ಮೌನವೆಂಬ ಮಹಾಅಸ್ತ್ರ

ಬೆಳಕಿನೊಳಗಣ ಬೆಗು – ೭

ಒಳ್ಳೆಯದು ಎನ್ನುವುದು ಯಾವಾಗಲೂ ಅಲ್ಪಸಂಖ್ಯಾತ. ಅದು ಇತಿಹಾಸ ಪೂರ್ವಕಾಲದಿಂದಲೂ ಉಳಿದುಕೊಂಡು ಬಂದಿರುವ ಸತ್ಯ. ನೀವೇ ಗಮನಿಸಿ: ಈ ದೇಶದ ಮಹಾನ್ ನೇತಾರ ಗಾಂಧೀಜಿ. ಅವರ ಪ್ರಯೋಗಗಳು, ಸತ್ಯಾಗ್ರಹಗಳು ಎಲ್ಲವೂ ಸಮಾಜಮುಖಿ ಆಗಿದ್ದವು. ಆದರೆ ಅಂತಹ ವ್ಯಕ್ತಿತ್ವದ ಬಗ್ಗೆ ನಮ್ಮಲ್ಲಿ ತಯಾರಾದ ಚಿತ್ರಗಳೆಷ್ಟು ಎಂದರೆ ಬೆರಳೆಣಿಕೆಯ ಲೆಕ್ಕದಲ್ಲಿ ಮುಗಿದು ಹೋಗುತ್ತದೆ. ಅದೇ ಈ ನಾಡಿನ ಕುಖ್ಯಾತರುಗಳ ಹೆಸರು, ಹೋಲಿಕೆಗಳನ್ನುಳ್ಳ ವ್ಯಕ್ತಿತ್ವ ಇರುವ ಚಿತ್ರಗಳ ಸಂಖ್ಯೆ ಅಪಾರ. ಕೇವಲ ದಾವೂದ್ ಇಬ್ರಾಹಿಂ ಎಂಬ ಒಂದು ವ್ಯಕ್ತಿತ್ವ ರಾಷ್ಟ್ರಭಾಷೆಯಾದ ಹಿಂದಿಯಲ್ಲಿ ತಯಾರಾದ ಅನೇಕ ಚಿತ್ರಗಳಿಗೆ ಸ್ಫೂರ್ತಿ ಆಗಿದೆ. ಹೀಗೇಕೆ ಎಂದು ಚಿಂತಿಸಿದಾಗ ನಾನು ಲೇಖನದ ಆರಂಭದಲ್ಲಿ ಹೇಳಿದ ಮಾತಿನ ಹಿಂದಿರುವ ಸತ್ಯ ವೇದ್ಯವಾಗುತ್ತದೆ.

ಈ ಮಾತು ಈ ನಾಡಿನ ಶ್ರೇಷ್ಠ ಸಾಹಿತಿಗಳ ಕೃತಿಗಳನ್ನು ಕುರಿತು ಸಹ ಆಡಬಹುದು. eನಪೀಠದ ಗೌರವಕ್ಕೂ ಪಾತ್ರರಾದ ಸಾಹಿತಿಗಳ ಕೃತಿಗಳನ್ನು ಆಧರಿಸಿ ತಯಾರಾಗಿರುವ ಚಿತ್ರಗಳಿಗೂ ಇತರ ಕಾದಂಬರಿಕಾರರ ಕೃತಿಗಳನ್ನು ಆಧರಿಸಿ ತಯಾರಾದ ಚಿತ್ರಗಳಿಗೂ ಸಂಖ್ಯೆಯಲ್ಲಿ ಇರುವ ವ್ಯತ್ಯಾಸವನ್ನು ಗಮನಿಸಬಹುದು. ಇಂತಹ ಶ್ರೇಷ್ಟರ ಸಾಲಿನಲ್ಲಿ ಸದಾಕಾಲವೂ ಸಲ್ಲುವ ಸಾಹಿತಿಗಳಲ್ಲಿ ಒಬ್ಬರು ಅನಂತಮೂರ್ತಿಯವರು. ಅವರ ಕೃತಿ ‘ಸಂಸ್ಕಾರ’ವನ್ನು ಆಧರಿಸಿ ತಯಾರಾದ ಕನ್ನಡ ಚಿತ್ರವೂ ೧೯೭೦ರ ದಶಕದ ಆದಿಯಲ್ಲಿ ಕನ್ನಡದ ಹೊಸಅಲೆಯ ಚಿತ್ರ ಚಳವಳಿಯ ಅನೇಕ ಮೊದಲುಗಳಿಗೆ ಕಾರಣವಾಯಿತು. ಆ ಕೃತಿಯೂ ಸಹ ತನ್ನೊಳಗಿನ ಸಮಾಜಮುಖಿ ದೃಷ್ಟಿಕೋನದಿಂದ ಸರ್ವಕಾಲಿಕವಾಗಿತ್ತು. ಅನಂತಮೂರ್ತಿಯವರ ಸಾಹಿತ್ಯ ಕೃತಿಗಳಲ್ಲಿ ಇರುವ ಬಹುಮುಖ್ಯ ಗುಣ ಅದು. ಸಮಾಜ ಮತ್ತು ವ್ಯಕ್ತಿಯನ್ನು ಮುಖಾಮುಖಿ ಆಗಿಸುವ ಪ್ರಯತ್ನ ಅವರ ಅನೇಕ ಕೃತಿಗಳಲ್ಲಿ ದೊರೆಯುತ್ತದೆ. ಇದು ಎಲ್ಲಾ ಕಾಲದಲ್ಲಿಯೂ ಚರ್ಚಿತವಾಗಬೇಕಾದ ವಿಷಯವೂ ಹೌದು. ಏಕೆಂದರೆ, ನಾವು ಬದುಕುತ್ತಿರುವ ಸಮಾಜ ನಮ್ಮ ಮೇಲೆ ಏಕಕಾಲಕ್ಕೆ ಅನೇಕ ತೂಕಗಳನ್ನು ಹೊರಿಸುತ್ತದೆ. ವ್ಯಕ್ತಿಯೊಬ್ಬನ ಬದುಕುವ ರೀತಿಯನ್ನು ನಿರ್ದೇಶಿಸುವುದೇ ಸಮಾಜ. ಇದರಿಂದಾಗಿ ವ್ಯಕ್ತಿಯೊಬ್ಬ ಅನೇಕ ತಲ್ಲಣಗಳಿಗೆ ಒಳಾಗಾಗುತ್ತಾನೆ. ಆ ತಲ್ಲಣಗಳು ಸಮಾಜ ಕಟ್ಟುವ ಕ್ರಮ ಕುರಿತು ಅನೇಕ ಪ್ರಶ್ನೆಗಳನ್ನು ಎತ್ತುತ್ತದೆ. ಇಂತಹ ಕೃತಿಗಳು ಸಿನಿಮಾ ಎಂಬ ಪ್ರಬಲ ಮಾಧ್ಯಮದ ಮೂಲಕವೂ ಬರಬೇಕು. ಆಗ ನಮ್ಮ ಸಮಕಾಲೀನ ಬದುಕನ್ನು ನಾವು ನೋಡುವ ಕ್ರಮದಲ್ಲಿ ಬದಲಾವಣೆಗಳು ಆರಂಭವಾಗಬಹುದು. ಅಥವಾ ಹೊಸಪ್ರಶ್ನೆಗಳು ನಮಗೂ ಹುಟ್ಟಬಹುದು. ಆದರೆ ಅನಂತಮೂರ್ತಿಯವರ ಕೃತಿಗಳು ಸಿನಿಮಾ ಮಾಧ್ಯಮಕ್ಕೆ ಬಂದಿರುವುದು ಕಡಿಮೆ. ಅಂತಹ ಕೆಲವೇ ಚಿತ್ರಗಳಲ್ಲಿ ಒಂದು ಬಿ.ಎಸ್.ಲಿಂಗದೇವರು ನಿರ್ದೇಶನದಲ್ಲಿ ತಯಾರಾದ ಅನಂತಮೂರ್ತಿಯವರ ಸಣ್ಣಕಥೆಯೊಂದನ್ನು ಆಧರಿಸಿ ತಯಾರಾದ ಚಿತ್ರ ‘ಮೌನಿ’. ಈ ಚಿತ್ರದ ಪ್ರಧಾನ ಭೂಮಿಕೆಯಲ್ಲಿ ಅನಂತನಾಗ್, ದತ್ತಣ್ಣ, ಹರೀಶ್‌ರಾಜ್ ಮುಂತಾದವರಿದ್ದಾರೆ. ಛಾಯಾಗ್ರಹಣ ಹಾಲ್ಕೆರೆ ರಾಮಚಂದ್ರ ಅವರದ್ದು.
ನಮ್ಮ ದೇಶದಲ್ಲಿ ಅನೇಕ ಶತಮಾನಗಳಿಂದ ಪ್ರಬಲ ರಾಜಕೀಯ ಅಸ್ತ್ರ ಮತ್ತು ಅಧಿಕಾರ ತಾಣವಾಗಿರುವುದು ಮಠಗಳು. ಇಂತಹ ಮಠಗಳ ಸುತ್ತಾ ಊರು ಬೆಳೆಯುತ್ತದೆ. ಸಂಸಾರಗಳು ಬದುಕುತ್ತವೆ. ಅಲ್ಲಿ ಭಯ ಮತ್ತು ನಂಬಿಕೆಗಳೇ ಊರುಗೋಲು ಮತ್ತು ಕೈಮರ ಆಗಿರುತ್ತದೆ.
ಇಂತಹ ಮಠವೊಂದು ಕೊಡಮಾಡಿದ ಉಂಬಳಿ ಭೂಮಿಯನ್ನ ನೆಚ್ಚಿಕೊಂಡು ಬದುಕುವ ಕುಪ್ಪಣ್ಣ ಭಟ್ಟ ಎಂಬಾತನ ಸುತ್ತ ಮೌನಿಯ ಕಥೆ ನಡೆಯುತ್ತದೆ. ತನಗೆ ಉಂಬಳಿಯಾಗಿ ಬಂದಿರುವ ಭೂಮಿಯಲ್ಲಿ ಬೆಳೆದುದರಲ್ಲೇ ತನ್ನ ಜೀವನವನ್ನು ತೂಗಿಸಿಕೊಂಡು ಮಠಕ್ಕೆ ಇಂತಿಷ್ಟು ಎಂಬಂತೆ ವಾರ್ಷಿಕವಾಗಿ ಹಣ ಕಟ್ಟಬೇಕಾದ ಪರಿಸ್ಥಿತಿ ಭಟ್ಟನದು. ಆದರೆ ರೈತನ ಆದಾಯ ಮಾರುಕಟ್ಟೆಯ ಧಾರಣೆಯನ್ನು ಆಧರಿಸಿರುತ್ತದೆ. ಆತ ಏನೆಲ್ಲಾ ಕಷ್ಟಪಟ್ಟು ಹಣಹೊಂದಿಸಿ, ಬೀಜ ಬಿತ್ತಿ ಬೆಳೆ ತೆಗೆದರೂ ಅದಕ್ಕೆ ತಕ್ಕುದಾದ ಧಾರಣೆಯೂ ಸಿಗದೆ ಹೋದರೆ ರೈತನ ಬದುಕು ದುರ್ಭರವಾಗಿ ಬಿಡುತ್ತದೆ. ಇದೇ ಪರಿಸ್ಥಿತಿ ‘ಮೌನಿ’ಯ ಭಟ್ಟನದು. ಹಲವು ವರ್ಷಗಳಿಂದ ಆತ ಮಠಕ್ಕೆ ಕಟ್ಟಬೇಕಾದ ಹಣವನ್ನು ಕಟ್ಟದಿದ್ದರೂ ಹೇಗೋ ಜೀವನ ಸಾಗುತ್ತಿರುತ್ತದೆ. ಈ ಹಂತದಲ್ಲಿ ಅದೇ ಊರಿಗೆ ಬರುವ ಮತ್ತೊಬ್ಬ ವ್ಯಾಪಾರಸ್ಥ ಕಮ್ತಿಯು ಆ ಊರಿನ ಪ್ರಮುಖ ವಣಿಕನಾಗುತ್ತಾ ಸಾಗುತ್ತಾನೆ. ಆತನಿಗೆ ಸಾಲ ಹಿಂದಿರುಗಿಸಲಾಗದ ಭಟ್ಟನಿಗೂ ಕಮ್ತಿಗೂ ಆರಂಭವಾಗುವ ಸಣ್ಣ ಭಿನ್ನಾಭಿಪ್ರಾಯವೂ ಮಠದ ರಾಜಕೀಯ ವಲಯಕ್ಕೆ ಬೆಳೆದು ಇಡೀ ಮಠವೇ ಭಟ್ಟನ ವಿರುದ್ಧ ತಿರುಗಿ ನಿಲ್ಲುತ್ತದೆ. ಭಟ್ಟ ತಾನೂ ಸಂಪಾದಿಸಿ ಎಲ್ಲರ ಹಂಗಿನಿಂದ ದೂರ ಉಳಿದು ಅದೇ ಅಹಮ್ಮಿನ ಜೊತೆಗೆ ಬದುಕಲು ಪ್ರಯತ್ನಿಸುತ್ತಾನೆ. ಆದರೆ ಅವನ ಕನಸಿಗೂ ಮಾರುಕಟ್ಟೆಯ ವಾಸ್ತವಕ್ಕೂ ಇರುವ ಅಂತರ ದೊಡ್ಡದು. ಭಟ್ಟ ಬೆಳೆಯುವ ಅಡಿಕೆಯ ಬೆಲೆ ಏರುತ್ತದೆ ಎಂದು ಕಾಯುತ್ತಾನೆ. ಹಾಗೇ ಬೆಲೆ ಏರಿದಾಗ ದೊಡ್ಡ ಮೊತ್ತದ ಲಾಭ ಬರಲಿ ಎಂದು ಮತ್ತೊಬ್ಬ ರೈತ ಬೆಳೆದುದನ್ನು ಸಹ ಕಡಿಮೆ ಬೆಲೆಗೆ ಕೊಂಡು ದಾಸ್ತಾನು ಮಾಡಿಕೊಳ್ಳುತ್ತಾನೆ. ಆದರೆ ಅಂತಿಮವಾಗಿ ಅವನಿಗೆ ಬೇಕಾದಷ್ಟು ಹಣ ಬರದೆ ಭಟ್ಟ ಋಣತ್ಮಾಕ ಲೆಕ್ಕದಲ್ಲಿ ಉಳಿಯುತ್ತಾನೆ. ಅದೇ ಹೊತ್ತಿಗೆ ಬಿಸಿ ಏರಿರುವ ಮಠದ ರಾಜಕೀಯಕ್ಕೆ ಊರಿನ ಪ್ರಭಾವೀ ವ್ಯಕ್ತಿಯಾಗಿರುವ ಕಮ್ತಿಯ ಮಾತೂ ಸೇರಿಕೊಂಡು ಮಠ ಭಟ್ಟನನ್ನ ಬಹಿಷ್ಕರಿಸುತ್ತದೆ. ಇಂತಿಷ್ಟು ದಿನದೊಳಗೆ ಬಾಕಿ ಚುಕ್ತಾ ಮಾಡಬೇಕೆಂದು ತಾಕೀತು ಮಾಡುತ್ತದೆ. ಭಟ್ಟ ತನ್ನ ಅಹಮ್ಮಿನ ಕೋಟೆಯಿಂದ ಹೊರಬರಲೂ ಆಗದೆ, ಸಾಲ ತೀರಿಸಲೂ ಆಗದೆ ನರಳುತ್ತಾನೆ. ಕೊನೆಗೆ ಎಲ್ಲಕ್ಕೂ ಮೌನವೇ ದಾರಿ ಎಂದು ತೀರ್ಮಾನಿಸಿ ಸತ್ಯಾಗ್ರಹಿಯಂತೆ ಎಲ್ಲವನ್ನೂ ಬಿಟ್ಟು ಕೂರುತ್ತಾನೆ. ಅವನ ಮೌನದ ಹಿಂದಿನ ಕಾರಣಗಳನ್ನು ಗ್ರಹಿಸದ ಸಮಾಜ ಆತನನ್ನು ಕೊಬ್ಬಿನ ಮೂಟೆ ಎಂದು ಹಂಗಿಸುತ್ತದೆ. ಮಠ ಅವನ ಮನೆಯನ್ನು ಜಪ್ತಿ ಮಾಡುತ್ತದೆ. ಇದೆಲ್ಲವೂ ಆಗಿ ಮುಗಿವಾಗ ಹತಾಶನಾಗಿ ಉಳಿಯುವ ಭಟ್ಟ ಮಠದ ರಾಜಕೀಯ ಶಕ್ತಿಗಳ ಎದುರು ಸೋಲುತ್ತಾನೆ.
ಹೀಗೆ ಒಂದು ದೇಶವನ್ನು ಗೆಲ್ಲಿಸಲು ಸಾಧನವಾಗಿದ್ದ “ಮೌನ’ ಸತ್ಯಾಗ್ರಹವೂ ಅದೇ ದೇಶದ ಒಂದು ಪುಟ್ಟ ಸಮಾಜದೊಳಗೆ ವೈರುಧ್ಯ ಸ್ಥಿತಿಯನ್ನು ತಲುಪುವುದನ್ನು ಈ ಚಿತ್ರ ನೋಡುಗನೆದುರು ತೆರೆದಿಡುತ್ತದೆ. ೨೦೦೩ರಲ್ಲಿ ತಯಾರಾದ ‘ಮೌನಿ’ ಚಿತ್ರವನ್ನು ನೀವೂ ನೋಡುವಂತಾಗಬೇಕಾದರೆ ನೀವು ಮಾಡಬೇಕಾದುದಿಷ್ಟೆ. ಒಂದು ಸಣ್ಣ ಸಂಘಟನೆಯನ್ನು ಆರಂಭಿಸಿ. ಕೆಳಗೆ ನೀಡಿರುವ ವಿಳಾಸಕ್ಕೆ ಒಂದು ಪತ್ರ ಬರೆಯಿರಿ. ನಿಮ್ಮೂರಿನ ಗೆಳೆಯರೆಲ್ಲರೂ ಸೇರಿ ಇಂತಹ ಅಪರೂಪದ ಕೃತಿಗಳನ್ನು ನೋಡುವಂತಾಗಲಿ. ಮತ್ತೊಮ್ಮೆ ನೆನಪಿಸುತ್ತೇನೆ: ಒಳ್ಳೆಯ ಪ್ರೇಕ್ಷಕರಿದಾಗ ಮಾತ್ರ ಒಳ್ಳೆಯ ಚಿತ್ರಗಳು ತಯಾರಾಗುತ್ತವೆ. ಈ ಸತ್ಯವನ್ನು ಮರೆಯದಿರಿ.

One thought on “ಮೌನವೆಂಬ ಮಹಾಅಸ್ತ್ರ

  1. Mr Suresh i read ur article on mouni which provokes to see movie again.unfortunately kannada viewers time and again watch d the same again for not more such movies.atleast after ur naanu nanna kanasu let d movie again like mouni comes 4m u all d best soori.

Leave a Reply

Your email address will not be published. Required fields are marked *