವೀಯ ಮೌಲ್ಯಗಳನ್ನಿಟ್ಟುಕೊಂಡು ಬದುಕುವವರು ಎಂಬುದನ್ನು ಸಾಬೀತು ಪಡಿಸಲೆಂಬಂತೆ ಅದೇ ರಿಕ್ಷಾದವನು ಜಿಲ್ಲಾಧಿಕಾರಿಯ ಮಗುವನ್ನು ಗಲಭೆಯ ಸಂದರ್ಭದಲ್ಲಿ ರಕ್ಷಿಸಿ ನಂತರ ಮನೆಗೆ ಕರೆತಂದು ಬಿಡುತ್ತಾನೆ. ಆ ಮೂಲಕ ಈ ದೇಶದಲ್ಲಿ ಆಗುತ್ತಿರುವ ಎಲ್ಲಾ ಸೌಹಾರ್ದ ಮುರಿಯುವ ಪ್ರಯತ್ನಗಳೂ ಪುಢಾರಿಪ್ರೇರಿತ ಎಂಬುದನ್ನು ಸತ್ಯು ಸರಳವಾಗಿಯೇ ತಿಳಿಸಿಬಿಡುತ್ತಾರೆ.
ಸಾಮಾನ್ಯವಾಗಿ ಪ್ರಯೋಗಾತ್ಮಕ ಚಿತ್ರಗಳಲ್ಲಿ ಇರುವ ಓಟವನ್ನು ಬಿಟ್ಟುಕೊಟ್ಟು, ಜನರಂಜನೆಯ ಚಿತ್ರಗಳ ಓಟವನ್ನೇ ನೆಲದ ಮೇಲೆ ನಡೆವ ಕಥೆಗೆ ಒಗ್ಗಿಸಿಕೊಂಡು ಕಥೆ ಹೇಳುವ ಪ್ರಯತ್ನ ಇಲ್ಲಿದೆ. ಇದರಿಂದಾಗಿ ಪ್ರೇಕ್ಷಕನಿಗೆ ತಾನು ಹೊಸರೀತಿಯ ಸಿನಿಮಾ ನೋಡುತ್ತಿದ್ದೇನೆ ಎಂಬುದು ತಕ್ಷಣಕ್ಕೆ ಅರಿವಿಗೆ ಬರದೆ ಇದ್ದರೂ, ಕಥನ ಮುಗಿವ ಹಂತದಲ್ಲಿ ಆತನಿಗೆ ಚಿತ್ರ ಭ್ರಮೆಗಳನ್ನು ಬೋಧಿಸದೆ ವಾಸ್ತವವನ್ನು ತೆರೆದಿಟ್ಟಾಗ ಸತ್ಯ ಗೋಚರಿಸುತ್ತದೆ.
ಈ ಚಿತ್ರದ ಮತ್ತೊಂದು ವಿಶೇಷ ಎಂದರೆ ಗುಂಪಿನ ದೃಶ್ಯಗಳ ನಿರ್ವಹಣೆ. ಸಾಮಾನ್ಯವಾಗಿ ಇಂತಹ ದೃಶ್ಯಗಳನ್ನು ಚಿತ್ರಿಸುವಾಗ ಎರಡೂ ರೀತಿಯ ಚಿತ್ರಗಳವರು ಕೃತಕವಾಗುತ್ತಾರೆ ಅಥವಾ ಬಡಕಲಾಗುತ್ತಾರೆ. ಒಂದು ವರ್ಗಕ್ಕೆ ವಾಸ್ತವವನ್ನು ಕಟ್ಟಿಕೊಡಲಾಗದ ಕೃತಕತೆಯಾದರೆ ಮತ್ತೊಂದು ವರ್ಗಕ್ಕೆ ವಾಸ್ತವವನ್ನು ಸೃಷ್ಟಿಸಲು ಬೇಕಾದ ಸವಲತ್ತು ಇಲ್ಲದ ಬಡತನ. ಹೀಗಾಗಿ ಸಾಮಾನ್ಯವಾಗಿ ನಮ್ಮ ಚಿತ್ರಗಳಲ್ಲಿ ಗುಂಪಿನ ದೃಶ್ಯಗಳು ಪೂರ್ಣತೃಪ್ತಿಯನ್ನ ಸಾಧಿಸಲಾರವು. ಈ ಮಾತಿಗೆ ಅಪವಾದ ಎಂಬಂತೆ ಎಂ.ಎಸ್. ಸತ್ಯು ಅವರ ‘ಬರ’ ಚಿತ್ರದಲ್ಲಿನ ಕೋಮು ಗಲಭೆಯ ದೃಶ್ಯಗಳು ವಾಸ್ತವಕ್ಕೆ ಅತ್ಯಂತ ಹತ್ತಿರ ಎಂಬಂತೆ ಚಿತ್ರಿತವಾಗಿದೆ. ಸತ್ಯು ಅವರು ನಿರ್ದೇಶಿಸಿದ್ದ ಪ್ರಥಮ ಚಿತ್ರ ‘ಗರಂಹವಾ’ದಲ್ಲಿಯೂ ಗುಂಪು ದೃಶ್ಯದ ನಿರ್ವಹಣೆ ಅತ್ಯಂತ ಸಹಜವಾಗಿತ್ತು ಎಂಬುದನ್ನು ಗಮನಿಸಬಹುದು.
ಒಟ್ಟಾರೆಯಾಗಿ ಹೇಳುವುದಾದರೆ ಕನ್ನಡದ ಸಂದರ್ಭದಲ್ಲಿ ಬಂದ ಕೆಲವೇ ರಾಜಕೀಯ ಚಿತ್ರಗಳಲ್ಲಿ ‘ಬರ’ ಒಂದು. ವಾಸ್ತವವನ್ನು ಪ್ರೇಕ್ಷಕನಿಗೆ ತಿಳಿಸಿಕೊಡುತ್ತಾ, ಆತನನ್ನು ಚಿಂತನೆಗೆ ಹಚ್ಚುತ್ತಾ ಆ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಕೆಲಸ ಮಾಡಿದ ಅಪರೂಪದ ಚಿತ್ರವಿದು. ನೀವೂ ಈ ಚಿತ್ರವನ್ನು ಇನ್ನೂ ನೋಡಿಲ್ಲವಾದರೆ ಆದಷ್ಟು ಬೇಗ ನಿಮ್ಮೂರಿನ ಚಿತ್ರಮಂದಿರದವರಿಗೆ ಹೇಳಿ ಈ ಚಿತ್ರ ತರಿಸಿಕೊಳ್ಳಿ. ಇಲ್ಲವಾದಲ್ಲಿ ನಿಮ್ಮ ಶಾಲೆಯ ಪ್ರಾಂಶುಪಾಲರಿಗೆ ಹೇಳಿ ಶಾಲೆಯಲ್ಲಿಯೇ ಒಂದು ಫಿಲಂ ಕ್ಲಬ್ ರಚಿಸಿಕೊಳ್ಳಿ. ವಾರದಲ್ಲೊಂದು ದಿನ ಒಳ್ಳೆಯ ಚಿತ್ರಗಳನ್ನು ಕನಿಷ್ಟ ಡಿವಿಡಿ ಸ್ವರೂಪದಲ್ಲಿಯಾದರೂ ಶಾಲೆಯಲ್ಲಿಯೇ ನೋಡಲು ಪ್ರಯತ್ನಿಸಿ.
ನೆನಪಿರಲಿ, ಒಳ್ಳೆಯ ಪ್ರೇಕ್ಷಕರಿದ್ದಾಗ ಮಾತ್ರ ಒಳ್ಳೆಯ ಚಿತ್ರಗಳು ತಯಾರಾಗುತ್ತವೆ. ಆದ್ದರಿಂದ ನಾವು ಒಳ್ಳೆಯ ಚಿತ್ರಗಳನ್ನು ಮಾತ್ರ ನೋಡಲು ತೀರ್ಮಾನಿಸೋಣ. ಆ ಮೂಲಕ ಒಳಿತನ್ನು ಉಳಿಸೋಣ.

Leave a Reply

Your email address will not be published. Required fields are marked *